ಶುಕ್ರವಾರ, ಮಾರ್ಚ್ 31, 2023
29 °C
ಸರ್ಕಾರ ವಿತರಿಸಿದರೂ ತಾಂಡಾಗಳಲ್ಲಿ ಫಲಾನುಭವಿಗಳ ಕೈ ಸೇರದ ಆಹಾರ ಪದಾರ್ಥ

ಯಾದಗಿರಿ: ಅಪೌಷ್ಟಿಕತೆ ನಿವಾರಣೆಯೇ ದೊಡ್ಡ ಸವಾಲು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಅಂಗನವಾಡಿಯ ಆಹಾರ ಪದಾರ್ಥಗಳು ಫಲಾನುಭವಿಗಳಿಗೆ ಸರಿಯಾಗಿ ವಿತರಣೆಯಾಗುತ್ತಿಲ್ಲ ಎಂಬ ಆರೋಪ ಮೊದಲಿಂದ ಇದೆ. ಲಾಕ್‌ಡೌನ್‌ನಲ್ಲಿ ಮನೆಮನೆಗೆ ಆಹಾರ ಕಿಟ್ ತಲುಪಿಲ್ಲ ಎಂಬ ದೂರು ಸಹ ಕೇಳಿ ಬರುತ್ತಿದೆ.

ಕೋವಿಡ್‌ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಮಕ್ಕಳ ಆರೋಗ್ಯಕ್ಕೆ ಪೌಷ್ಟಿಕಾಂಶಯುಕ್ತ ಆಹಾರ ಬೇಕು. ಆದರೆ, ಅವರಿಗೆ ಸರಿಯಾಗಿ ಆಹಾರ ತಲುಪುತ್ತಿಲ್ಲ.

ಅಂಗಡಿಗಳಲ್ಲಿ ಸಿಗುವ ಮೊಟ್ಟೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಮೊಟ್ಟೆಯ ಗಾತ್ರದಲ್ಲಿ ವ್ಯತ್ಯಾಸವಿದೆ. ಅಂಗನವಾಡಿಗಳಲ್ಲಿ ವಿತರಿಸುವ ಮೊಟ್ಟೆಗಳು ಚಿಕ್ಕದಾಗಿರುತ್ತವೆ. ಅಂಗಡಿಗಳಲ್ಲಿ ದೊಡ್ಡ ಗಾತ್ರವುಳ್ಳದ್ದಾಗಿರುತ್ತವೆ. ಗುತ್ತಿಗೆದಾರರು ಸಣ್ಣ ಮೊಟ್ಟೆಗಳನ್ನು ಅಂಗನವಾಡಿಗಳಿಗೆ ಪೂರೈಸುತ್ತಾರೆ ಎಂಬ ಆರೋಪವಿದೆ.

ಜಿಲ್ಲೆಯಲ್ಲಿ 1,386 ಅಂಗನವಾಡಿ ಕೇಂದ್ರಗಳಿದ್ದು, 994 ಸ್ವತಂ ಕಟ್ಟಡಗಳಿವೆ. 13 ಪಂಚಾಯಿತಿ ಕಟ್ಟಡದಲ್ಲಿ, 28 ಸಮುದಾಯ ಭವನದಲ್ಲಿ, 60 ಶಾಲೆಗಳಲ್ಲಿ, 291 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಲ್ಲಿ 6 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳು 71,785, 3ರಿಂದ 6 ವರ್ಷದ ಮಕ್ಕಳು 71,696, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಸೇರಿದಂತೆ 1,79,755 ಫಲಾನುಭವಿಗಳು ಪೌಷ್ಟಿಕ ಆಹಾರ ಪಡೆಯುತ್ತಿದ್ದಾರೆ.

‘ಜಿಲ್ಲೆಯ ಶಹಾಪುರ ತಾಲ್ಲೂಕಿನ ತಾಂಡಾವೊಂದರಲ್ಲಿ ಪ್ರಭಾವಿ ರಾಜಕೀಯ ಮುಖಂಡರೊಬ್ಬರು ಅಂಗನವಾಡಿ ಕೇಂದ್ರ ನಡೆಸುತ್ತಿದ್ದು, ಆಹಾರ ಪದಾರ್ಥಗಳನ್ನು ಫಲಾನುಭವಿಗಳಿಗೆ ವಿತರಿಸದೇ ತಮ್ಮ ಮನೆಯಲ್ಲಿರುವ ಜಾನುವಾರುಗಳಿಗೆ ಹಾಕುತ್ತಿದ್ದಾರೆ’ ಎಂದು ಹೆಸರು ಬಹಿರಂಗ ಪಡಿಸದ ತಾಂಡಾದ ನಿವಾಸಿ ದೂರುತ್ತಾರೆ.

‘ಫಲಾನುಭವಿಗಳ ಹೆಸರಿಗೆ ಆಹಾರ ಧಾನ್ಯ ಬಂದರೂ ವಿತರಿಸುವುದಿಲ್ಲ. ಅವರ ಮನೆಯಲ್ಲಿ ಕ್ವಿಂಟಲ್‌ಗಟ್ಟಲೇ ಕೊಳೆಯುತ್ತಿದ್ದರೂ ತಾಂಡಾದ ಜನರಿಗೆ ತಲುಪಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಪ್ರಭಾವಿ ಮುಖಂಡ ಎಂದು ಸುಮ್ಮನಾಗಿದ್ದಾರೆ. ಇದು ಬಡವರ ಹೊಟ್ಟೆ ಮೇಲೆ ಹೊಡೆದಂತೆ ಆಗಿದೆ’ ಎಂದು ಅವರು ಆರೋಪಿಸುತ್ತಾರೆ.

ಕೇಂದ್ರಗಳಿಗೆ ಬೇಕಾಗಿದೆ ಶಸ್ತ್ರಚಿಕಿತ್ಸೆ:

ಜಿಲ್ಲೆಯ ಬಹುತೇಕ ಅಂಗನವಾಡಿ ಫಲಾನುಭವಿಗಳಿಗೆ ವಿತರಿಸುವ ಪದಾರ್ಥಗಳನ್ನು ಕಡಿಮೆ ದರಕ್ಕೆ ಅಂಗಡಿಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಕೆಲ ತಿಂಗಳ ಹಿಂದೆ ಹುಣಸಗಿ ತಾಲ್ಲೂಕಿನಲ್ಲಿ ಅಕ್ಕಿ, ಬೆಲ್ಲ ಸೇರಿದಂತೆ ಅಂಗನವಾಡಿಯ ಆಹಾರ ಧಾನ್ಯ ಮಾರಾಟ ಮಾಡುವ ವೇಳೆ ಕೆಲವರು ಸಿಕ್ಕಿಬಿದ್ದಿದ್ದರು. ಅಲ್ಲದೆ ಮನೆಗೆ ಕದ್ದೊಯ್ಯುವ ಪ್ರಕರಣಗಳು ಕಡಿಮೆಯಾಗಿಲ್ಲ’ ಎಂದು ರೈತ ಮುಖಂಡರು ಹೇಳುತ್ತಾರೆ.

‘ಆಹಾರ ಪದಾರ್ಥಗಳು ಅರ್ಧ ಭಾಗ ಫಲಾನುಭವಿಗಳಿಗೆ ಸೇರಿದರೆ, ಇನ್ನರ್ಧ ಕಾರ್ಯಕರ್ತೆಯರ ಮನೆಗಳಿಗೆ ತಲುಪುತ್ತದೆ. ಇದರಿಂದ ಅಪೌಷ್ಟಿಕ ಮಕ್ಕಳ ಸಂಖ್ಯೆ ಜಿಲ್ಲೆಯಲ್ಲಿ ಇಳಿಕೆಯಾಗುತ್ತಿಲ್ಲ. ಒಂದೆರಡು ಕಡೆ ಸರಿಯಾಗಿ ನಿಯಮದ ಪ್ರಕಾರ ವಿತರಿಸಲಾಗುತ್ತಿದೆ. ಉಳಿದ ಕಡೆ ಅವರಗಿಷ್ಟ ಬಂದಂತೆ ಮಾಡಲಾಗುತ್ತಿದೆ’ ಎಂದು ರೈತ ಮುಖಂಡ ಚನ್ನಾರೆಡ್ಡಿ ಗುರುಸುಣಗಿ ಆರೋಪಿಸುತ್ತಾರೆ.

ಮೂಲಸೌಲಭ್ಯ ವಂಚಿತ ಕಟ್ಟಡಗಳು:

ಸ್ವತಂ, ಬಾಡಿಗೆ, ಸರ್ಕಾರದ ಇನ್ನಿತರ ಕಡೆಗಳಲ್ಲಿ ನಡೆಯುವ ಅಂಗನವಾಡಿ ಕಟ್ಟಡಗಳಲ್ಲಿ ಮೂಲ ಸೌಕರ್ಯ ಕೊರತೆ ಕಂಡು ಬರುತ್ತಿದೆ. ಲಾಕ್‌ಡೌನ್‌ ವೇಳೆ ಮಕ್ಕಳಿಗೆ ಅಂಗನವಾಡಿ ಪ್ರವೇಶವಿಲ್ಲ. ಹೀಗಾಗಿ ದುರಸ್ತಿ, ಸೌಕರ್ಯ ಕಲ್ಪಿಸುವ ಕೆಲಸ ಮಾಡಬೇಕಿತ್ತು. ಆದರೆ, ಅದು ಆಗಿಲ್ಲ. ಸುಮಾರು ಕಟ್ಟಡಗಳ ಮೇಲ್ಛಾವಣಿ ಸಿಮೆಂಟ್‌ ಕಿತ್ತು ಬಂದಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಮಳೆಗಾಲದಲ್ಲಿ ಕಟ್ಟಡಗಳು ಸೋರುತ್ತಿವೆ. ಇದರಿಂದ ಪುಸ್ತಕಗಳನ್ನು ರಕ್ಷಿಸಲು ಕಾರ್ಯಕರ್ತೆಯರು ಹರಸಾಹಸ ಪಡುತ್ತಿದ್ದಾರೆ. 

ಸುರಪುರ: 64 ಸಾವಿರ ಫಲಾನುಭವಿಗಳು

ಸುರಪುರ: ಇಲ್ಲಿನ ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿ ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುತ್ತದೆ. ಒಟ್ಟು 474 ಅಂಗನವಾಡಿ ಕೇಂದ್ರಗಳಿವೆ. 326 ಕೇಂದ್ರಗಳು ಸ್ವಂತ ಮತ್ತು 143 ಕೇಂದ್ರಗಳು ಬಾಡಿಗೆ ಕಟ್ಟದಲ್ಲಿವೆ. ಉಳಿದವು ಸಮುದಾಯ ಭವನ ಮತ್ತು ಸರ್ಕಾರಿ ಶಾಲೆಗಳ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ.

‘ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು, 6 ತಿಂಗಳಿನಿಂದ 6 ವರ್ಷದ ಮಕ್ಕಳು, ಅಂಗನವಾಡಿ ಶಿಕ್ಷಕರು ಮತ್ತು ಸಹಾಯಕಿಯರು ಸೇರಿ ಒಟ್ಟು 64 ಸಾವಿರ ಫಲಾನುಭವಿಗಳಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಈ ಎಲ್ಲ ಫಲಾನುಭವಿಗಳಿಗೆ ದಿನಸಿ ಕಿಟ್ ವಿತರಿಸಲಾಗಿದೆ’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಲಾಲಸಾಬ ಪೀರಾಪುರ ತಿಳಿಸಿದರು.

‘ಅಪೌಷ್ಟಿಕ ಮಕ್ಕಳ ಸಂಖ್ಯೆ ಸದ್ಯ 88. ಪೌಷ್ಟಿಕ ಪುನಶ್ಚೇತನ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ನಮ್ಮ ಇಲಾಖೆಯಿಂದ ಮಕ್ಕಳಿಗೆ ಮತ್ತು ತಾಯಂದಿರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ. ವೈದ್ಯರು ಚಿಕಿತ್ಸೆ ನೀಡುತ್ತಾರೆ. 14 ದಿನದ ನಂತರ ಮಗುವಿನ ಆರೋಗ್ಯ ನೋಡಿಕೊಂಡು ಮನೆಗೆ ಕಳುಹಿಸಲಾಗುತ್ತದೆ’ ಎಂದರು.

‘ಪುನಶ್ಚೇತನ ಕೇಂದ್ರದಲ್ಲಿ ಇದ್ದಷ್ಟು ದಿನ ತಾಯಿಗೆ ನರೇಗಾ ಯೋಜನೆಯಡಿ ಪ್ರತಿ ದಿನ ₹280 ಕೂಲಿ ನೀಡಲಾಗುತ್ತದೆ. ಒಂದು ವರ್ಷಕ್ಕೆ ಒಂದು ಮಗುವಿಗೆ ₹2 ಸಾವಿರ ಔಷಧೋಪಚಾರಕ್ಕೆ ಖರ್ಚು ಮಾಡಲು ಇಲಾಖೆಗೆ ಅವಕಾಶವಿದೆ’ ಎಂದು ಹೇಳಿದರು.

45 ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ

ಹುಣಸಗಿ: ತಾಲ್ಲೂಕಿನಲ್ಲಿ 22 ಮಿನಿ ಅಂಗನವಾಡಿ ಕೇಂದ್ರಗಳು ಸೇರಿದಂತೆ ಒಟ್ಟು 240 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ 240 ಅಂಗನವಾಡಿ ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದು, 218 ಅಂಗನವಾಡಿ ಸಹಾಯಕರಿದ್ದಾರೆ.

ತಾಲ್ಲೂಕಿನಲ್ಲಿ 45 ಭಾಗಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರಗಳು ನಡೆಸುತ್ತಿದ್ದು, ಸ್ಥಳ ಮತ್ತು ಅನುದಾನದ ಕೊರತೆಯಿಂದ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲ.

‘ತಾಲ್ಲೂಕಿನ ಪ್ರತಿ ಗ್ರಾಮದಲ್ಲಿಯೂ ಮೇ ತಿಂಗಳ ವರೆಗೂ ಮಕ್ಕಳು ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಸರಬರಾಜು ಮಾಡಲಾಗಿದ್ದು, ಕೆಲ ಕೇಂದ್ರಗಳಲ್ಲಿ ಜೂನ್ ತಿಂಗಳ ಕಿಟ್ ವಿತರಿಸಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಅಧಿಕಾರಿ ಮೀನಾಕ್ಷಿ ಪಾಟೀಲ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ 6 ತಿಂಗಳಿನಿಂದ 6 ವರ್ಷದ ಒಳಗಿನ 21,600 ಮಕ್ಕಳು ಇದ್ದಾರೆ. 2,500 ಗರ್ಭಿಣಿಯರು, 2,300 ಬಾಣಂತಿಯರಿದ್ದು, ಅವರ ಆರೋಗ್ಯದ ಕುರಿತು ಆಗಾಗ ಮನೆಗೆ ಭೇಟಿ ನೀಡಿ ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಕೋವಿಡ್‌ನಿಂದಾಗಿ ಮಕ್ಕಳಿಗೆ ನಿಗದಿಯಂತೆ ಹಂತಹಂತವಾಗಿ ಪೌಷ್ಟಿಕ ಆಹಾರ ಮನೆಗಳಿಗೆ ಕಳಿಸಿಕೊಡಲಾಗುತ್ತಿದೆ.

‘ಗರ್ಭಿಣಿಯರು ಮತ್ತು ಬಾಣಂತಿಯರಿಗೆ 4 ಕೆ.ಜಿ ಅಕ್ಕಿ, 1 ಕೆ.ಜಿ ತೊಗರಿ ಬೇಳೆ, ಅರ್ಧ ಕೆ.ಜಿ ಶೇಂಗಾ, ಅರ್ಧ ಕೆ.ಜಿ ಹಾಲಿನ ಪೌಡರ್, ಸಕ್ಕರೆ, 1 ಕೆ.ಜಿ ಬೆಲ್ಲ , 24 ಮೊಟ್ಟೆ ಅವರ ಮನೆ ತಲುಪಿಸಲಾಗುತ್ತಿದೆ’ ಎಂದು ಅಂಗನವಾಡಿ ಕಾರ್ಯಕರ್ತೆಯ ಸಂಘದ ತಾಲ್ಲೂಕು ಉಪಾಧ್ಯಕ್ಷೆ ಸುಲೋಚನಾ ನಾಡಗೌಡ್ರ ತಿಳಿಸಿದರು.

‘ಪ್ರತಿ ತಿಂಗಳು ನಮಗೆ ಸರಿಯಾದ ರೀತಿಯಲ್ಲಿ ಪೌಷ್ಟಿಕ ಆಹಾರದ ಕಿಟ್ ಮನೆಗೆ ತಲುಪಿಸುತ್ತಿದೆ’ ಎಂದು ವಜ್ಜಲ ಗ್ರಾಮದ ಪರಿಮಳಾ ತಿಮ್ಮಪ್ಪ ಹಾಗೂ ಮಂಜಮ್ಮ ಮಲ್ಲಪ್ಪ ತಿಳಿಸಿದರು.

ಸಮರ್ಪಕವಾಗಿ ವಿತರಣೆಯಾಗದ ಕಿಟ್‌

ಶಹಾಪುರ: ತಾಲ್ಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳು ಆಯಾ ಗ್ರಾಮದ ವ್ಯಾಪ್ತಿಯ ಪ್ರಭಾವಿ ವ್ಯಕ್ತಿಗಳ ಕಪಿಮುಷ್ಠಿಯಲ್ಲಿ ಸಿಕ್ಕು ನಲುಗುತ್ತಿವೆ. ಪ್ರತಿ ತಿಂಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೇಂದ್ರಗಳಿಗೆ ಆಹಾರ ಧಾನ್ಯ ಸರಬರಾಜು ಆಗುತ್ತದೆ. ಹಂಚಿಕೆಯಲ್ಲಿ ಮಾತ್ರ ಎಲ್ಲವು ಉಲ್ಟಾ ಪಲ್ಟಾ ಆಗಿದೆ. ಇನ್ನೂ ಲಾಕ್‌ಡೌನ್ ಸಂದರ್ಭದಲ್ಲಿ ಆಹಾರದ ಕಿಟ್ ಸಮರ್ಪಕವಾಗಿ ವಿತರಣೆಯಾಗಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ.

‘ಅಂಗನವಾಡಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಹೆಚ್ಚಿನ ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯ ಪ್ರಭಾವಿ ವ್ಯಕ್ತಿಗಳ ರಕ್ತ ಸಂಬಂಧಿಕರು ಇದ್ದಾರೆ. ಅಡುಗೆ ಸಹಾಯಕರ ಮೂಲಕ ಕೇಂದ್ರ ಮುನ್ನಡೆಸುತ್ತಾರೆ. ಇಲ್ಲವೆ ಇನ್ನೊಬ್ಬರನ್ನು ತಿಂಗಳಿಗೆ ಇಂತಿಷ್ಟು ಹಣ ನೀಡಿ ನೇಮಿಸಿದ್ದಾರೆ. ಬಹುತೇಕ ಅಂಗನವಾಡಿ ಕಾರ್ಯಕರ್ತೆಯರಿಗೆ ತಾಲ್ಲೂಕು ಕಚೇರಿಯಲ್ಲಿ ಕೆಲಸ, ಸಭೆ, ಸರ್ಕಾರದ ವಿವಿಧ ಯೋಜನೆ ಜಾರಿ ಹಾಗೂ ಜಾಗೃತಿ ಅಭಿಯಾನ, ಗಣತಿ ಕಾರ್ಯ ಇರುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಹೇಳುತ್ತಾರೆ.

ಜಿಲ್ಲೆಯಲ್ಲಿರುವ ಅಪೌಷ್ಟಿಕ ಮಕ್ಕಳ ವಿವರ

ತಾಲ್ಲೂಕು; ಮೇ-ಅಂತ್ಯಕ್ಕೆ ತೂಕ ಮಾಡಿದ ಮಕ್ಕಳ ಸಂಖ್ಯೆ;ತೀವ್ರ ಅಪೌಷ್ಟಿಕ ಮಕ್ಕಳು

ಶಹಾಪುರ;43,146;90

ಸುರಪುರ;53,008;88

ಯಾದಗಿರಿ;22,453;81

ಗುರುಮಠಕಲ್‌;24,770;118

ಒಟ್ಟು;1,43,377;377

 

ಜಿಲ್ಲೆಯಲ್ಲಿರುವ ಅಂಗನವಾಡಿ ಕಟ್ಟಡಗಳ ವಿವರ

ತಾಲ್ಲೂಕು; ಮಂಜೂರು; ಸ್ವಂತ ಕಟ್ಟಡ;ಬಾಡಿಗೆ

ಶಹಾಪುರ;395;291;67

ಸುರಪುರ;474;324;108

ಯಾದಗಿರಿ;243;167;68

ಗುರುಮಠಕಲ್‌;274;212;48

ಒಟ್ಟು;1,386;994;291

ಆಧಾರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

***

ಲಾಕ್‌ಡೌನ್‌ ವೇಳೆ ನಮ್ಮ ಸಿಬ್ಬಂದಿ ಫಲಾನುಭವಿಗಳ ಮನೆ ಮನೆಗೆ ಆಹಾರ ಪದಾರ್ಥ ತಲುಪಿಸಿದ್ದರು. ಈಗ ಪೋಷಕರು ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ
- ಪ್ರಭಾಕರ ಕವಿತಾಳ, ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ

***

ಯಾದಗಿರಿಯ ಕೋಲಿವಾಡ ಅಂಗನವಾಡಿ ಕಟ್ಟಡ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ನೀರು, ಶೌಚಾಲಯ, ವಿದ್ಯುತ್‌ ಸಂಪರ್ಕವಿಲ್ಲ. ದುಷ್ಕರ್ಮಿಗಳು ಶೌಚಾಲಯ ಬಾಗಿಲು ಒಡೆದು ಸಿಂಟೆಕ್ಸ್ ಕದ್ದೊಯ್ದಿದ್ದಾರೆ
- ಶರಣಮ್ಮ ತೆಲಗುರ, ಅಂಗನವಾಡಿ ಕಾರ್ಯಕರ್ತೆ

***

ಕೋವಿಡ್ ಇರುವುದರಿಂದ ಅಂಗನವಾಡಿ ಕೇಂದ್ರಗಳು ಆರಂಭವಾಗಿಲ್ಲ. ಕೇಂದ್ರಗಳು ಆರಂಭವಾದ ನಂತರ ದಿನಸಿ ಮತ್ತು ಪೌಷ್ಟಿಕ ಆಹಾರವನ್ನು ಕೇಂದ್ರಗಳಿಗೆ ಪೂರೈಸಲಾಗುವುದು
- ಲಾಲಸಾಬ ಪೀರಾಪುರ, ಸಿಡಿಪಿಒ, ಸುರಪುರ

***

ಫಲಾನುಭವಿಗಳಿಗೆ ದಿನಸಿ ಸಮರ್ಪಕವಾಗಿ ಪೂರೈಕೆಯಾಗಿಲ್ಲ. ಕಿಟ್‍ಗಳಲ್ಲಿ ನಿಗದಿತ ಪ್ರಮಾಣದಲ್ಲಿ ದಿನಸಿ ಇರುವುದಿಲ್ಲ. ಮೊಟ್ಟೆ ಕಡಿಮೆ ಕೊಡಲಾಗುತ್ತಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶಾಮೀಲಾಗಿ ಅವ್ಯವಹಾರ ಮಾಡುತ್ತಾರೆ
ಭೀಮರಾಯ ಸಿಂಧಗೇರಿ, ಸಾಮಾಜಿಕ ಕಾರ್ಯಕರ್ತ, ಸುರಪುರ

***

ಶಹಾಪುರ ತಾಲ್ಲೂಕಿನಲ್ಲಿ 106 ಅಪೌಷ್ಟಿಕ ಮಕ್ಕಳು ಇದ್ದಾರೆ. ತಾಲ್ಲೂಕಿನಲ್ಲಿ 395 ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ 295 ಸ್ವಂತ ಕಟ್ಟಡವಿದ್ದರೆ 25 ಬೇರೆ ಬೇರೆ ಸರ್ಕಾರಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿವೆ. 75 ಬಾಡಿಗೆ ಕಟ್ಟಡದಲ್ಲಿ ಇವೆ
ಗುರುರಾಜ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಹಾಪುರ

***

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು