ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಸರ್ಕಾರದ ಯೋಜನೆ ಜಾರಿಗೆ ತನ್ನಿ: ತಹಶೀಲ್ದಾರ್‌ ಸೂಚನೆ

Published 14 ಜುಲೈ 2023, 15:44 IST
Last Updated 14 ಜುಲೈ 2023, 15:44 IST
ಅಕ್ಷರ ಗಾತ್ರ

ಸುರಪುರ: ಕರ್ನಾಟಕ ಗ್ರಾಮ ಒನ್ ಯೋಜನೆ ಅಡಿ ಕೆಲಸ ಮಾಡುವ ಸೇವಾ ಕೇಂದ್ರಗಳಿಂದ ಸಮರ್ಪಕವಾದ ಸೇವೆ ಸಿಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಆಯಾ ಇಲಾಖೆಗಳ ಅಧಿಕಾರಿಗಳು ಜಾಗ್ರತೆ ವಹಿಸಬೇಕು. ಪ್ರತಿ ಗ್ರಾಮದಲ್ಲಿ ಡಂಗೂರ ಸಾರಿಸಿ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಸೂಚಿಸಿದರು.

ಶುಕ್ರವಾರ ನಡೆದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಕ್ತಿ, ಗೃಹ ಲಕ್ಷ್ಮೀ, ಜಾತಿ, ಆದಾಯ, ವಾಸಸ್ಥಳ, ಕಾರ್ಮಿಕ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇತರೆ ಯೋಜನೆಗಳನ್ನು ವಿವಿಧ ಇಲಾಖೆಗಳ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಇ–ಆಡಳಿತ ವ್ಯವಸ್ಥೆ ಜಾರಿಗೊಳಿಸಿದೆ. ಅಧಿಕಾರಿಗಳು ತಮ್ಮ ಇಲಾಖೆ ಯೋಜನೆಗಳ ಕುರಿತು ಸೇವಾ ಕೇಂದ್ರದವರಿಗೆ ಸಮರ್ಪಕ ಸೇವೆ ನೀಡಲು ಸೂಚಿಸಬೇಕು ಎಂದು ತಾಕೀತು ಮಾಡಿದರು.

ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕಾಗಿ ಎಲ್ಲಾ ಅಧಿಕಾರಿಗಳು ಕೈಜೋಡಿಸಬೇಕು. ಕಲಂ 17 ರಡಿ ಕಾರ್ಮಿಕ ಇಲಾಖೆಯೊಂದಿಗೆ 11 ಇಲಾಖೆ ಅಧಿಕಾರಿಗಳನ್ನು ನಿರೀಕ್ಷರನ್ನಾಗಿ ನೇಮಿಸಲಾಗಿದೆ. ಪ್ರತಿ ತಿಂಗಳು ಒಂದು ದಿನ ಗೊತ್ತುಪಡಿಸಿಕೊಂಡು ದಾಳಿ ನಡೆಸಿ ಕೂಲಿ ಕೆಲಸಕ್ಕೆ ಹೋಗುವ ಮತ್ತು ಹೊಟೇಲ್, ಗ್ಯಾರೇಜು, ಕಿರಾಣಿ ಸೇರಿದಂತೆ ಇತರೆಡೆ ದುಡಿಯುವ ಮಕ್ಕಳನ್ನು ತಡೆದು ಶಾಲೆಗೆ ಸೇರಿಸುವ ಕೆಲಸ ಮಾಡಿ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆಯಲ್ಲಿ 1,400 ಕಾರ್ಮಿಕ ಕಾರ್ಡ್ ವಿತರಣೆ ಬಾಕಿ ಇವೆ. ಈಗಾಗಲೇ ಸಲ್ಲಿಕೆಯಾದ ಅರ್ಜಿಗಳಲ್ಲಿ ಸರಿಯಾದ ದಾಖಲೆಗಳಿಲ್ಲ. ಇಲಾಖೆ ವ್ಯಾಪ್ತಿಗೆ ಬಾರದೆ ಇದ್ದರು ಕೂಡಾ ಸೇವಾ ಕೇಂದ್ರದವರು ಅನಗತ್ಯವಾಗಿ ಅಪ್‍ಲೋಡ್ ಮಾಡಿದ್ದಾರೆ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸೇವಾ ಕೇಂದ್ರದವರು ದಾಖಲೆಗಳನ್ನು ಪರಿಶೀಲಿಸಿ ಅಪ್‍ಲೋಡ್ ಮಾಡಿದರೆ ಸಮಸ್ಯೆ ಎದುರಾಗುವುದಿಲ್ಲ ಎಂದು ಕಾರ್ಮಿಕ ನಿರೀಕ್ಷಕ ವಿಜಯೇಂದ್ರ ಸಭೆಗೆ ಮಾಹಿತಿ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಗುರುನಾಥ ಮಾತನಾಡಿ, ಪಿಎಂ ಕಿಸಾನ್ ಯೋಜನೆ ಅಡಿ 42,605 ಅರ್ಜಿ ಸಲ್ಲಿಕೆಯಾಗಿವೆ. ಈ ಪೈಕಿ 28,178 ರೈತರು ಈಕೆವೈಸಿ ಮಾಡಿಕೊಂಡಿದ್ದಾರೆ. 14,427 ಫಲಾನುಭವಿಗಳು ಈಕೆವೈಸಿ ಮಾಡಿಕೊಂಡಿಲ್ಲ ಎಂದು ಮಾಹಿತಿ ನೀಡಿದರು.

ಇ–ಆಡಳಿತ ಸೇವೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕ ರಾಘವೇಂದ್ರ ಕುಲಕರ್ಣಿ ಮಾತನಾಡಿದರು.

ಗ್ರೇಡ್ 2 ತಹಶೀಲ್ದಾರ್‌ ಮಲ್ಲಯ್ಯ ದಂಡು, ಸಿಡಿಪಿಒ ಅನಿಲ ಕಾಂಬ್ಳೆ, ಸಮಾಜ ಕಲ್ಯಾಣಾಧಿಕಾರಿ ಡಾ. ಶ್ರುತಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರೆಡ್ಡಿ, ತಾ.ಪಂ ವ್ಯವಸ್ಥಾಪಕ ವೆಂಕೋಬ ಬಾಕ್ಲಿ, ನಗರಸಭೆಯ ಗುರುಸ್ವಾಮಿ, ಮಕ್ಕಳ ಸಹಾಯವಾಣಿ ಅಧಿಕಾರಿ ಮಲ್ಲಪ್ಪ, ಅಲ್ಪ ಸಂಖ್ಯಾತ ವಿಸ್ತರಣಾ ಇಲಾಖೆಯ ಗಾಯಪ್ಪ, ಶಿಕ್ಷಣ ಇಲಾಖೆಯ ಮಹಾದೇವಪ್ಪ ಗುತ್ತೇದಾರ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT