ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಐದು ತಾಲ್ಲೂಕುಗಳಿಗಿಲ್ಲ ‘ಇಂದಿರಾ ಕ್ಯಾಂಟೀನ್‌’ ಭಾಗ್ಯ

ಕ್ಯಾಂಟೀನ್‌ ಸ್ಥಾಪನೆಗೆ ಜಾಗದ ಸಮಸ್ಯೆ ಸಬೂಬು, ಅಧಿಕಾರಿ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ
Last Updated 15 ಮೇ 2021, 19:31 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿದ್ದು, ಯಾದಗಿರಿ ತಾಲ್ಲೂಕಿನಲ್ಲಿ ಮಾತ್ರ ಇಂದಿರಾ ಕ್ಯಾಂಟೀನ್‌ ಆರಂಭವಾಗಿದೆ. ಉಳಿದ ಐದು ತಾಲ್ಲೂಕುಗಳಲ್ಲಿ ಇಲ್ಲಿಯವರೆಗೆ ಸ್ಥಾಪನೆಯಾಗಿಲ್ಲ.

ರಾಜ್ಯ ಸರ್ಕಾರ ಈಚೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ದಿನಕೂಲಿಗಳಿಗೆ ಉಚಿತವಾಗಿ ಉಪಾಹಾರ, ಊಟ ವಿತರಿಸಲು ಸೂಚಿಸಲಾಗಿದೆ. ಈ ಸೌಲಭ್ಯ ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ಮಾತ್ರ ಇದೆ. ಉಳಿದ ಕಡೆ ಕೂಲಿ ಕಾರ್ಮಿಕರು ಹೆಚ್ಚಿದ್ದರೂ ಈ ಅನುಕೂಲತೆಯಿಂದ ವಂಚಿತವಾಗಿದೆ.

ಜಿಲ್ಲೆಯಲ್ಲಿ ಏಕೈಕ 'ಇಂದಿರಾ ಕ್ಯಾಂಟೀನ್': ಯಾದಗಿರಿ ನಗರದ ಗಂಜ್‌ ವೃತ್ತದ ಸಮೀಪದಲ್ಲಿ ಇಂದಿರಾ ಕ್ಯಾಂಟೀನ್‌ ಜುಲೈ 13, 2018ರಲ್ಲಿ ಸ್ಥಾಪನೆಯಾಗಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಇಂದಿರಾ ಕ್ಯಾಂಟೀನ್' ಆಗಿದೆ. ಜಿಲ್ಲೆಯಲ್ಲಿ ಇದು ಒಂದು ಮಾತ್ರ ಇದ್ದು, ಬೇರೆ ಕಡೆ ಸ್ಥಾಪನೆಗೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಂಡು ಬರುತ್ತಿದೆ.

ಕ್ಯಾಂಟೀನ್‌ನಲ್ಲಿ ₹5 ವೆಚ್ಚದಲ್ಲಿ ತಿಂಡಿ, ₹10ಗೆ ಊಟ ನೀಡಲಾಗುತ್ತಿದೆ. ಈಗ ಲಾಕ್‌ಡೌನ್‌ ಕಾರಣದಿಂದ ರಾಜ್ಯ ಸರ್ಕಾರವೇ ಉಚಿತ ಊಟ ನೀಡಲು ಆದೇಶ ಮಾಡಿದೆ. ಇಂದಿರಾ ಕ್ಯಾಂಟಿನ್‌ ಇದ್ದ ಕಡೆ ಈ ಸೌಲಭ್ಯ ಸಿಗುತ್ತಿದೆ. ಇಲ್ಲದ ಕಡೆ ಪರದಾಟ ತಪ್ಪಿಲ್ಲ.

ಜಿಲ್ಲೆಯಲ್ಲಿವೆ ಆರು ತಾಲ್ಲೂಕುಗಳು: ಯಾದಗಿರಿ, ಗುರುಮಠಕಲ್‌, ವಡಗೇರಾ, ಶಹಾಪುರ, ಸುರಪುರ, ಹುಣಸಗಿ ಸೇರಿದಂತೆ ಆರು ತಾಲ್ಲೂಕುಗಳಿವೆ. ಎರಡು ಕಡೆ ಬಿಜೆಪಿ ಶಾಸಕರಿದ್ದರೆ, ತಲಾ ಒದೊಂದು ಕಡೆ ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿದ್ದಾರೆ. ಈ ಯೋಜನೆ ಆರಂಭವಾದ ಮೂರು ತಾಲ್ಲೂಕುಗಳು ಇದ್ದವು. ಈಗ ಹೆಚ್ಚಳವಾಗಿದ್ದು, ಸಂಬಂಧಿಸಿದ ಅಧಿಕಾರಿಗಳಾಗಲಿ, ಶಾಸಕರಾಗಿ ಕ್ಯಾಂಟೀನ್‌ ಸ್ಥಾಪನೆಗೆ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.

ಜಿಲ್ಲಾ ನಗರಾಭಿವೃದ್ಧಿ ಕೋಶ ವ್ಯಾಪ್ತಿಗೆ: ಸರ್ಕಾರ ನೇರವಾಗಿ ಆಹಾರ ಧ್ಯಾನ ಪೂರೈಸುವುದಿಲ್ಲ. ಗುತ್ತಿಗಾರರಿಗೆ ಟೆಂಡರ್‌ ನೀಡುತ್ತದೆ. ಅವರೇ ಕ್ಯಾಂಟೀನ್‌ ನಡೆಸುತ್ತಾರೆ. ಈ ಮೂಲಕ ಬಡವರಿಗೆ ಕಡಿಮೆ ವೆಚ್ಚದಲ್ಲಿ ಉಪಾಹಾರ, ಊಟ ನೀಡಲಾಗುತ್ತಿದೆ. ಇದರ ಜವಾಬ್ದಾರಿ ಜಿಲ್ಲಾ ನಗರಾಭಿವೃದ್ಧಿ ಕೋಶ ವ್ಯಾಪ್ತಿಗೆ ಬರುತ್ತದೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸದಿರುವುದು ದುರ್ವೈವದ ಸಂಗತಿಯಾಗಿದೆ.

ಲಾಕ್‌ಡೌನ್‌ ವೇಳೆ ಇಲ್ಲಿಂದಲೇ ಊಟ: ಕಳೆದ ಬಾರಿ ಕೋವಿಡ್‌ ಕಾರಣದಿಂದ ಲಾಕ್‌ಡೌನ್‌ ಘೋಷಿಸಿದ್ದ ವೇಳೆ ವೇಳೆ ಇಲ್ಲಿಂದಲೇ ಆಹಾರವನ್ನು ತಯಾರಿಸಿ ಸಾರ್ವಜನಿಕರಿಗೆ ವಿತರಿಸಲಾಗಿದೆ. ವಿವಿಧ ಜಿಲ್ಲೆ, ರಾಜ್ಯಗಳಿಂದ ಬಂದುನಗರದ ಆಯುಷ್‌ ಆಸ್ಪತ್ರೆಯಲ್ಲಿಜ್ವರ ತಪಾಸಣೆಗೆ ಬಂದವರಿಗೆ ಇಲ್ಲಿಂದಲೇ ಊಟ ತಯಾರಿಸಿ ನೀಡಲಾಗಿದೆ. ಅಲ್ಲದೆ ಸರ್ಕಾರಿ ಅಧಿಕಾರಿಗಳಿಗೂ ಊಟ ಒದಗಿಸಿಕೊಡಲಾಗಿತ್ತು. ಈ ಮೂಲಕ ಇಂದಿರಾ ಕ್ಯಾಂಟೀನ್‌ ಊಟಕ್ಕೆ ಸಹಕಾರಿಯಾಗಿದೆ. ಈಗ ಕುಷ್ಠರೋಗಿಗಳಿಗೂ ಇಲ್ಲಿಂದಲೇ ಊಟ ನೀಡಲಾಗುತ್ತಿದೆ.

‘ಶಹಾಪುರ ನಗರದಲ್ಲಿ ಇಂದಿರಾ ಕ್ಯಾಂಟಿನ್ ಸ್ಥಾಪಿಸಲು ಮೊದಲು ಜಾಗದ ಸಮಸ್ಯೆ ಉಂಟಾಯಿತು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸ್ಥಾಪಿಸಲು ಸಿದ್ಧತೆ ನಡೆದಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ನಂತರ ಹೊಸ ಬಸ್ ನಿಲ್ದಾಣದ ಎದುರುಗಡೆ ಜಾಗದಲ್ಲಿ ನಿರ್ಮಿಸಲು ನಿರ್ಧರಿಸಿ ಅಡಿಗಲ್ಲು ಹಾಕಿದ್ದರು. ನಂತರ ತಾಂತ್ರಿಕ ಸಮಸ್ಯೆ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕೊನೆಗೂ ಇಂದಿರಾ ಕ್ಯಾಂಟಿನ್ ಸ್ಥಾಪನೆಯಾಗಲಿಲ್ಲ. ಇಲ್ಲಿಯವರೆಗೆ ನೆನಗುದಿಗೆ ಬಿದ್ದಿದೆ’ ಎನ್ನುತ್ತಾರೆ ಶಹಾಪುರ ನಗರದ ನಿವಾಸಿ ಮಾನಪ್ಪ ಹಡಪದ.

‘ಜಿಲ್ಲೆಯ ಕೆಲ ಕಡೆ ಇಂದಿರಾ ಕ್ಯಾಂಟೀನ್‌ ಸ್ಥಾಪನೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗದೇ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇನ್ನೂದರೂ ಕ್ಯಾಂಟೀನ್‌ ಸ್ಥಾಪನೆಗೆ ಮುಂದಾಗಲಿ’ ಎಂದು ಸಾಮಾಜಿಕ ಕಾರ್ಯಕರ್ತ ಹಣಮಂತ ಪೂಜಾರಿ ಹೇಳುತ್ತಾರೆ.

***

ಗುರುಮಠಕಲ್ ಪಟ್ಟಣದಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಮನವೊಲಿಕೆ ಮಾಡುತ್ತೇನೆ. ಆದರೂ ಆರಂಭವಾಗದಿದ್ದರೆ ವೈಯಕ್ತಿಕವಾಗಿ ವ್ಯವಸ್ಥೆ ಮಾಡಲೂ ಸಿದ್ದ

- ನಾಗನಗೌಡ ಕಂದಕೂರ, ಗುರುಮಠಕಲ್ ಶಾಸಕ

***

ಇಂದಿರಾ ಕ್ಯಾಂಟೀನ್‌ ಸ್ಥಾಪನೆಯಾಗದಿದ್ದ ಕಾರಣ ಲಾಕ್‌ಡೌನ್ ಕಾಲದಲ್ಲಿ ಬಡ ಹಾಗೂ ನಿರ್ಗತಿಕರು ಸಂಕಷ್ಟ ಅನುಭವಿಸುವಂತೆ ಆಗಿದೆ. ತ್ವರಿತವಾಗಿ ಉಚಿತ ಊಟದ ವ್ಯವಸ್ಥೆ ಮಾಡಿ ಹಸಿವಿನಿಂದ ಬಳಲುವ ವ್ಯಕ್ತಿಗೆ ಅನ್ನ ನೀಡಿ

ಮಾನಪ್ಪ ಹಡಪದ, ಶಹಾಪುರ ನಿವಾಸಿ

***

ಸೂಕ್ತ ಸ್ಥಳ ಲಭ್ಯವಿಲ್ಲದ್ದರಿಂದ ಇಂದಿರಾ ಕ್ಯಾಂಟಿನ್ ಆರಂಭವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಇದರಲ್ಲಿ ಸತ್ಯಾಂಶವಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಇದಕ್ಕೆ ಕಾರಣ

ಕ್ಯಾತಪ್ಪ ಮೇದಾ, ವಿದ್ಯಾರ್ಥಿ ನಾಯಕ, ಸುರಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT