ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ

ಪೂಜಾ ಸಾಮಗ್ರಿ ದುಬಾರಿ, ಹಣ್ಣು, ಹೂವಿಗೆ ಹೆಚ್ಚಿದ ಬೇಡಿಕೆ
Last Updated 13 ಏಪ್ರಿಲ್ 2021, 6:09 IST
ಅಕ್ಷರ ಗಾತ್ರ

ಯಾದಗಿರಿ: ಯುಗಾದಿ ಹಬ್ಬ ಬೇವು ಬೆಲ್ಲ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಪೂಜಾ ಸಾಮಾಗ್ರಿ ಸೇರಿದಂತೆ ವಿವಿಧ ಹಣ್ಣು ಹಂಪಲುಗಳು ದಿಢೀರ್ ಬೆಲೆ ಏರಿಕೆ ಕಂಡಿವೆ.

ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಹಬ್ಬದ ಸಂಭ್ರಮ ಕಳೆ ಕುಂದಿದೆ. ಆದರೆ, ಬೆಲೆ ಏರಿಕೆ ಮಾತ್ರ ಗ್ರಾಹಕರಿಗೆ ತಟ್ಟಿದೆ.

ತೆಂಗಿನಕಾಯಿ ₹20, ಹಾರ ₹50, ಕರ್ಬೂಜ ₹50, ಸೇಬು ₹25, ಮೋಸಂಬಿ ₹25, ಸಪೋಟ ₹50, ಮಾವಿನ ಕಾಯಿ ₹50, ಕಲ್ಲಂಗಡಿ ₹50, ದ್ರಾಕ್ಷಿ ₹80 ಕೆಜಿ, ಡಜನ್‌ ಬಾಳೆ ₹50, ಕಜ್ಜೂರ ₹80 ಕೆ.ಜಿ., ದಾಳಿಂಬೆ ₹50ಗೆ ನಾಲ್ಕು, ಬೇವು ಬೆಲ್ಲ ₹20 ಪ್ಯಾಕೇಟ್‌ ದರ ಇದೆ.

ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಸೌತೆಕಾಯಿ ಬೀಜ, ವಾಲ್ನಟ್‌, ಉತ್ತುತ್ತಿ, ಕಲ್ಲು ಸಕ್ಕರೆ, ಹೂವು, ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ.

ಅಂತರ ಮರೆತಜನ: ಹಬ್ಬದ ಖರೀದಿಗೆ ನಗರದ ಗಾಂಧಿ ವೃತ್ತಕ್ಕೆ ಆಗಮಿಸಿದ ಜನತೆ ಅಂತರ ಮರೆತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ಕೆಲವರು ಮಾಸ್ಕ್‌ ಧರಿಸದೇ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು. ಇದರಿಂದ ನಗರಸಭೆ ಅಧಿಕಾರಿಗಳು ದಂಡ ವಿಧಿಸಿ ಉಚಿತವಾಗಿಮಾಸ್ಕ್‌ ವಿತರಿಸಿದರು.

ಕಾಣದ ‘ಅಂತರ’

ಸೈದಾಪುರ: ಪಟ್ಟಣದಲ್ಲಿ ಸೋಮವಾರ ಯುಗಾದಿ ಹಬ್ಬದ ಪ್ರಯುಕ್ತ ವ್ಯಾಪಾರ ವಹಿವಾಟು ಜೋರಾಗಿತ್ತು. ಕೊರೊನಾ ಆತಂಕದ ನಡುವೆಯೂ ಜನರು ವ್ಯಕ್ತಿಗತ ಅಂತರ ಕಾಯ್ದುಕೊಳ್ಳದೆ ಖರೀದಿಯಲ್ಲಿ ತೊಡಗಿದ್ದರು.

ಹಣ್ಣು, ತರಕಾರಿ, ಹೂವು, ಪೂಜಾ ಸಾಮಗ್ರಿಗಳು ದುಬಾರಿಯಾಗಿದ್ದವು. ಬಟ್ಟೆ ಅಂಗಡಿ, ಕಿರಾಣಿ ಅಂಗಡಿ ಮತ್ತು ಆಭರಣ ಅಂಗಡಿಗಳ ಮುಂದೆ ಜನದಟ್ಟಣೆ ಕಂಡು ಬಂತು.

ತಳ್ಳು ಗಾಡಿ ಮತ್ತು ಬೀದಿ ಬದಿ ವ್ಯಾಪಾರಿಗಳು ಸುಡು ಬಿಸಿಲಿನಲ್ಲಿ ಕೊಡೆ ಹಿಡಿದುಕೊಂಡು ವ್ಯಾಪಾಎ ನಡೆಸಿದರು. ಜನ ದಟ್ಟಣೆ ಹೆಚ್ಚಾದ ಕಾರಣ ಕೆಲ ಕಾಲ ಬಸವೇಶ್ವರ ವೃತ್ತದಲ್ಲಿ ಮತ್ತು ಕನಕ ವೃತ್ತದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಯುಗಾದಿ ಸಡಗರ ಕಸಿದ ಕೊರೊನಾ

ಯರಗೋಳ: ಯುಗಾದಿ ಹಬ್ಬಕ್ಕೆ ಕೊರೊನಾ, ಬಸ್ ಮುಷ್ಕರದ ಕಾರ್ಮೋಡ ಕವಿದಿದೆ. ಬೆಂಗಳೂರು ಮತ್ತು ಮುಂಬೈಗೆ ಕೂಲಿ ಕೆಲಸಕ್ಕೆ ತೆರಳಿದ ಜನರು ಯುಗಾದಿ ಹಬ್ಬಕ್ಕೆ ಊರಿಗೆ ಮರಳಾಗದೆ ತೊಂದರೆ ಅನುಭವಿಸುವಂತಾಗಿದೆ.

ಬಸ್ ಮುಷ್ಕರದ ಕಾರಣ ಹೆಚ್ಚು ಹಣ ಕೊಟ್ಟು ಖಾಸಗಿ ವಾಹನಗಳ ಮೂಲಕ ಕಿರಾಣಿ ಸಾಮಗ್ರಿ ತರಿಸುತ್ತಿರುವುದರಿಂದ ದಿನಸಿ, ಹಣ್ಣು, ತರಕಾರಿಗಳ ಬೆಲೆ ಹೆಚ್ಚಾಗಿದೆ.

ಬೇವು, ಬೆಲ್ಲದ ಪಾನಕ ತಯಾರಿಸುವ ಮಣ್ಣಿನ ಮಡಿಕೆಗೆ ಬೇಡಿಕೆಯು ಕಡಿಮೆಯಾಗಿದೆ. ₹50 ರಿಂದ 150 ಬೆಲೆಗೆ ಅವುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಾರಿ ಬಟ್ಟೆ ಖರೀದಿಯೂ ಜೋರಾಗಿ ನಡೆಯುತ್ತಿಲ್ಲ. ಕೊರೊನಾ ಹಬ್ಬದ ಕಳೆಯನ್ನು ಕಡಿಮೆ ಮಾಡಿದೆ.

ಕಳೆಗುಂದಿದ ಸಂಭ್ರಮ

ಶಹಾಪುರ: ಕೊರೊನಾ ಭೀತಿ ಹಾಗೂ ಸಾರಿಗೆ ನೌಕರರ ಮುಷ್ಕರದಿಂದ ಯುಗಾದಿ ಹಬ್ಬದ ಸಂಂಭ್ರಮ ಕಾಣಿಸುತ್ತಿಲ್ಲ.

ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.

‘ಅಂದು ಮನೆ ಮನೆಗೆ ತೆರಳಿ ಬೇವು ಕುಡಿದು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಬರುತ್ತಿದ್ದೇವು. ಈಗ ಕೊರೊನಾದ ಭೀತಿಯಿಂದ ಪ್ರಸಕ್ತ ವರ್ಷವು ದೂರ ಉಳಿಯುವಂತೆ ಆಗಿದೆ. ಹಬ್ಬವನ್ನು ಮನೆಯಲ್ಲಿಯೇ ಆಚರಿಸುವಂತೆ ಆಗಿದೆ. ನಗರಕ್ಕೆ ತೆರಳಿ ಸಾಮಗ್ರಿಗಳನ್ನು ತರಬೇಕು ಅಂದರೆ ಬಸ್ ಸಂಚಾರವಿಲ್ಲ. ಅನಿವಾರ್ಯವಾಗಿ ಸಿಕ್ಕಷ್ಟೆ ಸೀರುಂಡೆ ಎನ್ನುವಂತೆ ಗ್ರಾಮದಲ್ಲಿ ಉಳಿದುಕೊಂಡು ಹಬ್ಬ
ಮಾಡುತ್ತಿದ್ದೇವೆ’ ಎಂದು ಮುಡಬೂಳ ಗ್ರಾಮದ ಅಶೋಕ ಮಲ್ಲಾಬಾದಿ ತಿಳಿಸಿದರು.

ಖರೀದಿ ಭರಾಟೆ ಜೋರು

ಸುರಪುರ: ಯುಗಾದಿ ಅಂಗವಾಗಿ ಸೋಮವಾರ ನಗರದ ಮಾರುಕಟ್ಟೆ ಜನಜಂಗುಳಿಯಿಂದ ತುಂಬಿತ್ತು. ಕೊರೊನಾ ಮರೆತ ಜನ ಹಬ್ಬದ ತಯಾರಿಗೆ ಭರ್ಜರಿ ಖರೀದಿಯಲ್ಲಿ ತೊಡಗಿದ್ದರು. ಸುರಕ್ಷಿತ ಅಂತರವೂ ಕಂಡು ಬರಲಿಲ್ಲ.

ಬಸ್ ನಿಲ್ದಾಣ, ಗಾಂಧಿ ವೃತ್ತ, ಅರಮನೆ ಮಾರ್ಗ, ಸರ್ದಾರ ವಲ್ಲಭಬಾಯಿ ಪಟೇಲ ವೃತ್ತ, ತರಕಾರಿ ಮಾರುಕಟ್ಟೆ ಸೇರಿದಂತೆ ಇತರೆಡೆ ಹಬ್ಬದ ಸಾಮಗ್ರಿ ಖರೀದಿ ಮಾಡಲು ಜನ ಮುಗಿಬಿದ್ದರು.

ಕರಬೂಜ, ಕಲ್ಲಂಗಡಿ, ಸೇಬು, ಖರ್ಜೂರ, ಬಾಳೆ ಹಣ್ಣು, ಬೆಳವಲ ಹಣ್ಣುಗಳ ಮಾರಾಟ ಜೋರಾಗಿತ್ತು. ಬೇವು ಸಿದ್ದತೆಗೆ ಬೇಕಾದ ಬೇವಿನ ಎಚ್ಚದ ಬಂಡಿಗಳು ಸಾಲುಗಟ್ಟಿ ನಿಂತಿದ್ದವು. ಬೇವು ಸಂಗ್ರಹದ ಮಣ್ಣಿನ ಮಡಿಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿತು.

ಗ್ರಾಮೀಣ ಪ್ರದೇಶದಿಂದ ಹಬ್ಬದ ಖರೀದಿಗೆ ಸಾಕಷ್ಟು ಜನ ಬಂದಿದ್ದರು. ಜನರು ಹೊಸ ಬಟ್ಟೆ ಖರೀದಿಸಲು ಮುಂದಾಗಿದ್ದರಿಂದ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ಮಾರುಕಟ್ಟೆಯಲ್ಲಿ ಹೈಬ್ರೀಡ್ ಹಣ್ಣಗಳದ್ದೆ ದರಬಾರು. ಅಲ್ಲೊಂದೋ ಇಲ್ಲೊಂದು ಜವಾರಿ ಹಣ್ಣುಗಳ ಸಿಕ್ಕರೂ ದರ ದುಪ್ಪಟ್ಟಾಗಿತ್ತು. ಕರಬೂಜ ಒಂದಕ್ಕೆ ₹50, ಸಪೋಟಾ ಕೆಜಿಗೆ ₹50, ಮಾವಿನಕಾಯಿ ಒಂದಕ್ಕೆ ₹20, ದ್ರಾಕ್ಷಿ ಕೆಜಿಗೆ ₹60, ಹೂವು ಒಂದು ಮೋಳಕ್ಕೆ ₹20 ರಂತೆ ಮಾರಾಟವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT