ನೀರು, ಮೇವು; ಕಾವೇರಿದ ಚರ್ಚೆ

ಬುಧವಾರ, ಜೂಲೈ 17, 2019
25 °C
ಸಾಮಾನ್ಯ ಸಭೆ; ಅಧಿಕಾರಿಗಳ ವಿರುದ್ಧ ಸದಸ್ಯರು ಕೆಂಡಾಮಂಡಲ

ನೀರು, ಮೇವು; ಕಾವೇರಿದ ಚರ್ಚೆ

Published:
Updated:
Prajavani

ವಿಜಯಪುರ: ಶುದ್ಧ ಕುಡಿಯುವ ನೀರಿನ ಘಟಕಗಳು ಎಷ್ಟಿವೆ, ಅವುಗಳಲ್ಲಿ ಎಷ್ಟು ಚಾಲನೆಯಲ್ಲಿವೆ, ಮೇವು ಬ್ಯಾಂಕ್‌ಗಳ ಸ್ಥಿತಿ ಹೇಗಿದೆ, ಮೇವು ಪೂರೈಕೆ ಆಗುತ್ತಿದೆಯೇ, ಅಂಗನವಾಡಿ ಆಹಾರವನ್ನು ಮಾರಾಟ ಮಾಡುತ್ತಿದ್ದರೂ ಏಕೆ ಕ್ರಮಕೈಗೊಳ್ಳುತ್ತಿಲ್ಲ.

–ಇವು ಜಿಲ್ಲಾ ಪಂಚಾಯಿತಿ ಸದಸ್ಯರು ಅಧಿಕಾರಿಗಳಿಗೆ ಖಾರವಾಗಿ ಕೇಳಿದ ಪ್ರಶ್ನೆಗಳು.

ಸಂದರ್ಭ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆ.

ಸಭೆಯ ಆರಂಭದಲ್ಲಿ ಅನುಪಾಲನಾ ವರದಿ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಸದಸ್ಯರೊಬ್ಬರು, ‘ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ. ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಲಾಗುತ್ತದೆಯೇ’ ಎಂದು ಸಿಇಒ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಿಇಒ, ‘ಸರ್ಕಾರದ ಮಾರ್ಗಸೂಚಿ ಅನ್ವಯವೇ ಆಯ್ಕೆ ಮಾಡಲಾಗುತ್ತದೆ. ಫಲಾನುಭವಿಗಳ ಆಯ್ಕೆ ತಪ್ಪಾಗಿದ್ದಲ್ಲಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಲಾಗುತ್ತದೆ’ ಎಂದರು.

‘ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಂದಾರ ಅವರು, ಸರಿಯಾಗಿ ಮಾಹಿತಿ ನೀಡುವುದಿಲ್ಲ. ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ತೋಟಗಾರಿಕೆ ಇಲಾಖೆಯಿಂದ ಬಡ ರೈತರಿಗೆ ಅನ್ಯಾಯವಾಗುತ್ತಿದೆ’ ಎಂದು ಸದಸ್ಯೆಯೊಬ್ಬರು ದೂರಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಮಾತನಾಡಿ, ‘ಹೋದ ವರ್ಷ ಕೃಷಿ ಹೊಂಡಕ್ಕಾಗಿ 2,600 ಅರ್ಜಿಗಳು ಬಂದಿದ್ದವು. ಈ ವರ್ಷ 1,500 ಅರ್ಜಿ ಬಂದಿದ್ದು, ಈ ಪೈಕಿ 560 ಕೃಷಿ ಹೊಂಡಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ 3.62 ಲಕ್ಷ ರೈತರಿದ್ದು, ಕೃಷಿ ಸಮ್ಮಾನ್ ಯೋಜನೆಯಡಿ 3.04 ಲಕ್ಷ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 2.45 ಲಕ್ಷ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸೇರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರಭಾರ’ಕ್ಕೆ ಆಕ್ರೋಶ: ‘ಗ್ರಾಮೀಣ ನೀರು ಸರಬರಾಜು ಇಲಾಖೆಗೆ ಯಾವಾಗಲೂ ಪ್ರಭಾರ ಅಧಿಕಾರಿಗಳನ್ನೇ ನೇಮಕ ಮಾಡಲಾಗುತ್ತದೆ. ಹೀಗೆ ಬಂದವರೂ ಬಹಳ ದಿನ ಇರುವುದಿಲ್ಲ. ಸಮಸ್ಯೆ ಹೇಳಲು ಕರೆ ಮಾಡಿದರೆ ಈ ಹಿಂದೆ ಇದ್ದವರು ಇರುವುದಿಲ್ಲ, ಬೇರೊಬ್ಬರು ಕರೆ ಸ್ವೀಕರಿಸುತ್ತಾರೆ. ಅವರಿಗೆ ಮತ್ತೆ ಹಳೆಯ ಕಥೆ ಹೇಳಬೇಕು. ಹೀಗಾದರೆ ಹೇಗೆ’ ಎಂದು ಸದಸ್ಯೆಯೊಬ್ಬರು ಪ್ರಶ್ನಿಸಿದರು.

‘ಜಿಲ್ಲೆಯಾದ್ಯಂತ ಬಹುತೇಕ ಇಲಾಖೆಗಳಲ್ಲಿ ಪ್ರಭಾರಿಗಳದ್ದೇ ಕಾರುಬಾರು ಇದೆ. ಇವತ್ತು ಬರುತ್ತಾರೆ, ನಾಳೆ ಹೋಗುತ್ತಾರೆ. ವಾರಕ್ಕೊಮ್ಮೆ ಅಧಿಕಾರಿಗಳು ಬದಲಾದರೆ ಹೇಗೆ’ ಎಂದು ಆಕ್ರೋಶಭರಿತರಾಗಿ ನುಡಿದರು.

ಕುಡಿಯುವ ನೀರು, ಮೇವು ಪೂರೈಕೆ, ಅರಣ್ಯ ಇಲಾಖೆಯಿಂದ ಸಸಿ ನೆಡುವುದು, ಬಿಸಿಎಂ ಹಾಸ್ಟೆಲ್‌ಗಳ ಸ್ಥಿತಿಗತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಯೋಗಪ್ಪ ನೇದಲಗಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಕಲ್ಲಪ್ಪ ಕೊಡಬಾಗಿ, ಕವಿತಾ ರಾಠೋಡ, ಜಯಸಿಂಗ್ ನಾಯಕ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !