ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ | ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 1,402 ಸ್ಪೆಷಲ್ ಆಫೀಸರ್ಸ್ ಹುದ್ದೆಗಳು

Published 16 ಆಗಸ್ಟ್ 2023, 19:30 IST
Last Updated 16 ಆಗಸ್ಟ್ 2023, 19:30 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ಕಾಮರ್ಸ್ ಪದವಿ, ಕೃಷಿ ಪದವಿ ಅಧ್ಯಯನ ಮಾಡಿದವರಿಗೆ ಹೆಚ್ಚಾಗಿ ಬ್ಯಾಂಕ್‌ನಲ್ಲಿ ಉದ್ಯೋಗ ಸಿಗುತ್ತಿತ್ತು. ಆದರೆ, ಈಗ ಇವೆರಡರ ಜೊತೆಗೆ, ಕಾನೂನು, ಎಂಜಿನಿಯರಿಂಗ್, ಮಾರ್ಕೆಟಿಂಗ್, ಮ್ಯಾನೇಜ್‌ಮೆಂಟ್‌ ಸೇರಿದಂತೆ ಬೇರೆ ಬೇರೆ ವಿಷಯ ಗಳಲ್ಲಿ ಪದವಿ ಪಡೆದಿರುವವರಿಗೂ ಬ್ಯಾಂಕ್ ಉದ್ಯೋಗ ಕೈಬೀಸಿ ಕರೆಯುತ್ತಿದೆ. ಇಂಥ ವಿಶೇಷ ಪದವಿಗಳೊಂದಿಗೆ ಕೆಲಸದ ಅನುಭವವಿರುವನ್ನು ವಿಶೇಷ ಅಧಿಕಾರಿ (ಸ್ಪೆಷಲಿಸ್ಟ್‌ ಆಫೀಸರ್‌) ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿದೆ.

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್‌ ಪರ್ಸೋನಲ್ ಸೆಲೆಕ್ಷನ್- ಐಬಿಪಿಎಸ್) ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಇಂಥ ಸ್ಪೆಷಲ್ ಆಫೀಸರ‍್ಸ್‌ಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಗಾಗ್ಗೆ ನೇಮಕ ಮಾಡಿಕೊಳ್ಳುತ್ತಿರುತ್ತದೆ. ಅದರಂತೆ ಈ ವರ್ಷವೂ ದೇಶದ ನಾಲ್ಕು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ 1,402 ಸ್ಪೆಷಲ್‌ ಆಫೀಸರ‍್ಸ್‌ ನೇಮಕ ಮಾಡಿಕೊಳ್ಳುವುದಾಗಿ ಅಧಿಸೂಚನೆ ಹೊರಡಿಸಿದೆ.

ಆಗಸ್ಟ್‌ 1 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಇದೇ 21 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಆನ್‌ಲೈನ್ ಮೂಲಕ (https://www.ibps.in)ಅರ್ಜಿ ಸಲ್ಲಿಸಬೇಕು.  ಎಲ್ಲ ಹುದ್ದೆಗಳು ಸ್ಕೇಲ್‌ 1 ಅಧಿಕಾರಿ ಹಂತದ ಹುದ್ದೆಗಳಾಗಿವೆ.

ಯಾವ್ಯಾವ ಬ್ಯಾಂಕ್‌ಗಳಲ್ಲಿ ಹುದ್ದೆ?

* ಬ್ಯಾಂಕ್ ಆಫ್‌ ಇಂಡಿಯಾ

* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

* ಇಂಡಿಯನ್ ಒವರಸೀಸ್ ಬ್ಯಾಂಕ್

* ಪಂಜಾಬ್ ನ್ಯಾಷನಲ್ ಬ್ಯಾಂಕ್

ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ  ಹಾಗೂ ಇತರೆ ಅಭ್ಯರ್ಥಿಗಳಿಗೆ: ₹850. ಪ.ಜಾ, ಪ.ಪಂ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಯೋಧರಿಗೆ ₹175. ನೋಂದಣಿ ನಂತರ ಅಭ್ಯರ್ಥಿಗಳು ಆನ್‌ಲೈನ್  ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

ವಯೋಮಿತಿ: ಕನಿಷ್ಠ 20 ವರ್ಷಗಳು, ಗರಿಷ್ಠ 30 ವರ್ಷಗಳು(01.08.2023 ಕ್ಕೆ ಅನ್ವಯಿಸಿದಂತೆ). ಸರ್ಕಾರದ ನಿಯಮಾನುಸಾರ ಎಸ್‌.ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಗಳಷ್ಟು ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ನೇಮಕಾತಿ ಪ್ರಕ್ರಿಯೆ: ಮೂರು ಹಂತಗಳಲ್ಲಿ ನೇಮಕಾತಿ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಇರಲಿದೆ. ಎರಡೂ ಲಿಖಿತ ಪರೀಕ್ಷೆಗಳೂ ಆನ್‌ಲೈನ್ ಮೂಲಕ ನಡೆಯಲಿವೆ. ಪೂರ್ವಭಾವಿ ಪರೀಕ್ಷೆಯಲ್ಲಿ ಆಯ್ಕೆಯಾದವರು, ಮುಖ್ಯಪರೀಕ್ಷೆಗೆ ಹಾಜರಾಗಬೇಕು. ಮುಖ್ಯ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನವಿದೆ. ಪರೀಕ್ಷೆಗಳು ಇಂಗ್ಲಿಷ್/ ಹಿಂದಿ ಭಾಷೆಯಲ್ಲಿರಲಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ವೆಬ್ ಲಿಂಕ್: https://ibpsonline.ibps.in/crpsp13jun23/ ಹಾಗೂ ಅಧಿಸೂಚನೆಗೆ:www.ibps.in

ಪರೀಕ್ಷಾ ಪ್ರಕ್ರಿಯೆ:  ಮೊದಲನೇ ಹಂತ–  ಪೂರ್ವಭಾವಿ ಪರೀಕ್ಷೆ. ಇದು ಈ ವರ್ಷದ ಡಿಸೆಂಬರ್ 30/31ರಂದು ನಡೆಯಲಿದೆ. ಎರಡನೇ ಹಂತ– ಮುಖ್ಯ ಪರೀಕ್ಷೆ. ಇದು 2024ರ ಜನವರಿ 28 ರಂದು ನಿಗದಿಯಾಗಿದೆ. ಮೂರನೇ ಹಂತ– ಸಂದರ್ಶನ– 2024ರ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆ ಇದೆ.

ಪರೀಕ್ಷಾ ಕೇಂದ್ರಗಳು

ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್): ಬೆಂಗಳೂರು,ಬೆಳಗಾವಿ, ಬೀದರ್, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

ಮುಖ್ಯ ಪರೀಕ್ಷೆ:  ಬೆಂಗಳೂರು ಮತ್ತು ಹುಬ್ಬಳ್ಳಿ- ಧಾರವಾಡ

ಶೈಕ್ಷಣಿಕ ಅರ್ಹತೆಗಳೇನು?

1) ಐಟಿ ಆಫೀಸರ್ ಹುದ್ದೆಗೆ: ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್‌ ವಿಷಯಕ್ಕೆ ಸಂಬಂಧಿಸಿದ ನಾಲ್ಕು ವರ್ಷಗಳ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು ಅಥವಾ ಪದವಿ ಜೊತೆಯಲ್ಲಿ DOEACC "B" ಲೆವೆಲ್ ಪರೀಕ್ಷೆ ಪಾಸಾಗಿರಬೇಕು.

2) ಅಗ್ರಿಕಲ್ಬರಲ್ ಫೀಲ್ಡ್ ಆಫೀಸರ್: ಕೃಷಿ/ತೋಟಗಾರಿಕೆ / ಪಶುಸಂಗೋಪನೆ,/ ಪಶು ವೈದ್ಯಕೀಯ ವಿಜ್ಞಾನ/ ಡೇರಿ ಸೈನ್ಸ್/ ಅಗ್ರಿ ಎಂಜಿನಿಯರಿಂಗ್/ ಮೀನುಗಾರಿಕೆ ವಿಜ್ಞಾನ/ ಮೀನು ಸಾಕಣೆ, ಮಾರ್ಕೆಟಿಂಗ್ ಮತ್ತು ಸಹಕಾರ/ ಸಹಕಾರ ಮತ್ತು ಬ್ಯಾಂಕಿಂಗ್/ ಕೃಷಿ-ಅರಣ್ಯ/ಅರಣ್ಯ/ ಕೃಷಿ ಜೈವಿಕ ತಂತ್ರಜ್ಞಾನ/ ಆಹಾರ ವಿಜ್ಞಾನ/ ಕೃಷಿ ವ್ಯವಹಾರ ನಿರ್ವಹಣೆ/ ಆಹಾರ ತಂತ್ರಜ್ಞಾನ/ ಡೇರಿ ತಂತ್ರಜ್ಞಾನ / ಕೃಷಿ ಎಂಜಿನಿಯರಿಂಗ್/ ರೇಷ್ಮೆ ಕೃಷಿ/ ಮೀನುಗಾರಿಕೆ ಎಂಜಿನಿಯರಿಂಗ್ ನಾಲ್ಕು ವರ್ಷಗಳ ಪದವಿ ಪಡೆದಿರಬೇಕು.

3) ಲಾ ಆಫೀಸರ್: ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು ಮತ್ತು ಬಾರ್ ಕೌನ್ಸಿಲ್‌ನ ಸದಸ್ಯತ್ವ ಪಡೆದಿರಬೇಕು.

4) ರಾಜ್ಯ ಭಾಷಾ ಅಧಿಕಾರಿ ಹುದ್ದೆಗೆ: ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಜೊತೆಗೆ - ಪದವಿಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ಪದವಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ವಿಷಯವಾಗಿ ಅಭ್ಯಾಸ ಮಾಡಿರಬೇಕು.

5) ಎಚ್ ಆರ್ / ಪರ್ಸನಲ್ ಆಫೀಸರ್: ಪದವೀಧರರಾಗಿರಬೇಕು ಮತ್ತು ಪರ್ಸನಲ್ ಮ್ಯಾನೇಜ್‌ಮೆಂಟ್/ಇಂಡಸ್ಟ್ರಿಯಲ್ ರಿಲೇಷನ್ಸ್ ಎಚ್‌ಆರ್/ ಎಚ್‌ಆರ್‌ಡಿ/ ಸೋಷಿಯಲ್ ವರ್ಕ್/ ಕಾರ್ಮಿಕ ಕಾನೂನು ಇದ್ಯಾವುದಾದರೂ ವಿಷಯದಲ್ಲಿ ಪೂರ್ಣಾವಧಿಯ ಸ್ನಾತಕೋತ್ತರ ಪದವಿ ಅಥವಾ ಪೂರ್ಣಾವಧಿಯ ಸ್ನಾತಕೋತ್ತರ ಅಥವಾ ಡಿಪ್ಲೊಮಾ ಮಾಡಿರಬೇಕು.

6) ಮಾರ್ಕೆಟಿಂಗ್ ಆಫೀಸರ್: ಪದವೀಧರರಾಗಿರಬೇಕು ಮತ್ತು ಎರಡು ವರ್ಷಗಳ ಪೂರ್ಣಾವಧಿ ಎಂಎಂಎಸ್ (ಮಾರ್ಕೆಟಿಂಗ್) ಎಂಬಿಎ (ಮಾರ್ಕೆಟಿಂಗ್)/ PGDBA /PGDBM/PGPM/PGDM ಮಾರ್ಕೆಟಿಂಗ್‌ನಲ್ಲಿ ಸ್ಪೆಷಲೈಸೇಷನ್‌ ಮಾಡಿರಬೇಕು.

ಗಮನಿಸಿ: IT ಆಫೀಸರ್ ಸ್ಕೇಲ್-I ಹೊರತುಪಡಿಸಿ ಬೇರೆ ಹುದ್ದೆಗಳಿಗೆ ಅಭ್ಯರ್ಥಿಯು ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ.

(ಮುಂದಿನ ವಾರ: ಪರೀಕ್ಷೆಗಳ ವಿವರ ಮತ್ತು ಆಯ್ಕೆ ಪ್ರಕ್ರಿಯೆ)

__________________________________________

(ಲೇಖಕರು ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT