ಶುಕ್ರವಾರ, ಅಕ್ಟೋಬರ್ 29, 2021
20 °C
ಶೇ 5 ಅನುದಾನ ಮೀಸಲಿಡದ ಅಧಿಕಾರಿಗಳು, ಎಲ್ಲಿಯೂ ಕಾಣದ ರ್‍ಯಾಂಪ್‌ ವ್ಯವಸ್ಥೆ

ಯಾದಗಿರಿ: ಅಂಗವಿಕಲರಿಗೆ ತಲುಪದ ಸರ್ಕಾರಿ ಅನುದಾನ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಅಂಗವಿಕಲರಿಗೆ ಅನುಕಂಪ ಬೇಡ. ಅವರಿಗೆ ಅವಕಾಶಗಳನ್ನು ರೂಪಿಸಿ ಎನ್ನುವುದು ಕೇವಲ ಬಾಯಿ ಮಾತಿಗೆ ಸೀಮಿತವಾಗಿದೆ. ಸರ್ಕಾರ ಅಂಗವಿಕಲರಿಗಾಗಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದರೂ ಸಮರ್ಪಕವಾಗಿ ತಲುಪುತ್ತಿಲ್ಲ. ಇದರಿಂದ ಸೌಲಭ್ಯಕ್ಕಾಗಿ ಪರದಾಡಬೇಕಾಗಿದೆ.

ಅಂಗವಿಕಲ ಎಂದು ಅನುಕಂಪ ತೋರಿಸುವವರೇ ಹೆಚ್ಚು. ಆದರೆ, ಸರ್ಕಾರಿ ಸೌಲಭ್ಯ ಒದಗಿಸಿಕೊಡುವಲ್ಲಿ ಆಡಳಿತಯಂತ್ರ ಹಿಂದೆ ಇದೆ ಎನ್ನುವುದು ಅಂಗವಿಕಲರ ಮಾತಾಗಿದೆ.

ಜಿಲ್ಲೆಯಲ್ಲಿ ದೈಹಿಕ ಅಂಗವಿಕಲರು, ಅಂಧರು, ಕಿವುಡಡು ಮತ್ತು ಮೂಕರು ಸೇರಿದಂತೆ ಬಹುವಿಧ ಅಂಗವಿಕಲರು 21,569 ಮಂದಿ ಇದ್ದಾರೆ. 12,707 ಪುರುಷ ಅಂಗವಿಕಲರು ಇದ್ದರೆ, 8,862 ಮಹಿಳಾ ಅಂಗವಿಕಲರಿದ್ದಾರೆ.

ಶಹಾಪುರ ತಾಲ್ಲೂಕಿನಲ್ಲಿ ದೈಹಿಕ ಅಂಗವಿಕಲರು 945 ಪುರುಷ, 489 ಮಹಿಳೆ, ವಡಗೇರಾ ತಾಲ್ಲೂಕಿನಲ್ಲಿ 859 ಪುರುಷ, 386 ಮಹಿಳೆ, ಸುರಪುರ ತಾಲ್ಲೂಕಿನಲ್ಲಿ 1,021 ಪುರುಷ, 721 ಮಹಿಳೆ, ಹುಣಸಗಿ ತಾಲ್ಲೂಕಿನಲ್ಲಿ 827 ಪುರುಷ , 621 ಮಹಿಳೆ, ಯಾದಗಿರಿ ತಾಲ್ಲೂಕಿನಲ್ಲಿ 1,238 ಪುರುಷ, 881 ಮಹಿಳೆ, ಗುರುಮಠಕಲ್‌ ತಾಲ್ಲೂಕಿನಲ್ಲಿ 845 ಪುರುಷ, 648 ಮಹಿಳೆಯರು ಇದ್ದಾರೆ.

ತಲುಪದ ಸರ್ಕಾರಿ ಸೌಲಭ್ಯ: ಅಂಗವಿಕಲರಿಗಾಗಿ ಸರ್ಕಾರ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಆದರೆ, ಅವುಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಮುಂದಾಗುತ್ತಿಲ್ಲ ಎನ್ನುವ ಆರೋಪ ದೈಹಿಕ ಅಂಗವಿಕಲರಿಂದ ಕೇಳಿ ಬರುತ್ತಿದೆ.

‘ವಿದ್ಯಾರ್ಥಿ ವೇತನ, ಸಾಧನ ಸಲಕರಣೆ, ಯಂತ್ರಚಾಲಿತ ದ್ವಿಚಕ್ರ ವಾಹನ, ಟಾಕಿಂಗ್‌ ಲ್ಯಾ‍ಪ್‌ಟ್ಯಾಪ್‌, ಗ್ರಾಮೀಣ ಪುನರ್ವಸತಿ, ಆಧಾರ, ವೈದ್ಯಕೀಯ ಪರಿಹಾರ, ಶುಲ್ಕ ಮರುಪಾವತಿ, ವಿವಾಹ ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಸೌಲಭ್ಯಗಳಿವೆ. ಇವು ಅಂಗವಿಕಲರಿಗೆ ಸರಿಯಾಗಿ ತಲು‍ಪುತ್ತಿಲ್ಲ’ ಎಂದು ಕರ್ನಾಟಕ ವಿಕಲಚೇತನ ಒಕ್ಕೂಟ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಧನರೆಡ್ಡಿ ಸಂಗಾರೆಡ್ಡಿ ಆರೋಪಿಸುತ್ತಾರೆ.

ರ್‍ಯಾಂಪ್‌ ವ್ಯವಸ್ಥೆಯೂ ಇಲ್ಲ: ಸರ್ಕಾರದ ವಿವಿಧ ಕಚೇರಿಗಳಲ್ಲಿ ಅಂಗವಿಕಲರ ಅನುಕೂಲಕ್ಕಾಗಿ ರ್‍ಯಾಂಪ್‌ ವ್ಯವಸ್ಥೆ ಇರಬೇಕು. ದೈಹಿಕ ನ್ಯೂನತೆಯಿಂದ ಕೂಡಿದ ಅಂಗವಿಕಲರು ಸರಾಗವಾಗಿ ಕಚೇರಿಗಳನ್ನು ತಲುಪಲು ಸಾಧ್ಯವಾಗುತ್ತದೆ. ಆದರೆ, ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಈ ಸೌಲಭ್ಯವೇ ಇಲ್ಲ.

ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ರ್‍ಯಾಂಪ್‌ ವ್ಯವಸ್ಥೆ ಚಾಲ್ತಿಗೆ ಬರುತ್ತದೆ. ಆದಾದ ನಂತರ ಮತ್ತೆ ಮೂಲೆಗುಂಪು ಆಗುತ್ತಿದೆ. ಇದರಿಂದ ಅಂಗವಿಕಲರು ಮೆಟ್ಟಿಲುಗಳನ್ನು ಹತ್ತಿ ಕಚೇರಿ ತಲುಪಲು ಮತ್ತೊಬ್ಬರ ಸಹಾಯವನ್ನು ಪಡೆಯುವ ಅನಿವಾರ್ಯತೆ ಇದೆ.

ಐದರಿಂದ ಆರು ಮೆಟ್ಟಿಲು ಇರುವ ಗ್ರಾಮ ಪಂಚಾಯಿತಿ ಕಟ್ಟಡವನ್ನು ಅಂಗವಿಕಲರು ಪ್ರವೇಶ ಮಾಡಲು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಈ ಬಾರಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸದಸ್ಯರಾಗಿ ಅಂಗವಿಕಲರು ಆಯ್ಕೆಯಾಗಿದ್ದಾರೆ. ಅಂಥವರಿಗೂ ಇಂದಿಗೂ ಸೌಲಭ್ಯಗಳು ಸಿಕ್ಕಿಲ್ಲ.

ತ್ರಿಚಕ್ರ ವಾಹನ ದುರ್ಬಳಕೆ: ಅಂಗವಿಕಲರಿಗೆ ಸರ್ಕಾರದಿಂದ ನೀಡುವ ತ್ರಿಚಕ್ರ ವಾಹನ ದುರ್ಬಳಕೆ ಆಗುತ್ತದೆ ಎಂದು ಜನಪ್ರತಿನಿಧಿಯೊಬ್ಬರು ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ವೇಳೆ ವಿಷಯ ಬಿಚ್ಚಿಟ್ಟಿದ್ದರು.

ವಾಹನವನ್ನು ಕೆಲವರು ತೆಗೆದುಕೊಂಡರೂ ಮತ್ತೊಬ್ಬರೇ ಅದನ್ನು ಹೆಚ್ಚು ಬಳಕೆ ಮಾಡುತ್ತಾರೆ. ಅಲ್ಲದೇ ಹಿಂದಿನ ಎರಡು ಚಕ್ರಗಳನ್ನು ತೆಗೆದು ಸಾಮಾನ್ಯ ವಾಹನದಂತೆ ಮಾಡಿ ಉಪಯೋಗಕ್ಕೆ ಬಿಟ್ಟವರು ಇದ್ದಾರೆ. ಇದರಿಂದ ಸರ್ಕಾರಿ ಯೋಜನೆಯೂ ದುರ್ಬಳಕೆ ಆಗುತ್ತಿದೆ. ಇದನ್ನು ತಡೆಗಟ್ಟುವ ಅವಶ್ಯವಿದೆ.

'ಅಂಗವಿಕಲರ ಅನುದಾನ ದುರುಪಯೋಗ'

ಸುರಪುರ: ಗ್ರಾಮ ಪಂಚಾಯಿತಿಗಳಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ಅಂಗವಿಕಲರಿಗಾಗಿ ಶೇ 5 ರಷ್ಟು ಅನುದಾನ ಮೀಸಲಿರಿಸಲಾಗಿದೆ. ತಾಲ್ಲೂಕಿನಲ್ಲಿ 22 ಗ್ರಾಮ ಪಂಚಾಯಿತಿಗಳು ಬರುತ್ತವೆ. ಇದುವರೆಗೂ ಒಂದೂ ಗ್ರಾಮ ಪಂಚಾಯಿತಿ ಅಂಗವಿಕಲರಿಗೆ ಶೇ 5 ರಷ್ಟು ಅನುದಾನ ನೀಡಿಲ್ಲ. ಈ ಹಣದಲ್ಲಿ ಮನೆ, ಆರ್ಥಿಕ ಸ್ವಾವಲಂಬನೆಗೆ ಸಹಾಯ ಧನ, ವಿದ್ಯಾರ್ಥಿ ವೇತನ, ಸಾಧನಾ ಸಲಕರಣೆಗಳನ್ನು ನೀಡಬಹುದಾಗಿದೆ. ಶಾಸಕರ ನಿಧಿ, ತಾಲ್ಲೂಕು ಪಂಚಾಯಿತಿ ಅನುದಾನ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಮಾತ್ರ ಇದುವರೆಗೆ ತ್ರಿಚಕ್ರವಾಹನ, ಸಾಧನಾ ಸಲಕರಣೆಗಳನ್ನು ವಿತರಿಸಲಾಗಿದೆ.

ತಾಲ್ಲೂಕಿನಲ್ಲಿ 3,800 ಕ್ಕೂ ಹೆಚ್ಚು ಅಂಗವಿಕಲರಿದ್ದಾರೆ. ಇನ್ನೂ ಬಹಳಷ್ಟು ಅಂಗವಿಕಲರಿಗೆ ಸೌಲಭ್ಯ ದೊರೆತಿಲ್ಲ.

ಸದ್ಬಳಕೆಯಾಗದ ಮೀಸಲು ಅನುದಾನ

ಶಹಾಪುರ: ಅಂಗವಿಕಲರ ಅಭಿವೃದ್ಧಿಗಾಗಿ ಮೀಸಲಿಟ್ಟ ಶೇ 5ರಷ್ಟು ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗುತ್ತಿಲ್ಲ. ತಾಲ್ಲೂಕಿನಲ್ಲಿ 4,680 ಅಂಗವಿಕಲರಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗವಿಕಲರು ಭೇಟಿ ನೀಡಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯವನ್ನು ನೀಡುವಂತೆ ಮನವಿ ಮಾಡಿದ್ದರೂ ಅಲ್ಲಿನ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಅಂಗವಿಕಲರದ್ದು.

‘ಹಳ್ಳಿಯಲ್ಲಿ ಟೇಲರಿಂಗ್ ಯಂತ್ರ, ಮಿಕ್ಸರ್, ಕುಕ್ಕರ್‌ ನೀಡಿದ್ದಾರೆ. ಅದರಂತೆ ಶಹಾಪುರ ನಗರಭೆಯ ವ್ಯಾಪ್ತಿಯಲ್ಲಿ 32 ತ್ರಿಚಕ್ರ ವಾಹನ ನೀಡಿದ್ದಾರೆ’ ಎನ್ನುತ್ತಾರೆ ಅಂಗವಿಕಲ ಅನುಷ್ಠಾನ ಸಮಿತಿ ಸದಸ್ಯ ವಿರೇಶ ರಂಗಂಪೇಟೆ. ‘ಬಸ್‌ನಲ್ಲಿ ಅಂಗವಿಕಲರಿಗಾಗಿ ಮೀಸಲಿಟ್ಟ ಸೀಟುಗಳಿಗೆ ಅಂಗವಿಕಲರು ಬಸ್‌ನಲ್ಲಿ ತೆರಳುತ್ತಿದ್ದಾಗ ನೀಡುವುದಿಲ್ಲ. ಕೆಲ ಬಸ್‌ನಲ್ಲಿ ಸೀಟು ಕಾಯ್ದಿರಿಸಿದ ಬಗ್ಗೆ ನಮೂದಿಸಿರುವುದಿಲ್ಲ. ಅಂಗವಿಕಲರ ಬಗ್ಗೆ ಸಹಾನುಭೂತಿ ಬೇಡ. ನಮಗೆ ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಒದಗಿಸುವ ಮೂಲಕ ಅಂಗವಿಕಲರಿಗೆ ನೆರವಿನ ಅಭಯ ನೀಡಿ’ ಎನ್ನುತ್ತಾರೆ ಅವರು.

***

ಕಳೆದ 8 ವರ್ಷಗಳಿಂದ ಅಂಗವಿಕಲರ ಕುಂದು ಕೊರತೆ ಸಭೆಯನ್ನೇ ನಡೆಸಿಲ್ಲ. ಅಲ್ಲದೇ ವಸತಿ, ನಿವೇಶನ, ಗ್ರಾಮ ಪಂಚಾಯಿತಿಯಲ್ಲಿ ಶೇ 5 ಅನುದಾನ ಸಿಗುತ್ತಿಲ್ಲ
ಧನರೆಡ್ಡಿ ಸಂಗಾರೆಡ್ಡಿ, ಕರ್ನಾಟಕ ವಿಕಲಚೇತನ ಒಕ್ಕೂಟ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ

***

ಇಲಾಖೆ ವತಿಯಿಂದ ಜಿಲ್ಲೆಯ ಅಂಗವಿಕಲರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ. ತ್ರಿಚಕ್ರ ವಾಹನ ಸೌಲತ್ತು ಒದಗಿಸಲಾಗಿದೆ
ದೀಪಿಕಾ, ಅಂಗವಿಕಲ ಕಲ್ಯಾಣ ಅಧಿಕಾರಿ

***

ಶೇ 5 ರ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅನುದಾನ ದುರುಪಯೋಗವಾಗುತ್ತಿದೆ. ಈ ಬಗ್ಗೆ ಹೋರಾಟ ರೂಪಿಸಲಾಗುತ್ತಿದೆ
ನಾಗೇಂದ್ರ ದೊರೆ, ಅಧ್ಯಕ್ಷ ಕರ್ನಾಟಕ ವಿಕಲಚೇತನರ ಹಕ್ಕುಗಳ ಒಕ್ಕೂಟದ ತಾಲ್ಲೂಕು ಘಟಕ

****

ತಾಲ್ಲೂಕಿನ ಅಂಗವಿಕಲರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಸೌಲಭ್ಯ ಸಿಗದವರು ಮಾಹಿತಿ ನೀಡಿ
ಮಾಳಪ್ಪ ಪುಜಾರಿ, ಅಂಗವಿಕಲರ ವಿವಿದೋದ್ದೇಶಗಳ ಪುನರ್ವಸತಿ ಕಾರ್ಯಕರ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು