ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರೆಯಾದ ಭತ್ತ: ಕಬ್ಬಿನತ್ತ ರೈತನ ಚಿತ್ತ

Published 20 ಜುಲೈ 2023, 7:28 IST
Last Updated 20 ಜುಲೈ 2023, 7:28 IST
ಅಕ್ಷರ ಗಾತ್ರ

ಸುರಪುರ: ನೀರಿನ ಕೊರತೆ, ದುಬಾರಿಯಾದ ನಿರ್ವಹಣಾ ವೆಚ್ಚ, ಭೂಮಿ ಸವಳು ಜವಳಾಗುವ ಆತಂಕ, ಕಡಿಮೆ ದರ.. ಇತರ ಕಾರಣಗಳಿಂದ ತಾಲ್ಲೂಕಿನ ರೈತರು ಈಗ ಭತ್ತದ ಬದಲಿಗೆ ಕಬ್ಬಿನತ್ತ ಚಿತ್ತ ಹರಿಸಿದ್ದಾರೆ.

ಸಂಪೂರ್ಣ ನೀರಾವರಿಗೆ ಒಳಪಟ್ಟಿರುವ ತಾಲ್ಲೂಕಿನ ಅರ್ಧಕ್ಕೂ ಹೆಚ್ಚು ಪ್ರದೇಶದಲ್ಲಿ ಕಳೆದ ಮೂರು ದಶಕಗಳಿಂದ ಭತ್ತ ಬೆಳೆಯಲಾಗುತ್ತಿತ್ತು. ಭತ್ತದ ಕಣಜ ಎಂದು ಖ್ಯಾತಿ ಪಡೆದಿತ್ತು.

ಕಳೆದ ಎರಡು ಮೂರು ವರ್ಷಗಳಿಂದ ಕೆಲ ರೈತರು ಕಬ್ಬು ನಾಟಿ ಮಾಡುತ್ತಿದ್ದಾರೆ. ಹೆಗ್ಗನದೊಡ್ಡಿ, ಮಾಲಗತ್ತಿ, ಚಿಗರಿಹಾಳ, ದೇವಪುರ, ನಾಗರಾಳ, ಕೋನಾಳ, ಅರಳಹಳ್ಳಿ, ಹೆಮನೂರ ಇತರ ಗ್ರಾಮಗಳಲ್ಲಿ ಕಬ್ಬು ಬೆಳೆ ನಳನಳಿಸುತ್ತಿದೆ.

ವಡಗೇರಾ ತಾಲ್ಲೂಕಿನ ತುಮಕೂರ ಗ್ರಾಮದಲ್ಲಿ ಕೋರ್‌ಗ್ರೀನ್‌ ಸಕ್ಕರೆ ಕಾರ್ಖಾನೆ ಇದೆ. ಅಲ್ಲಿನ ವ್ಯವಸ್ಥಾಪಕ ಮನೋಹರ ಅಡ್ಡೇಮಲ್ ಸುರಪುರದವರು. ಕಾರ್ಖಾನೆ ವ್ಯಾಪ್ತಿ 70 ಕಿ.ಮೀ ವರ್ತುಲ ಹೊಂದಿದೆ. ಮನೋಹರ ಅವರು ರೈತರಿಗೆ ಕಬ್ಬು ಬೆಳೆಯ ಬಗ್ಗೆ ಮಾಹಿತಿ ನೀಡಿದ ಪರಿಣಾಮ ಈಗ 2 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಬ್ಬು ನಾಟಿ ಮಾಡಲಾಗಿದೆ.

‘ಸಿ.ಓ. 86032 ಮತ್ತು ಸಿ.ಓ. 10001 ತಳಿಯ ಕಬ್ಬನ್ನು ರೈತರು ಬೆಳೆಯುತ್ತಿದ್ದಾರೆ. ಎಕರೆಗೆ 40 ರಿಂದ 50 ಟನ್ ಇಳುವರಿ ಬರುತ್ತಿದೆ. ವರ್ಷಕ್ಕೆ ಒಮ್ಮೆ ಮಾತ್ರ ಫಸಲು ಬರುತ್ತದೆ. ಮೂರು ವರ್ಷದ ನಂತರ ಹೊಸದಾಗಿ ನಾಟಿ ಮಾಡಬೇಕು. ಮೊದಲ ವರ್ಷ ಎಕರೆಗೆ ₹ 35 ಸಾವಿರ, ನಂತರದ ವರ್ಷಗಳಲ್ಲಿ ₹ 10 ಸಾವಿರ ನಿರ್ವಹಣಾ ವೆಚ್ಚ ತಗಲುತ್ತದೆ. ಎಣ್ಣೆ, ಬೀಜ, ಗೊಬ್ಬರ ಕಡಿಮೆ ಬಡ್ಡಿ ದರದಲ್ಲಿ ಕಾರ್ಖಾನೆಯೇ ಒದಗಿಸುತ್ತದೆ. ಕಟಾವು ಮತ್ತು ಸಾಗಣೆಯ ಜವಾಬ್ದಾರಿಯೂ ನಮ್ಮದೇ’ ಎನ್ನುತ್ತಾರೆ ಮನೋಹರ.

ಭತ್ತ ಕೃಷಿಗೆ ಬಳಸುವ ನೀರಿಗಿಂತ ಅರ್ಧದಷ್ಟು ಪ್ರಮಾಣ ಬಳಸಿದರೆ ಸಾಕು. ಭೂಮಿ ಸವಳಾಗುವ ಆತಂಕ ಇಲ್ಲ. ಸದ್ಯ ಟನ್‌ಗೆ  ₹ 2500 ಬೆಲೆ ಇದೆ. ಒಂದು ಎಕರೆಗೆ ₹ 1 ಲಕ್ಷದ ಬೆಳೆ ಬರುತ್ತದೆ. ನಿರ್ವಹಣೆ ವೆಚ್ಚ ತೆಗೆದು ₹ 90 ಸಾವಿರ ನಿವ್ವಳ ಲಾಭ ದೊರಕುತ್ತದೆ. ಭತ್ತಕ್ಕೆ ಹೋಲಿಸಿದರೆ ಕಬ್ಬು ಉತ್ತಮ ಆದಾಯ ತಂದು ಕೊಡುತ್ತದೆ. ಸುಲಭ ನಿರ್ವಹಣೆ ಎಂದು ವಿವರಿಸುತ್ತಾರೆ ಮನೋಹರ.
ರೈತರೂ ಆಗಿರುವ ಶಿಕ್ಷಕ ಕನಕಪ್ಪ ವಾಗಣಗೇರಾ ಭತ್ತದ ಕೃಷಿ ದುಬಾರಿಯಾಗಿರುವ ಬಗ್ಗೆ ಹೀಗೆ ವಿವರಿಸುತ್ತಾರೆ. ‘ಭೂಮಿ ಹದ ಮಾಡುವುದರಿಂದ ಹಿಡಿದು ನಾಟಿ, ಗೊಬ್ಬರ, ಕೀಟನಾಶಕ ಸಿಂಪರಣೆ, ಕಟಾವು ಮಾಡುವುದರಲ್ಲಿ ರೈತನಿಗೆ ಸಾಕು ಬೇಕಾಗುತ್ತದೆ.
ಎಲ್ಲ ದರಗಳು ದುಬಾರಿಯಾಗಿವೆ. ಪ್ರತಿ ವರ್ಷ ಕಾಲುವೆಗೆ ನೀರಿನ ಕೊರತೆ ಕಾಡುತ್ತದೆ. ಎರಡನೇ ಬೆಳೆಗೆ ನೀರಿಗಾಗಿ ಕಾದಾಟವೇ ನಡೆಯುತ್ತದೆ. ಒಂದು ಎಕರೆಗೆ 35 ರಿಂದ 40 ಚೀಲ ಇಳುವರಿ ಬಂದರೆ ಹೆಚ್ಚು. ಒಂದು ವರ್ಷ ದರ ಸಿಕ್ಕರೆ ಮತ್ತೆರಡು ವರ್ಷ ಕಡಿಮೆ ದರ ಇರುತ್ತದೆ. ನಷ್ಟ ಅನುಭವಿಸುವುದೇ ಹೆಚ್ಚು’ ಎಂದು ನೋವು ತೋಡಿಕೊಳ್ಳುತ್ತಾರೆ.

ಹೀಗಾಗಿ ರೈತ ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾನೆ. ಕಬ್ಬಿನ ಬೆಳೆ ಲಾಭದಾಯಕ ಎಂದು ಅರಿತ ರೈತರು ಅಲ್ಲಲ್ಲಿ ಕಬ್ಬು ನಾಟಿ ಮಾಡುತ್ತಿದ್ದಾರೆ ಎಂದರು.

ಸೋಪಿಸಾಬ ನಾಗರಾಳ
ಸೋಪಿಸಾಬ ನಾಗರಾಳ
ಮನೋಹರ ಅಡ್ಡೇಮಲ್
ಮನೋಹರ ಅಡ್ಡೇಮಲ್

25 ವರ್ಷಗಳಿಂದ ಭತ್ತ ಬೆಳೆಯುತ್ತಿದ್ದೆ. ಮೊದಲಿಗೆ ಉತ್ತಮ ಅದಾಯವೂ ಇತ್ತು. ಗೊಬ್ಬರ ಕ್ರಿಮಿನಾಶಕದ ಬೆಲೆ ಗಗನಕ್ಕೇರಿದೆ. ಭತ್ತದ ಬೆಲೆಯೂ ಇಲ್ಲ. ಹೀಗಾಗಿ ಕಬ್ಬು ಕೃಷಿ ಮಾಡುತ್ತಿದ್ದೇನೆ. ಸೋಪಿಸಾಬ ನಾಗರಾಳ ರೈತ

ಕಬ್ಬು ಬೆಳೆಯುವ ರೈತನಿಗೆ ಸಕ್ಕರೆ ಕಾರ್ಖಾನೆ ಎಲ್ಲ ರೀತಿಯಿಂದ ಬೆಂಬಲ ಸಲಹೆ ಆರ್ಥಿಕ ನೆರವು ನೀಡುತ್ತದೆ. ಕಬ್ಬು ಮಾರಾಟದ ಒಂದು ತಿಂಗಳ ಒಳಗೆ ರೈತನ ಖಾತೆಗೆ ಹಣ ಸಂದಾಯವಾಗುತ್ತದೆ. ಮನೋಹರ ಅಡ್ಡೇಮಲ್ ವ್ಯವಸ್ಥಾಪಕ ಕೋರ್‌ಗ್ರೀನ್‌ ಸಕ್ಕರೆ ಕಾರ್ಖಾನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT