ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಲಿತ ವಿದ್ಯಮಾನಗಳು: ಅಂ.ರಾ ಪ್ರದರ್ಶನ ಹಾಗೂ ಕನ್ವೆನ್ಷನ್ ಸೆಂಟರ್ ಭಾರತ್ ಮಂಟಪಂ

Published 16 ಆಗಸ್ಟ್ 2023, 19:30 IST
Last Updated 16 ಆಗಸ್ಟ್ 2023, 19:30 IST
ಅಕ್ಷರ ಗಾತ್ರ

1. ಭಾರತ್ ಮಂಟಪಂ

ಇತ್ತೀಚೆಗೆ ಭಾರತದ ಪ್ರಧಾನ ಮಂತ್ರಿ  ನರೇಂದ್ರ ಮೋದಿ ಅವರು ನವದೆಹಲಿಯ ಪ್ರಗತಿ ಮೈದಾನದ ‘ಭಾರತ್ ಮಂಟಪಂ’ ಎನ್ನುವ ಅಂತರರಾಷ್ಟ್ರೀಯ ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್ ಉದ್ಘಾಟಿಸಿದರು. ‌

ಅಂದಾಜು ₹ 2,700 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸಂಕೀರ್ಣವನ್ನು ಸಿಂಗಪುರದ ಪ್ರಸಿದ್ಧ ಮರೀನಾ ಬೇ ಸ್ಯಾಂಡ್ಸ್‌ನ ವಾಸ್ತುಶಿಲ್ಪಿ ಏಡಾಸ್ ಮತ್ತು ಭಾರತೀಯ ಸಂಸ್ಥೆ ಆರ್ಕಾಪ್ ವಿನ್ಯಾಸಗೊಳಿಸಿದೆ.

ಮಂಟಪಂ ವಿಶೇಷತೆಗಳು: ಅಂದಾಜು 123 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಸಂಕೀರ್ಣದ ವಿನ್ಯಾಸವನ್ನು ಶಂಖಕಾರದಿಂದ ಪ್ರೇರಣೆಗೊಂಡು ರಚಿಸಲಾಗಿದೆ. ಈ ಕಟ್ಟಡದ ಗೋಡೆಗಳ ಮೇಲೆ ಮತ್ತು ಮುಂಭಾಗದಲ್ಲಿ ಭಾರತದ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಹ ಚಿತ್ರಗಳನ್ನು ರಚಿಸಲಾಗಿದೆ.
ಈ ಕನ್ವೆನ್ಷನ್ ಸೆಂಟರ್‌ನ ಬಹುಪಯೋಗಿ ಸಭಾಂಗಣ ಮತ್ತು ಪ್ಲೀನರಿ ಹಾಲ್ ಒಟ್ಟು 7000 ಆಸನಗಳ ಸಾಮರ್ಥ್ಯವನ್ನು ಹೊಂದಿದೆ ಆಸ್ಟ್ರೇಲಿಯಾದ ಹೆಸರಾಂತ ಒಪೆರಾ ಹೌಸ್‌ಗಿಂತ ಹೆಚ್ಚಿನ ಆಸನ ಸಾಮರ್ಥ್ಯವನ್ನು ಹೊಂದಿದೆ.

ಭಾರತ್ ಮಂಟಪಂ ಸಂಕೀರ್ಣದಲ್ಲಿ ಅತ್ಯಾಧುನಿಕ ಸೌಲಭ್ಯಗಳಿವೆ. ಸುಸಜ್ಜಿತ ಆಡಿಟೋರಿಯಂಗಳು, ಆಂಪಿಥಿಯೇಟರ್, ಸಭಾ ಕೋಣೆಗಳು, ಲಾಂಜ್‌ಗಳಿವೆ. ಮುಂದಿನ ತಿಂಗಳು (ಸೆಪ್ಟೆಂಬರ್ 2023)ರಲ್ಲಿ ನಡೆಯಲಿರುವ ಜಿ20 ಶೃಂಗಸಭೆಯನ್ನು ಭಾರತ್ ಮಂಟಪಂ ಸಂಕೀರ್ಣದಲ್ಲಿ ಆಯೋಜಿಸಲಾಗಿದೆ.

2. ಅತಿಥಿ ಪೋರ್ಟಲ್

ವಲಸಿಗ ಕಾರ್ಮಿಕರ ಗುರುತು ಪತ್ತೆ ಹಚ್ಚುವಿಕೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಕೇರಳ ಸರ್ಕಾರ ಇತ್ತೀಚೆಗೆ ‘ಅತಿಥಿ’ ಎಂಬ ನೂತನ ಪೋರ್ಟಲ್‌ವೊಂದನ್ನು ಆರಂಭಿಸಿದೆ. 

ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಸೆ ಕಾರ್ಮಿಕರು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಸಂಗತಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ಪತ್ತೆಹಚ್ಚುವಿಕೆ ಯನ್ನು ಸರಳೀಕರಣಗೊಳಿಸಲು ಹಾಗೂ ವಲಸೆ ಕಾರ್ಮಿಕರ ಮೇಲೆ ನಿಗಾ ವಹಿಸಲು ಹಾಗೂ ಯಾವುದೇ ರೀತಿಯ ಅಪರಾಧ ಚಟುವಟಿಕೆ ಗಳು ನಡೆಯದಂತೆ ಉಸ್ತುವಾರಿವಹಿಸಲು ಕೇರಳ ಸರ್ಕಾರ ಈ ಕ್ರಮ ಕೈಗೊಂಡಿದೆ.

ಬೇರೆ ರಾಜ್ಯಗಳಿಂದ ಕೇರಳಕ್ಕೆ ಬರುವಂತಹ ವಲಸಿಗ ಕಾರ್ಮಿಕರ ಹೆಸರುಗಳನ್ನು ಈ ಪೋರ್ಟಲ್‌ನಲ್ಲಿ ನೋಂದಾಯಿಸಲಾಗುತ್ತದೆ. ಮುಂದೆ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಕ್ರಮ ಕೈಗೊಳ್ಳಲೂ ಈ ಪೋರ್ಟಲ್ ಸಹಾಯವಾಗಲಿದೆ.

ರೈಲ್ವೆ ನಿಲ್ದಾಣಗಳಲ್ಲಿ ವಲಸಿಗ ಕಾರ್ಮಿಕರ ನೋಂದಣಿ ಪ್ರಕ್ರಿಯೆಯನ್ನು ಕೈಗೊಳ್ಳಲು ಕಚೇರಿಗಳನ್ನು ಸ್ಥಾಪಿಸಲಾಗುತ್ತದೆ. ಈ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು ವಲಸಿಗ ಕಾರ್ಮಿಕರಿಗೆ ಬೇಕಾದ ಸಹಕಾರವನ್ನು ಕಲ್ಪಿಸುತ್ತಾರೆ.

ನೋಂದಣಿಯಾದ ಪ್ರತಿ ಕಾರ್ಮಿಕರಿಗೆ ಪ್ರತ್ಯೇಕ ಗುರುತಿನ ಚೀಟಿಯನ್ನು ಕಲ್ಪಿಸಲಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ವಲಸಿಗ ಕಾರ್ಮಿಕರ ದಾಖಲೆಗಳನ್ನು ನಿರ್ವಹಿಸಲು ಹೆಚ್ಚು ಉಪಯುಕ್ತವಾಗುತ್ತದೆ.

ವಲಸಿಗ ಕಾರ್ಮಿಕರ ಪ್ರಮುಖ ಮಾಹಿತಿಯನ್ನು ನೋಂದಣಿ ಪ್ರಕ್ರಿಯೆಯಲ್ಲಿ ಪಡೆದುಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರ ಈ ವರ್ಗದವರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೂ ಹೆಚ್ಚು ಉಪಯುಕ್ತವಾಗುತ್ತದೆ ಎಂದು ಕೇರಳ ಸರ್ಕಾರ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

3. ನಮ್ದಾ (Namda Art)

ಶತಮಾನಗಳಷ್ಟು ಹಳೆಯದಾದ ಕಾಶ್ಮೀರದ ನಮ್ಡಾ ಕರಕುಶಲ ಕೌಶಲವನ್ನು ಪುನರುಜ್ಜೀವನಗೊಳಿಸುವ ಯೋಜನೆ ಇದಾಗಿದೆ. ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯ ಭಾಗವಾಗಿರುವ ಸಿಲ್ಕ್ ಇಂಡಿಯಾದ ಪೈಲೆಟ್ ಪ್ರಾಜೆಕ್ಟ್ ಅಡಿಯಲ್ಲಿ ನಮ್ಡಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ನಮ್ಡಾ ಕರಕುಶಲತೆಯು ಕುರಿಯ ಉಣ್ಣೆಯನ್ನು ಬಳಸಿ ಸಾಮಾನ್ಯ ನೇಯ್ಗೆಗಿಂತ ಭಿನ್ನವಾಗಿ ಫೆಲ್ಟಿಂಗ್ ತಂತ್ರವನ್ನು ಬಳಸಿ ತಯಾರಿಸುವ ಕಂಬಳಿಗಳನ್ನು ಉಲ್ಲೇಖಿಸುತ್ತವೆ.

ಕಚ್ಚಾವಸ್ತುಗಳ ಕಡಿಮೆ ಲಭ್ಯತೆ, ನುರಿತ ಮಾನವ ಸಂಪನ್ಮೂಲಗಳ ಕೊರತೆ ಮತ್ತು ಮಾರುಕಟ್ಟೆ ತಂತ್ರಗಳು ಕೊರತೆಯಿಂದಾಗಿ ನಮ್ಡಾ ಕರಕುಶಲ ವಸ್ತುವಿನ ರಫ್ತು 1998 ರಿಂದ 2008 ರ ನಡುವೆ ಬಹುಪಾಲು ಕಡಿಮೆಯಾಗಿತ್ತು.

ಇತ್ತೀಚೆಗೆ ವಿಶ್ವ ಯುವ ಕೌಶಲ್ಯ ದಿನದಂದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಈ ಉತ್ಪನ್ನಗಳ ಮೊದಲ ಹಂತದ ರಫ್ತಿಗೆ ಚಾಲನೆಯನ್ನು ನೀಡಿದರು.

ವಿಶೇಷ ಸೂಚನೆ: ಯೋಜನೆಯನ್ನು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯ ಭಾಗವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ನಮ್ಡಾ ಕರಕುಶಲತೆಯ ತರಬೇತಿ: ಇತ್ತೀಚೆಗೆ ಕಾಶ್ಮೀರದ ಶ್ರೀನಗರ, ಬಾರಮುಲ್ಲಾ, ಗಂಡೇರ್ಬಲ್, ಬಂಡೀಪೋರ, ಬುಡ್ ಗಾಮ್‌ ಹಾಗೂ ಅನಂತನಾಗ್ ಜಿಲ್ಲೆಗಳ 2,000 ಕ್ಕಿಂತ ಹೆಚ್ಚಿನ ಕುಶಲಕರ್ಮಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಯೋಜನೆಯು ನಶಿಸಿಹೋಗುತ್ತಿರುವ ಕರಕುಶಲತೆಯ ಸಂರಕ್ಷಣೆಗೆ ಮತ್ತು ಸ್ಥಳೀಯ ನೇಕಾರರ ಮತ್ತು ಕಲಾವಿದರ ಸಬಲೀಕರಣಕ್ಕೆ ಧನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ.

ಸಾರ್ವಜನಿಕ- ಖಾಸಗಿ ಸಹಭಾಗಿತ್ವ: ನಮ್ಡಾ ಯೋಜನೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯ ಯಶಸ್ವಿ ಅನುಷ್ಠಾನಕ್ಕೆ ಮಾದರಿಯಾಗಿದ್ದು, ಸ್ಥಳೀಯ ಕೈಗಾರಿಕೋದ್ಯಮಿಗಳು, ವೀರ್ ಹ್ಯಾಂಡಿ ಕ್ರಾಫ್ಟ್ ಅಂಡ್ ಶ್ರೀನಗರ ಕಾರ್ಪೆಟ್ ಟ್ರೈನಿಂಗ್ ಅಂಡ್ ಮಾರ್ಕೆಟ್ ಸೆಂಟರ್ ಸಂಸ್ಥೆಯು ಸರ್ಕಾರದೊಂದಿಗೆ ಸಹಭಾಗಿತ್ವದಲ್ಲಿ ನಮ್ಡಾ ಕರಕುಶಲತೆಯ ತರಬೇತಿ ಕಾರ್ಯಕ್ರಮವನ್ನು ಕಲ್ಪಿಸುತ್ತಿದೆ.

ಕೈಗಾರಿಕೋದ್ಯಮಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಸಕ್ರಿಯವಾಗಿ ಯೋಜನೆಯಲ್ಲಿ ಭಾಗವಹಿಸುತ್ತಿರುವ ಕಾರಣದಿಂದ ಮುಂದಿನ ದಿನಗಳಲ್ಲಿ ಕಾಶ್ಮೀರದ ಆರ್ಥಿಕ ಅಭಿವೃದ್ಧಿ ಹೆಚ್ಚಳವಾಗುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ಹೂಡಿಕೆಗಳು ಹರಿದು ಬರುವ ಸಾಧ್ಯತೆಗಳು ಹೆಚ್ಚಾಗಿವೆ.

ತರಬೇತಿ ಅವಧಿ: ಈ ಕಾರ್ಯಕ್ರಮದಡಿಯಲ್ಲಿ ತರಬೇತಿಯನ್ನು ಮೂರು ಹಂತಗಳಲ್ಲಿ ಕಲ್ಪಿಸಲಾಗುತ್ತದೆ ಹಾಗೂ ಗರಿಷ್ಠ ಮೂರುವರೆ ತಿಂಗಳು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

ಮುಂದಿನ ದಿನಗಳಲ್ಲಿ ಕಾಶ್ಮೀರದ ಶ್ರೀಮಂತ ಪರಂಪರೆಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಹಾಗೂ ಕರಕುಶಲಕರ್ಮಿಗಳಿಗೆ ಬೇಕಾಗುವ ಅವಶ್ಯಕ ಕೌಶಲ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಹಾಗೂ ಮುಂದಿನ ದಿನಗಳಲ್ಲಿ ಉದ್ಯೋಗ ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಣೆ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT