ಶುಕ್ರವಾರ, ಏಪ್ರಿಲ್ 16, 2021
31 °C

ಮೀಸಲಾತಿ ಸಿಗದಿದ್ದರೆ ರಾಜೀನಾಮೆಗೆ ಸಿದ್ಧರಾಗಿ: ಸಚಿವರು, ಶಾಸಕರಿಗೆ ಯತ್ನಾಳ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಈ ಬಾರಿ ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿ ದೊರೆಯಲೇಬೇಕು. ಇಲ್ಲವಾದರೆ ಸರ್ಕಾರದಲ್ಲಿರುವ ನಮ್ಮ ಸಮುದಾಯದ ಸಚಿವರು, ಶಾಸಕರು, ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರು ರಾಜೀನಾಮೆ ನೀಡಲು ಸಿದ್ಧರಾಗಿರಬೇಕು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.

ಅರಮನೆ ಮೈದಾನದಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಚುನಾವಣೆಗೂ ಮೊದಲು ನಮ್ಮ ಸಮುದಾಯಕ್ಕೆ ಮೀಸಲಾತಿಯ ಭರವಸೆ ನೀಡಿದ್ದಾರೆ. ಈಗ ನಾಟಕ ಆಡುತ್ತಿದ್ದಾರೆ. ಮಾರ್ಚ್‌4ಕ್ಕೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ಅವರು ಸರಿಯಾದ ಉತ್ತರ ನೀಡದಿದ್ದರೆ ನೀವು ರಾಜೀನಾಮೆಗೆ ಸಿದ್ಧರಾಗಿ’ ಎಂದರು.

ಪಂಚಮಸಾಲಿ ಸಮುದಾಯದ ಜನರು ಮನವಿ ಕೊಟ್ಟು ಹೋಗುವ ಕಾಲ ಮುಗಿದಿದೆ. ಈಗ ಮೀಸಲಾತಿ ತೆಗೆದುಕೊಂಡು ಹೋಗಲು ಬಂದಿರುವುದು. ಮೀಸಲಾತಿ ಕೊಡುವುದು ಸಾಧ್ಯವೋ ಇಲ್ಲವೋ ಎಂಬುದನ್ನು ಅವರು (ಯಡಿಯೂರಪ್ಪ) ಸ್ಪಷ್ಟವಾಗಿ ಹೇಳಲಿ. ಕೊಡಲಾಗದು ಎಂದರೆ ಮುಂದಿನ ಹೋರಾಟಕ್ಕೆ ಸಿದ್ಧ ಎಂದು ಹೇಳಿದರು.

‘ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರೆ ದೆಹಲಿಗೆ ಹೋಗಲು ಹೇಳುತ್ತಾರೆ. ದೆಹಲಿಗೆ ಯಾಕೆ ಹೋಗಬೇಕು? ನಿಮ್ಮ ಕೈಯಲ್ಲಿ ಕೀಲಿ ಇಟ್ಟುಕೊಂಡು ದೆಹಲಿಗೆ ಏಕೆ ಹೋಗಬೇಕು? ‘2ಎ’ ಕೊಡ್ತೀವಿ ಎಂದು ಭರವಸೆ ನೀಡಿ ಈಗ ಏಕೆ ನಾಟಕ ಕಂಪನಿ ಶುರು ಮಾಡಿದ್ದೀರಿ’ ಎಂದು ಪ್ರಶ್ನಿಸಿದರು.

‘ಮಾತು ಮಾತಿಗೂ ಪಂಚಮಸಾಲಿಗಳಿಗೆ ‘3ಬಿ’ ಕೊಟ್ಟಿದ್ದೇವೆ ಎನ್ನುತ್ತಾರೆ. ನಮಗೊಬ್ಬರಿಗೇ ಕೊಟ್ಟಿಲ್ಲ, ಎಲ್ಲ ಲಿಂಗಾಯತರಿಗೂ ಕೊಟ್ಟಿದ್ದಾರೆ. ಮಡಿವಾಳರು, ಗಂಗಾಮತಸ್ಥರು, ಕುರುಬರು ಎಲ್ಲರಿಗೂ ಭರವಸೆ ನೀಡಿ ಮೋಸ ಮಾಡಿದ್ದಾರೆ. ಅವರ ಜಾತಿಯವರನ್ನು ಸೇರಿಸಿ ಉಳಿದವರಿಗೆ ಮೋಸ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಪಂಚಮಸಾಲಿಗಳಿಗೆ ಬೇಕಾದರೆ ಪ್ರಾಣ ಕೊಡ್ತೀನಿ ಅನ್ನುತ್ತಾರೆ. ಪ್ರಾಣ ಬೇಡ ನಮಗೆ ‘2ಎ’ ಕೊಡಿ. ನಿಮ್ಮ ಮಕ್ಕಳು, ಮೊಮ್ಮಕ್ಕಳ ಬೆಳಸಲಿಕ್ಕೆ ನಾವಿಲ್ಲ. ನಮ್ಮ ಸಮುದಾಯದ ಮಕ್ಕಳು, ಮೊಮ್ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆ. ಮುಖ್ಯಮಂತ್ರಿ ಹುದ್ದೆಗೇರಿದ್ದ ನಮ್ಮ ಸಮುದಾಯದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಎಚ್‌. ಪಟೇಲ್‌ ಅವರು ನಿಮ್ಮಂತೆ ಮಕ್ಕಳು, ಮೊಮ್ಮಕ್ಕಳನ್ನು ಬೆಳೆಸಲಿಲ್ಲ’ ಎಂದು ಟೀಕಿಸಿದರು.

ಕುರುಬರನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲಿ. ಪಂಚಮಸಾಲಿಗಳನ್ನು ಹಿಂದುಳಿದ ವರ್ಗಗಳ ‘2ಎ’ ಪಟ್ಟಿಗೆ ಸೇರಿಸಲಿ. ಇತರ ಎಲ್ಲ ಸಮುದಾಯಗಳೂ ಹೋರಾಟವನ್ನು ಬೆಂಬಲಿಸಿವೆ. ಯಾರ ವಿರುದ್ಧವೂ ಮಾತನಾಡುವುದು ಬೇಡ ಎಂದರು.

‘ನೋಟಿಸ್‌ಗೆ ಹೆದರಿ ಬಾಯಿ ಮುಚ್ಚಲ್ಲ’

‘ನೋಟಿಸ್‌ ಕೊಟ್ಟ ಮಾತ್ರಕ್ಕೆ ನನ್ನ ಬಾಯಿ ಮುಚ್ಚಿಸಬಹುದು ಅಂದ್ಕೊಂಡಿದ್ದಾರೆ. ಅದಕ್ಕೆಲ್ಲ ಹೆದರುವ ಮಗ ನಾನಲ್ಲ’ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ನಾನು ಬೋಗಸ್‌ ಮಾತನಾಡುವ ರಾಜಕಾರಣಿ ಅಲ್ಲ. ಯಾರಿಗೂ ಪಂಪ್‌ ಹೊಡೆಯುವವನೂ ಅಲ್ಲ. ನೋಟಿಸ್‌ ಕೊಟ್ಟು ಬಸನಗೌಡನ ಬಾಯಿ ಮುಚ್ಚಿಸ್ತೀನಿ ಅಂದುಕೊಂಡಿದ್ದರೆ ಕುರ್ಚಿ ಖಾಲಿ ಮಾಡೋಕೆ ಸಿದ್ಧ ಆಗಿರಬೇಕಾಗುತ್ತದೆ’ ಎಂದರು.

ಕಾನೂನು ಪಾಲನೆ ಅಗತ್ಯ: ಸಚಿವ ಪಾಟೀಲ

‘ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿ ನೀಡಬೇಕಾದರೆ ಕಾನೂನಿನ ಪ್ರಕಾರ ಕೆಲವು ಪ್ರಕ್ರಿಯೆಗಳು ಆಗಲೇಬೇಕು. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದಿಂದ ಅಧ್ಯಯನಕ್ಕೆ ಆದೇಶ ನೀಡಿದೆ’ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

ಹಲವು ಸರ್ಕಾರಗಳು ಬಂದು, ಹೋಗಿವೆ. ಯಡಿಯೂರಪ್ಪ ಅವರು ಪಂಚಮಸಾಲಿ ಸಮುದಾಯವನ್ನು ಪ್ರವರ್ಗ ‘3ಬಿ’ಗೆ ಸೇರಿಸಿದರು. ಅದು ‘2ಎ’ ಮೀಸಲಾತಿ ಪಡೆಯಲು ಮೆಟ್ಟಿಲು ಇದ್ದಂತೆ ಎಂದ ಸಚಿವರು, ಸರ್ಕಾರ ಸಮುದಾಯದ ಪರವಾಗಿದೆ ಎಂದು ಮನವೊಲಿಸಲು ಯತ್ನಿಸಿದರು.

ಸಚಿವ ನಿರಾಣಿ ಮಾತನಾಡಿ, ‘ಹೋರಾಟಕ್ಕೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ. 2008ರಲ್ಲೇ ಪಂಚಮಸಾಲಿ ಸಮುದಾಯವನ್ನು ‘2ಎ’ ಪಟ್ಟಿಗೆ ಸೇರಿಸಲು ಯಡಿಯೂರಪ್ಪ ಪ್ರಯತ್ನಿಸಿದ್ದರು. ಈಗ ಅವರು ನಿಶ್ಚಿತವಾಗಿಯೂ ನಮ್ಮ ಸಮುದಾಯಕ್ಕೆ ನ್ಯಾಯ ನೀಡುವ ಭರವಸೆ ಇದೆ’ ಎಂದರು.

ಇಬ್ಬರೂ ಸಚಿವರು ಮಾತನಾಡುವಾಗ ಭಾರಿ ಗದ್ದಲ ಎಬ್ಬಿಸಿದ ಜನರು, ಮಾತಿಗೆ ಅಡ್ಡಿಪಡಿಸಿದರು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ನಿರಾಣಿ ಜನರ ಮೇಲೆ ಹರಿಹಾಯ್ದರು.

ವಿನಯ ಕುಲಕರ್ಣಿಗೆ ಬೆಂಬಲ

ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್‌ ಗೌಡರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ, ಜೈಲಿನಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹೆಸರು ಪಂಚಮಸಾಲಿ ಸಮಾವೇಶದಲ್ಲಿ ಹಲವು ಬಾರಿ ಪ್ರಸ್ತಾಪವಾಯಿತು.

ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅವರು ವಿನಯ ಕುಲಕರ್ಣಿ ಅವರನ್ನು ನೆನಪಿಸಿಕೊಂಡರು. ಇಡೀ ಸಮುದಾಯ ಅವರ ಬೆನ್ನಿಗೆ ನಿಲ್ಲಬೇಕು ಎಂದು ಕರೆ ನೀಡಿದರು. ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಮಾತನಾಡಿದರು. ಮಗಳು ವೈಶಾಲಿ, ತಮ್ಮ ವಿಜಯ ಕುಲಕರ್ಣಿ ಕೂಡ ವೇದಿಕೆಯಲ್ಲಿದ್ದರು.

ನಾಯಕರ ಒಗ್ಗಟ್ಟು ಪ್ರದರ್ಶನ

ಅರಮನೆ ಮೈದಾನದಲ್ಲಿ ನಡೆದ ಸಮಾವೇಶ ಪಂಚಮಸಾಲಿ ಸಮುದಾಯದ ಒಗ್ಗಟ್ಟು ಮತ್ತು ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಎಲ್ಲ ಪಕ್ಷಗಳ ನಾಯಕರೂ ವೇದಿಕೆಯಲ್ಲಿ ಕುಳಿತು ಒಗ್ಗಟ್ಟು ಪ್ರದರ್ಶಿಸಿದರು.

ಸಚಿವರಾದ ಸಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ, ಬಿಜೆಪಿ ಸಂಸದ ಕರಡಿ ಸಂಗಣ್ಣ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಕಳಕಪ್ಪ ಬಂಡಿ, ಸಿ.ಎಂ. ನಿಂಬಣ್ಣನವರ್‌, ಅರುಣ್‌ ಕುಮಾರ್‌, ರಾಜ್‌ಕುಮಾರ್‌ ತೇಲ್ಕೂರ, ಶಂಕರಪಾಟೀಲ ಮುನೇನಕೊಪ್ಪ, ಸಿದ್ದು ಸವದಿ, ಮಹಾಂತೇಶ್‌ ದೊಡ್ಡಗೌಡರ, ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ಕಾಂಗ್ರೆಸ್‌ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ, ಹೋರಾಟ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು