ಮಂಗಳವಾರ, ಜುಲೈ 27, 2021
25 °C

ಸೂಕ್ತ ಕಾಲೇಜ್‌ ಆಯ್ಕೆಗೆ ಮುನ್ನ..

ಕೋಕಿಲ ಎಂ. ಎಸ್. Updated:

ಅಕ್ಷರ ಗಾತ್ರ : | |

Prajavani

ಶಾಲೆ ಯಾವಾಗ ಪ್ರಾರಂಭವಾಗುತ್ತದೆ ಎನ್ನುವ ಯೋಚನೆಯಲ್ಲೇ ಮುಕ್ಕಾಲು ವರ್ಷ ಕಳೆದರೆ, ಪರೀಕ್ಷೆಯ ಕತೆ ಏನು ಎನ್ನುವ ಆತಂಕದಲ್ಲಿಯೇ ಉಳಿದ ದಿನಗಳನ್ನೂ ಕಳೆದಿದ್ದಾಯಿತು. ಆದರೆ ಈಗ ವಿದ್ಯಾರ್ಥಿಗಳು ಹಾಗೂ ಪೋಷಕರ ಮುಂದಿರುವ ಪ್ರಶ್ನೆ, ಯಾವ ಕಾಲೇಜಿಗೆ ದಾಖಲಾಗಬೇಕು ಅಥವಾ ದಾಖಲಿಸಬೇಕು ಎನ್ನುವುದು. ಸರಿಯಾದ ಕಾಲೇಜಿನ ಆಯ್ಕೆ ಒಂದು ರೀತಿಯಲ್ಲಿ ವಿಜ್ಞಾನವೂ ಹೌದು, ಕಲೆಯೂ ಹೌದು. ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಸೇರುವ ಧಾವಂತ, ಪಿಯುಸಿ ಮುಗಿಸಿದ ಮತ್ತು ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಚಿಂತೆ. ಈ ಹಂತದಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಕಾಲೇಜು ನಿಮ್ಮ ಭವಿಷ್ಯವನ್ನೇ ನಿರ್ಧರಿಸಬಲ್ಲದು. ಈ ನಿಟ್ಟಿನಲ್ಲಿ ಗಮನಿಸಬೇಕಾದ ಒಂದಿಷ್ಟು ಅಂಶಗಳು ಇಲ್ಲಿವೆ.

* ಆಸಕ್ತಿಯ ಕ್ಷೇತ್ರ/ ವಿಷಯ- ಕಾಲೇಜಿನ ಆಯ್ಕೆಗೂ ಮೊದಲು ‘ನಾನು ಏನಾಗ ಬಯಸುತ್ತೇನೆ’ ಎನ್ನುವ ಸ್ಪಷ್ಟತೆ ಇರಬೇಕು. ಆ ನಂತರ ಅದರ ಆಧಾರದ ಮೇಲೆ ಕಾಲೇಜಿನ ಆಯ್ಕೆ ಮಾಡಿಕೊಳ್ಳಬೇಕು. ‘ಮೊದಲು ಕಾಲೇಜಿಗೆ ಸೇರಿಕೊಂಡು ಆಮೇಲೆ ಏನಾಗಬೇಕು ಅನ್ನೋದನ್ನ ನಿರ್ಧಾರ ಮಾಡೋಣ’, ಅನ್ನೋದು ಹಲವು ವಿದ್ಯಾರ್ಥಿಗಳ ನಿಲುವು. ಇದು ಸರಿಯಾದ ಚಿಂತನೆಯಲ್ಲ. ಏಕೆಂದರೆ ನೀವು ಓದುವ ಕಾಲೇಜು ಎಲ್ಲ ರೀತಿಯಲ್ಲೂ ನಿಮ್ಮ ಕನಸಿಗೆ ನೀರೆರೆದು ಪೋಷಿಸುವಂತಿರಬೇಕು.

* ಆಸಕ್ತಿಯ ವಿಷಯದ ಆಯ್ಕೆಯ ನಂತರ ಅಗ್ರ ಶ್ರೇಯಾಂಕದಲ್ಲಿರುವ ಕಾಲೇಜುಗಳ ಪಟ್ಟಿ ಮಾಡಿಕೊಳ್ಳುವುದು ಉತ್ತಮ. ಟಾಪ್ ಟ್ವೆಂಟಿ ಅಥವಾ ಟಾಪ್ ಟೆನ್ ಕಾಲೇಜುಗಳ ಪಟ್ಟಿ ಮಾಡಿ ಅವುಗಳ ವೆಬ್‌ಸೈಟ್ ಮುಖಾಂತರ ಅದರ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ತಿಳಿಯಬೇಕು. ಪಠ್ಯದ ಜೊತೆಗೆ ಇತರೆ ಸೌಲಭ್ಯಗಳಾದ ಸಿಇಟಿ ಕೋಚಿಂಗ್, ಸಂವಹನ ಕೌಶಲಗಳ ಕಾರ್ಯಾಗಾರ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮುಂತಾದವುಗಳೂ ಸೇರಿವೆಯೇ ಎಂಬುದನ್ನು ಗಮನಿಸಿ.

* ಕಾಲೇಜಿನ ವೆಬ್‌ಸೈಟ್‌ಗಳಲ್ಲಿ ಬೋಧಕ ಸಿಬ್ಬಂದಿಯ ಬಗ್ಗೆಯೂ ಮಾಹಿತಿ ಇರುತ್ತದೆ. ಅವರ ಬೋಧನಾ ಅನುಭವ ಮತ್ತು ಪ್ರೊಫೈಲ್‌ ಅನ್ನು ಗಮನಿಸಿ. ಏಕೆಂದರೆ ಹೆಚ್ಚಿನ ಒಡನಾಟ ಇರಬೇಕಿರುವುದೇ ಗುರುಗಳೊಂದಿಗೆ. ನಿಮ್ಮ ಗುರಿ ಸಾಧನೆಗೆ ಒಳ್ಳೆಯ ಗುರುವಿನ ಅವಶ್ಯಕತೆ ಅತಿ ಮುಖ್ಯ.

* ಪದವಿ, ಸ್ನಾತ್ತಕೋತ್ತರ ಪದವಿ ಹಾಗೂ ವೃತ್ತಿಪರ ಕೋರ್ಸ್‌ಗಳಿಗಾಗಿ ಸೇರುವ ವಿದ್ಯಾರ್ಥಿಗಳು ಪ್ರಮುಖವಾಗಿ ಗಮನಿಸಬೇಕಾದ ಮತ್ತೊಂದು ಅಂಶ ಕ್ಯಾಂಪಸ್ ಸೆಲೆಕ್ಷನ್. ಕ್ಯಾಂಪಸ್ ಸೆಲೆಕ್ಷನ್‌ಗೆ ಬರುವ ಕಂಪನಿಗಳ ಹೆಸರುಗಳೂ ವೆಬ್‌ಸೈಟ್ ಅಥವಾ ಬ್ರೋಷರ್‌ಗಳಲ್ಲಿ ಲಭ್ಯವಿರುತ್ತದೆ. ಒಂದು ರೀತಿಯಲ್ಲಿ ಓದುವಾಗಲೇ ಕೆಲಸ ಪಡೆಯುವ ಅವಕಾಶ ನಿಮ್ಮದಾಗುತ್ತದೆ.

* ನಮ್ಮಲ್ಲಿ ಒಬ್ಬರು ಆರಿಸಿದ ದಾರಿಯನ್ನೇ ಅನುಸರಿಸುವವರು ಹೆಚ್ಚು ಜನ. ಸ್ನೇಹಿತರು ಸೇರುತ್ತಿದ್ದಾರೆ ಎನ್ನುವ ಕಾರಣಕ್ಕೋ ಅಥವಾ ಹೊರಗಿನವರು ಹೇಳಿದರು ಎನ್ನುವ ಕಾರಣಕ್ಕೋ ಕಾಲೇಜಿಗೆ ಸೇರುವ ಬದಲು, ಆ ಕಾಲೇಜಿನ ಹಳೆಯ ಮತ್ತು ಹಿರಿಯ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹ ಮಾಡುವುದು ಒಳ್ಳೆಯದು. ಅಲ್ಲಿಯೇ ಓದಿದ/ ಓದುತ್ತಿರುವ ವಿದ್ಯಾರ್ಥಿಗಳಿಗೆ ಅದರ ಆಳ ಮತ್ತು ಅಗಲಗಳು ಚೆನ್ನಾಗಿಯೇ ತಿಳಿದಿರುತ್ತವೆ.

* ಕಲಿಯುವ ವಾತಾವರಣ, ಮೂಲ ಸೌಕರ್ಯ ಮತ್ತು ಗ್ರಂಥಾಲಯವಿರುವ ಕಾಲೇಜ್‌ ಅನ್ನು ಆಯ್ಕೆ ಮಾಡಿ. ಒಂದು ಒಳ್ಳೆಯ ಗ್ರಂಥಾಲಯ ಕಾಲೇಜಿನ ಹೃದಯವಿದ್ದಂತೆ. ಹಾಗೆಯೇ ಒಳ್ಳೆಯ ವಾತಾವರಣ ನಿಮ್ಮನ್ನು ಉತ್ತಮ ಪ್ರಜೆಯಾಗಿಸುತ್ತದೆ.

* ಮನೆಯಿಂದಲೇ ಓಡಾಡುವ ವಿದ್ಯಾರ್ಥಿಗಳಾದರೆ ಹತ್ತರಿಂದ ಹದಿನೈದು ಕಿಲೋಮೀಟರ್‌ಗಳ ಅಂತರವಿರುವ ಕಾಲೇಜ್‌ ಅನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಅನಾವಶ್ಯಕ ಆಯಾಸ ಮತ್ತು ಸಮಯದ ವ್ಯಯವಾಗುವುದು ತಪ್ಪುತ್ತದೆ. ಹಾಸ್ಟೆಲ್‌ಗಳಲ್ಲಿ ಉಳಿಯುವುದಾದರೆ ದೂರದ ಕಾಲೇಜ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಸ್ಟೆಲ್ ಜೀವನವೂ ಬದುಕಿನ ಹೊಸ ಪಾಠಗಳನ್ನು ಕಲಿಸುತ್ತದೆ.

* ಕಾಲೇಜಿನ ಶುಲ್ಕದ ಪರಿಗಣನೆ ಮತ್ತೊಂದು ಪ್ರಮುಖ ಅಂಶ. ಇಷ್ಟವಾಗಿದೆ ಎನ್ನುವ ಕಾರಣಕ್ಕೆ ತಮ್ಮ ಶಕ್ತಿ ಮೀರಿ ಲಕ್ಷಾಂತರ ರೂಪಾಯಿ ಶುಲ್ಕವನ್ನು ಭರಿಸಿ ಸೇರುವ ಅಗತ್ಯವಿಲ್ಲ. ಆರ್ಥಿಕ ಪರಿಸ್ಥಿತಿಯ ಚೌಕಟ್ಟಿನ ಒಳಗೆ ಕಾಲೇಜಿನ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಅನಾವಶ್ಯಕವಾಗಿ ಪೋಷಕರ ಮೇಲೆ ಹಣಕಾಸಿನ ಹೊರೆ ಹೊರಿಸುವುದು ಸರಿಯಲ್ಲ.

* ಕಾಲೇಜಿನ ಆಯ್ಕೆ ಪ್ರಕ್ರಿಯೆ ಒಮ್ಮೆಲೆ ಆಗುವಂಥದ್ದಲ್ಲ. ಒಂದು ಬಾರಿ ಕಾಲೇಜಿಗೆ ಭೇಟಿ ಕೊಟ್ಟು ತಕ್ಷಣ ನಿರ್ಧಾರ ಮಾಡುವಂಥದ್ದೂ ಅಲ್ಲ. ಒಂದಿಷ್ಟು ಸಮಯ ತೆಗೆದುಕೊಂಡು, ಹೋಲಿಕೆ ಮಾಡಿ ನಿರ್ಧರಿಸುವುದು ಒಳ್ಳೆಯದು.

ಕಾಲೇಜು ಯಾವುದೇ ಆದರೂ ಅದರಲ್ಲಿ ಅನುಕೂಲ ಮತ್ತು ಅನಾನುಕೂಲತೆಗಳು ಇದ್ದೇ ಇರುತ್ತವೆ. ಸಾಧ್ಯವಾದಷ್ಟು ನ್ಯೂನತೆಗಳು ಕಡಿಮೆ ಇರುವಂತಹ ಕಾಲೇಜ್ ಅನ್ನು ಆಯ್ಕೆ ಮಾಡಿ. ಒಂದೊಳ್ಳೆ ಕಾಲೇಜಿನ ಆಯ್ಕೆ ಮಾಡಿಕೊಂಡರಷ್ಟೆ ಸಾಲದು, ಉನ್ನತ ಮಟ್ಟಕ್ಕೇರಬೇಕಾದರೆ, ಅಂದುಕೊಂಡದ್ದನ್ನು ಸಾಧಿಸಬೇಕಾದರೆ ನಿಮ್ಮ ಪರಿಶ್ರಮ ಬೇಕೇಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು