ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-7: ಹಾವಭಾವದತ್ತ ಗಮನವಿರಲಿ

Published : 30 ನವೆಂಬರ್ 2022, 19:30 IST
ಫಾಲೋ ಮಾಡಿ
Comments

ಯಾವುದೇ ಸಂದರ್ಶನವಿರಲಿ ಅಲ್ಲಿ ವಿಷಯ ಪ್ರೌಢಿಮೆಯೇ ಅಭ್ಯರ್ಥಿಯ ಬಂಡವಾಳ. ಸೂಕ್ತ ಹಾವಭಾವ ಅದನ್ನು ಸಾಬೀತು ಪಡಿಸುವ ಸಾಧನ.

**

ನಮ್ಮ ಜೀವನದಲ್ಲಿ ಗಮನಿಸದೇ ಹೋಗುವ ಹಾಗೂ ಅದಕ್ಕಾಗಿ ಗೊತ್ತಿಲ್ಲದೇ ಬೆಲೆ ತೆರುವ ಒಂದು ಅಂಶ ನಮ್ಮ ಅಶಾಬ್ದಿಕ ಸಂವಹನ. ಸಂದರ್ಶನದಲ್ಲಂತೂ ನಾವು ಗೊತ್ತಿಲ್ಲದೇ ಬಳಸುವ ಈ ಅಶಾಬ್ದಿಕ ಸಂವಹನದ ಪರಿಣಾಮವೆಂದರೆ ಸಂದರ್ಶನದಲ್ಲಿ ನಪಾಸು!

ಸಂದರ್ಶನಗಳಲ್ಲಿ ಅಂಕಗಳನ್ನು ಅಂತಿಮಗೊಳಿಸುವಾಗ ಅಥವಾ ಯಾರನ್ನು ಆಯ್ಕೆ ಮಾಡಬಹುದೆಂದು ನೋಡುವಾಗ ತಪ್ಪದೇ ಗಮನಕ್ಕೆ ಬರುವುದು ಅವರ ಅಶಾಬ್ದಿಕ ಸಂವಹನ ಅಥವಾ ಹಾವಭಾವ(Body Language). ಅವನು ಬೆರಳು ತೋರಿದ, ಮುಖ ಕಿವುಚಿಕೊಂಡ, ಧ್ವನಿ ಏರಿಸಿದ ಮುಂತಾಗಿ ಆಕ್ಷೇಪಗಳು ಬರುವುದು ಸರ್ವೇಸಾಮಾನ್ಯ. ಬೆರಳು ತೋರುವುದಂತೂ ಹೊಡೆದಾಟಗಳಿಗೆ ಕಾರಣವಾಗುವುದೂ ಇದೆ. ನಮ್ಮ ದೈನಂದಿನ ವ್ಯವಹಾರದಲ್ಲೂ ಯಾರಿಗಾದರೂ ಬೆರಳು ತೋರಿ ಮಾತಾಡಿದರೆ ಅದು ಅನಾಗರಿಕ ವೆನಿಸಿಕೊಳ್ಳುತ್ತದೆ. ಬೆರಳು ತೋರಿಸಿರುವುದು ಬಿಡಿ, ನಿಲ್ಲುವ ರೀತಿ, ಕುಳಿತು ಕೊಳ್ಳುವ ರೀತಿಯೇ ನಿಮ್ಮ ಬಗ್ಗೆ ಸಾಕ್ಷಿಹೇಳುತ್ತವೆ. ಕೆಲವರು ಮಾತನಾಡಲು ತೊಡಗಿದರೆ ಬಾಯಿಗಿಂತ ಕೈಯೇ ಹೆಚ್ಚು ಸದ್ದು ಮಾಡುತ್ತದೆ. ಇಡೀ ದೇಹ ಕುಣಿಯತೊಡಗುತ್ತದೆ. ಅದು ನೀವು ಹೇಳುವುದಕ್ಕೆ ಪೂರಕವಾಗಿದ್ದರೆ ಸರಿ. ವ್ಯತಿರಿಕ್ತವಾಗಿದ್ದರೆ ಅಥವಾ ಎದುರಿನವರಿಗೆ ನೀವು ಅತಿಯಾಗಿ ನಟಿಸುತ್ತಿದ್ದೀರಿ ಎನಿಸಿದರೆ ಅದು ನಿಮಗೆ ಕೈಕೊಡುತ್ತದೆ!

ಅಶಾಬ್ದಿಕ ಭಾಷೆಯಲ್ಲಿ ಹಲವು ವಿಧಗಳು ಅಥವಾ ಅಂಶಗಳು ನಮ್ಮ ಸಂವಹನವನ್ನು ಪ್ರತಿನಿಧಿಸುತ್ತವೆ. ಉದಾಹರಣೆಗೆ ಧ್ವನಿ ನಮ್ಮ ಅಶಾಬ್ದಿಕ ಸಂವಹನದ ಬಹುಮುಖ್ಯ ಅಂಗ. ಅನಗತ್ಯವಾಗಿ ಧ್ವನಿ ಏರಿಸಿ ಮಾತನಾಡಿದರೆ ಅಥವಾ ಅಗತ್ಯಕ್ಕಿಂತ ಸಣ್ಣದಾಗಿ ಮಾತಾಡಿದರೆ ಅದು ನಮ್ಮ ದೋಷವೆನಿಸಿಕೊಳ್ಳುತ್ತದೆ. ನಿಮ್ಮ ನಡತೆ ಅತಿ ವಿನಯವೆಂತಲೂ ಅನಿಸಬಾರದು, ಅದು ಅಹಂಕಾರವೆಂತಲೂ ಕಾಣಬಾರದು. ಅದು ಭಾಷೆಯಲ್ಲೂ, ನೀವು ಬಳಸುವ ಪದಗಳಲ್ಲೂ ಹಾಗೂ ಅದನ್ನು ಹೇಳುವ ರೀತಿಯಲ್ಲೂ ಇರುತ್ತದೆ. ನಿಮ್ಮ ಸಂವಹನ ಅತ್ಯಂತ ಸಹಜವಾಗಿರಬೇಕು.

ವಿಶೇಷವೆಂದರೆ ಅಶಾಬ್ದಿಕ ಸಂವಹನದಲ್ಲಿ ನೀವು ಏನು ಮಾಡಿದರೂ ಅದು ಎದುರಿನವರಿಗೆ ಒಂದು ಅರ್ಥವನ್ನು ಕೊಡುತ್ತದೆ ಎಂಬುದನ್ನು ನಾವು ಬಹಳಸಾರಿ ಮರೆತುಬಿಡುತ್ತೇವೆ. ಉದಾಹರಣೆಗೆ ಉಗುರು ಕಚ್ಚುವುದು, ಕೆಳಗೆ ನೋಡುವುದು, ಮೇಲೆ ನೋಡುವುದು, ತಲೆ ತುರಿಸಿಕೊಳ್ಳುವುದು, ಪದೇ ಪದೇ ಮುಖ ತಿಕ್ಕುವುದು, ಮುಂತಾಗಿ, ಅದು ಉದ್ದೇಶಪೂರ್ವಕವಾಗಿರುವುದಿಲ್ಲ, ಆದರೆ ಅದು ಎದುರಿನವರಿಗೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಸಂಗತಿಗಳನ್ನು ಹೇಳುತ್ತದೆ. ಸಂದರ್ಶನದಲ್ಲಿ ನೀವು ಗೆಲ್ಲಲಿಕ್ಕೂ, ಸೋಲಲಿಕ್ಕೂ ಕಾರಣವಾಗುತ್ತದೆ.

ಸಂದರ್ಶನಕ್ಕೆ ಹೋಗುವಾಗ ನೀವು ಹೇಗೆ ಹೋಗುತ್ತೀರಿ? ಕೆದರಿದ ತಲೆ ಕೂದಲು, ಮುದುರಿದ ಬಟ್ಟೆ, ಧರಿಸಿದ ಚಪ್ಪಲಿ, ಅವೆಲ್ಲ ಅಶಾಬ್ದಿಕ ಸಂವಹನಗಳೇ! ಈಗಿನ ಹುಡುಗರು ಒಂದೇ ಕಿವಿಗೆ ಓಲೆ ಹಾಕಿದರೆ ಅದೂ ಸಂವಹನವೇ!. ಸಂದರ್ಶನಕ್ಕೆ ಹೋಗಿ ಕೂರುವ ಅಥವಾ ನಿಲ್ಲುವ ರೀತಿಯೇ ನಿಮ್ಮ ಕುರಿತು ಮೊದಲ ಅಭಿಪ್ರಾಯ ಮೂಡಿಸುತ್ತದೆ. ನೀವು ಅಲ್ಲಿರುವವರನ್ನು ಸಂಡಬೋಧಿಸುವ ರೀತಿ ಗಮನಸೆಳೆಯುತ್ತದೆ. ಮುಖದಲ್ಲಿ ಒಂದು ನಸುನಗೆ ಇದ್ದರೆ ಅದು ಪರಿಸ್ಥಿತಿಯನ್ನು ತಿಳಿಗೊಳಿಸುತ್ತದೆ. ಮುಖ ಗಂಟುಹಾಕಿಕೊಂಡು ಒಳಪ್ರವೇಶಿಸಿದರೆ ವಾತಾವರಣವನ್ನು ನಾವೇ ಹದಗೆಡಿಸಿದಂತೆ ಆಗುತ್ತದೆ.

ಅಶಾಬ್ದಿಕ ಸಂವಹನದ ಒಂದು ಅಂಶ ‘ಮೌನ’ ಕೂಡ. ಕೆಲವು ಸಾರಿ ಮಾತಿಗಿಂತ ಮೌನ ಪ್ರಬಲ ಸಂವಹನ. ಎಲ್ಲಿ ಮೌನವಾಗಿರಬೇಕು, ಎಲ್ಲಿ ಮಾತಾಡಬೇಕು ಎಂದು ಗೊತ್ತಿರುವುದು ವ್ಯಕ್ತಿತ್ವದ ಧನಾತ್ಮಕ ಅಂಶ. ನಿಮ್ಮ ಮಾತು, ಮಾತಿನ ನಡುವಿನ ಮೌನ, ಎಲ್ಲಕ್ಕೂ ಸಂದರ್ಶನದಲ್ಲಿ ಅರ್ಥವಿದೆ. ಯಾವುದೇ ಸಂದರ್ಶನದಲ್ಲಿ ವಿಷಯ ಪ್ರೌಢಿಮೆ ಅಭ್ಯರ್ಥಿಯ ಬಂಡವಾಳ. ಆಂಗಿಕ ಅಭಿವ್ಯಕ್ತಿಯ ಬಳಕೆ ಅದನ್ನು ಸಾಬೀತು ಪಡಿಸುವ ಸಾಧನ.

(ಲೇಖಕರು: ಸಂವಹನ ಪ್ರಾಧ್ಯಾಪಕರು ಮತ್ತು ಕುಲಪತಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT