ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಪೋಷಕರಿಗೆ ಕಿವಿಮಾತು: ಪಠ್ಯ, ಪರೀಕ್ಷೆಗಳ ಜೊತೆ‘ಪಠ್ಯೇತರ’ವೂ ಇರಲಿ!

ಎಸ್ಸೆಸ್ಸೆಲ್ಸಿ, 2ನೇ ಪಿಯುಸಿ ಮಕ್ಕಳ ಪೋಷಕರಿಗೆ ಕಿವಿ ಮಾತು
Last Updated 17 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಭಾಗ -1

ಮೊನ್ನೆ ಗೆಳೆಯರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿಗೆ ಬಂದಿದ್ದ ಅತಿಥಿಯೊಬ್ಬರು, ಗೆಳೆಯನ ಮಗನನ್ನು ‘ಏನಯ್ಯಾ,ಎಷ್ಟನೇ ಕ್ಲಾಸು ನೀನು?’ ಎಂದರು. ‘ಒಂಬತ್ತು ಪಾಸಾಗಿ ಹತ್ತನೇ ಕ್ಲಾಸು’ ಎಂದ ಆ ಹುಡುಗ. ‘ಹತ್ತನೇ ಕ್ಲಾಸಾ’ ಎಂದು ಉದ್ಘರಿಸಿದ ಆ ಅತಿಥಿ, ‘ನೋಡಪ್ಪಾ, ಎಸ್ಸೆಸ್ಸಲ್ಸಿ ಜೀವನದಲ್ಲಿ ಟರ್ನಿಂಗ್ ಪಾಯಿಂಟು. ಗಂಭೀರವಾಗಿ ಓದಬೇಕು. ಆಟ–ಸುತ್ತಾಟ, ಟಿವಿ–ಸಿನಿಮಾ ಎಲ್ಲ ಬಿಟ್ಟು ಓದಿನ ಕಡೆಗಷ್ಟೇ ನಿನ್ನ ಗಮನ ಇರಬೇಕು. ಸೆಕೆಂಡ್‌ ಪಿಯುಸಿ ಮುಗಿಸುವವರೆಗೂ ಹೀಗೆ ಇರಬೇಕು, ಅರ್ಥಾಯ್ತಾ’ ಅಂದರು. ಹುಡುಗ ತಲೆ ಆಡಿಸಿ ಸಮ್ಮತಿಸಿದ, ಅವರ ತಂದೆಯೂ ಮಗನ ಕಡೆ ನೋಡುತ್ತಾ, ‘ಗೊತ್ತಾಯ್ತೇನೋ’ ಎನ್ನುವ ಸನ್ನೆ ಮಾಡಿದರು!

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಮಕ್ಕಳು ಮನೆಯಲ್ಲಿದ್ದಾರೆಂದರೆ, ಬಹುತೇಕ ಪೋಷಕರು, ಅವರ ಸ್ನೇಹಿತರ ಸಲಹೆಗಳು ಹೀಗೇ ಇರುತ್ತವೆ. ಈ ಮಕ್ಕಳನ್ನು ಎಲ್ಲಾದರೂ ಕಾರ್ಯಕ್ರಮಗಳಲ್ಲಿ ಕಂಡರೆ ‘ಈ ವರ್ಷ ನೀನು ಎಸ್ಸೆಸ್ಸೆಲ್ಸಿ ಅಲ್ವಾ. ಆದ್ರೂ ಇಲ್ಲಿಗೆ ಬಂದ್ಬಿಟ್ಟಿದ್ದೀಯ’ ಎನ್ನುತ್ತಾ, ಕಾರ್ಯಕ್ರಮಕ್ಕೆ ಬಂದಿದ್ದೇ ತಪ್ಪಾಯ್ತೇನೋ ಎನ್ನುವಂತೆ ಮಾತಾಡುತ್ತಾರೆ. ಕೆಲವು ಪೋಷಕರಂತೂ ‘ಏಕಾಗ್ರತೆ ಡೈವರ್ಟ್‌ ಆಗುತ್ತೆ. ಅದಕ್ಕೆ ಮಕ್ಕಳ ಎಸ್ಸೆಸ್ಸೆಲ್ಸಿ ಮುಗಿಯೋ ತನಕ ಟಿ.ವಿ, ಕೇಬಲ್ ಎಲ್ಲ ತೆಗೆಸ್ತೇನೆ’‌ ಎನ್ನುತ್ತಾರೆ.

ಈ ತರಗತಿಯಲ್ಲಿ ಓದುತ್ತಿರುವ ಮಕ್ಕಳ ವಿಚಾರದಲ್ಲಿ ಪೋಷಕರು ಏಕೆ ಹೀಗೆ ನಡೆದುಕೊಳ್ಳುತ್ತಾರೆ. ಮಕ್ಕಳು ಓದು ಬಿಟ್ಟು ಬೇರೇನೂ ಮಾಡಬಾರದೇ? ಎಲ್ಲಕ್ಕಿಂತ ಹೆಚ್ಚಾಗಿ, ಎಸ್ಸೆಸ್ಸೆಲ್ಸಿ– ದ್ವಿತೀಯ ಪಿಯುಸಿಪರೀಕ್ಷೆಗಳ ಬಗೆಗಿನ ಆತಂಕ ಏಕೆ?ಇದನ್ನು ನಾವು ಒಂದು ಸಣ್ಣ ಉದಾಹರಣೆಯ ಮೂಲಕ ನೋಡೋಣ.

ನೀವು ನೆಲದ ಮೇಲೆ 3 ಅಡಿಗಳ ದೂರ ಹಾರಬೇಕು ಎಂದು ಹೇಳಿದರೆ, ತಕ್ಷಣವೇ ಹಾರಿಬಿಡ್ತೀರಿ. ಅದೇ, ಎರಡು ಅಪಾರ್ಟಮೆಂಟ್‌ಗಳ ನಡುವಿನ ಅಂತರ 3 ಅಡಿಗಳಿಷ್ಟಿದೆ. ಅದನ್ನು ಹಾರುತ್ತೀರಾ? ಎರಡು ಬೆಟ್ಟಗಳ ನಡುವೆಯೂ ಇಷ್ಟೇ ಅಂತರವಿದ್ದರೆ, ಅದನ್ನಾದರೂ ಹಾರ್ತೀರಾ? ಇಲ್ಲ ಅಲ್ಲವಾ? ಅಂತರ ಅಷ್ಟೇ ಆದರೂ, ಇದು ಸಾಧ್ಯವಿಲ್ಲ ಅಲ್ಲವಾ?

ಏಕೆಂದರೆ, ನೀವು ಇಲ್ಲಿ ಹಾರಬೇಕಿರುವುದು ದೂರವನ್ನೇ ಹೊರತು, ಎತ್ತರವನ್ನಲ್ಲ. ಆದರೂ, ನೀವೇಕೆ ಎತ್ತರವನ್ನು ನೋಡಿ ಹೆದರುತ್ತಿದ್ದೀರಿ? ಏಕೆಂದರೆ, ಅದು ಮನುಷ್ಯ ಸಹಜ ಗುಣ.

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯ ವಿಚಾರದಲ್ಲೂ ಅಷ್ಟೇ. ಇಲ್ಲಿ ದೂರವೆಂದರೆ ಪರೀಕ್ಷೆ. ಎತ್ತರವೆಂದರೆ ಜವಾಬ್ದಾರಿ. ಎಲ್ಲ ಪರೀಕ್ಷೆಗಳೂ ಮಕ್ಕಳ ವಯಸ್ಸಿಗೆ ಸರಿಹೊಂದುವಂತೆ ಇದ್ದರೂ, ಜವಾಬ್ದಾರಿ ಹೆಚ್ಚಾಗಿರುತ್ತದೆ. ಹಾಗಾಗಿ ಆತಂಕ ಸಹಜ. ಮನಶಾಸ್ತ್ರಜ್ಞರ ಪ್ರಕಾರ ಪರೀಕ್ಷೆಗಳೆಂದಾಗ ಸ್ವಲ್ಪಮಟ್ಟಿನಆತಂಕ ಸಹಜ ಹಾಗೂ ಅದು ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಆದರೆ, ಅತಿಯಾದ ಆತಂಕ ಕಾರ್ಯಕ್ಷಮತೆಯನ್ನು ಗಣನೀಯವಾಗಿ ಕುಗ್ಗಿಸುತ್ತದೆ. ಆದ್ದರಿಂದ ಪೋಷಕರು ಹೆಚ್ಚು ಆತಂಕಪಡಬೇಡಿ.

ನಿಜ, 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಜೀವನದ ಪ್ರಮುಖ ಘಟ್ಟಗಳೇ. ಈ ಪರೀಕ್ಷೆಗಳಲ್ಲಿ ಚೆನ್ನಾಗಿ ಬರೆಯಬೇಕು, ಒಳ್ಳೆಯ ಅಂಕಗಳನ್ನು ಪಡೆಯಬೇಕು ಎನ್ನುವ ನಿರೀಕ್ಷೆ ಇರಬೇಕು. ಅದನ್ನು ಸಾಧಿಸಲು ಸರಿಯಾದ ಪ್ರಯತ್ನ ಮಾಡಲೇಬೇಕು. ಹಾಗೆಂದು, ಈ ಗುರಿ ತಲುಪುವುದಕ್ಕಾಗಿ ವಿದ್ಯಾರ್ಥಿಗಳು ಸದಾ ಓದುತ್ತಿರ ಬೇಕೆಂಬುದು ಸರಿಯಾದ ಕ್ರಮವಲ್ಲ.

ಪರಿಹಾರವೇನು?

ತಜ್ಞರ ಪ್ರಕಾರ ಈ ವಯಸ್ಸಿನಲ್ಲಿ ಮಕ್ಕಳ ಮನೋ-ದೈಹಿಕ ಬೆಳವಣಿಗೆಗಳೂ ತ್ವರಿತಗತಿಯಲ್ಲಿರುತ್ತವೆ. ಆದ್ದರಿಂದ ಓದಿನ ಜೊತೆ-ಜೊತೆಗೆ ಬೇರೆಯ ಚಟುವಟಿಕೆಗಳನ್ನು ನಿರ್ಲಕ್ಷಿಸಬಾರದು.

ಇತ್ತೀಚೆಗೆ, ಬಹಳ ಮಕ್ಕಳು ಅದರಲ್ಲೂ ದ್ವಿತೀಯ ಪಿಯುಸಿ ಓದುತ್ತಿರುವವರು, ತಮ್ಮ ಶಾಲೆಯಲ್ಲಿ ಒತ್ತಡ ಹೆಚ್ಚಾಗುತ್ತಿದೆ ಎಂದು ಹೇಳಿದ್ದನ್ನು ಗಮನಿಸಿದ್ದೇನೆ. ಬೇರೆ ಮಕ್ಕಳ ಜೊತೆಗೆ ಹೋಲಿಸಿಕೊಂಡು, ನಾವು ಅಷ್ಟು ಸಮರ್ಥರಿಲ್ಲ ಎಂದೂ ಮಾನಸಿಕವಾಗಿ ಕುಗ್ಗಿ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಿ ರುವುದನ್ನು ನೋಡಿದ್ದೇನೆ. ಕೇವಲ ಓದಿನ ಕಡೆಗಷ್ಟೇ ಗಮನ ಕೊಟ್ಟಾಗ, ಒತ್ತಡ ಉಂಟಾದಾಗ ಹೀಗೆ ಆಗುತ್ತದೆ. ಓದು ಮುಖ್ಯ, ಹಾಗೆಯೇ ಜೀವನವು ಅತಿ ಮುಖ್ಯ.

ಏನು ಮಾಡಬಹುದು?

ಮಕ್ಕಳು, ವರ್ಷದ ಆರಂಭದಿಂದಲೇ ಒಂದು ವೇಳಾಪಟ್ಟಿ ಮಾಡಿಕೊಳ್ಳಬೇಕು. ಅದರಲ್ಲಿ ಸಮಯವನ್ನು ನಿಗದಿಪಡಿಸುವಾಗ ಶಾಲೆ, ಟ್ಯೂಷನ್, ಓದಬೇಕಾದ ವಿಷಯಗಳ ಪಟ್ಟಿಯ ಜೊತೆಗೆ, ನಿಮಗೆ ಆಸಕ್ತಿಯಿರುವ ಪಠ್ಯೇತರ ಚಟುವಟಿಕೆಗಳನ್ನು ಸೇರಿಸಬೇಕು. ಆ ನಿಗದಿತ ಸಮಯವನ್ನು ಅದೇ ಚಟುವಟಿಕೆಗಳಿಗೆ ಮೀಸಲಿಡಬೇಕು.

ಅಂದಿನ ಪಾಠವನ್ನು ಅಂದೇ ಓದಿ. ಓದಿನ ಜೊತೆಗೆ, ಸ್ವಲ್ಪ ಆಟ, ಮನರಂಜನೆಯೂ ಇರಲಿ. ಅವಕಾಶ ಸಿಕ್ಕರೆ, ಬೇರೆಯ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಿ. ಓದಿನ ಜವಾಬ್ದಾರಿಯೂ ನೆನಪಿರಲಿ.

‘ಪಠ್ಯೇತರ ಚಟುವಟಿಕೆಯೂ ಇರಲಿ‘

ಮಕ್ಕಳು ಎಸೆಸೆಲ್ಸಿಗೋ, 2ನೇ ಪಿಯುಸಿಗೆ ಬಂದಾಕ್ಷಣ, ಪೋಷಕರು ಅವರನ್ನು ಪಠ್ಯೇತರ ಚಟುವಟಿಕೆಗಳಿಂದ ದೂರಮಾಡುವುದು ಒಳ್ಳೆಯ ಕ್ರಮವಲ್ಲ. ಆಟ, ಮನರಂಜನೆ, ಸುತ್ತಾಟ ಇವೆಲ್ಲ ಅವರ ಸಹಜ ಕ್ರಮಗಳು. ಇವೆಲ್ಲಕ್ಕೂ ಕಡಿವಾಣ ಹಾಕಿದರೆ, ಮಕ್ಕಳು ಅನಗತ್ಯ ಒತ್ತಡಕ್ಕೆ ಒಳಗಾಗುತ್ತಾರೆ.

ವರ್ಷಪೂರ್ತಿ ಮನೆಯಲ್ಲೇ ಕೂಡಿ ಹಾಕಿ ಸ್ನೇಹಿತರು, ಬಂಧುಗಳು ಮತ್ತು ಸಮಾಜದಿಂದ ದೂರ ಇಟ್ಟಷ್ಟು ಮಕ್ಕಳು ಒಂಟಿಯಾಗುತ್ತಾ ಹೋಗುತ್ತಾರೆ. ತಮ್ಮ ಮನಸ್ಸಿಗೆ ಅನಿಸಿದ್ದನ್ನು ಹೇಳಿಕೊಳ್ಳಲಾಗದೇ, ಒಳಒಳಗೆ ಕೊರಗುತ್ತಾ ಖಿನ್ನತೆಯ ಮಡಿಲು ಸೇರುತ್ತಾರೆ.ಮೊಬೈಲ್ ನೋಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಏನೆಲ್ಲ ಅನಾಹುತಗಳಾಗಿವೆ ಎಂದು ನಾವೆಲ್ಲ ಮಾಧ್ಯಮಗಳಲ್ಲಿ ನೋಡಿದ್ದೇವೆ.

ನೆನಪಿಡಿ, ಒತ್ತಡದಲ್ಲಿ ಮಾಡಿದ ಯಾವ ಕೆಲಸವು ನಿರೀಕ್ಷಿತ ಫಲ ನೀಡುವುದಿಲ್ಲ. ಇದು ವಿದ್ಯಾರ್ಥಿಗಳು ಓದಿಗೂ ಅನ್ವಯಿಸುತ್ತದೆ. ಹಾಗಾಗಿ, ಪೋಷಕರು ಮಕ್ಕಳನ್ನು ಸಹಜವಾಗಿರಲು ಬಿಡಿ. ಎಸೆಸೆಲ್ಸಿ ಮತ್ತು ಪಿಯುಸಿ ಹಂತಗಳ ವಿದ್ಯಾಭ್ಯಾಸದ ಪ್ರಾಮುಖ್ಯದ ಬಗ್ಗೆ ಅರಿವು ಮೂಡಿಸಿ. ತಜ್ಞ ಉಪನ್ಯಾಸಕರನ್ನು, ಶಾಲಾ-ಕಾಲೇಜು ಪ್ರಾಚಾರ್ಯರನ್ನು ಸಂಪರ್ಕಿಸಿ,ನೆರವು ಪಡೆಯಿರಿ.

ಮಕ್ಕಳಿಗೆಮನರಂಜನೆ, ದೈಹಿಕ ಚಟುವಟಿಕೆ ತೀರಾ ಅವಶ್ಯಕ. ಈಜು, ಸೈಕ್ಲಿಂಗ್, ಮನೆಯ ಕೆಲಸಗಳಲ್ಲಿ ನೆರವಾಗುವುದು, ಮನೆಗೆ ಬರುವ ನೆಂಟರಿಷ್ಟರೊಂದಿಗೆ ಹರಟುವುದು, ಬಿಡುವಿನ ವೇಳೆಯಲ್ಲಿ ಚಿಕ್ಕ ಪ್ರವಾಸ ಮಾಡಿಸಿ. ಮನೆಯ ಪೂಜೆ-ಪುನಸ್ಕಾರ ಸಮಾರಂಭ ಪ್ರವಾಸಗಳಲ್ಲಿ ಅವರನ್ನು ಭಾಗಿಯಾಗುವಂತೆ ಮಾಡಿರಿ. ಇಂಥವೆಲ್ಲ ಅವರ ಮನಸ್ಸನ್ನು ಪ್ರಫುಲ್ಲಗೊಳಿಸಿ ಓದಿನ ನೆನಪಿನ ಕ್ಷಮತೆಯನ್ನು ಹೆಚ್ಚಿಸುತ್ತವೆ.

ಪಠ್ಯಪುಸ್ತಕಗಳನ್ನಷ್ಟೇ ಓದಿದರೆ ಸಾಲದು. ಮನರಂಜನೆ, ಸಾಮಾನ್ಯ ಜ್ಞಾನದ ಕುರಿತಾದ ಕನ್ನಡ ಅಥವಾ ಇಂಗ್ಲಿಷ್ ಪತ್ರಿಕೆ ನಿಯತಕಾಲಿಕೆಗಳನ್ನು ಓದಿಸಬೇಕು. ಅವುಗಳಲ್ಲೂ ಓದಿನ ಏಕಾಗ್ರತೆಗೆ ಮತ್ತು ಅಂಕಗಳಿಕೆಗೆ ನೆರವಾಗುವ ಅನೇಕ ವಿಷಯಗಳು ಇರುತ್ತವೆ.

ಪರೀಕ್ಷೆಯಲ್ಲಿ ಅಂಕಗಳಿಕೆಯಷ್ಟೇ ಮುಖ್ಯವಲ್ಲ. ಅಂಕಗಳನ್ನು ಮೀರಿ ಜೀವನವಿದೆ ಎಂಬುದು ನೆನಪಿರಲಿ. ಶಾಲಾ ಹಂತಗಳಲ್ಲಿ ಸಾಧಾರಣವಾಗಿ ಇದ್ದ ರಾಮಾನುಜನ್, ಥಾಮಸ್‌ ಆಲ್ವಾ ಎಡಿಸನ್, ಐನ್‌ಸ್ಟೀನ್‌ ಅವರೆಲ್ಲ ವಿಶ್ವವೇ ಮೆಚ್ಚುವ ಸಾಧನೆ ಮಾಡಿರುವುದು ಕಣ್ಣಮುಂದಿದೆ.

– ಗುರುರಾಜ್ ಎಸ್. ಪ್ರಾಚಾರ್ಯರು, ವಿಡಿಯಾ ಪೂರ್ಣಪ್ರಜ್ಞ ಕಾಲೇಜು

(ಮುಂದಿನ ಸಂಚಿಕೆಯಲ್ಲಿ: ಓದು ಮತ್ತು ಇತರ ಚಟುವಟಿಕೆಗಳನ್ನು ಸರಿದೂಗಿಸಲು ಕೆಲವು ಪ್ರಾಯೋಗಿಕ ಸಲಹೆಗಳು)

(ಲೇಖಕರು: ನಿರ್ದೇಶಕರು, ಸ್ಮಾರ್ಟ್‌ ಸೆರೆಬ್ರಮ್‌ ಪ್ರೈವೇಟ್‌ ಲಿ., ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT