ಮಂಗಳವಾರ, ಜನವರಿ 18, 2022
16 °C

ಉಳ್ಳೆಸುಗೂರ; ಸಮಸ್ಯೆ ಇತ್ಯರ್ಥಿಸುವ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಡಗೇರಾ: ತಾಲ್ಲೂಕಿನ ಉಳ್ಳೆಸುಗೂರ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಅವರು ಗುರುವಾರ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮದ ಸಮಸ್ಯೆಗಳ ಬಗ್ಗೆ ಈಚೆಗೆ ‘ಪ್ರಜಾವಾಣಿ’ಯಲ್ಲಿ ಉಳ್ಳೆಸುಗೂರಿಗೆ ಸೌಕರ್ಯ ಒದಗಿಸಿ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆಗಳ ಬಗ್ಗೆ ಗಮನಹರಿಸಿದರು.

ಜತೆಗೆ, ‘ಗ್ರಾಮದಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮತ್ತು ಗ್ರಾಮಸ್ಥರು ಆರೋಪಿಸಿದ್ದರು. ಹೀಗಾಗಿ, ಗ್ರಾಮದ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಸಿಇಒ ಭೇಟಿ ನೀಡಿ, ‘ವಾರ್ಡ್ ನಂ.2 ಮತ್ತು 3ರಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಮಾಡಲಾಗುವುದು’ ಎಂದರು.

ಗ್ರಾಮದಲ್ಲಿ ಒಂದೂ ಶೌಚಾಲಯ ಇಲ್ಲ. ಸಿ.ಸಿ ರಸ್ತೆ, ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಕುಡಿಯುವ ನೀರಿನ ಘಟಕ ನಿರ್ಮಾಣ ಆಗಿದ್ದರೂ ಉದ್ಘಾಟನೆ ಆಗಿಲ್ಲ. ಕಳಪೆ ಕಾಮಗಾರಿಯಿಂದ ಅದು ಬೀಳುವ ಹಂತಕ್ಕೆ ತಲುಪಿದೆ. ವಿದ್ಯುತ್ ಕಂಬದ ತಂತಿಗಳು ಜೋತು ಬಿದ್ದಿದ್ದು, ಜನರು ಆತಂಕದಿಂದ ಓಡಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಪಂಚಾಯಿತಿಯಲ್ಲಿ ನಡೆಯುವ ಸಭೆಗಳಲ್ಲಿ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ. ಅಧಿಕಾರಿ ಗಳು ಹಗರಣಗಳೇ ನಡೆಸುತ್ತಿದ್ದಾರೆ. ಈ ಹಿಂದಿನ ಸದಸ್ಯರ ಗೌರವಧನದ ಜತೆಗೆ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸದಸ್ಯರ ಹಣ ನೀಡದ ಬಗ್ಗೆ ಎರಡು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆಪಾದಿಸಿದರು.

ಮಾಜಿ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಎರಡು ಬಾರಿ ತಂಡ ರಚಿಸಲಾಗಿದೆ. ಇದುವರೆಗೆ ಹಣ ಎಲ್ಲಿ ಹೋಗಿದೆ ಎಂಬುದು ತಿಳಿದಿಬಂದಿಲ್ಲ. ಕೂಡಲೇ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಅವ್ಯವಹಾರ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ತಾಲ್ಲೂಕು ಪಂಚಾಯತಿ ಇಒ ಜಗನ್ನಾಥ ಮೂರ್ತಿ, ಪಿಡಿಒ ಶಿವಾಜಿ ಚವ್ಹಾಣ, ಆರ್ ಡಬ್ಲ್ಯೂ ಎಸ್ ಇಲಾಖೆಯ ಶಿವಪುತ್ರಪ್ಪ ಮತ್ತು ಗ್ರಾಮಸ್ಥರು ಇದ್ದರು.

ತರಾಟೆಗೆ ತೆಗೆದುಕೊಂಡ ಸಿಇಒ ‌

‘ಏನು ನಡೆಯುತ್ತಿದೆ ಇಲ್ಲಿ. ನನ್ನ ಮುಂದೆ ರಿಜಿಸ್ಟರ್‌ಗೆ ಸಹಿ. ಇವತ್ತಿನ ಡೇಟಿಗೆ ಏನು ತೆಗೆದುಕೊಳ್ಳುತ್ತೀರಾ ನಾನ್‌ಸೆನ್ಸ್’ ಎಂದು ಪಿಡಿಒ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಅವರು ತರಾಟೆಗೆ ತೆಗೆದುಕೊಂಡರು.

ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ವೇಳೆ ಗ್ರಾಮಸ್ಥರು ಪಿಡಿಒ ಅವರ ವಿರುದ್ಧ ಸರಣಿ ಆರೋಪ ಮಾಡಿದರು. ಜತೆಗೆ ಗ್ರಾಮ ಪಂಚಾಯತಿ ಸದಸ್ಯರು ಕೂಡ ದೂರು ನೀಡಿದ್ದರು.

ಪಂಚಾಯಿತಿಗೆ ಎಷ್ಟು ಅನುದಾನ ಬಂದಿದೆ? ಎಷ್ಟು ಬಿಡುಗಡೆಯಾಗಿದೆ ಎಂಬುದನ್ನು ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಮಾಹಿತಿಯನ್ನು ದಾಖಲಾತಿ ಸಮೇತ ನೀಡುವಂತೆ ಪಿಡಿಒ ಶಿವಾಜಿ ಅವರಿಗೆ ಸೂಚಿಸಿದರು.

ಸಿಇಒ ಸಮ್ಮುಖದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಸಹಿಯನ್ನು ಖಾಲಿ ಬಿಳಿ ಹಾಳೆಯಲ್ಲಿ ಬರೆಯಿಸಿಕೊಳ್ಳಲು ಮುಂದಾಗಿರುವುದನ್ನು ನೋಡಿದ ಸಿಇಒ ಅವರು ಕೋಪದಿಂದ, ‘ಏನ್ ಪ್ರಿಂಟ್ ಮಾಡಬೇಕು, ಏನು ನಡೆಯುತ್ತಿದೆ ಇಲ್ಲಿ? ನನ್ನ ಮುಂದೆ ರಜಿಸ್ಟರ್‌ಗೆ ಸಹಿ. ಇವತ್ತಿನ ದಿನಾಂಕಕ್ಕೆ ಏನು ತೆಗೆದುಕೊಳ್ಳುತ್ತಿರಾ ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.