ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಕಾರ್ಬನ್‌ ಬಾಂಬ್‌?

Published 28 ಡಿಸೆಂಬರ್ 2023, 0:30 IST
Last Updated 28 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಜಾಗತಿಕವಾಗಿ ಹೆಚ್ಚುತ್ತಿರುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣಕ್ಕೆ ಸಂಬಂಧಿಸಿದಂತೆ ಒಂದು ಪ್ರಮುಖ ಪರಿಕಲ್ಪನೆಯಾಗಿರುವ ಕಾರ್ಬನ್ ಬಾಂಬ್‌ಗಳ ಕುರಿತ ಮಾಹಿತಿ ಇಲ್ಲಿದೆ.

ಕನಿಷ್ಠ ಒಂದು ಬಿಲಿಯನ್ ಟನ್ ಇಂಗಾಲದ ಡೈ ಆಕ್ಸೈಡ್‌ (CO2) ಹೊರಸೂಸುವಿಕೆಗೆ ಕಾರಣವಾಗುವ ತೈಲ ಅಥವಾ ಅನಿಲ ಯೋಜನೆಗಳನ್ನು ಕಾರ್ಬನ್‌ಬಾಂಬ್‌ ಎಂದು ಕರೆಯಲಾಗುತ್ತದೆ. ಕಲ್ಲಿದ್ದಲು, ತೈಲ ಅಥವಾ ಅನಿಲವನ್ನು ಹೊರತೆಗೆಯುವಾಗ  ಆ ಕ್ರಿಯೆಯು ಮಾಲಿನ್ಯ ಮತ್ತು ಪರಿಸರನಾಶಕ್ಕೆ ಕಾರಣವಾಗುತ್ತದೆ. ಇದರ ಜತೆಗೆ ಇಂಧನವನ್ನು ದಹಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಹೊರಸೂಸುವಿಕೆ ಉಂಟಾಗುತ್ತದೆ ಎಂದು ಗಾರ್ಡಿಯನ್ ಸಂಶೋಧನಾ ವರದಿ ವ್ಯಾಖ್ಯಾನಿಸಿದೆ. 

ಅಮೆರಿಕ, ರಷ್ಯಾ, ಪಶ್ಚಿಮ ಏಷ್ಯಾ, ಆಸ್ಟ್ರೇಲಿಯಾ ಮತ್ತು ಭಾರತ ಸೇರಿ ಪ್ರಪಂಚದಾದ್ಯಂತ ಸುಮಾರು 195 ಇಂಥ ಕಾರ್ಬನ್‌ಬಾಂಬ್‌ ಯೋಜನೆಗಳನ್ನು ಗುರುತಿಸಲಾಗಿದೆ.

ಜಾಗತಿಕ ತಾಪಮಾನದ ಏರಿಕೆಯನ್ನು ಸರಾಸರಿ 2 °ಸೆಲ್ಸಿಯಸ್‌ಗೆ ಇಳಿಸುವುದು, ಮುಂದಿನ ದಿನಗಳಲ್ಲಿ 1.5 °ಸೆಲ್ಸಿಯಸ್‌ ಗುರಿಗಾಗಿ ಶ್ರಮಿಸುವುದು 2015ರ ಪ್ಯಾರಿಸ್ ಒಪ್ಪಂದದ ಗುರಿಯಾಗಿತ್ತು.   

ಈ 195 ‘ಕಾರ್ಬನ್‌ಬಾಂಬ್‌’ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಪಂಚದಾದ್ಯಂತ ದೇಶಗಳು ಮತ್ತು  ಖಾಸಗಿ ಕಂಪನಿಗಳು ಸಜ್ಜಾಗಿವೆ. ಇದು ಭಾರಿ ಪ್ರಮಾಣದ ಇಂಗಾಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ ಎನ್ನಲಾಗಿದೆ. 

ಬಾಂಬ್‌ ನಿಷ್ಕ್ರಿಯಗೊಳಿಸುವ ‘ಲಿಂಗೋ’

ಜಾಗತಿಕ ತಾಪಮಾನ ಏರಿಕೆಗೆ ಹೆಚ್ಚಿನ ಕೊಡುಗೆ ನೀಡುವ ಕಲ್ಲಿದ್ದಲು, ತೈಲ ಮತ್ತು ಅನಿಲ ಯೋಜನೆಗಳಂಥ  ಕಾರ್ಬನ್‌ಬಾಂಬ್‌ಗಳನ್ನು ಗುರುತಿಸಿ, ನಿಷ್ಕ್ರಿಯಗೊಳಿಸಲು ಪರಿಸರವಾದಿಗಳು, ವಕೀಲರು ಮತ್ತು ಪರಿಸರ ಕಾರ್ಯಕರ್ತರ ಗುಂಪುಗಳು ಒಂದಾಗಿ ದುಡಿಯುತ್ತಿವೆ.

ಈ ಗುರಿಯತ್ತ ಕೆಲಸ ಮಾಡುತ್ತಿರುವ ಗುಂಪನ್ನು ಲೀವ್ ಇಟ್ ಇನ್ ಗ್ರೌಂಡ್ ಇನಿಶಿಯೇಟಿವ್ (LINGO) ಎಂದು ಕರೆಯಲಾಗುತ್ತದೆ. ‘ಪಳೆಯುಳಿಕೆ ಇಂಧನಗಳನ್ನು ಉಳಿಯಲು ಬಿಟ್ಟು, ಅವುಗಳಿಲ್ಲದೆಯೂ ಬದುಕಲು ಕಲಿಯುವುದು’ ಎಂಬುದು ಇದರ ವ್ಯಾಖ್ಯಾನವಾಗಿದೆ.‌

ಪಳೆಯುಳಿಕೆ ಇಂಧನಗಳ ದಹನದಿಂದಲೇ ಹವಾಮಾನದಲ್ಲಿ ವೈಪರೀತ್ಯ ಕಾಣಿಸುತ್ತಿದ್ದು, ನವೀಕರಿಸಬಹುದಾದ ಇಂಧನಗಳ ಸಮರ್ಪಕ ಬಳಕೆಯೇ ಇದಕ್ಕೆ ಪರಿಹಾರವೆಂಬುದನ್ನು ಲಿಂಗೋ ಪ್ರತಿಪಾದಿಸುತ್ತದೆ. 

ಲಿಂಗೋ ಕಾರ್ಬನ್‌ಬಾಂಬ್‌ ಯೋಜನೆಗಳನ್ನು ಪಟ್ಟಿ ಮಾಡಿದ್ದು, ಇದರಲ್ಲಿ ಅದಾನಿ ಗ್ರೂಪ್‌ ಒಡೆತನದ   ಕಾರ್ಮೈಕಲ್ ಕೋಲ್ ಪ್ರಾಜೆಕ್ಟ್, ಕೋಲ್ ಇಂಡಿಯಾ ಒಡೆತನದ ಛತ್ತೀಸಗಢದ ಗೆವ್ರಾ ಕೋಲ್ ಮೈನ್ಸ್ ಮತ್ತು ಈಸ್ಟರ್ನ್ ಕೋಲ್‌ಫೀಲ್ಡ್ಸ್ ಒಡೆತನದ ಪೂರ್ವ ಜಾರ್ಖಂಡ್‌ನಲ್ಲಿರುವ ರಾಜಮಹಲ್ ಕೋಲ್ ಮೈನ್ಸ್ ಯೋಜನೆಗಳು ಸೇರಿವೆ.  ಎಕ್ಸಾನ್ಮೊಬಿಲ್, ಟೋಟಲ್, ಶೆವ್ರಾನ್, ಶೆಲ್ ಮತ್ತು ಬಿಪಿ (ಬ್ರಿಟಿಷ್ ಪೆಟ್ರೋಲಿಯಂ) ಯಂತಹ ಇಂಧನ ಕಂಪನಿಗಳು ಕಲ್ಲಿದ್ದಲು ಬಾಂಬ್ ಯೋಜನೆಗಳನ್ನು ಹೊಂದಿವೆ ಎಂದು ಆಕ್ಷೇಪಿಸಿದೆ.

ತನಿಖೆ ಏನು ಹೇಳುತ್ತದೆ?

ಗಾರ್ಡಿಯನ್‌ ತನಿಖೆಯ ಪ್ರಕಾರ ಈ ಕಾರ್ಬನ್ ಬಾಂಬ್ ಯೋಜನೆಗಳಲ್ಲಿ ಶೇ 60ಕ್ಕಿಂತ ಹೆಚ್ಚು ಯೋಜನೆಗಳು ಈಗಾಗಲೇ ಪ್ರಗತಿಯಲ್ಲಿವೆ. ಕಲ್ಲಿದ್ದಲು, ತೈಲ ಮತ್ತು ಅನಿಲ ಯೋಜನೆಗಳ ಹೊರತಾಗಿ  ಮಿಥೇನ್‌ನಿಂದ ಆಗುವ ಅಪಾಯದ ಬಗ್ಗೆಯೂ ಈ ತನಿಖೆ ಎಚ್ಚರಿಸಿದೆ. ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ನಿರ್ಧರಿಸದಿದ್ದರೆ ಮುಂದಿನ ಪೀಳಿಗೆ ಅಪಾಯಕಾರಿ ವಾತಾವರಣರದಲ್ಲಿ ಬೆಳೆಯಬೇಕಾಗಬಹುದು. ಜವಾಬ್ದಾರಿಯನ್ನು ಮರೆಯದೆ ಪರಿಸರವನ್ನು ಸಂರಕ್ಷಿಸುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT