ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆರಿಷ್‌ ಟ್ರಸ್ಟ್‌ನ ಯಶೋಗಾಥೆ; ಗ್ರಾಮೀಣ ಭಾಗದಲ್ಲೂ ಡಿಜಿಟಲ್ ಕ್ರಾಂತಿ

Last Updated 17 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಡಿಜಿಟಲ್‌ ‘ಬಲ’ದ ಜ್ಞಾನ ದೀವಿಗೆಯನ್ನು ಹಿಡಿದು ಹೊರಟರೆ ಗ್ರಾಮ ಭಾರತದಲ್ಲಿ ಹೇಗೆಲ್ಲ ಬದಲಾವಣೆ ತರಬಹುದು ಎನ್ನುವುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಹಳ್ಳಿಗಳೇ ಸಾಕ್ಷಿ. ಡಿಜಿಟಲ್‌ ನೆರವಿನಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಕೆಲಸ ಮಾಡುತ್ತಿರುವ ಚೆರಿಷ್‌ ಟ್ರಸ್ಟ್‌ನ ಯಶೋಗಾಥೆ ಇಲ್ಲಿದೆ...

***

ನೋಟ–1
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಂಪ್ಯೂಟರ್‌ ಪ್ರೋಗ್ರಾಮ್‌ ಮೂಲಕ ತಮ್ಮದೇ ಆದ ಗೇಮ್‌ ಸಿದ್ಧಪಡಿಸುತ್ತಾರೆ. ಮೈಕ್ರೊಪ್ರೊಸೆಸರ್‌ ಬಳಸಿ ಎಲ್‌ಇಡಿ ಬಲ್ಬ್‌ಗಳನ್ನು ತಮ್ಮಿಷ್ಟದಂತೆ ಹೊತ್ತಿಸುತ್ತಾರೆ ಮತ್ತು ಕುಣಿಸುತ್ತಾರೆ. ಅದರೊಂದಿಗೆ ಆಡುತ್ತಲೇ ಡಿಜಿಟಲ್ ಶಿಕ್ಷಣವನ್ನೂ ಪಡೆಯುತ್ತಾರೆ. ಇಷ್ಟೇ ಅಲ್ಲ, ಅರಳು ಹುರಿದಂತೆ ಇಂಗ್ಲಿಷ್ ಮಾತನಾಡುತ್ತಾರೆ. ಯಾವುದೇ ಪಟ್ಟಣದ ಇಂಗ್ಲಿಷ್ ಮಾಧ್ಯಮ ಶಾಲೆ ಮಕ್ಕಳಿಗೂ ಬಿಟ್ಟುಕೊಡದಂತೆ ನಿರರ್ಗಳವಾಗಿ ಭಾಷಣ ಮಾಡುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಅರ್ಲವಾಡ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ಶಿಕ್ಷಣ ನೀಡುತ್ತಿರುವ ಚೆರಿಷ್ ಟ್ರಸ್ಟ್‌ನ ಸಂಯೋಜಕಿ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಅರ್ಲವಾಡ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ಶಿಕ್ಷಣ ನೀಡುತ್ತಿರುವ ಚೆರಿಷ್ ಟ್ರಸ್ಟ್‌ನ ಸಂಯೋಜಕಿ

ನೋಟ–2
ಮುಂಡವಾಡ ಬ್ರ್ಯಾಂಡ್‌ನ ಶಾಲನ್ನು ಇಲ್ಲಿನ ಮಹಿಳೆಯರ ಗುಂಪು ಸಿದ್ಧಪಡಿಸುತ್ತದೆ. ಇದಕ್ಕೆ ದೇಶ, ವಿದೇಶಗಳಲ್ಲಿ ಭಾರಿ ಬೇಡಿಕೆ ಬರುತ್ತದೆ. ಇಲ್ಲಿನ ರೈತ ಮಹಿಳೆಯರು ಬೆಳೆಸುವ ಕಬ್ಬಿನ ಸಸಿಗಳಿಗೆ ಆನ್‌ಲೈನ್ ಮೂಲಕ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಮಹಿಳೆಯರ ತಂಡ ಸಿದ್ಧಪಡಿಸುವ ಉಪ್ಪಿನಕಾಯಿ, ಚಟ್ನಿಪುಡಿ, ಶೇಂಗಾ ಉಂಡೆಗೆ ಮೇಳಗಳಲ್ಲಿ ಎಲ್ಲಿಲ್ಲದ ಬೇಡಿಕೆ ಗಿಟ್ಟಿಸುತ್ತದೆ.

ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಮುಂಡವಾಡ ಗ್ರಾಮದಲ್ಲಿ ಶಾಲು ಸಿದ್ಧಪಡಿಸುವ ಕಾಯಕದಲ್ಲಿ ಮಹಿಳೆಯರ ತಂಡ
ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಮುಂಡವಾಡ ಗ್ರಾಮದಲ್ಲಿ ಶಾಲು ಸಿದ್ಧಪಡಿಸುವ ಕಾಯಕದಲ್ಲಿ ಮಹಿಳೆಯರ ತಂಡ

ಮೇಲಿನ ಈ ಎರಡೂ ನೋಟಗಳು ಕಾಣಸಿಗುವುದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ. ಈ ಬದಲಾವಣೆಗೆ ಕಾರಣವಾಗಿರುವುದು ಚೆರಿಷ್ ಟ್ರಸ್ಟ್ .

2011ರಲ್ಲಿ ಕಾರ್ಯಾರಂಭ ಮಾಡಿದ ಈ ಚೆರಿಷ್‌, ಈಗ ಹಳಿಯಾಳ ತಾಲ್ಲೂಕಿನಲ್ಲಿ ಜನಜನಿತ. ಗ್ರಾಮೀಣ ಹಾಗೂ ಸೌಲಭ್ಯ ವಂಚಿತ ಮಕ್ಕಳಿಗೆ ಡಿಜಿಟಲ್‌ ನೆರವಿನಿಂದ ಗುಣಮಟ್ಟದ ಶಿಕ್ಷಣವನ್ನು ಈ ಸಂಸ್ಥೆ ನೀಡುತ್ತಿದೆ. ಇದರೊಂದಿಗೆ ಕೌಶಲಾಭಿವೃದ್ಧಿ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದೆ. ಟ್ರಸ್ಟ್‌ನ ಪ್ರಯತ್ನದಿಂದಾಗಿ ತಾಲ್ಲೂಕಿನ 48 ಹಳ್ಳಿಗಳಲ್ಲಿ ಚೆರಿಷ್‌ ಟ್ರಸ್ಟ್‌ನಿಂದ ಬದುಕು ಕಟ್ಟಿಕೊಂಡು ಸಾರ್ಥಕಗೊಂಡವರ ಕಥೆಗಳು ಸುರಳಿಯಂತೆ ಬಿಚ್ಚಿಕೊಳ್ಳುತ್ತಲೇ ಸಾಗುತ್ತವೆ.

ಐದು ವರ್ಷಗಳ ಹಿಂದೆ ಟ್ರಸ್ಟ್ ಆರಂಭಿಸಿದ ಶಿಕ್ಷಾ ಎಂಬ ‘ಕಲಿಯುವ ಮನೆ’ ಯೋಜನೆಯಡಿ, ಕೋವಿಡ್ ನಂತರದಲ್ಲಿ ಆರಂಭಿಸಲಾದ ಇ–ಶಿಕ್ಷಾ ಎಂಬ ಡಿಜಿಟಿಲ್ ಕಲಿಕಾ ವೇದಿಕೆ ಮೂಲಕ ಗ್ರಾಮೀಣ ಭಾಗದ ಮಕ್ಕಳನ್ನು ನಗರ ಪ್ರದೇಶದ ಮಕ್ಕಳ ಸಮಾನಕ್ಕೆ ತರುವ ಪ್ರಯತ್ನ ಒಂದೆಡೆಯಾದರೆ, ಗ್ರಾಮೀಣ ಭಾಗದಲ್ಲಿನ ಅವಕಾಶ ವಂಚಿತ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡುವ ಕೆಲಸ ಇನ್ನೊಂದೆಡೆ.

ಅರ್ಲವಾಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 147. 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಶಿಕ್ಷಣ ನೀಡಲಾಗುತ್ತಿದೆ. ಚೆರಿಷ್ ಟ್ರಸ್ಟ್‌ ಇದಕ್ಕಾಗಿ ಸಂಯೋಜಕಿಯರನ್ನು ನೇಮಿಸಿದೆ. ಶಾಲಾ ದಿನಗಳಲ್ಲಿ ನಿತ್ಯ ಎರಡು ಗಂಟೆ ಕೆಲಸ ಮಾಡುವ ಇವರು, ಪ್ರೋಗ್ರಾಮಿಂಗ್ ಕೌಶಲವನ್ನು ಮಕ್ಕಳು ಕಲಿಸುತ್ತಿದ್ದಾರೆ.

‘ಈ ಪ್ರೋಗ್ರಾಮಿಂಗ್ ಮೂಲಕ ಕೆಲವೇ ನಿಮಿಷಗಳಲ್ಲಿ ನಾವು ಬಗೆಬಗೆಯ ಕಂಪ್ಯೂಟರ್ ಗೇಮ್‌, ಮೈಕ್ರೊಪ್ರೊಸೆಸರ್ ಬಳಸಿ ಹಾರ್ಡ್‌ವೇರ್ ನಿಯಂತ್ರಣ ಸೇರಿದಂತೆ ಹಲವು ಕೌಶಲಗಳನ್ನು ಕಲಿತಿದ್ದೇವೆ. ಇದರಿಂದ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಹೊಸತನ್ನು ಮಾಡುವ ಹುಮ್ಮಸ್ಸು ಮೂಡಿದೆ. ಮುಂದಿನ ಹಂತವನ್ನು ಕಲಿಯುವ ತುಡಿತ ಹೆಚ್ಚಾಗಿದೆ’ ಎನ್ನುವುದು ವಿದ್ಯಾರ್ಥಿನಿ ಸೌಮ್ಯಾ ಅನಿಸಿಕೆ.

‘ನಿತ್ಯ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪ್ರೋಗ್ರಾಮಿಂಗ್ ಕೌಶಲ, ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ಬಿಡಿಭಾಗಗಳ ಪರಿಚಯ ಹಾಗೂ ಅವುಗಳ ಬಳಕೆ ಕುರಿತು ಹೇಳುತ್ತಿದ್ದೇನೆ. ಇದರಿಂದ ಕಲಿಯುವ ಹಾಗೂ ಕಲಿಸುವ ಕೌಶಲ ಕರಗತವಾಗುತ್ತಿದೆ. ಜತೆಗೆ ಜೀವನ ನಿರ್ವಹಣೆಗೂ ಟ್ರಸ್ಟ್‌ನ ಕಾರ್ಯಕ್ರಮ ನೆರವಾಗಿದೆ’ ಎಂದು ಸಂಯೋಜಕಿ ಪೂರ್ಣಿಮಾ ಹೇಳುತ್ತಾರೆ.

ಇದರ ಜತೆಯಲ್ಲಿ ಗ್ರಾಮೀಣ ಮಹಿಳೆಯರ ಸಬಲೀಕರಣ ಯೋಜನೆಯ ಭಾಗವಾಗಿ ಮುಂಡವಾಡ ಶಾಲು ಈಗ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಜನಪ್ರಿಯ ಉತ್ಪನ್ನವಾಗಿದೆ. ಲೂಧಿಯಾನದಿಂದ ಕಚ್ಚಾ ಪದಾರ್ಥ ಖರೀದಿಸಿ, ಗ್ರಾಮದ ಸುಮಾರು 20 ಮಹಿಳೆಯರು ಸೇರಿ ಶಾಲುಗಳನ್ನು ಸಿದ್ಧಪಡಿಸುತ್ತಿದ್ದಾರೆ. ತಂಡವಾಗಿ ರಾಜ್ಯ ಹಾಗೂ ಹೊರರಾಜ್ಯಗಳ ಪ್ರವಾಸ ಮಾಡಿ, ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುತ್ತಿದ್ದಾರೆ. ಇದರ ಜತೆಯಲ್ಲೇ ಇ–ಮಾರುಕಟ್ಟೆ ಮೂಲಕವೂ ಮುಂಡವಾಡ ಶಾಲು ಜನಪ್ರಿಯಗೊಳಿಸಲು ಚೆರಿಷ್ ಟ್ರಸ್ಟ್‌ ನೆರವಾಗಿದೆ ಎನ್ನುತ್ತಾರೆ ಈ ತಂಡದ ಸೈನಾಜ್ ಬೇಗಂ ಖತಾರ್.

ಕ್ರಿಸ್ಟಿನಾ ಘೋಷ್‌
ಕ್ರಿಸ್ಟಿನಾ ಘೋಷ್‌

ಇಷ್ಟು ಮಾತ್ರವಲ್ಲ, ಇದೇ ಗ್ರಾಮದಲ್ಲಿ ಕಬ್ಬಿನ ಸಸಿಗಳನ್ನು ಬೆಳೆಸುವ ಮತ್ತೊಂದು ಮಹಿಳಾ ಗುಂಪಿಗೂ ಚೆರಿಷ್ ನೆರವಾಗಿದೆ. ಫೇಸ್‌ಬುಕ್‌ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಂಡು ಇವರು ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ.

ತಾಲ್ಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ಹತ್ತು ಜನ ಮಹಿಳೆಯರ ತಂಡ ಸಿದ್ಧಪಡಿಸುತ್ತಿರುವ ಚಟ್ನಿಪುಡಿ, ಉಪ್ಪಿನಕಾಯಿ ತಿಂದವರು ನಾಲಿಗೆ ಚಪ್ಪರಿಸದೇ ಇರಲಾರರು. ಹುಬ್ಬಳ್ಳಿಯಲ್ಲಿರುವ ದೇಶಪಾಂಡೆ ಪ್ರತಿಷ್ಠಾನದ ಮಳಿಗೆ ಸೇರಿದಂತೆ ಮಹಾನಗರಗಳಲ್ಲಿ ನಡೆಯುವ ಮೇಳಗಳಲ್ಲಿ ಈ ತಂಡದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ. ಪ್ರತಿ ಹಳ್ಳಿಗೂ ಭೇಟಿ ನೀಡಿ ಮಹಿಳೆಯರ ಆಸಕ್ತಿಯನ್ನು ಅರಿತು, ಅವರಿಗೆ ಕೌಶಲ ತರಬೇತಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ಅವರನ್ನು ಸಬಲರನ್ನಾಗಿಸುವ ಕಾರ್ಯ ನಿರಂತರವಾಗಿ ಸಾಗಿದೆ ಎಂದು ಚೆರಿಷ್ ಟ್ರಸ್ಟ್‌ನ ಕ್ಷೇತ್ರ ಮುಖ್ಯಸ್ಥ ನಾಗರಾಜ ಕುಲಕರ್ಣಿ ಹೇಳುತ್ತಾರೆ.

ಒಂದು ತಾಲ್ಲೂಕಿನ ಅಷ್ಟೂ ಗ್ರಾಮಗಳಲ್ಲಿ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡುವ ಮೂಲಕ ಆ ಭಾಗದ ಸಮುದಾಯದಲ್ಲಿ ಸಂಪೂರ್ಣ ಬದಲಾವಣೆ ತರಲು ಸಾಧ್ಯ. ಈ ಮಾದರಿ ಯಶಸ್ವಿ ಮಾರ್ಗದಲ್ಲಿದ್ದು, ಇದನ್ನು ಇತರ ಭಾಗಗಳಲ್ಲೂ ಅಳವಡಿಸುವ ಯೋಜನೆ ಇದೆ.ಡಿಜಿಟಲ್ ಕಲಿಕೆಯು ಸರ್ಕಾರಿ ಶಾಲೆಗಳ ಪಠ್ಯಕ್ರಮದ ಭಾಗವಾಗಬೇಕು. ಆ ಮೂಲಕ ನಗರ ಮತ್ತು ಗ್ರಾಮೀಣ ಭಾಗದ ಅಂತರ ಕಡಿಮೆಯಾಗಬೇಕು ಎನ್ನುವುದು ಟ್ರಸ್ಟ್‌ನ ಉದ್ದೇಶ ಎನ್ನುತ್ತಾರೆ ಸಿಇಒಕ್ರಿಸ್ಟಿನಾ ಘೋಷ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT