ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KAS Exams: ಕೆಎಎಸ್ - ಭಾಷೆ ಆಯ್ಕೆ ಹೇಗೆ? ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

Last Updated 22 ಜನವರಿ 2023, 21:45 IST
ಅಕ್ಷರ ಗಾತ್ರ

1. ನಾನು ಬಿ.ಎಸ್ಸಿ ಪದವಿಯ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ 5 ಪತ್ರಿಕೆಗಳಿದ್ದು ಅದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ಆಯ್ಕೆಗಳಿವೆ. ನಾವು ಯಾವುದಾದರೂ ಒಂದು ಪತ್ರಿಕೆಯನ್ನು ಕನ್ನಡ ಭಾಷೆಯಲ್ಲಿ ಬರೆದು ಇನ್ನೊಂದನ್ನು ಇಂಗ್ಲಿಷ್‌ನಲ್ಲಿ ಬರೆಯಬಹುದೇ?

ಅಜೇಯ, ಬಾಗಲಕೋಟೆ.

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆಎಎಸ್ ಮುಖ್ಯ ಪರೀಕ್ಷೆಯ ಮಾದರಿ ಹೀಗಿರುತ್ತದೆ.
• ಅರ್ಹತಾದಾಯಕ ಪತ್ರಿಕೆಗಳು (150 ಅಂಕಗಳ 2 ಪತ್ರಿಕೆಗಳು): ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್.
• ಕಡ್ಡಾಯ ಪತ್ರಿಕೆಗಳು (250 ಅಂಕಗಳ 5 ಪತ್ರಿಕೆಗಳು; ಒಟ್ಟಾರೆ 1250 ಅಂಕಗಳು)
◦ ಪ್ರಬಂಧ-1
◦ ಸಾಮಾನ್ಯ ಅಧ್ಯಯನ-2, ◦ ಸಾಮಾನ್ಯ ಅಧ್ಯಯನ-3 ◦ ಸಾಮಾನ್ಯ ಅಧ್ಯಯನ-4 ◦ ಸಾಮಾನ್ಯ ಅಧ್ಯಯನ-5

• ಕಡ್ಡಾಯ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಮುದ್ರಿಸಲಾಗಿರುತ್ತದೆ. ನಮಗಿರುವ ಮಾಹಿತಿಯಂತೆ, ಅಭ್ಯರ್ಥಿಗಳು ಪತ್ರಿಕೆಯ ಉತ್ತರಗಳನ್ನು ಸಂಪೂರ್ಣವಾಗಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಉತ್ತರಿಸಬೇಕು. ನಿಖರವಾದ ಮಾಹಿತಿಗಾಗಿ 2023ರ ಪರೀಕ್ಷೆಯ ಅಧಿಸೂಚನೆಯನ್ನು ಗಮನಿಸಿ ಅಥವಾ ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ಜಾಲತಾಣವನ್ನು ಗಮನಿಸಿ: https://kpsc.kar.nic.in/

2. ನನಗೆ 26 ವರ್ಷ. ಬಿ.ಕಾಂ ಪದವೀಧರ. ಈಗ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ನನಗೆ 14 ನೇ ವಯಸ್ಸಿಗೆ ವಿವಾಹವಾಗಿದೆ. ಆದರೆ, ವಿವಾಹವಾದ ಹುಡುಗಿಯೊಂದಿಗೆ ಸಂಸಾರ ಆರಂಭಿಸಿಲ್ಲ ಹಾಗೂ ನಮ್ಮಿಬ್ಬ ರಿಗೂ ಈ ಮದುವೆ ಇಷ್ಟವಿಲ್ಲದ ಕಾರಣ ದೂರ ಇದ್ದೇವೆ. ಈಗ ನಾನು ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಅವಿವಾಹಿತ ಎಂದು ಸೂಚಿಸಿದ್ದು, ಇದರಿಂದ ಮುಂದೆ ನನ್ನ ನೇಮಕಾತಿಯಲ್ಲಿ ತೊಂದರೆ ಆಗುತ್ತದೆಯೇ ?

//ಶಿವಕುಮಾರ್, ಕೊಪ್ಪಳ ಜಿಲ್ಲೆ.//

ನಿಮ್ಮ ಸಂದಿಗ್ಧ ಪರಿಸ್ಥಿತಿ ಅರ್ಥವಾಗುತ್ತದೆ. ಆದರೆ, ಬಾಲ್ಯವಿವಾಹ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ ಹಾಗೂ ಸರ್ಕಾರಿ ಸೇವೆಗೆ ಅರ್ಜಿ ಸಲ್ಲಿಸುವಾಗ ತಪ್ಪು ಮಾಹಿತಿಯನ್ನು ನೀಡಿದರೆ, ಮುಂದೆ ತೊಂದರೆಯಾಗುವ ಸಾಧ್ಯತೆಯಿದೆ. ಹಾಗಾಗಿ, ಕಾನೂನು ಸಲಹೆಗಾರರನ್ನು ಸಂಪರ್ಕಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ.

3 ನಾನು ಪಿಯುಸಿ ಓದುತ್ತಿದ್ದು, ನನಗೆ ಮನೆಯಲ್ಲಿ ಮದುವೆ ಮಾಡಲು ನೋಡುತ್ತಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ. ರಾಜ್ಯಶಾಸ್ತ್ರ, ಇತಿಹಾಸ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಆಸಕ್ತಿಯಿದೆ. ಮನೆಯಲ್ಲಿ ಬಡತನ ಹಾಗೂ ‌ನನಗೆ ಕೀಳರಿಮೆ. ಈ ಕಾರಣಕ್ಕೆ ಎಲ್ಲರೆದುರು ಮಾತನಾಡಲು ಹೆದರುತ್ತೇನೆ. ನನಗೆ ಒಳ್ಳೆಯ ಉದ್ಯೋಗ ಮಾಡಬೇಕೆಂಬ ಆಸಕ್ತಿ ಇದೆ. ಒಳ್ಳೆಯ ಕಾಲೇಜಿನಲ್ಲಿ ಓದಲು ಸ್ಕಾಲರ್‌ಶಿಪ್ ಎಲ್ಲಿ ಸಿಗುತ್ತದೆ? ಯಾರ ನೆರವು ಪಡೆಯಬಹುದು ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಈಗಿನ ಪರಿಸ್ಥಿತಿಯಿಂದ ಎದೆಗುಂದದೆ, ನಿಮ್ಮ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಜೀವನದ ಬಗ್ಗೆ ರಾಜಿಯಾಗದಿರಿ; ಏಕೆಂದರೆ, ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಜೊತೆಗೆ ಸ್ವಯಂ ಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ಸಾಧಿಸುವ ಛಲ, ಆತ್ಮವಿಶ್ವಾಸವನ್ನು ಹುಟ್ಟುಹಾಕಿ, ಕೀಳರಿಮೆಯಿಂದ ಹೊರಬರಲು ಸಾಧ್ಯವಾಗುತ್ತದೆ.

ನಿಮಗೆ ಆಸಕ್ತಿಯಿರುವ ಅರ್ಥಶಾಸ್ತ್ರ ವಿಷಯಕ್ಕೆ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ, ಬಿಎ ಅಥವಾ ಬಿಎ (ಅರ್ಥಶಾಸ್ತ್ರ-ಆನರ್ಸ್) ಮಾಡಿ, ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್‌ಮೆಂಟ್, ಇನ್ಶೂರೆನ್ಸ್‌ ರೀಟೇಲ್ ಮುಂತಾದ ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಕೆಲಸಗಳನ್ನೂ ಪಡೆದುಕೊಳ್ಳಬಹುದು. ವೃತ್ತಿಯ ಜೊತೆಗೆ, ಹೆಚ್ಚಿನ ತಜ್ಞತೆಗಾಗಿ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂಬಿಎ ಕೋರ್ಸನ್ನು ಮಾಡಿ, ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

ಖಾಸಗಿ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅನೇಕ ಸ್ಕಾಲರ್‌ಶಿಪ್‌ಗಳ ಮಾಹಿತಿ ಅಂತರ್ಜಾಲದಲ್ಲಿ ಸುಲಭವಾಗಿ ಸಿಗುತ್ತದೆ. ವೃತ್ತಿಯೋಜನೆ, ವೈವಾಹಿಕ ಜೀವನದ ಆಲೋಚನೆಗಳು, ವೃತ್ತಿ ಮತ್ತು ವೈಯಕ್ತಿಕ ಜೀವನದ ಧ್ಯೇಯಗಳು ಮತ್ತು ಈ ನಿಟ್ಟಿನಲ್ಲಿ ನಿಮ್ಮ ಸನ್ನದ್ಧತೆಯ ಬಗ್ಗೆ ಮನೆಯವರಿಗೆ ಮನವರಿಕೆ ಮಾಡಿ, ಒಮ್ಮತದ ನಿರ್ಧಾರಕ್ಕೆ ಬರಲು ಪ್ರಯತ್ನಿಸಿ. ಏಕೆಂದರೆ, ನಿಮ್ಮ ಯೋಜನೆಗಳಿಗೆ ಕುಟುಂಬದ ಬೆಂಬಲವಿದ್ದರೆ, ಸಾಧನೆ ಸುಲಭವಾಗುತ್ತದೆ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/@ExpertCareerConsultantAuthor

4. ನನಗೆ ಗಣಿತ ಬಹಳ ಆಸಕ್ತಿಕರ ವಿಷಯ. ಅಪ್ಪ, ಅಮ್ಮನ ಒತ್ತಾಯಕ್ಕೆ ಎಂಜಿನಿಯರಿಂಗ್(ಎಲೆಕ್ಟ್ರಾನಿಕ್ಸ್‌ ಅಂಡ್ ಟೆಲಿಕಮ್ಯುನಿಕೇಷನ್)ಮಾಡಿದೆ. ಉತ್ತಮ ಉದ್ಯೋಗವೂ ಸಿಗಲಿಲ್ಲ. ನನ್ನ ಆಸಕ್ತಿಕರ ಗಣಿತ ಕ್ಷೇತ್ರಕ್ಕೆ ಬದಲಾಯಿಸಿಕೊಳ್ಳಬಹುದೇ? ಆಗಬಹುದಾದರೆ, ಏನು ಮಾಡಬೇಕು?

ಹೆಸರು, ಊರು ತಿಳಿಸಿಲ್ಲ.

ಮೊದಲಿಗೆ, ಎಂಜಿನಿಯರಿಂಗ್ ಮಾಡಿದ ನಂತರವೂ ಉತ್ತಮ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ಮೌಲ್ಯಮಾಪನ ಮಾಡಬೇಕು. ಸಾಮಾನ್ಯವಾಗಿ, ಉದ್ಯೋಗದಲ್ಲಿ ಯಶಸ್ವಿಯಾಗಲು ಎಂಜಿನಿಯರಿಂಗ್ ಜ್ಞಾನದ ಜೊತೆಗೆ ಪ್ರಾಥಮಿಕ ಮತ್ತು ವೃತ್ತಿ ಸಂಬಂಧಿತ ಕೌಶಲಗಳ ಅಗತ್ಯವಿರುತ್ತದೆ. ಇವುಗಳು ಅಭ್ಯರ್ಥಿಗಳಲ್ಲಿವೆಯೇ ಎಂದು ಉದ್ಯೋಗದ ಸಂದರ್ಶನಗಳಲ್ಲಿ ಪರೀಕ್ಷಿಸಲಾಗುತ್ತದೆ. ಉದಾಹರಣೆಗೆ, ಪ್ರಾಥಮಿಕ ಕೌಶಲಗಳಾದ ಸಮಯದ ನಿರ್ವಹಣೆ, ಸಂವಹನ ಕೌಶಲ, ಅಂತರ್-ವೈಯಕ್ತಿಕ ಕೌಶಲ ಮತ್ತು ನಾಯಕತ್ವದ ಕೌಶಲಗಳು
ಯಾವುದೇ ವೃತ್ತಿಯಲ್ಲಿ ಮುಖ್ಯವಾಗುತ್ತದೆ. ವೃತ್ತಿ ಸಂಬಂಧಿತ ಕೌಶಲಗಳಾದ ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿಶ್ಲೇಷಣಾತ್ಮಕ ಕೌಶಲ ಇತ್ಯಾದಿ ಕೌಶಲಗಳೂ ಎಂಜಿನಿಯರಿಂಗ್ ಉದ್ಯೋಗದ ಆಕಾಂಕ್ಷಿಗಳಲ್ಲಿರಬೇಕು.

ಹಾಗಾಗಿ, ನಿಮ್ಮ ಶಕ್ತಿ, ಸಾಮರ್ಥ್ಯ, ಕುಂದು ಕೊರತೆಗಳನ್ನರಿತು, ಪ್ರಾಮಾಣಿಕ ಪ್ರಯತ್ನಗಳಿಂದ ಈ ಕೌಶಲಗ ಳನ್ನು ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು. ನಿಮಗಿರುವ ಗಣಿತದ ತಜ್ಞತೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉಪಯುಕ್ತ. ಹಾಗಾಗಿ ನಮ್ಮ ಅಭಿಪ್ರಾಯದಂತೆ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂದುವರಿಯುವುದು ನಿಮ್ಮ ಮೊದಲ ಆದ್ಯತೆಯಾಗಿರಲಿ.

ವ್ಯಕ್ತಿತ್ವ ಮತ್ತು ವೃತ್ತಿಗೆ ಸಂಬಂಧಿಸಿದ ಕೌಶಲಗಳನ್ನು ಕಲಿಯಲು ಇಂದು ವಿಭಿನ್ನವಾದ ಮತ್ತು ವಿಸ್ತಾರವಾದ ಅವಕಾಶಗಳಿವೆ. ಸಂದರ್ಶನಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಮಾರ್ಗದರ್ಶನಕ್ಕಾಗಿ ಈ

ವಿಡಿಯೊ ವೀಕ್ಷಿಸಿ:


****

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ, ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಹಾಗೂ ವೃತ್ತಿ ಸಲಹೆಗಾರ ವಿ. ಪ್ರದೀಪ್‌ಕುಮಾರ್‌ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು
shikshana@prajavani.co.inಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT