ಯರಗೋಳ: ನೀರಿಗಾಗಿ ನಿತ್ಯ ಪರದಾಟ; ಬೀಗರು ಬಂದರೆ ಕುಡಿಯಲು ಕೊಡಲು ಲೋಟ ನೀರಿಲ್ಲ!

ಶುಕ್ರವಾರ, ಮೇ 24, 2019
28 °C

ಯರಗೋಳ: ನೀರಿಗಾಗಿ ನಿತ್ಯ ಪರದಾಟ; ಬೀಗರು ಬಂದರೆ ಕುಡಿಯಲು ಕೊಡಲು ಲೋಟ ನೀರಿಲ್ಲ!

Published:
Updated:

ಯರಗೋಳ: ಬಿಸಿಲಿನ ತಾಪ ಹೆಚ್ಚಿದಂತೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ನೀರಿನ ದಾಹವೂ ಹೆಚ್ಚುತ್ತಲೇ ಇದೆ. ಜಿಲ್ಲಾ ಕೇಂದ್ರ ಯಾದಗಿರಿಯಿಂದ 18 ಕಿ.ಮೀ. ದೂರವಿರುವ ಯರಗೋಳ ಗ್ರಾಮದ ವಾರ್ಡ್ ನಂಬರ್ 5ರಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

’ಈ ಊರಿಗೆ ಮದುವೆ, ಮುಂಜಿ, ಹಬ್ಬ, ಹರಿದಿನಗಳು ಬೇಸಿಗೆ ಕಾಲಕ್ಕೆ ಬರಲೇಬಾರದು ನೋಡ್ರಿ! ಮನೆಗೆ ಬೀಗರು ಬಂದರೆ, ಅವರಿಗೆ ಕುಡಿಯಲು ಒಂದು ಲೋಟ ನೀರು ಕೊಡಲು ಇರುವುದಿಲ್ಲ‘ ಎಂದು ಅಲ್ಲಿನ ನಿವಾಸಿ ಮಕುಮಾ ’ಪ್ರಜಾವಾಣಿ‘ಯೊಂದಿಗೆ ತಮ್ಮ ನೋವನ್ನು ಹಂಚಿಕೊಂಡರು.

’ಮನುಷ್ಯರಿಗೆ ಬಾಯಾರಿಕೆ ಆದರೆ ಎಲ್ಲಿಯಾದರು ನೀರು ಕೇಳಿ ಕುಡಿಯುತ್ತಾರೆ. ಆದರೆ, ದನ- ಕರುಗಳು ಗತಿ ಏನು? ಹಬ್ಬ, ಅಮಾವಾಸ್ಯೆಗಳಿಗೆ ಮನೆ, ಬಟ್ಟೆ ತೊಳಿಯಲು ನೀರಿರುವುದಿಲ್ಲ‘ ಎಂದು ನಿಂಗಮ್ಮ ತಿಳಿಸಿದರು.

ಕೆಟ್ಟ ಬೋರ್‌ವೆಲ್

ಈ ವಾರ್ಡ್ನಲ್ಲಿ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳಿಗೆ, ಒಂದೇ ಸಾರ್ವಜನಿಕ ನಲ್ಲಿಯಿದೆ. ಸರತಿ ಸಾಲಿನಲ್ಲಿ ನಿಂತು ನೀರು ತುಂಬುವ ಪರಿಸ್ಥಿತಿ ಇದೆ. ವರ್ಷದ ಹಿಂದೆ ಬೋರ್ ವೆಲ್ ಸಹ ವಿದ್ಯುತ್ ಸಂಪರ್ಕ ಕಡಿತವಾಗಿ ಕೆಟ್ಟಿದೆ. ಅಲ್ಲಿಯೇ ಒಂದು ಸಾರ್ವಜನಿಕ ನೀರಿನ ತೊಟ್ಟಿಯಿದ್ದು ಅದು ಕೂಡ ಬಿಸಿಲಿನ ತಾಪಕ್ಕೆ ಬಿರುಕು ಬಿಟ್ಟಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ ಎಂಬುದು ನಿವಾಸಿಗಳ ಆರೋಪ.

ಜಾನುವಾರುಗಳಿಗೆ ನೀರಿಲ್ಲ: ರೈತಾಪಿ ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಗ್ರಾಮದಲ್ಲಿ ಎತ್ತು, ಎಮ್ಮೆ , ಕುರಿ, ಆಡುಗಳಿಗೆ ಕುಡಿಸಲೂ ನೀರಿಲ್ಲದೇ ಪರದಾಡುವಂತಾಗಿದೆ. ದಿನ ನಿತ್ಯ ಸ್ನಾನಕ್ಕೆ, ಬಟ್ಟೆ ತೊಳೆಯಲು, ಮನೆ ಕೆಲಸಗಳಿಗೂ ತೊಂದರೆಯಾಗಿದೆ.

ಗ್ರಾ.ಪಂ ನಿರ್ಲಕ್ಷ್ಯ: ರಾಜ್ಯ ಸರ್ಕಾರ ಕುಡಿಯುವ ನೀರಿಗಾಗಿ ಬಜೆಟ್‌ನಲ್ಲಿ ಸಾಕಷ್ಟು ಹಣವನ್ನು ಮೀಸಲಿಟ್ಟರೂ ಇದನ್ನು ಉಪಯೋಗಿಸಿಕೊಳ್ಳದೆ ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

* ಬ್ಯಾಸಗಿ ಕಾಲಕ್ಕೆ ನೀರಿನ ತೊಂದರೆ ಬಹಳ ಆಗಿದೆ. ಇರುವ ಒಂದು ನಲ್ಲಿಗೆ ಎಲ್ಲರೂ ಮುಗಿಬೀಳುತ್ತಿದ್ದಾರೆ, ದನಕರುಗಳಿಗೆ ಕುಡಿಯಲು ನೀರಿನ ತೊಟ್ಟಿಯೂ ಇಲ್ಲ
–ಚಂದ್ರಪ್ಪ ಹೊಸೂರು, ಯರಗೋಳ ಗ್ರಾಮಸ್ಥ

‌* ಮನೆಗೆ ಬೀಗರು,ನೆಂಟರು ಬಂದರೆ ನೀರು ಕುಡಿಯಲು ಇರುವುದಿಲ್ಲ .ಆಕಳು ಕರುಗಳಿಗೆ ಬಹಳ ತೊಂದರೆ ಆಗ್ಯಾದ ಬಟ್ಟೆ ತೊಳೆಯಲು ನೀರಿಲ್ಲ

–ನಿಂಗಮ್ಮ, ವಾರ್ಡ್‌ ನಿವಾಸಿ

* ಆದಷ್ಟು ಬೇಗನೇ ಸಮಸ್ಯೆ ಬಗೆಹರಿಸುತ್ತೇವೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೋರ್‌ಲ್ ಹಾಕಿಸಿ ನೀರಿನ ತೊಟ್ಟಿಗಳನ್ನು ದುರಸ್ತಿ ಮಾಡುತ್ತೇವೆ
–ರವಿಚಂದ್ರ ರೆಡ್ಡಿ, ಯರಗೋಳ ಪಿಡಿಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !