ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಬದುಕಿಗೆ ಹೊಸ ಮಾರ್ಗ ಜೆಮೊಲಜಿ– ವಿವರ ಇಲ್ಲಿದೆ

Published 13 ಆಗಸ್ಟ್ 2023, 23:30 IST
Last Updated 13 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಫ್ಯಾ ಷನ್‌ ಜಗತ್ತಿನಲ್ಲಿ ಬೇರೆ ಬೇರೆ ವೇಷಭೂಷಣಗಳಲ್ಲಿ ಆಧುನಿಕತೆ ಹೆಚ್ಚುತ್ತಿದ್ದರೂ, ಆಭರಣದ ವಿಷಯದಲ್ಲಿ ಇನ್ನೂ ರೆಟ್ರೊ ಅಥವಾ ಸಾಂಪ್ರದಾಯಿಕ ಶೈಲಿ ಉಳಿದುಕೊಂಡಿದೆ. ಉಂಗುರ, ಕಿವಿಯೋಲೆ, ನತ್ತು, ನೆಕ್ಲೆಸ್, ಸರ, ಬಳೆ, ಡಾಬು, ವಂಕಿ, ವಡ್ಯಾಣ, ಕಾಲಂದುಗೆ ಇವೆಲ್ಲ ಆಭರಣಗಳಲ್ಲಿ ಚಂದದ ಹರಳುಗಳಿರಬೇಕೆಂದು ಬಯಸುವವರಿದ್ದಾರೆ. ಹೀಗಾಗಿ, ಬಹಳ ಹಿಂದಿನಿಂದಲೂ ವಜ್ರದ ಹರಳು, ನೀಲಮಣಿ, ಪಚ್ಚೆ, ಮಾಣಿಕ್ಯ ಮುಂತಾದ ಹರಳುಗಳು ಹಿಂದಿನಿಂದಲೂ ಭಾರತೀಯರ ಜೀವನದೊಂದಿಗೆ ಸಮ್ಮಿಳಿತಗೊಂಡು, ಕಾಲದಿಂದ ಕಾಲಕ್ಕೆ ಹೊಸ ಹೊಸ ರೂಪು ಪಡೆಯುತ್ತಾ ಬಂದಿವೆ.

ಹರಳು ಸಹಿತ ಆಭರಣದ ಟ್ರೆಂಡ್ ಹೆಚ್ಚುತ್ತಿರುವಂತೆಯೇ, ಅಂಥ ಗುಣಮಟ್ಟದ ಹರಳುಗಳನ್ನು ಆಯ್ಕೆ ಮಾಡುವ, ಅವುಗಳನ್ನು ‌ಶ್ರೇಣಿಕರಿಸುವ, ಮೌಲ್ಯೀಕರಿಸುವ ಕೌಶಲವಿರುವವರಿಗೆ ಆಭರಣ ತಯಾರಿಕಾ ಕಂಪನಿಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿವೆ. ಉದ್ಯೋಗದ ಬೇಡಿಕೆಗೆ ಅನುಗುಣವಾಗಿ ಕೌಶಲಯುಕ್ತ ಮಾನವ ಸಂಪನ್ಮೂಲ ಒದಗಿಸಲು ಆಯ್ದ ಶಿಕ್ಷಣ ಸಂಸ್ಥೆಗಳಲ್ಲಿ ‘ಜೆಮೊಲಜಿ’(Gemology) ಎಂಬ ಕೋರ್ಸ್‌ ಚಾಲ್ತಿಯಲ್ಲಿದೆ.   

ಏನಿದು ಜೆಮೊಲಜಿ:

ರತ್ನಖಚಿತ ಹರಳುಗಳು ಮತ್ತು ಬೆಲೆಬಾಳುವ ಲೋಹಗಳ ಅಧ್ಯಯನದ ವಿಜ್ಞಾನವೇ ಜೆಮೊಲಜಿ. ಅಂದರೆ ರತ್ನದ ಹರಳುಗಳನ್ನು ಗುರುತಿಸುವ, ಶ್ರೇಣೀಕರಿಸುವ, ಆಕರ್ಷಕ ರೂಪು ನೀಡಿ ಆಭರಣವಾಗಿ ಪರಿವರ್ತಿಸುವ ಹಾಗೂ ಮೌಲ್ಯಮಾಪನ ಮಾಡುವ ಕಲೆ ಮತ್ತು ವಿಜ್ಞಾನಗಳ ಸಂಗಮವೇ ಜೆಮೊಲಜಿ.

ಜಿಯೋಸೈನ್ಸ್‌ನ ಭಾಗವಾಗಿರುವ ಈ ಕೋರ್ಸ್‌ ಉದ್ಯೋಗಾಕಾಂಕ್ಷಿಗಳ ಹೊಸ ವೃತ್ತಿ ಜೀವನದ ಮಾರ್ಗವಾಗಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಹರಳುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರು ಪ್ರಮಾಣೀಕೃತ ರತ್ನಾಭರಣಗಳನ್ನು ಖರೀದಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಗ್ರಾಹಕರ ಹಿತಾಸಕ್ತಿಗೆ ಅನುಗುಣವಾಗಿ ಆಭರಣಗಳನ್ನು ಪೂರೈಸಲು ಜ್ಯೂವೆಲರಿ ಕಂಪನಿಗಳು ಜೆಮೊಲಜಿಸ್ಟ್‌ಗಳನ್ನು ನಿಯೋಜಿಸಿಕೊಳ್ಳುತ್ತಿದ್ದಾರೆ.

ಜೊತೆಗೆ, ಶೇ 95 ರಷ್ಟು ವಜ್ರದ ಹರಳುಗಳನ್ನು ಕತ್ತರಿಸುವ ಮತ್ತು ಹೊಳಪು ನೀಡುವ ಪ್ರಕ್ರಿಯೆ ಭಾರತದಲ್ಲಿಯೇ ನಡೆಯುತ್ತಿದೆ. ಭಾರತವು ವಿಶ್ವದ ಅತೀ ಹೆಚ್ಚು ವಜ್ರ ಕತ್ತರಿಸುವ ಹಾಗೂ ಹೊಳಪು ನೀಡುವ ದೇಶ ಎಂಬುದು ವಾಸ್ತವಾಗಿ ಪರಿಗಣಿತವಾಗಿದೆ. ಹಾಗಾಗಿ ಜೆಮೊಲಜಿಸ್ಟ್‌ಗಳಿಗೆ ಉದ್ಯೋಗಾವಕಾಶ ಹೆಚ್ಚುತ್ತಿವೆ ಎಂಬುದು ತಜ್ಞರ ಅಭಿಮತವಾಗಿದೆ.

ಕೋರ್ಸ್‌ ಪ್ರವೇಶ ಹೇಗೆ ?

ಜೆಮೊಲಜಿಸ್ಟ್‌ ಕೋರ್ಸ್ ಸೇರಲು ಪಿಯುಸಿಯ (10+2) ಯಾವುದೇ ವಿಭಾಗದಲ್ಲಿ ಶೇ 50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.  ಕನಿಷ್ಠ 18 ವರ್ಷಗಳ ವಯೋಮಿತಿ ಹೊಂದಿರಬೇಕು. ವಿಜ್ಞಾನ ವಿಭಾಗದವರಿಗೆ ಪ್ರಥಮ ಆದ್ಯತೆ. ಇಂಗ್ಲಿಷ್‌ ಭಾಷಾ ಪರಿಣತಿ ಜೊತೆಗೆ ಸಂವಹನ ಕೌಶಲ ಅಗತ್ಯ.

ಜೆಮೊಲಜಿಸ್ಟ್‌ ಆಗಲು ಯಶಸ್ವಿಯಾಗಿ ಕೋರ್ಸ್‌ ಮುಗಿಸುವ ಜೊತೆಗೆ, ವಿಶ್ವಾಸಾರ್ಹ ಕೌಶಲದ ಅರಿವಿರಬೇಕು. ಸೂಕ್ಷ್ಮ ದೃಷ್ಟಿ, ಕಲೆಯನ್ನು ಮೆಚ್ಚುವ ಗುಣ, ಅತ್ಯುತ್ತಮವಾದ ವೀಕ್ಷಣಾ ಶಕ್ತಿ, ನಿಖರವಾದ ವಿವರ ಸಂಗ್ರಹಣಾ ಸಾಮರ್ಥ್ಯ, ವಸ್ತುನಿಷ್ಠ ಉಪಕ್ರಮ ವಿಧಾನ ಮತ್ತು ಜವಾಬ್ದಾರಿಯುತ ಅಧಿಕಾರ ಚಲಾಯಿಸುವ ಗುಣಗಳಿರಬೇಕು. ಇವು, ಕೋರ್ಸ್ ಕಲಿಕೆಗೂ ಅನುಕೂಲ, ಉದ್ಯೋಗದಲ್ಲಿ ಪ್ರಗತಿ ಸಾಧಿಸಲು ಸಹಾಯವಾಗುತ್ತವೆ.

ವಿವಿಧ ಕೋರ್ಸ್‌ಗಳು

ಜೆಮೊಲಜಿಗೆ ಸಂಬಂಧಿಸಿದಂತೆ ಮೂರು ತಿಂಗಳಿನಿಂದ ಹಿಡಿದು ಮೂರು ವರ್ಷಗಳವರೆಗಿನ ವಿವಿಧ ರೀತಿಯ ಸರ್ಟಿಫಿಕೆಟ್ ಮತ್ತು ಡಿಪ್ಲೊಮೊ ಕೋರ್ಸ್‌ಗಳಿವೆ. ಎಲ್ಲಾ ಕೋರ್ಸ್‌ಗಳನ್ನು ಪ್ರಾಯೋಗಿಕ ಅನುಭವದ ಮೂಲಕವೇ  ನಡೆಯುತ್ತವೆ. ಹರಳುಗಳನ್ನು ಕತ್ತರಿಸುವ, ಬಣ್ಣಲೇಪಿಸುವ ಹಾಗೂ ಇನ್ನಿತರೇ ಕಾರ್ಯಗಳಿಗೆ ₹25 ಸಾವಿರದಿಂದ ₹1.5 ಲಕ್ಷಗಳವರೆಗೆ ವೆಚ್ಚ ತಗುಲಬಹುದು.

ಕೋರ್ಸ್‌ಗಳು ಹೀಗಿವೆ

 * ಜೆಮ್ಸ್ ಐಡೆಂಟಿಫಿಕೇಷನ್ ಸರ್ಟಿಫಿಕೆಟ್ ಕೋರ್ಸ್

*  ಡೈಮಂಡ್ ಗ್ರೇಡಿಂಗ್ ಸರ್ಟಿಫಿಕೇಷನ್ ಕೋರ್ಸ್

*  ಸರ್ಟಿಫಿಕೇಷನ್ ಕೋರ್ಸ್ ಇನ್ ಕಟ್ ಅಂಡ್ ಡಿಸೈನ್ ಅನಲಿಸಿಸ್

*  ಪರ್ಲ್ ಗ್ರೇಡಿಂಗ್ l ಪಾಲಿಷ್ಡ್ ಡೈಮಂಡ್ ಗ್ರೇಡಿಂಗ್ ಕೋರ್ಸ್

* ಡಿಪ್ಲೊಮೊ ಕೋರ್ಸ್‌ಗಳು l ಬಿ.ಎಸ್ಸಿ ಇನ್ ಜೆಮೊಲಾಜಿ

ಕೋರ್ಸ್‌ನಲ್ಲಿ ಕಲಿಯುವುದೇನು?

ಜೆಮೊಲಜಿಯಲ್ಲಿ ಹರಳುಗಳ ಭೌತಿಕ ಗುಣಲಕ್ಷಣಗಳು, ಆಪ್ಟಿಕಲ್ ಗುಣಗಳು, ಫ್ಯಾಷನ್ ಡಿಸೈನ್, ಕಂಪ್ಯೂಟರ್ ಆಧಾರಿತ ಆಭರಣ ವಿನ್ಯಾಸ, ಲೋಹ ವಿಜ್ಞಾನದ ಪರಿಕಲ್ಪನೆ, ಸಾಂಪ್ರದಾಯಿಕ ಮತ್ತು ಆಧುನಿಕ ರೇಖಾಚಿತ್ರ ಪ್ರಕ್ರಿಯೆಗಳು, ಆಭರಣ ತಯಾರಿಕಾ ತಂತ್ರಗಳನ್ನು ಕಲಿಸಲಾಗುತ್ತದೆ.

ಮುಖ್ಯವಾಗಿ ಹರಳುಗಳನ್ನು ಕತ್ತರಿಸುವ, ವರ್ಣಮಯಗೊಳಿಸುವ, ಮೆರಗುಗೊಳಿಸುವ, ಹೊಳಪು ನೀಡುವ ಅಂತಿಮವಾಗಿ ಆಕರ್ಷಕ ಆಭರಣವಾಗಿ ಮಾರ್ಪಡಿಸುವ ತಾಂತ್ರಿಕ ಕೌಶಲಗಳನ್ನು ಕಲಿಸಲಾಗುತ್ತದೆ. 

‘ನಾನು ಜೆಮೊಲಜಿಯಲ್ಲಿ ಡಿಪ್ಲೊಮಾ ಕೋರ್ಸ್ ಕಲಿಯುತ್ತಿದ್ದೇನೆ. ಕಲಿಯುತ್ತಾ ಜ್ಯೂವೆಲರಿ ಕಂಪನಿಯೊಂದರಲ್ಲಿ ವೃತ್ತಿಯ ಅನುಭವ,
ಪ್ರಾವೀಣ್ಯ ಪಡೆಯುತ್ತಿದ್ದೇನೆ. ಆಭರಣಗಳಲ್ಲಿ ಹರಳುಗಳನ್ನು ಧರಿಸುವ
ಟ್ರೆಂಡ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ,  ಈ ಕೋರ್ಸ್‌ಗೆ ಉತ್ತಮ ಉದ್ಯೋಗಕ್ಕೆ ದಾರಿಯಾಗಬಹುದು’ ಎನ್ನುತ್ತಾರೆ ವೋಗ್ ಇನ್‌ಸ್ಟಿಟ್ಯೂಟ್‌ ಆಫ್ ಆರ್ಟ್ಸ್ ಆ್ಯಂಡ್‌ ಡಿಸೈನ್‌ನಲ್ಲಿ ಕೋರ್ಸ್ ಕಲಿಯುತ್ತಿರುವ ಬೆಂಗಳೂರಿನ ವಿದ್ಯಾರ್ಥಿನಿ ಯಶಸ್ವಿನಿ.

ವಿವಿಧ ಹುದ್ದೆಗಳು

ಕೋರ್ಸ್‌ ಯಶಸ್ವಿಯಾಗಿ ಪೂರೈಸಿದವರಿಗೆ ಜ್ಯೂವೆಲರಿ ಡಿಸೈನ್, ಜ್ಯೂವೆಲರಿ ರಿಟೇಲ್ ಬ್ಯುಸಿನೆಸ್, ಹರಳುಗಳನ್ನು ಕತ್ತರಿಸುವ, ಪಾಲಿಷ್ ಮಾಡುವ ಸಂಸ್ಥೆಗಳಲ್ಲಿ, ಪ್ರಯೋಗಶಾಲೆಗಳಲ್ಲಿ, ರತ್ನ ಹಾಗೂ ಅಮೂಲ್ಯ ಲೋಹಗಳನ್ನು ಪ್ರಾಮಾಣೀಕರಿಸುವ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳಿವೆ. ಅಷ್ಟೇ ಅಲ್ಲ,  ಸ್ವಂತ ಜ್ಯೂವೆಲರಿ ಉದ್ಯಮ ಮತ್ತು ವ್ಯವಹಾರ ನಡೆಸಲು ಕೋರ್ಸ್‌ಗಳು ನೆರವಾಗುತ್ತವೆ.

‘ಜೆಮೊಲಜಿ ಒಂದು ಉತ್ತಮ ಕೋರ್ಸ್. ಇದು ಹರಳುಗಳ ಬಗೆಗಿನ ಸಂಪೂರ್ಣ ವೈಜ್ಞಾನಿಕ ಮಾಹಿತಿ ತಿಳಿಸಿಕೊಡುತ್ತದೆ. ಇದು ಸ್ವಾವಲಂಬಿ ವೃತ್ತಿಯನ್ನು ಕಟ್ಟಿಕೊಳ್ಳಲು ಸಹಾಯಕವಾಗಿದೆ. ಈ ಕೋರ್ಸ್ ಕಲಿತ ನಂತರ ನಾನು ಸ್ವಂತ ವ್ಯಾಪಾರ ಮಾಡಿಕೊಂಡಿದ್ದೇನೆ. ಇದರಿಂದ ಉತ್ತಮ ವೃತ್ತಿಯ ಅವಕಾಶಗಳು ದೊರೆತಿವೆ‘ ಎನ್ನುತ್ತಾರೆ ಬೆಂಗಳೂರಿನ ವಿನ್ಯಾಸ ಟ್ರಾನ್ಸ್‌ಫಾರ್ಮಿಕಂಗ್ ಟ್ರೇಡರ್ಸ್‌ನ ಆಭರಣ ವಿನ್ಯಾಸಕಿ ಚಿತ್ರಾ ಅಶೋಕ.

ಕೋರ್ಸ್ ಮುಗಿಸಿದವರು ನಿರ್ವಹಿಸಬಹುದಾದ ಹುದ್ದೆಗಳು ಹೀಗಿವೆ;

* ಜೆಮೊಲಾಜಿಸ್ಟ್ 

* ಡೈಮಂಡ್‌ ಗ್ರೇಡರ್ 

* ಜ್ಯೂವೆಲರಿ ಡಿಸೈನರ್
*  ಸೇಲ್ಸ್ ಪರ್ಸನ್ 

* ಜ್ಯೂವೆಲರಿ ಆಕ್ಷನ್ ಮೇನೇಜರ್

ಎಲ್ಲೆಲ್ಲಿ ಉದ್ಯೋಗಗಳು ಲಭ್ಯ ?

* ಗಣಿಗಾರಿಕೆ ಕ್ಷೇತ್ರ,

* ಜ್ಯೂವೆಲ್ಲರಿ ಮೇಕಿಂಗ್ ಅಂಡ್ ಡಿಸೈನಿಂಗ್ ಯೂನಿಟ್

* ಜ್ಯೂವೆಲ್ಲರಿ ಅಂಗಡಿಗಳು ಮತ್ತು ಷೋರೂಮ್‌ಗಳು

* ಜೆಮ್ ಎಕ್ಸ್‌ಪೋರ್ಟಿಂಗ್‌ ಆರ್ಗನೈಜೇಷನ್

* ಜೆಮ್ ಸ್ಟೋನ್ ಕಟ್ಟಿಂಗ್ ಅಂಡ್ ಪಾಲಿಷಿಂಗ್ ಯೂನಿಟ್

* ಜೆಮ್ ಟೆಸಿಂಗ್ ಲ್ಯಾಬ್ಸ್

* ಜೆಮ್ ಅಂಡ್ ಮೆಟಲ್ ಗ್ರೇಡಿಂಗ್ ಅಂಡ್ ಕ್ವಾಲಿಟಿ
ಸರ್ಟಿಫೈಯಿಂಗ್ ಏಜೆನ್ಸಿ

* ಆರ್ಟಿಫಿಷಿಯಲ್ ಜೆಮ್ ಇಂಡಸ್ಟ್ರಿ

* ಟಾಪ್ ಗ್ರೇಡ್ ಗೋಲ್ಡ್‌ ಸ್ಮಿತ್‌

ಕೋರ್ಸ್‌ಗಳ ಮಾಹಿತಿಗಾಗಿ...

https://www.voguefashioninstitute.com/jewellery-designing-courses-bangalore-india/)

https://www.iigsouth.com/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT