ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಕ್ವಾರಂಟೈನ್‌ ಬಿಟ್ಟು ತಿರುಗಾಡಿದರೆ ಕ್ರಿಮಿನಲ್ ಕೇಸ್: ಡಿಸಿ ಎಚ್ಚರಿಕೆ

‘ಪ್ರಜಾವಾಣಿ’ ಫೋ‌ನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಎಚ್ಚರಿಕೆ
Last Updated 19 ಮೇ 2020, 20:00 IST
ಅಕ್ಷರ ಗಾತ್ರ

ಯಾದಗಿರಿ: ‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಅವರೊಂದಿಗೆ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಡೆಯಿಂದ ಓದುಗರು ತಮ್ಮ ಸಮಸ್ಯೆಗಳನ್ನು ಕೇಳಿ ಉತ್ತರ ಪಡೆದರು.

ಕ್ವಾರಂಟೈನ್‌ನಲ್ಲಿರುವವರಿಗೆ ಸೂಕ್ತ ಸೌಲಭ್ಯ, ನೀರಿನ ಸಮಸ್ಯೆ, ಪಡಿತರ, ಉದ್ಯೋಗ ಖಾತ್ರಿ ಯೋಜನೆ, ಅಂತರಜಿಲ್ಲಾ ಸಂಚಾರ, ಪೊಲೀಸರ ಕುರುಕುಳ ಸೇರಿದಂತೆ ಹಲವಾರು ವಿಷಯಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಈ ಎಲ್ಲ ಪ್ರಶ್ನೆಗಳಿಗೆ ಸಾವಧಾನದಿಂದ ಉತ್ತರಿಸಿದ ಜಿಲ್ಲಾಧಿಕಾರಿ ಅವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಕ್ವಾರಂಟೈನ್‌ಲ್ಲಿರುವವರು ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರಬೇಕು. ಊರು ಒಳಗೆ ಮತ್ತಿತರ ಕಡೆ ತಿರುಗಾಡಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಕೂರ್ಮಾರಾವ್‌ ಎಚ್ಚರಿಕೆ ನೀಡಿದರು. ಕ್ವಾರಂಟೈನಲ್ಲಿರುವರು ಕೌಂಪೌಂಡ್‌ ಹಾರಿ ಹೊರಗಡೆ ಬರುತ್ತಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಓದುಗರು ಸಮಸ್ಯೆ ಬಿಚ್ಚಿಟ್ಟರು. ಕ್ವಾರಂಟೈನ್‌ನಲ್ಲಿ ಇರುವವರ ಬಳಿಗೆ ಊರಿನವರು ಯಾರೂ ಹೋಗಬಾರದು. ಅವರು ಹೊರಗಡೆ ಹೋಗಬಾರದು. ಸಮಸ್ಯೆಗಳಿದ್ದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ. ವಸತಿ ನಿಲಯಗಳಲ್ಲಿ ವಾರ್ಡ‌ನ್‌ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ ಫೋರ್ಸ್‌ ಇದೆ. ಇವರಿಗೂ ಕೂಡ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು..

* ವಿಶ್ವನಾಥ ಸಿರವಾರ, ಯಾದಗಿರಿ: ಕ್ವಾರಂಟೈನ್‌ಗಳಲ್ಲಿ ಊಟ, ಉಪಾಹಾರ ಸಮಸ್ಯೆ ಹಾಗೂ ಅಂತರ ಕಾಯ್ದುಕೊಳ್ಳುತ್ತಿಲ್ಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದರಿಂದ ಶಂಕಿತರು ಸೋಂಕಿತರಾಗುವ ಅಪಾಯ ಇದೆ.

ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳನ್ನು ವಹಿಸಲಾಗಿದೆ. ಮಾಸ್ಕ್, ಅಂತರ ಕಾಪಾಡಿಕೊಳ್ಳಲು ಅಧಿಕಾರಿಗಳು ಜಾಗ್ರತೆ ಮೂಡಿಸುತ್ತಿದ್ದಾರೆ. ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

* ಪವನ್ ಯರವಾಳ, ಕೆಂಭಾವಿ: ಕೆಂಭಾವಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್‌ ಕೇಂದ್ರದಲ್ಲಿ ವಲಸೆ ಕಾರ್ಮಿಕರು ಊರ ಒಳಗೆ ತಂಬಾಕು, ಗುಟ್ಕಾ ತೆಗೆದುಕೊಳ್ಳಲು ಬರುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಆತಂಕ ಮೂಡಿದೆ.

ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಭದ್ರತೆ ಇನ್ನೂ ಹೆಚ್ಚು ಮಾಡುತ್ತೇವೆ. ಫಾರೆಸ್ಟ್‌ ಗಾರ್ಡ್‌ ಜೊತೆಗೆ ಮೊಬೈಲ್‌ ಸ್ವ್ಯಾಡ್‌ ಮಾಡಲಾಗುತ್ತಿದೆ.

* ಮಹೇಶ ಪತ್ತಾರ್, ದೋರನಹಳ್ಳಿ: ಬೇವಿನಾಳ ಕ್ವಾರಂಟೈನ್ ಕೇಂದ್ರದಲ್ಲಿ ಊಟದ ವ್ಯವಸ್ಥೆ ಇಲ್ಲದೆ ವಲಸೆ ಕಾರ್ಮಿಕರು ಜಗಳ ಮಾಡಿಕೊಂಡು ಶಹಾಪುರ ಪಟ್ಟಣದಲ್ಲಿ ಓಡಾಡಿದ್ದಾರೆ. ಇದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಅಡುಗೆ ಸಿಬ್ಬಂದಿಯ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ನಮ್ಮಲ್ಲಿ ಎಲ್ಲ ಕಾರ್ಮಿಕರ ಪಟ್ಟಿ ಇದೆ. ಅವರನ್ನು ಮತ್ತೆ ಕ್ವಾರಂಟೈನ್ ಮಾಡಲಾಗುತ್ತದೆ ಯಾರೂ ಭಯ ಪಡುವ ಅಗತ್ಯ ಇಲ್ಲ.

* ಪ್ರಭುಗೌಡ ಮಾಲಿಪಾಟೀಲ ಐಕೂರು, ಯಲ್ಲಪ್ಪ ಕುರಕುಂದಾ, ಶ್ರೀನಿವಾಸ ವಗಣಗೇರಾ: ನಮ್ಮ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಹಳ ಇದೆ. ಇದರ ಕುರಿತು ಪಿಡಿಒಗೆ ಅನೇಕ ಸಾರಿ ಮನವಿ ಮಾಡಿದರೂಯಾವುದೇಪ್ರಯೋಜನೆ ಆಗಿಲ್ಲ.

ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು.

* ಶಾಂತಪ್ಪ ಮಹಾಮನಿ, ಡಿಗ್ಗಿ, ರಾಜು ಬೇಗಾರ ಅರಕೇರಾ (ಕೆ): ನಮ್ಮ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಿ ನಾಲ್ಕು ವರ್ಷಗಳಾಗಿದ್ದರೂ ಆರಂಭಗೊಂಡಿಲ್ಲ.

ಸಂಬಂಧಿಸಿದ ಅಧಿಕಾರಿಗಮನಕ್ಕೆ ತಂದು ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗುವುದು.

* ಸಿದ್ದಲಿಂಗಯ್ಯ ಹಿರೇಮಠ, ಹುಣಸಗಿ: ಗ್ರಾಮಗಳಲ್ಲಿ ಕುಡಿಯುವ ಮತ್ತು ಶೌಚಾಲಯಕ್ಕೆ ಬಳಸಲು ನೀರು ಇಲ್ಲ. ಇದರಿಂದಾಗಿ ಶೌಚಾಲಯಗಳು ಬಳಕೆಯಾಗುತ್ತಿಲ್ಲ.

ಜಿಲ್ಲಾ ಪಂಚಾಯಿತಿಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಜೊತೆ ಮಾತನಾಡಿ ನಿಮ್ಮ ಸಮಸ್ಯೆ ಪರಿಹರಿಸುತ್ತೇವೆ.

* ರಾಘವೇಂದ್ರ, ಶಹಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿರ್ಮೂಲನೆಗೆ ಕೈಗೊಂಡ ಕ್ರಮಗಳೇನು?

ಅಂತರ ಕಾಪಾಡಿಕೊಳ್ಳಲು, ಮಾಸ್ಕ್‌ ಧರಿಸಲು, ಆರೋಗ್ಯ ಸೇತು ಆ್ಯಪ್ ಬಳಕೆ ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರವೂ ಇದಕ್ಕೆ ಮುಖ್ಯ.

* ಅನಿತಾ, ಗುರಮಠಕಲ್: ನಮ್ಮ ತಾಯಿ ಬಳ್ಳಾರಿಯಲ್ಲಿ ಇದ್ದಾರೆ. ಅವರನ್ನು ನಮ್ಮ ಸ್ವಂತ ವಾಹನದಲ್ಲಿ ಕರೆದುಕೊಂಡು ಬರಬಹುದೇ?

ಕರೆದುಕೊಂಡು ಬರಬಹುದು. ಬಸ್‌ಗಳ ಸಂಚಾರವೂ ಆರಂಭಿಸಲಾಗಿದೆ. ಅದರಲ್ಲಿಯೂಬರಬಹುದು.

* ಬುಚ್ಚಪ್ಪ ನಾಯಕ, ಕಕ್ಕೇರಾ: ಕೊಳವೆ ಬಾವಿ ಜಲ ಮರುಪೂರಣ ಮಾಡಿಸಲು ಯಾವ ಇಲಾಖೆಗೆ ಅರ್ಜಿ ಸಲ್ಲಿಸಬೇಕು?

ಗ್ರಾಮೀಣ ಪ್ರದೇಶದಲ್ಲಿಯಾದರೆ ಗ್ರಾಮ ಪಂಚಾಯಿತಿ ನರೇಗಾದಲ್ಲಿ ಅಥವಾಪಟ್ಟಣ ಪಂಚಾಯಿತಿಕಚೇರಿಯಲ್ಲಿ ವಿಚಾರಿಸಿ.

* ಪ್ರಕಾಶ ಮಾರಲಬಾವಿ, ಹುಣಸಗಿ: ಊರಲ್ಲಿ ನೀರಿನ ಸಮಸ್ಯೆ ಇದೆ. ಸಾಕಷ್ಟು ಬಾರಿ ಪಿಡಿಒಗೆ, ಸಿಇಒಗೆ ಮನವಿ ಮಾಡಿದರೂಯಾವುದೇ ಪ್ರಯೋಜನವಾಗಿಲ್ಲ.

ಅಧಿಕಾರಿಗಳೊಂದಿಗೆ ಚರ್ಚಿಸಿ, ನಿಮ್ಮ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲಾಗುವುದು.

* ಮಾರೆಪ್ಪ ಗಾಜರಕೋಟ: ಏಪ್ರಿಲ್‌, ಮೇ ತಿಂಗಳ ಪಡಿತರ ವಿತರಿಸಲಾಗಿದೆ. ಆದರೆ, ಸೀಮೆಎಣ್ಣೆ ವಿತರಣೆ ಮಾಡಿಲ್ಲ.

ಈ ಕುರಿತು ಪರಿಶೀಲಿಸಿ, ವಿತರಿಸಲು ಸೂಚಿಸುತ್ತೇನೆ.

* ಶರಣರಡ್ಡಿ ಹತ್ತಿಗೂಡುರು: ಶಹಾಪುರ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಮುಗ್ಧಜನತೆಗೆ ಶೋಷಣೆ ಮಾಡುತ್ತಿದ್ದಾರೆ. ದಿನಸಿ ಖರೀದಿಗೆ ತೆರಳಿದರೂ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ.

*ಅನಶ್ಯಕವಾಗಿ ತಿರುಗಾಡುವ ಜನರಿಗೆ ದಂಡ ವಿಧಿಸಲಾಗುತ್ತಿದೆ. ಅವಶ್ಯಕತೆ ಇರುವ ಜನರಿಗೆ ಯಾವುದೇತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು.

ಉದ್ಯೋಗ ಖಾತ್ರಿ ಅರ್ಜಿ ಸಲ್ಲಿಸಿ
‘ಜಿಲ್ಲೆಗೆ ವಿವಿಧ ರಾಜ್ಯ, ಜಿಲ್ಲೆಗಳಿಂದ ಸಾವಿರಾರು ಜನರು ವಲಸೆ ಕಾರ್ಮಿಕರು ಬಂದಿದ್ದಾರೆ. ಅವರಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಕಲ್ಪಿಸಿಕೊಡಲು ಜಿಲ್ಲಾಡಳಿತ ಬದ್ಧವಾಗಿದೆ. ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗ ಪಡಿಯಲು ಅರ್ಜಿ ಸಲ್ಲಿಸಿ. ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕಾಗುತ್ತದೆ. ಅರ್ಜಿ ಜೊತೆಗೆ ರಸೀದಿ ಕೂಡ ಪಡೆಯಿರಿ. ಇದರಿಂದ ನಿಮ್ಮಲ್ಲಿ ದಾಖಲೆ ಇರುತ್ತದೆ. ಗ್ರಾಮಗಳ ಮಟ್ಟದಲ್ಲಿಯೇ ಉದ್ಯೋಗ ಲಭಿಸಲಿದೆ. ಬದುಗಳ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಯನ್ನು ಸ್ಥಳೀಯವಾಗಿ ದೊರಕಿಸಲು ಪ್ರಯತ್ನಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಅವರು, ಚಿದಾನಂದ ಚಂದಾಪುರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ದಿನ ನಿತ್ಯದ ಭಾಗವಾಗಿರಲಿ
ಕೋವಿಡ್‌–19 ಸೋಂಕು ತಡೆಗಟ್ಟಲು ಸಾರ್ವಜನಿಕರು ದಿನನಿತ್ಯವೂ ಆಗಾಗ ಕೈತೊಳೆಯುವುದು, ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಅಂತರ ಪಾಲಿಸುವುದು ದಿನನಿತ್ಯ ಭಾಗವಾಗಿರಬೇಕು. ಇವುಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಕೊರೊನಾ ಮುಕ್ತ ಜಿಲ್ಲೆಗೆ ಹೋರಾಡಬೇಕಾಗಿದೆ. ಲಾಕ್‌ಡೌನ್‌ ಸಡಿಲಿಕೆಗೆ ಹಂತಹಂತವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ನಿಯಮಗಳನ್ನು ಪಾಲಿಸಬೇಕು. ಅಂತರ ಪಾಲಿಸಬೇಕು. ಸಡಿಲಿಕೆ ದುರಪಯೋಗ ಮಾಡಿಕೊಳ್ಳಬೇಡಿ. ಸದುಪಯೋಗ ಮಾಡಿಕೊಳ್ಳಿ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಕೂರ್ಮಾರಾವ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT