ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌ ಈವ್‌: ಕ್ರಿಸ್ತನ ಕರುಣೆಯ ಸ್ಮರಣೆಯಲ್ಲಿ...

Last Updated 23 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಡಿಸೆಂಬರ್‌ 25 ಕ್ರಿಸ್ತ ಹುಟ್ಟಿದ ಸಂಭ್ರಮದ ದಿನ. ಕ್ರೈಸ್ತರ ಗಾಸ್ಪೆಲ್‌ ಪ್ರಕಾರ ಯೇಸುಕ್ರಿಸ್ತ ಇಸ್ರೇಲ್‌ನ ಬೆಥ್ಲೆಹೆಮ್‌ ಎಂಬ ಪುಟ್ಟ ಊರಿನಲ್ಲಿ ಮೇರಿ- ಜೋಸೆಫ್‌ ದಂಪತಿಯ ಮಗನಾಗಿ ಹುಟ್ಟಿದ. ದೇವರು ಮಾನವರೂಪಿಯಾಗಿ ಜನಿಸಿ ಪ್ರೀತಿ, ಶಾಂತಿಯ ಸಂದೇಶ ಪಸರಿಸಲು ಕಾರಣವಾದ ಈ ದಿನವನ್ನು ಕ್ರಿಸ್‌ಮಸ್‌ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

ಕ್ರಿಸ್‌ಮಸ್‌ (ಡಿ. 25)ನಷ್ಟೇ ಅದರ ಹಿಂದಿನ ದಿನ ಡಿ. 24 ಕೂಡಾ ಪವಿತ್ರವಾದದ್ದು. ಅಂದು ಸಂಜೆಯಿಂದ ನಡುರಾತ್ರಿವರೆಗೂ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು, ಸಂಭ್ರಮಾಚರಣೆ ನಡೆಯುತ್ತವೆ. ಕೊರೊನಾ ಕಾರಣಕ್ಕೆ ಈ ಬಾರಿ ಸಾಮೂಹಿಕ ಸಂಭ್ರಮಕ್ಕೆ ತಡೆ ಉಂಟಾಗಿದೆ. ಎಲ್ಲ ಚರ್ಚ್‌ಗಳೂ ತಮ್ಮ ಸಮಾಜದ ಬಾಂಧವರಿಗೆ ಮುಂಜಾಗ್ರತಾ ಕ್ರಮಗಳ ಸಂದೇಶವನ್ನು ಈಗಾಗಲೇ ರವಾನಿಸಿವೆ.

ಕ್ರಿಸ್‌ಮಸ್‌ ಈವ್‌ ಬಗ್ಗೆ ಬೆಂಗಳೂರು ಕ್ರೈಸ್ತ ಮಹಾಧರ್ಮ ಕ್ಷೇತ್ರದ ಶ್ರೇಷ್ಠಗುರು (ವಿಕಾರ್‌ ಜನರಲ್‌) ಫಾದರ್‌ ಸಿ. ಫ್ರಾನ್ಸಿಸ್‌ ಅವರು ವಿವರಿಸುತ್ತ, ‘ಸುಮಾರು 2 ಸಾವಿರ ವರ್ಷಗಳ ಹಿಂದೆ ದೇವರು ಮಾನವ ರೂಪದಲ್ಲಿ ಜನಿಸಿದ ಸಂಭ್ರಮದ ದಿನ ಇದು. ನಿಮ್ಮಂತೆಯೇ ಇತರರನ್ನೂ ಪ್ರೀತಿಸಿ ಎಂದು ಸಾರಿದ ಮಾನವತೆಯ ಪ್ರತಿರೂಪ. ದಯೆ ಇಲ್ಲದ ಧರ್ಮ ಅದಾವುದಯ್ಯಾ ಎಂದು ಬಸವಣ್ಣನವರು ಹೇಳಿದ್ದಾರಲ್ಲಾ. ಹಾಗೆಯೇ ಯೇಸುಕ್ರಿಸ್ತರೂ ಕೂಡಾ ಇದನ್ನೇ ಸಾರಿದರು. ಅವರು ಸಾರಿದ್ದು ಪ್ರೀತಿ, ಕರುಣೆ ಮತ್ತು ಶಾಂತಿ. ಜಗತ್ತು ಬಯಸುವುದೂ ಇದನ್ನೇ ಅಲ್ಲವೇ. ನಾವು ಈ ಸಂದೇಶವನ್ನು ಸ್ಮರಿಸುತ್ತೇವೆ’ ಎನ್ನುತ್ತಾರೆ.

‘ಕ್ರಿಸ್‌ಮಸ್‌ ಈವ್‌ ಕೂಡಾ ಇಂಥದ್ದೇ ಆಶಯ ಹೊಂದಿದೆ. ಹಿಂದಿನ ದಿನದ ಪ್ರಾರ್ಥನೆಯಲ್ಲಿ ಯೇಸುಕ್ರಿಸ್ತರು ಸಾರಿದ ಸಂದೇಶವನ್ನು ನೆನಪಿಸುತ್ತೇವೆ. ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ನಮ್ಮ ಸಂಪ್ರದಾಯದ ಪ್ರಕಾರ ಕೆಲವು ವಿಧಿವಿಧಾನಗಳನ್ನು ನೆರವೇರಿಸುತ್ತೇವೆ’ ಎನ್ನುತ್ತಾರೆ ಅವರು.

ಆರಾಧನೆಗೆ ಆದ್ಯತೆ

‘ಕ್ರಿಸ್‌ಮಸ್‌ ಆಚರಣೆಗೆ ಸಂಬಂಧಿಸಿ ಈ ಬಾರಿ ಚರ್ಚ್‌ಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ. ಅದಕ್ಕಾಗಿ ಪ್ರಾರ್ಥನೆಗಳನ್ನು ಆನ್‌ಲೈನ್‌, ಅಧ್ಯಾತ್ಮ ಚಾನೆಲ್‌ಗಳ ಮೂಲಕ ಪ್ರಸಾರ ಮಾಡುತ್ತೇವೆ. ಹಿರಿಯ ನಾಗರಿಕರು, ಮಕ್ಕಳು ಮನೆಯಲ್ಲೇ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಬೇಕು. ಹೀಗಾಗಿ ಆರಾಧನೆಗೆ ಆದ್ಯತೆ ಇದೆ. ಉತ್ಸವ ರೂಪದಲ್ಲಿ ಆಚರಿಸುವುದಿಲ್ಲ’ ಎಂದು ಫಾದರ್‌ ಫ್ರಾನ್ಸಿಸ್‌ ಹೇಳುತ್ತಾರೆ.

ಕೋವಿಡ್‌ ಮಾರ್ಗಸೂಚಿ ಪ್ರಕಾರ ಪ್ರಾರ್ಥನೆ, ಅಂತರಪಾಲನೆ, ಸ್ಯಾನಿಟೈಸರ್‌ ಬಳಕೆ, ಪ್ರಾರ್ಥನೆ ಬಳಿಕ ತಕ್ಷಣ ನಿರ್ಗಮನ ಇತ್ಯಾದಿ ಶಿಸ್ತುಬದ್ಧ ವ್ಯವಸ್ಥೆಯನ್ನು ಎಲ್ಲ ಚರ್ಚ್‌ಗಳಲ್ಲಿ ಈಗಾಗಲೇ ಮಾಡಲಾಗಿದೆ. ‘ಈ ಬಾರಿಯ ಕ್ರಿಸ್‌ಮಸ್‌ ಮನುಷ್ಯರೊಳಗಿನ ಆಂತರಿಕ ಬಾಂಧವ್ಯವನ್ನು ಗಟ್ಟಿಗೊಳಿಸಲು, ಅಂತರಂಗ ಶುದ್ಧಿಯತ್ತ ಹೆಚ್ಚು ಆಸಕ್ತರಾಗಲು ಪ್ರೇರೇಪಿಸಲಿದೆ. ಇದು ಕೇವಲ ಕ್ರೈಸ್ತರಿಗಷ್ಟೇ ಅಲ್ಲ, ಸಮಸ್ತ ಮನುಕುಲ ಅನುಸರಿಸಬಹುದಾದ ವಿಚಾರ’ ಎಂದು ಬೆಂಗಳೂರಿನ ಆಸ್ಟಿನ್‌ ಟೌನ್‌ ನಿವಾಸಿ ಕ್ರಿಸ್ಟಿನ್‌ ಹೇಳುತ್ತಾರೆ.

ಜಗತ್ತು ಕೊರೊನಾದಿಂದ ತಲ್ಲಣಿಸಿದೆ. ಈ ವರ್ಷಾಂತ್ಯ, ಮುಂದಿನ ವರ್ಷದಿಂದಾದರೂ ಇಂತಹ ಹಾವಳಿ ತಪ್ಪಲಿ. ಮನುಕುಲ ಮತ್ತೆ ಆನಂದದಿಂದ ಬಾಳುವಂತಾಗಲಿ. ನಾವೆಲ್ಲರೂ ಖುಷಿಯಿಂದ, ಆರೋಗ್ಯವಂತರಾಗಿ, ಪರಸ್ಪರ ಪ್ರೀತಿ– ವಿಶ್ವಾಸದಿಂದ ಬಾಳೋಣ ಎಂಬುದು ಈ ಬಾರಿಯ ಕ್ರಿಸ್‌ಮಸ್‌ ಸಂದೇಶ.

– ಫಾದರ್‌ ಸಿ. ಫ್ರಾನ್ಸಿಸ್‌, ಬೆಂಗಳೂರು ಕ್ರೈಸ್ತ ಮಹಾಧರ್ಮ ಕ್ಷೇತ್ರದ ಶ್ರೇಷ್ಠಗುರು (ವಿಕಾರ್‌ ಜನರಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT