ಶನಿವಾರ, ಮೇ 28, 2022
31 °C

ಮಾನ್‌ಸ್ಟರ್ ಕಂಪನಿ ಜತೆ ಕೆಎಸ್‌ಡಿಸಿ ಒಪ್ಪಂದ: 2 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿರುವ ಕೌಶಲಪೂರ್ಣ ಉದ್ಯೋಗಾಕಾಂಕ್ಷಿಗಳಿಗೆ ಲಭ್ಯ ಅವಕಾಶಗಳ ಬಗ್ಗೆ ಮಾಹಿತಿ ನೀಡುವ ಜತೆಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವು ನೀಡುವ ಗುರಿಯೊಂದಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (ಕೆಎಸ್‌ಡಿಸಿ) ಮತ್ತು ಮಾನ್‌ಸ್ಟರ್.ಕಾಂ ಕಂಪನಿಗಳು ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದವು.

ಇದರ ಅಂಗವಾಗಿ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ‘ಉದ್ಯೋಗ ಸೃಷ್ಟಿಗೆ ರಾಜ್ಯ ಸರಕಾರವು ಸಾಕಷ್ಟು ಹಣವನ್ನು ವಿನಿಯೋಗಿಸುತ್ತಿದ್ದು, ನಿರುದ್ಯೋಗ ನಿವಾರಣೆಯೇ ಆದ್ಯತೆಯಾಗಿದೆ. ದೇಶದ ಸಂಘಟಿತ ವಲಯದಲ್ಲಿ 6 ಲಕ್ಷಕ್ಕೂ ಹೆಚ್ಚು ಮತ್ತು ರಾಜ್ಯವೊಂದರಲ್ಲೇ 2.30 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ. ಉದ್ಯೋಗ ಸೃಷ್ಟಿಯ ಮೂಲಕ ಪ್ರತಿಭಾವಂತರು ವಿದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವುದು ನಮ್ಮ ಗುರಿಗಳಲ್ಲಿ ಒಂದಾಗಿದೆ’ ಎಂದರು.

ಒಪ್ಪಂದದ ಪ್ರಕಾರ, ಕೆಎಸ್‌ಡಿಸಿ ಮತ್ತು ಮಾನ್‌ಸ್ಟರ್ ಕಂಪನಿ ಪರಸ್ಪರ ವೆಬ್ ಲಿಂಕ್‌ಗಳನ್ನು ಹಂಚಿಕೊಳ್ಳಲಿವೆ. ಮಿಗಿಲಾಗಿ ಮಾನ್‌ಸ್ಟರ್ ಕಂಪನಿಯು ಪ್ರತೀ ತಿಂಗಳು ಸಮೀಕ್ಷೆ ನಡೆಸುವ ಮೂಲಕ ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಉದ್ಯೋಗಗಳಿವೆ ಎನ್ನುವುದನ್ನು ಪಟ್ಟಿ ಮಾಡುತ್ತದೆ. ಇದರ ಆಧಾರದ ಮೇಲೆ ಕೌಶಲ ಅಭಿವೃದ್ಧಿ ನಿಗಮವು ತರಬೇತಿಯ ಸ್ವರೂಪವನ್ನು ನಿರ್ಧರಿಸುತ್ತದೆ ಎಂದು ಅವರು ವಿವರಿಸಿದರು.

ಈ ಒಪ್ಪಂದದ ಮೂಲಕ 1.86 ಲಕ್ಷಕ್ಕೂ ಹೆಚ್ಚು ಕೌಶಲಪೂರ್ಣ ಉದ್ಯೋಗಾಕಾಂಕ್ಷಿಗಳಿಗೆ ನೆರವು ಸಿಗಲಿದೆ. ಅಲ್ಲದೆ, ಈ ಅಭ್ಯರ್ಥಿಗಳಿಗೆ ಮಾನ್ ಸ್ಟರ್.ಕಾಂ ಕಂಪನಿಯು ವಿವಿಧೆಡೆಗಳಲ್ಲಿ ನಡೆಸುವ ಟ್ರಯಂಫ್, ಆಸ್ಪೈರ್, ವೆಲಾಸಿಟಿ ಮುಂತಾದ ನೇಮಕಾತಿ ಮೇಳಗಳಲ್ಲಿ ವಿಶೇಷ ಪ್ರವೇಶಾವಕಾಶ ಲಭ್ಯವಾಗಲಿದೆ. ಅಲ್ಲದೆ, ಮಾನ್ ಸ್ಟರ್ ಕಂಪನಿಯ ಜ್ಞಾನ ಸಂಪನ್ಮೂಲಗಳಾದ ವೆಬಿನಾರ್, ಉದ್ಯೋಗ ಸೂಚ್ಯಂಕ ಮತ್ತು ಜ್ಞಾನ ಕೇಂದ್ರಗಳ ನೆರವೂ ದೊರೆಯಲಿದೆ  ಅವರು ತಿಳಿಸಿದರು.

ರಾಜ್ಯದಲ್ಲಿ ಸದ್ಯಕ್ಕೆ 11.74 ಲಕ್ಷಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಸೂಕ್ತ ಉದ್ಯೋಗಾವಕಾಶಗಳನ್ನು ಅರಸುತ್ತಿದ್ದು, ನೋಂದಾಯಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಇನ್ನುಮುಂದೆ ಮಾನ್‌ಸ್ಟರ್‌ ಕಂಪನಿಯ ವೃತ್ತಿಸಂಬಂಧಿ ಸೇವೆಗಳು ಸಿಗಲಿವೆ. ಈ ಸೇವೆಗಳಲ್ಲಿ ಉದ್ಯೋಗ ಅಂದಾಜು, ಪರೀಕ್ಷೆಗಳು ಮುಂತಾದವು ಲಭ್ಯವಿವೆ ಎಂದು ಸಚಿವರು ನುಡಿದರು.

ಕಂಪನಿಯ ಸಿಇಒ ಶೇಖರ್ ಗರೀಸಾ, ‘ಈ ಒಪ್ಪಂದದಿಂದಾಗಿ ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿ ನೀಡುವುದರ ಜತೆಗೆ ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಅವರಿಗೆ ಕೌಶಲಗಳನ್ನು ನೀಡಬಹುದು; ಅಲ್ಲದೆ, ಶಿಕ್ಷಣ ಸಂಸ್ಥೆಗಳನ್ನು ನೇರವಾಗಿ ಉದ್ದಿಮೆಗಳೊಂದಿಗೆ ಬೆಸೆಯಲಾಗುವುದು’ ಎಂದರು.

ರಾಜ್ಯ ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು