ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಆಫ್ ಇಂಡಿಯಾಗೆ‌ ಬೇಕಾಗಿದ್ದಾರೆ ಪ್ರೊಬೇಷನರಿ ಆಫೀಸರ್ಸ್‌

Last Updated 22 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಬಹುರಾಷ್ಟ್ರೀಯ ಕಂಪನಿಗಳು, ಕ್ಯಾಂಪಸ್‌ ಸಂದರ್ಶನದ ಮೂಲಕ ಉದ್ಯೋಗಿಗಳನ್ನ ಆಯ್ಕೆ ಮಾಡಿಕೊಂಡು, ಆಯ್ಕೆಯಾದವರಿಗೆ ಹೆಚ್ಚುವರಿ ತರಬೇತಿ ನೀಡಿ, ತಮ್ಮ ಕಂಪನಿಯ ಕೆಲಸಕ್ಕೆ ಬೇಕಾದ ಕೌಶಲವನ್ನು ಕಲಿಸುತ್ತಿವೆ. ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಇಂಥದ್ದೊಂದು ಪ್ರಯತ್ನ ಆರಂಭವಾಗಿದೆ.

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ, ಪ್ರೊಬೇಷನರಿ ಆಫೀಸರ್ಸ್‌ ಹುದ್ದೆಗಳ ನೇಮಕಾತಿ ವೇಳೆ, ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಬ್ಯಾಂಕಿಂಗ್ ಮತ್ತು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ ಕಲಿಸುತ್ತಿದೆ. ಕೋರ್ಸ್ ಪೂರ್ಣಗೊಳಿಸಿದವರನ್ನು ನೇಮಕ ಮಾಡಿಕೊಳ್ಳುತ್ತಿದೆ.

ಪ್ರಸ್ತುತ ಬಿಒಐ, ಜೂನಿಯರ್‌ ಮ್ಯಾನೇಜ್‌ಮೆಂಟ್ ಸ್ಕೇಲ್‌–I (JMGS-I) ನಲ್ಲಿ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆ ದಿನ ಫೆಬ್ರುವರಿ 25. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ವೆಬ್ ಲಿಂಕ್ ಹಾಗೂ ಹೆಚ್ಚಿನ ಮಾಹಿತಿಗಾಗಿ: bankofindia.co.in

ಸ್ಪರ್ಧಾತ್ಮಕ ಪರೀಕ್ಷೆ

ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕಿಂಗ್‌ ಮತ್ತು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ (ಪಿಜಿಡಿಬಿಎಫ್‌) ಪೂರ್ಣಗೊಳಿಸಿದ ನಂತರ, ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಬ್ಯಾಂಕ್ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ(ವಿವರಗಳಿಗೆ ಬಾಕ್ಸ್‌ಗಳನ್ನು ನೋಡಿ). ಕೋರ್ಸ್‌ ಕಲಿಕೆಗೆ ಅಗತ್ಯವಾದ ಶುಲ್ಕವನ್ನು ಶೈಕ್ಷಣಿಕ ಸಾಲದ ರೂಪದಲ್ಲಿ ಬ್ಯಾಂಕ್ ನೀಡುತ್ತದೆ. ಇದರ ಕಲಿಕೆಗೆ ಅಗತ್ಯವಾದ ಪರಿಕರಗಳನ್ನು ಪೂರೈಸಲಿದೆ.

ಯಾವ ಸ್ಟ್ರೀಮ್, ಎಷ್ಟು ಹುದ್ದೆಗಳು :

* ಕ್ರೆಡಿಟ್ ಆಫೀಸರ್ ಇನ್ ಜನರಲ್ ಬ್ಯಾಂಕಿಂಗ್ ಸ್ಟ್ರೀಮ್ : 350 ಹುದ್ದೆಗಳು

* ಐಟಿ (ಮಾಹಿತಿ ತಂತ್ರಜ್ಞಾನ) ಆಫೀಸರ್ ಇನ್ ಸ್ಪೆಷಲಿಸ್ಟ್ ಸ್ಟ್ರೀಮ್: 150 ಹುದ್ದೆಗಳು

ವಯೋಮಿತಿ:

* ಕನಿಷ್ಠ 20 ವರ್ಷ, ಗರಿಷ್ಠ 29 ವರ್ಷ(ಸಾಮಾನ್ಯ ವರ್ಗದವರಿಗೆ)

* ಇತರೆ ಹಿಂದುಳಿದ ವರ್ಗ(Non-creamy layer) 3 ವರ್ಷ, ಎಸ್ ಸಿ /ಎಸ್‌ಟಿ, ಮಾಜಿ ಸೈನಿಕರಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ವಿದ್ಯಾರ್ಹತೆ:

ಜಿಬಿಒ ಕ್ರೆಡಿಟ್‌ ಅಧಿಕಾರಿ – ಜೆಎಂಜಿಎಸ್‌–I : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ, ಪದವಿಯಲ್ಲಿ ಪಡೆದ ಅಂಕಗಳ ಶೇಕಡಾವಾರು ನಮೂದಿಸಬೇಕು.

ಸ್ಪೆಷಲಿಸ್ಟ್ ಐಟಿ ಅಧಿಕಾರಿ JMGS-I: ಐಟಿ(ಮಾಹಿತಿ ತಂತ್ರಜ್ಞಾನ) ಅಧಿಕಾರಿ ಹುದ್ದೆಗೆ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಶನ್ಸ್/ ಇನ್‌ಫರ್ಮೇಷನ್‌ ಟೆಕ್ನಾಲಜಿ/ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್‌ ಆ್ಯಂಡ್ ಟೆಲಿಕಮ್ಯುನಿಕೇಶನ್ಸ್ /ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‌ಸ್ಟ್ರುಮೆಂಟೇಶನ್‌ನಲ್ಲಿ ನಾಲ್ಕು ವರ್ಷಗಳ ಎಂಜಿನಿಯರಿಂಗ್ ಅಥವಾ ತಾಂತ್ರಿಕ ಪದವಿಯನ್ನು ಹೊಂದಿರಬೇಕು.

ಅಥವಾ

ಯಾವುದೇ ವಿಭಾಗದಲ್ಲಿ ಪದವಿ ಮತ್ತು ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್/ ಕಂಪ್ಯೂಟರ್ ಸೈನ್ಸ್/ ಮಾಹಿತಿ ತಂತ್ರಜ್ಞಾನ/ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿ

ಅಥವಾ

ಯಾವುದೇ ವಿಷಯದಲ್ಲಿ ಪದವಿ ಮತ್ತು DOEACC 'B'(Department of Electronics and Accreditation of Computer Courses) ಮಟ್ಟದಲ್ಲಿ ಉತ್ತೀರ್ಣರಾಗಿರಬೇಕು.

* ಎಲ್ಲ ಶೈಕ್ಷಣಿಕ ಹಂತದ ಫಲಿತಾಂಶಗಳು ಫೆಬ್ರುವರಿ 1, 2023ರೊಳಗೆ ಘೋಷಣೆಯಾಗಿರಬೇಕು.

* ವಯಸ್ಸು ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದಂತೆ ನಿಗದಿ ಪಡಿಸಿದ ದಿನಾಂಕ: 01.02.2023 ಒಳಗೆ ಅನ್ವಯವಾಗುವಂತಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಬ್ಯಾಂಕ್ ಆಫ್ ಇಂಡಿಯಾದ ವೆಬ್ ಲಿಂಕ್ / (https://bankofindia.co.in/) ಕರಿಯರ್ ವಿಭಾಗದಲ್ಲಿ ನೀಡಲಾಗಿರುವ ಅಧಿಸೂಚನೆಯ ಆನ್‌ಲೈನ್ ಲಿಂಕ್ ಮೂಲಕ ಅಪೇಕ್ಷಿತ ದಾಖಲೆ ಹಾಗೂ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ:

ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು ಅಧಿಸೂಚನೆ ಪರಿಶೀಲಿಸಿ. ಸಕ್ತಿಯವಾಗಿ ರುವ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ, ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಆ ನಂತರ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲ ವಿವರಗಳನ್ನು ಹಾಗೂ ದಾಖಲೆಗಳನ್ನು ಅಪ್ ಲೋಡ್ ಮಾಡಿ,

ಅರ್ಜಿ ಶುಲ್ಕ: ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ ಅಭ್ಯರ್ಥಿಗಳಿಗೆ ₹850 ಹಾಗೂ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ₹175 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಶುಲ್ಕಪಾವತಿ: ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಪರೀಕ್ಷಾ ಕೇಂದ್ರಗಳು : ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಬೆಳಗಾವಿಯಲ್ಲಿ ಪರೀಕ್ಷೆ ನಡೆಯಲಿದೆ.

ನೇಮಕ ಹೇಗೆ?

ಆನ್‌ಲೈನ್‌ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಎಲ್ಲ ಅಭ್ಯರ್ಥಿಗಳ ವೈಯಕ್ತಿಕ ಸಂದರ್ಶನಗಳನ್ನು ಬ್ಯಾಂಕ್‌ ನಡೆಸುತ್ತದೆ. ಕೆಲವು ಆಯ್ದ ಕೇಂದ್ರಗಳಲ್ಲಿ ಆನ್‌ಲೈನ್‌ ಪರೀಕ್ಷೆಯ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಗುಂಪು ಚರ್ಚೆ ಕೂಡ ನಡೆಸಲಾಗುತ್ತದೆ. ಒಟ್ಟಾರೆ ಅಭ್ಯರ್ಥಿಗಳ ಅಂತಿಮ ಆಯ್ಕೆಯು ಆನ್ ಲೈನ್ ಪರೀಕ್ಷೆ, ವೈಯಕ್ತಿಕ ಸಂದರ್ಶನ ಮತ್ತು ಗುಂಪು ಚರ್ಚೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿರುತ್ತದೆ.

ಪಿಜಿಡಿಬಿಎಫ್‌ ಕೋರ್ಸ್‌ :

ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು, ಬ್ಯಾಂಕ್‌ ಹುದ್ದೆಗೆ ನೇಮಕೊಳ್ಳುವ ಮೊದಲು ಬ್ಯಾಂಕಿಂಗ್‌ ಮತ್ತು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗೆ (ಪಿಜಿಡಿಬಿಎಫ್‌) ಸೇರ್ಪಡೆಗೊಳ್ಳಬೇಕು. ಅದನ್ನು ಪಾಸ್‌ ಮಾಡಿದ ನಂತರ ಬ್ಯಾಂಕ್ ಹುದ್ದೆಗೆ ನೇಮಕ ಮಾಡುತ್ತದೆ.

ಕೋರ್ಸ್ ಶುಲ್ಕ: ಪಿಜಿಡಿಬಿಎಫ್‌ ಕೋರ್ಸ್‌ ಒಂದು ಅವಧಿಯದ್ದಾಗಿದ್ದು, ಕೋರ್ಸ್‌ನ ಶುಲ್ಕ ₹ 3,50,000/- + GST.

ಪ್ರಾತಿನಿಧಿಕ ಹಂಚಿಕೆ, ಆನ್ಲೈನ್ ಪರೀಕ್ಷೆಯ ದಿನಾಂಕ, ಪ್ರತ್ಯೇಕವಾಗಿ ಬ್ಯಾಂಕ್ ಆಫ್ ಇಂಡಿಯಾದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು.

(ಮುಂದಿನ ವಾರ: ಪರೀಕ್ಷಾ ಕ್ರಮ ಹಾಗೂ ಕೋರ್ಸ್ ಕುರಿತ ಮಾಹಿತಿ)

(ಲೇಖಕರು: ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ)

****

ರಾಷ್ಟ್ರೀಕೃತ ಬ್ಯಾಂಕ್ ಮೊದಲ ಪ್ರಯೋಗ

ಕಲಿಕೆ ಹಾಗೂ ಗಳಿಕೆ

ಬ್ಯಾಂಕ್‌ ಉದ್ಯೋಗಕ್ಕೆ ಸೇರುವವರು, ಕೆಲಸ ಒತ್ತಡ ಹಾಗೂ ಕೆಲಸ ವಾತಾವರಣಕ್ಕೆ ಹೊಂದಿಕೊಳ್ಳದೇ ಅಲ್ಪಕಾಲದಲ್ಲೇ ಹುದ್ದೆಗೆ ರಾಜೀನಾಮೆ ನೀಡಿ, ಪರ್ಯಾಯ ಉದ್ಯೋಗದತ್ತ ಮುಖಮಾಡುವಂತದ್ದು ಸಾಮಾನ್ಯವಾಗಿತ್ತು. ಇದನ್ನು ಮನಗಂಡ ಕೆಲವು ಖಾಸಗಿ ಬ್ಯಾಂಕ್‌ಗಳು ತಮ್ಮ ಉದ್ಯೋಗಕ್ಕೆ ಅಗತ್ಯವಿರುವಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ತರಬೇತಿ ನೀಡಿ, ನಂತರ ಕೆಲಸಕ್ಕೆ ನಿಯೋಜಿಸಿ ಕೊಳ್ಳಲಾರಂಭಿಸಿವೆ. ಈ ಕ್ರಮದಿಂದ ಉದ್ಯೋಗಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ, ದೀರ್ಘಕಾಲ ಉದ್ಯೋಗದಲ್ಲೇ ಉಳಿಯುತ್ತಾರೆಂಬುದು ಬ್ಯಾಂಕ್‌ಗಳು ನಂಬಿಕೆ.

ಈಗ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಇಂಥದ್ದೇ ಪ್ರಯೋಗಕ್ಕೆ ಕೈ ಹಾಕಿದೆ. ಇದೇ ಮೊದಲ ಬಾರಿಗೆ ಬಿಒಐ, ಪ್ರೊಬೆಷನರಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ, ಒಂದು ವರ್ಷದ ಬ್ಯಾಂಕಿಂಗ್ ಮತ್ತು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ (ಪಿಜಿಡಿಬಿಎಫ್‌) ತರಬೇತಿ ಕೊಡಿಸಿ, ನಂತರ ಬ್ಯಾಂಕ್‌ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಪ್ರಸ್ತುತ ಪ್ರೊಬೇಷನರಿ ಆಫೀಸರ್ಸ್‌ ಹುದ್ದೆಗಳಿಂದಲೇ ಈ ವಿಧಾನಕ್ಕೆ ಚಾಲನೆ ನೀಡಿದೆ.

ಕೋರ್ಸ್‌ ಕಲಿಯಲು ಬ್ಯಾಂಕ್‌ ಕಾಲೇಜಿನ ವ್ಯವಸ್ಥೆ ಮಾಡುತ್ತದೆ. ಕೋರ್ಸ್‌ಗೆ ಅಗತ್ಯವಾದ ಶುಲ್ಕ ಹಾಗೂ ವಸತಿ ಜವಾಬ್ದಾರಿಯನ್ನೂ ಬ್ಯಾಂಕ್‌ವಹಿಸಿಕೊಳ್ಳುತ್ತದೆ. ಇದರಿಂದ, ಅಭ್ಯರ್ಥಿಗಳಿಗೆ ಕಲಿಕೆಗೆ ಉತ್ತಮ ಶೈಕ್ಷಣಿಕ ಸಂಸ್ಥೆ ಲಭ್ಯವಾಗುತ್ತದೆ. ಬ್ಯಾಂಕ್‌ಗೆ ಉತ್ತಮ ಕೆಲಸಗಾರರು ಸಿಕ್ಕಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT