ಭಾನುವಾರ, ಏಪ್ರಿಲ್ 2, 2023
33 °C

UPSC KPSC Exams | ಪ್ರಬಂಧ ರಚನೆ: ಭಾರತದಲ್ಲಿ ಮಹಿಳಾ ಚಳುವಳಿ

ಹನುಮನಾಯಕ್ ರಾಥೋಡ್ Updated:

ಅಕ್ಷರ ಗಾತ್ರ : | |

Prajavani

ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಬಂಧ ರಚನೆಯೂ ಒಂದು ವಿಷಯವಾಗಿದೆ. ಪ್ರಬಂಧ ರಚನೆಗೆ ಅಗತ್ಯವಾದ ಮಾಹಿತಿಯೊಂದನ್ನು ಇಲ್ಲಿ ನೀಡಲಾಗಿದೆ.

ದೇಶದಲ್ಲಿ ನಡೆದ ಮಹಿಳೆಯರ ಅಸ್ಮಿತೆಗಾಗಿ ನಡೆದ ಹೋರಾಟವನ್ನು ಎರಡು ಭಾಗಗಳಲ್ಲಿ ನೋಡಬಹುದು.

1. ಸ್ವಾತಂತ್ರ್ಯ ಪೂರ್ವದ ಮಹಿಳಾ ಚಳವಳಿ

2 ಸ್ವಾತಂತ್ರ್ಯ ನಂತರ ಮಹಿಳಾ ಚಳವಳಿ 

ಸ್ವಾತಂತ್ರ್ಯ ಪೂರ್ವದ ಮಹಿಳಾ ಚಳವಳಿ

(Pre Independence Phase).

*ಸ್ವಾತಂತ್ರ್ಯ ಪೂರ್ವದ ಮಹಿಳಾ ಚಳವಳಿಯು ಸಮಾಜ ಸುಧಾರಣೆಯ ಭಾಗವಾಗಿತ್ತು. ಸಾಮಾಜಿಕ ನಿಂದನೆ,  ಏಕಾಂಗಿತನ ಅನುಭವಿಸಿದ ವಿಧವೆಯರು, ಸತಿಪದ್ಧತಿಯಿಂದ ಶೋಷಿತರಾದವರು, ಪರದಾ ಪದ್ಧತಿಯಿಂದ ನಲುಗಿದವರು, ವೇಶ್ಯಾವಾಟಿಕೆ ಬಾಲ್ಯವಿವಾಹಕ್ಕೆ ಒಳಗಾದವರ ಪರವಾಗಿ ಹೋರಾಟ ನಡೆಯಿತು. ಸುದೀರ್ಘ ಹೋರಾಟದಿಂದ ಸತಿಪದ್ಧತಿ ನಿಷೇಧ ಕಾಯ್ದೆ 1829ರಲ್ಲಿ ಜಾರಿಯಾಯಿತು.

*ಸಮಾಜ ಸುಧಾರಣಾ ಸಂಘಟನೆಗಳಾಗಿದ್ದ ಬ್ರಹ್ಮಸಮಾಜ, ಆರ್ಯಸಮಾಜದ ಪ್ರಯತ್ನದಿಂದ ಮಹಿಳಾ ಮಂಡಳಿಗಳು ರೂಪುಗೊಂಡವು. ಇದರಿಂದ ಸ್ತ್ರೀಯರ ಸಾಮಾಜೀಕರಣ, ಶಿಕ್ಷಣಕ್ಕೆ ಸೂಕ್ತ ವಾತಾವರಣ ದೊರೆಯಿತು.

*1900ರ ಅವಧಿಯ ಆರಂಭದಲ್ಲಿ ಸ್ತ್ರೀ ಸಂಘಟನೆಗಳು ಭಾರತದ ನಗರ ಕೇಂದ್ರಗಳಲ್ಲಿ ಸ್ಥಾಪನೆಗೊಂಡವು.

*ಮದ್ರಾಸ್‌ನಲ್ಲಿ ಸುಬ್ಬಲಕ್ಷ್ಮಿ ಅಮ್ಮಾಳ್‌ರಿಂದ ಬ್ರಾಹ್ಮಣ ಮಹಿಳಾ ನಿಲಯ ಪ್ರಾರಂಭವಾಯಿತು.

*ಮೈಸೂರಿನಲ್ಲಿ ಮಹಿಳಾ ಸೇವಾ ಸಮಾಜ, ಪುಣೆಯಲ್ಲಿ ಭಗನೀ ಸಮಾಜ, ಬರೋಡದಲ್ಲಿ ಚಾಮನ್‌ಭಾಯಿ ಪ್ರಸೂತಿ ಮತ್ತು ಶಿಶು ಅಭಿವೃದ್ಧಿ ಕೇಂದ್ರ ಆರಂಭಗೊಂಡವು.

*1905ರಲ್ಲಿ ವಿದೇಶ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮಹಿಳಾ ನೇತಾರರಿಗೆ ಕರೆ ನೀಡಲಾಗಿತ್ತು.  

*1930ರ ಅವಧಿಯಲ್ಲಿ ಗಾಂಧೀಜಿಯವರ ಚಾಲನೆ ನೀಡಿದ ಅಸಹಕಾರ - ಚಳವಳಿ ಮತ್ತು ಕಾನೂನು ಭಂಗ ಚಳವಳಿಯಲ್ಲಿ ಅಪಾರ ಸಂಖ್ಯೆ ಸ್ತ್ರೀಯರು ಭಾಗವಹಿಸಿದರು.

*ಸಮಾನತೆ ಮತ್ತು ಸಮಾನ ಅವಕಾಶಗಳಿಗೆ ಅಡ್ಡಿಪಡಿಸುವ ಸಾಮಾಜಿಕ, ಶಾಸನಾತ್ಮಕ  ಅಂಶಗಳನ್ನು ತೊಡೆದು ಹಾಕಬೇಕು ಎಂದು ಈ ಎಲ್ಲಾ ಮಹಿಳಾ ಸಂಘಗಳು ಅಗ್ರಹಿಸಿದವು.

*ಅಖಿಲ ಭಾರತದ ಸ್ತ್ರೀಯರ ಸಮ್ಮೇಳನ (The All India Women’s Conference)-1924ರಲ್ಲಿ ಸ್ಥಾಪನೆಗೊಂಡಿತ್ತು. ಕಾಲಕ್ರಮೇಣ ಈ ಸಂಘಟನೆ ಬೃಹತ್‌ ಸಮಾವೇಶವಾಗಿ ಬೆಳೆಯಿತು. ಸಮಾನ ಹಕ್ಕುಗಳು, ಸಹ ಶಿಕ್ಷಣ, ವಿವಾಹ ವಿಚ್ಚೇದನೆ, ಆಸ್ತಿಯ ಉತ್ತಾರಾಧಿಕಾರದ ಹಕ್ಕುಗಳು, ಆರ್ಥಿಕ ಸಮಾನತೆ, ಗಂಡನ ಆದಾಯದಲ್ಲಿ ಸಮಪಾಲು, ವಿಧವೆಯರಿಗೆ ವೃದ್ಯಾಪ್ಯವೇತನ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಯಿತು. 

ಸ್ವಾತಂತ್ರ್ಯೋತ್ತರ ಮಹಿಳಾ ಚಳವಳಿ

(Post Independence Phase)

*ಅನೇಕ ಮಧ್ಯಮ ವರ್ಗದ ಸ್ತ್ರೀಯರು  ಶೈಕ್ಷಣಿಕ ವಲಯ,  ಸರ್ಕಾರಿ  ಮತ್ತು ವೃತ್ತಿಪರ ಉದ್ಯೋಗಗಳಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡರು. ಇವರ ಸಂಖ್ಯೆ ಕಡಿಮೆಯಾದರೂ ಹೊಸ ಭರವಸೆಯನ್ನು ಸೃಷ್ಟಿಸಿತು.  1960 ಮತ್ತು 1970ರಲ್ಲಿ ಹಲವು ಮಹಿಳಾ ಹೋರಾಟ ನಡೆಯಿತು. ಬೆಲೆ ಏರಿಕೆ, ಭೂ - ಸುಧಾರಣೆ ಮತ್ತು ರೈತರ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. 
ದೇಶದ ವಿವಿಧ ಭಾಗಗಳಿಂದ ಸ್ತ್ರೀಯರು ತಮ್ಮದೇ ಸಂಘಟನೆ ರಚಿಸಿಕೊಂಡು ಕ್ರಿಯಾಶೀಲರಾಗಿದ್ದರು. ಹಲವು ಚಿಂತಕರ ಸೈದ್ಧಾಂತಿಕ ಹಿನ್ನೆಲೆ ಸಂಘಟಿತರಾಗಲು ನೆರವಾಗಿದೆ. ಜ್ಯೋತಿಬಾ ಪುಲೆ, ಗಾಂಧೀಜಿ, ಜಯಪ್ರಕಾಶ್‌ ನಾರಾಯಣ್‌, ಡಾ. ಬಿ.ಆರ್.‌ ಅಂಬೇಡ್ಕರ್‌ ಮತ್ತು ರಾಮಮನೋಹರ್‌ ಲೋಹಿಯಾ.   ಕಮ್ಯೂನಿಸ್ಟ್‌ ಪಕ್ಷಗಳು 1975ರಲ್ಲಿ ಸ್ತ್ರೀ ಸಬಲೀಕರಣಕ್ಕೆ ಹೆಚ್ಚು ಬೆಂಬಲ ನೀಡಿದವು. ಭಾರತದ ಕಮ್ಯೂನಿಸ್ಟ್‌ ಪಕ್ಷವು ತಿರುವಂತಪುರದಲ್ಲಿ ರಾಷ್ಟ್ರೀಯ ಸ್ತ್ರೀಯರ ಶಿಬಿರವನ್ನು ಏರ್ಪಡಿಸಿತ್ತು.

*ಮಹಾರಾಷ್ಟ್ರದ ಶಾಹದ್‌ ಶಿಬಿರದಲ್ಲಿ ಕೌಟುಂಬಿಕ ದೌರ್ಜನ್ಯ ಮತ್ತು ಮದ್ಯಪಾನ ನಿಷೇಧ ಮುಂತಾದ ವಿಷಯಗಳನ್ನು ಚರ್ಚಿಸಲಾಯಿತು. ಹೈದರಾಬಾದ್‌ನ ಪ್ರಗತಿಪರ ಮಹಿಳಾ ಸಂಘಟನೆಗಳು ಲೈಂಗಿಕ ಕಿರುಕುಳ ಮತ್ತು ವರದಕ್ಷಿಣೆ ವಿರುದ್ಧ ಹೋರಾಟವನ್ನು ಆರಂಭಿಸಿದರು. ಸ್ತ್ರೀಯರ ಮತ್ತು ವಿದ್ಯಾರ್ಥಿಗಳ ಅನೌಪಚಾರಿಕ ಚರ್ಚಾಗೋಷ್ಠಿಗಳು ದೇಶದ ವಿವಿಧ ಭಾಗಗಳಲ್ಲಿ ನಡೆಯಿತು. ದೇವದಾಸಿಯರು ಮತ್ತು ಮುಸ್ಲಿಂ ಸ್ತ್ರೀಯರ ಸಭೆ ನಡೆಯಿತು.

*1980ರ ದಶಕದ ಆರಂಭದಲ್ಲಿ ಸ್ತ್ರೀ ಮುಕ್ತಿ ಸಂಘಟನೆಯು ಮುಂಬೈನಲ್ಲಿ ಭಿತ್ತಿಚಿತ್ರ ಪ್ರದರ್ಶನ ಮತ್ತು ಶಿಬಿರಗಳ ಹಮ್ಮಿಕೊಂಡು ಸ್ತ್ರೀಯರ ಬಗ್ಗೆ ಕಾನೂನಿನ ರಕ್ಷಣೆಯ ಜಾಗೃತಿಗಳನ್ನು ಮೂಡಿಸಿತ್ತು.
lಹೈದರಾಬಾದ್‌ನಲ್ಲಿ ಸ್ತ್ರೀ ಶಕ್ತಿ ಸಂಘಟನಾ (Progressive Meeting Organization) ಮತ್ತು ಪುಣೆಯಲ್ಲಿ ಪುರಗಾಮಿ ಸಂಘಟನಾ(Purogami Sanghatana) ರಚನೆಗೆ ಪ್ರಭಾವ ಬೀರಿತ್ತು. ಸ್ತ್ರೀ ಸಂಘರ್ಷ, ದೆಹಲಿಯಲ್ಲಿ ಮಹಿಳಾ ದಕ್ಷತಾ, ಚೆನ್ನೈನಲ್ಲಿ ಪೆಣ್ಣ್‌ ಉರಿಮೈ ಇಯಾಕಾಮ್‌ (Pennurimai Iyyakam)ಬೆಂಗಳೂರಿನಲ್ಲಿ ವಿಮೋಚನಾ -  ಹೊಸದಾಗಿ ಸ್ಥಾಪನೆಗೊಂಡಿರುವ ಸಂಘಟನೆಗಳು.

*1986 ವರದಕ್ಷಿಣೆ ನಿಷೇಧ ಕಾಯ್ದೆಯ ವರದಕ್ಷಿಣೆಯನ್ನು ಸಂಪೂರ್ಣವಾಗಿ ನಿಷೇಧ ಮಾಡುವುದರಲ್ಲಿ ಯಶಸ್ವಿಯಾಗಿಲ್ಲ. ಸಂತ್ರಸ್ತರು ಈ ಕಾಯ್ದೆಯ ಅಡಿಯಲ್ಲಿ ದೂರು ನೀಡಬಹುದು. 

*1988-89ರಿಂದ ಸರ್ಕಾರ ಜಾರಿಗೊಳಿಸಿರುವ ಸಮಗ್ರ ಸಾಕ್ಷರ ಕಾರ್ಯಕ್ರಮ (Total Literacy Programs) ಮೂಲಕ ಸ್ತ್ರೀಯರ ಸಾಮರ್ಥ್ಯ ಸ್ಪಷ್ಟವಾಗಿ ವ್ಯಕ್ತಗೊಂಡಿದೆ.  ವಯಸ್ಕರ ಶಿಕ್ಷಣ ಪ್ರಭಾವದಿಂದ  ಗ್ರಾಮೀಣ ಭಾಗದಲ್ಲಿ ಪಾನ ನಿಷೇಧ ಚಳವಳಿ ನಡೆಯಿತು. ಇದು ದೀಬುಗುಂಟ ಎಂಬ ಗ್ರಾಮದಿಂದ ಆರಂಭಗೊಂಡಿತ್ತು.

ಹೊಸ ಸವಾಲುಗಳು

*ಮಹಿಳಾ ಚಳವಳಿಗೆ ಸುದೀರ್ಘವಾದ ಚರಿತ್ರೆ ಇದ್ದರೂ, ಭಾರತದ ಸ್ತ್ರೀಯರು ಈಗಲೂ ಅಷ್ಟಾಗಿ ಸಕ್ರಿಯರಾಗಿಲ್ಲ

*ಅನಕ್ಷರತೆ ಮತ್ತು ತಾಯ್ತನದ ಮರಣ ಪ್ರಮಾಣ ಮತ್ತು ಸ್ತ್ರೀ - ಪುರುಷರ ಲಿಂಗಾನುಪಾತದ ಅಸಮಾನತೆ ಇನ್ನು ಹಾಗೇ ಉಳಿದುಕೊಂಡಿದೆ. 

*ಸಾರ್ವಜನಿಕ ಜೀವನದಲ್ಲಿ ಸ್ತ್ರೀಯರನ್ನು ಕಡೆಗಣಿಸಲಾಗಿದ್ದು,  ರಾಜಕೀಯ ಮತ್ತು ವಿಧಾನಸಭೆಗಳಲ್ಲಿ ಪ್ರಾತಿನಿಧ್ಯ  ಕಡಿಮೆಯಾಗಿದೆ.

*ತಂತ್ರಜ್ಞಾನ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಆರ್ಥಿಕ ವಲಯಗಳಲ್ಲಿ  ಮಹಿಳೆಯರ ನಿಪುಣತೆ ನಿಷ್ಕ್ರಿಯವಾಗಿದೆ.

*ಹೊಸ ಆರ್ಥಿಕ ನಿಯಮಗಳ ಪ್ರಭಾವದಿಂದ ಸ್ತ್ರೀ ಕೇವಲ ಭೋಗದ ವಸ್ತುವಾಗಿ ಬಿಂಬಿತಗೊಂಡಿದ್ದಾಳೆ.

*ಸ್ತ್ರೀಯರ ಚಳವಳಿಯ ನಾಯಕತ್ವ ಯಾವಾಗಲೂ ಮಧ್ಯಮವರ್ಗದ ಹಿಡಿತದಲ್ಲಿದೆ.
 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು