ಯಾದಗಿರಿ: ಸಣ್ಣ ಕೆರೆಯಲ್ಲಿ ಜಲ ಕ್ರೀಡೆಗಳ ಸೊಗಸು

ಯಾದಗಿರಿ: ನಗರದ ಲುಂಬಿನಿ ವನದಲ್ಲಿ (ಸಣ್ಣಕೆರೆ) ಒಂದು ತಿಂಗಳಿನಿಂದ ಜಲಕ್ರೀಡೆಗಳು, ಜನರು ಸಂಭ್ರಮಿಸುತ್ತಿದ್ದಾರೆ. ಲುಂಬಿನಿ ವನ ಆರಂಭವಾಗಿ ಹಲವು ವರ್ಷಗಳ ಬಳಿಕ ಈಗ ಸಣ್ಣಕೆರೆಯಲ್ಲಿ ಬೋಟಿಂಗ್ ಪ್ರಾರಂಭಿಸಲಾಗಿದೆ.
4 ಜನ ಸಿಬ್ಬಂದಿ: ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ವಿನ್‌ಯೋಗ ವೆಂಚರ್ ಪ್ರೈ.ಲಿ. ವತಿಯಿಂದ ಸಣ್ಣಕೆರೆಯಲ್ಲಿ ಜಲಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಇದನ್ನು ನಾಲ್ವರು ಸಿಬ್ಬಂದಿ ನಿರ್ವಹಿಸುತ್ತಾರೆ.
ಒಬ್ಬರು ಮೋಟಾರ್ ಬೋಟ್ ಚಾಲನೆ ನೀಡಿದರೆ, ಮತ್ತೊಬ್ಬರು ಲೈಫ್ ಜಾಕೆಟ್ ಸಿಬ್ಬಂದಿ ಇದ್ದಾರೆ. ಇನ್ನಿಬ್ಬರು ಜೆಟ್ಟಿಗಳು ಇದ್ದಾರೆ. ಅಲ್ಲದೇ ಅಲ್ಲಲ್ಲಿ ಪ್ರವಾಸಿ ಗೈಡ್‌ಗಳು ಇದ್ದಾರೆ. ಯಾವುದೇ ಅಹಿಕರ ಆಗದಂತೆ ನೋಡಿಕೊಳ್ಳುತ್ತಾರೆ.
ರಜಾ ದಿನಗಳಲ್ಲಿ ಹೆಚ್ಚು ಜನರು: ಶನಿವಾರ ಮತ್ತು ಭಾನುವಾರ ದಿನಗಳಲ್ಲಿ ಹೆಚ್ಚಿನ ಜನಸಂಖ್ಯೆ ಇರುತ್ತದೆ. ರಜಾ ದಿನಗಳಲ್ಲಿ ಸಾರ್ವಜನಿಕರು ಲುಂಬಿನಿ ವನಕ್ಕೆ ಭೇಟಿ ನೀಡುತ್ತಾರೆ. ಜೊತೆಗೆ ಜಲಕ್ರೀಡೆಗಳಲ್ಲೂ ಭಾಗವಹಿಸುವರು.
‘ಶನಿವಾರ ಮತ್ತು ಭಾನುವಾರ, ರಜಾ ದಿನಗಳಲ್ಲಿ ಹೆಚ್ಚು ಜನರು ಜಲಕ್ರೀಡೆಗಳಿಗೆ ಬಂದರೆ ₹8ರಿಂದ 10 ಸಾವಿರ ಸಂಗ್ರಹವಾಗುತ್ತದೆ. ಸಾಮಾನ್ಯ ದಿನಗಳಲ್ಲಿ ₹ 1 ಸಾವಿರದಿಂದ ₹ 2 ಎರಡು ಸಾವಿರ ಸಂಗ್ರಹವಾದರೆ ಹೆಚ್ಚು’ ಎಂದು ವಿನ್‌ಯೋಗ ವೆಂಚರ್ ಸಂಸ್ಥೆಯ ಸಿಬ್ಬಂದಿ ಅಬ್ದುಲ್ಲಾ ತಿಳಿಸಿದರು.
ಎಷ್ಟು ದರ ನಿಗದಿ?: ಜಲಕ್ರೀಡೆಗಳಿಗಾಗಿ ವಿನ್‌ಯೋಗ ಸಂಸ್ಥೆಯಿಂದ ಶುಲ್ಕ ನಿಗದಿ ಮಾಡಲಾಗಿದೆ. ವಯಸ್ಕರು ಮತ್ತು ಮಕ್ಕಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಮೋಟಾರ್ ಬೋಟ್ ಮತ್ತು ಕಾಯಕ (ಮ್ಯಾನುವೆಲ್ ಬೋಟ್) ಗಳಿಗೂ ಪ್ರತ್ಯೇಕ ದರ ಇದೆ.
ಮೋಟಾರ್ ಬೋಟ್‌ನಲ್ಲಿ ಕೆರೆಯಲ್ಲಿ ಎರಡು ಸುತ್ತು ತಿರುಗಾಡಿಸುತ್ತಾರೆ. ಕಾಯಕ ಬೋಟ್‌ನಲ್ಲಿ ಇಬ್ಬರು ಸ್ವತಂ ಚಾಲನೆ ಮಾಡಿಕೊಂಡು ಹೋಗಬೇಕಾಗುತ್ತದೆ. ಎರಡು ಸುತ್ತುಗೆ ₹100 ದರ ಇದ್ದರೆ, ಕಾಯಕ ಬೋಟ್ ಅರ್ಧಗಂಟೆಗೆ ₹80 ಟಿಕೆಟ್ ದರವಿದೆ.
ಕೆರೆಯಲ್ಲಿ ವಿಹಾರ ಆಹ್ಲಾದಕರ: ಜಿಲ್ಲಾ ಕೇಂದ್ರವಾಗಿದ್ದರೂ ಮನರಂಜನೆ ಸ್ಥಳಗಳು ಇಲ್ಲದಿದ್ದರಿಂದ ಲುಂಬಿನಿ ವನವೊಂದೇ ಸದ್ಯದ ಆಕರ್ಷೀಯ ಸ್ಥಳವಾಗಿದೆ. ಕೆರೆಯಲ್ಲಿ ವಿಹಾರ ಮಾಡುವುದೇ ಆಹ್ಲಾದಕರ ಸಂಗತಿಯಾಗಿದೆ. ಮೋಟಾರ್ ಬೋಟ್ ಸಾಗುವಾಗ ನೀರಿನ ಶಬ್ಧ, ಅಲೆಗಳು ಬೋಟ್‌ನಲ್ಲಿ ಕುಳಿತವರಿಗೆ ಮನೋಲ್ಲಾಸ ಉಂಟು ಮಾಡುತ್ತವೆ. ಸಂಜೆ 5 ಗಂಟೆ ನಂತರ ಜಲಕ್ರೀಡೆಗಳು ಆರಂಭವಾಗುತ್ತವೆ. ಸೂರ್ಯ ಮುಳುಗಿದ ನಂತರ ತಂಪಿನ ವಾತಾವರಣ ಇರುವುದರಿಂದ ಜಲಕ್ರೀಡೆಗಳು ಮತ್ತಷ್ಟು ಆಕರ್ಷಣೀಯವಾಗಿರುತ್ತವೆ.
ಪ್ರವಾಸಿ ತಾಣವಾಗಲಿ: ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಅವುಗಳಿಗೆ ಪ್ರಚಾರದ ಕೊರತೆಯಿಂದ ಹಿಂದೆ ಉಳಿದಿವೆ. ನಗರದ ಬಡಾವಣೆಗಳಲ್ಲಿ ಉದ್ಯಾನಗಳಿದ್ದರೂ ಲುಂಬಿನಿ ವನ ಮಾತ್ರ ಹಚ್ಚ ಹಸಿರಾಗಿದೆ. ಉಳಿದ ಕಡೆ ಯಾವ ಸೌಲಭ್ಯವೂ ಇಲ್ಲ. ಹೀಗಾಗಿ ಚೆನ್ನಾಗಿರುವ ಸಣ್ಣಕೆರೆಯಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡಬೇಕು. ಮಾತ್ರ ಬೋಟಿಂಗ್ ನಿರಂತರವಾಗಿ ನಡೆಯಲಿದೆ.
ಲುಂಬಿನಿ ವನದ ಪ್ರವೇಶಕ್ಕೆ ₹5 ಶುಲ್ಕ ಇದೆ. ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಾರೆ. ಆದರೆ, ಅಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲ. ಕೆಲ ಆಟಿಕೆಗಳು ಮುರಿದಿವೆ. ಹಸಿರೀಕರಣ ಮಾಯವಾಗಿದೆ. ಇವುಗಳಲ್ಲಿ ಮತ್ತಷ್ಟು ಸೌಲಭ್ಯ ಒದಗಿಸುವ ಮೂಲಕ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಿಂದ ಪ್ರವಾಸಕ್ಕೆ ಬರುವಂತ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು ಎನ್ನುವುದು ನಗರ ನಿವಾಸಿಗಳ ಒತ್ತಾಯವಾಗಿದೆ.
ವಿನ್‌ಯೋಗ ವೆಂಚರ್ ಕಂಪನಿ ವತಿಯಿಂದ ಜಲಕ್ರೀಡೆ ಆರಂಭಿಸಿ ಒಂದು ತಿಂಗಳು ಕಳೆದಿದೆ. ಮೂರು ತಿಂಗಳು ಅವಧಿ ತನಕ ಆದಾಯ ಸಂಗ್ರಹಣೆ ನೋಡಿಕೊಂಡು ಬೋಟ್ ಚಾಲನೆ ಮಾಡುವುದಾ ಬೇಡಾ ಎನ್ನುವುದನ್ನು ನಿರ್ಣಯ ಮಾಡಲಾಗುತ್ತಿದೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.
***
ಜಿಲ್ಲಾಡಳಿತದ ವತಿಯಿಂದ ಸಣ್ಣಕೆರೆಯಲ್ಲಿ ಬೋಟಿಂಗ್ ಆರಂಭಿಸಲಾಗಿದೆ. ನಿರಂತರ ಜನರು ಬರಲು ವಿವಿಧ ಜಲಕ್ರೀಡೆಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ
- ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ
***
ಪ್ರತಿದಿನ 3ರಿಂದ 5 ಟ್ರಿಪ್ ಮಾಡಲಾಗುತ್ತಿದೆ. ಭಾನುವಾರ ಹೆಚ್ಚು ಟ್ರಿಪ್ ಮಾಡಲಾಗುತ್ತಿದೆ. ಲುಂಬಿನ ವನ ಪ್ರವಾಸಿ ತಾಣವಾದರೆ ಹೆಚ್ಚು ಜನರು ಬರುತ್ತಾರೆ. ಇದರಿಂದ ಬೋಟಿಂಗ್ ಹೆಚ್ಚಾಗಲಿದೆ
- ಅಬ್ದುಲ್ಲಾ, ವಿನ್‌ಯೋಗ ವೆಂಚರ್ ಸಿಬ್ಬಂದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.