ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಹನ’ ಪರೀಕ್ಷೆಗಷ್ಟೇ ಅಲ್ಲ..

ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-10
Last Updated 21 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಂವಹನ ಕುರಿತಾಗಿ ಆರಂಭವಾದ ಈ ಅಂಕಣ ಹತ್ತು ವಾರ ಹರಿದು ಬಂತು. ಸಂವಹನ ಕೇವಲ ಪರೀಕ್ಷೆಗೆ ಗಮನಿಸಬೇಕಾಗಿದ್ದಲ್ಲ. ಇದು ಎಲ್ಲರಿಗೂ ಬೇಕಾದುದು, ಎಲ್ಲಾ ಸಂದರ್ಭಗಳಲ್ಲಿ ಎಚ್ಚರಿಕೆಯಿಂದ ಬಳಸ ಬೇಕಾಗಿದ್ದು. ನಾವು ಜೀವಂತ ಇರುವುದಕ್ಕೆ ಸಂವಹನವೇ ಸಾಕ್ಷಿ. ಅದು ಇಲ್ಲದಿದ್ದರೆ ನಮಗೂ ಕಲ್ಲಿಗೂ ಏನೂ ವ್ಯತ್ಯಾಸವಿರುವುದಿಲ್ಲ.

ಅಷ್ಟೊಂದು ಪ್ರಮುಖವಾಗಿದ್ದರೂ ದಿನ ನಿತ್ಯದ ವ್ಯವಹಾರಗಳಲ್ಲಿ ನಾವು ಸಂವಹನಕ್ಕೆ ಕೊಡಬೇಕಾದ ಪ್ರಾಮುಖ್ಯತೆ ಕೊಡುವುದಿಲ್ಲ. ಪರಿಣಾಮ- ಇದಕ್ಕೆ ನಾವು ಬಹಳ ಬೆಲೆ ತೆರಬೇಕಾಗುತ್ತದೆ. ಮುಖದಲ್ಲಿ ಸದಾ ಮಿನುಗುವ ಒಂದು ನಸುನಗೆ ಅದೆಷ್ಟೋ ಸಮಸ್ಯೆಗಳನ್ನು ಪರಿಹರಿಸಬಲ್ಲದು, ಜಗಳಗಳನ್ನು ತಪ್ಪಿಸಬಲ್ಲದು. ಇದು ಗೊತ್ತಿದ್ದೂ ಜನ ಮುಖ ಗಂಟಿಕ್ಕಿಕೊಂಡು ಇರುತ್ತಾರೆ. ಇನ್ನೊಬ್ಬರನ್ನು ಮಾತನಾಡಿಸಲು ಪ್ರತಿಷ್ಠೆ ಅಡ್ಡಿ ಬರುತ್ತದೆ! ಸಂದೇಶ ರಹಿತರಾಗಿ ಕುಳಿತುಕೊಳ್ಳುವುದರಲ್ಲಿ ದೊಡ್ಡಸ್ತಿಕೆ ತೋರಿಸುತ್ತೇವೆ. ಆದರೆ ಜೀವನದಲ್ಲಿ ನಾವು ಏನು ಮಾಡಿದರೂ, ಮಾಡದಿದ್ದರೂ ಅದು ಸಂದೇಶ ನೀಡುತ್ತದೆ ಎಂಬುದನ್ನು ಮರೆಯುತ್ತೇವೆ.

ಜೀವನದಲ್ಲಿ ಹೇಗೋ ಪರೀಕ್ಷೆಗಳಲ್ಲೂ ಹಾಗೇ, ಸಂವಹನ ನಿರ್ಣಾಯಕವಾಗುತ್ತದೆ ಎಂಬುದನ್ನು ಈ ಹತ್ತು ವಾರಗಳ ಅಂಕಣದಲ್ಲಿ ಸ್ಥಾಪಿಸುವುದು ನನ್ನ ಉದ್ದೇಶವಾಗಿತ್ತು. ಬರವಣಿಗೆಯೇ ಮೊತ್ತಮೊದಲಿಗೆ ನಿಮ್ಮನ್ನು ಪರೀಕ್ಷಕನಿಗೆ ಪರಿಚಯಿಸುವ ಸಾಧನ. ಬರವಣಿಗೆಯ ಅಂದವೇ ಸೆಳೆಯಬಲ್ಲದು ಅಥವಾ ಗೌರವ ಮೂಡಿಸಬಲ್ಲದು. ಅದು ಓದಲು ಅಸಾಧ್ಯವಾಗಿದ್ದರೆ ನೀವು ಎಷ್ಟೇ ಸರಿಯುತ್ತರ ಬರೆದಿದ್ದರೂ ನಿಮ್ಮ ಬಗ್ಗೆ ನಿಕೃಷ್ಟವಾಗಿ ನೋಡಲು ಕಾರಣವಾಗಬಹುದು. ಅದರ ಪರಿಣಾಮವಾಗಿ ಕಡಿಮೆಯಾಗುವ ಒಂದು ಅಂಕ ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ನಿಮ್ಮನ್ನು ಸೋಲಿಸಬಲ್ಲದು ಎಂಬುದನ್ನು ಒತ್ತಿ ಒತ್ತಿ ಹೇಳಿದ್ದೇನೆ. ನಿಮ್ಮ ಅಕ್ಷರ, ನಿಮ್ಮ ಬರವಣಿಗೆಯ ರೀತಿ, ವಾದಸರಣಿ, ಸರಳತೆ, ನೇರವಾಗಿ ಹೇಳುವ ವಿಧಾನ ಇವೆಲ್ಲವೂ ಪರೀಕ್ಷೆಯಲ್ಲಿ ಸರಿಯುತ್ತರ ಗೊತ್ತಿದೆಯೇ ಎಂಬುದನ್ನು ಉಳಿದೂ ಸಂವಹನದ ದೃಷ್ಟಿಯಿಂದ ಗಮನಿಸಲೇಬೇಕಾದ ಅಂಶಗಳು.

ಕೊನೆಗೆ ನಿಮ್ಮ ಸಮಯ ನಿರ್ವಹಣೆ ಕೂಡ ಈ ಪರೀಕ್ಷೆಗಳಲ್ಲಿ ಬಹಳ ನಿರ್ಣಾಯಕ. ಇಪ್ಪತ್ತು ಪ್ರಶ್ನೆಗಳಿಗೆ ಮೂರು ಗಂಟೆಗಳಲ್ಲಿ ಉತ್ತರ ಬರೆಯಬೇಕಾದ ಸಂದರ್ಭದಲ್ಲಿ ಪ್ರತಿಯೊಂದು ಪ್ರಶ್ನೆಗೂ ಸಮಯವಿರಿಸಿ ಕೊಳ್ಳು ವವರು ಬುದ್ಧಿವಂತರು. ಮೊದಲ ಆರು ಉತ್ತರಗಳನ್ನು ಬಹಳ ಚೆನ್ನಾಗಿ ಬರೆದು, ಆಮೇಲೆ ಸಮಯದ ಅಭಾವದಿಂದ ಬೇಕಾಬಿಟ್ಟಿ ಗೀಚುವವರು ಅದಕ್ಕೆ ತಕ್ಕ ಅಂಕಗಳನ್ನೇ ಗಳಿಸುತ್ತಾರೆ. ಅಶಾಬ್ದಿಕ ಸಂವಹನದಲ್ಲಿ ಸಮಯವೂ ಒಂದು ಅಂಶ. ನಿಮ್ಮ ಉತ್ತರವಲ್ಲ, ಈ ರೀತಿಯ ಸಮಯ ನಿರ್ವಹಣೆಯ ವೈಫಲ್ಯವೇ ಬಹಳ ದುಬಾರಿಯಾಗಬಲ್ಲದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತರ ಬರೆಯುವ ಮುನ್ನ ಇವೆಲ್ಲ ಎಚ್ಚರಗಳು ಇರಲಿ.

ಹಾಗೆಯೇ ಕೆಲವು ಪರೀಕ್ಷೆಗಳ ಭಾಗವಾಗುವ ಸಂದರ್ಶನಗಳೂ ಮುಖ್ಯವಾಗಿ ನಿಮ್ಮ ಸಂವಹನದ ಮೇಲೇ ನಿಂತಿವೆ. ಸಂದರ್ಶನ ಪದವೇ ಹೇಳುವಂತೆ ಅದು ಸಂದರ್ಶಕರಿಗೆ ಒಳ್ಳೆಯ ದರ್ಶನವಾಗಬೇಕು, ದುರ್ದಶನವಾ ಗಬಾರದು. ಉತ್ತರಗಳಿಗಿಂತ ನಿಮ್ಮ ಹಾವಭಾವ ಸೇರಿದಂತೆ ಪ್ರತಿಯೊಂದು ನಡೆ ನುಡಿಗೂ ಅರ್ಥವಿರುತ್ತದೆ. ಕೊನೆಗೆ ನೀವು ಏನು ಹೇಳುತ್ತೀರಿ ಎಂಬುದು ಮುಖ್ಯವಾಗದೇ ಹೇಗೆ ಹೇಳುತ್ತೀರಿ ಎಂಬುದೇ ಸಂದರ್ಶಕರ ಮನಸ್ಸಲ್ಲಿ ಉಳಿದುಬಿಡುತ್ತದೆ. ಸಂದರ್ಶನದಲ್ಲಿ ಸರಿಯುತ್ತರ ಕೊಡುವಷ್ಟೇ ಅವನ್ನು ಹೇಳುವ ರೀತಿಯೂ ಆಗಿನ ಹಾವಭಾವಗಳೂ ನಿಮ್ಮನ್ನು ಗೆಲ್ಲಿಸುತ್ತವೆ ಅಥವಾ ಸೋಲಿಸುತ್ತವೆ.

ಈ ಎಲ್ಲ ಕಾರಣದಿಂದ, ಎಲ್ಲರ ಸಂವಹನ ಬದಲಾಗಲಿ, ಹೊಸವರ್ಷಕ್ಕೆ ಪ್ರತಿಯೊಬ್ಬರೂ ಹೊಸ ಮನುಷ್ಯರಾಗಲು ದಾರಿಯಾಗಲಿ.

(ಲೇಖಕರು: ಸಂವಹನ ಪ್ರಾಧ್ಯಾಪಕರು ಮತ್ತು ಕುಲಪತಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ)

‘ಪರೀಕ್ಷೆಗಳಲ್ಲಿ ಸಂವಹನ ಕೌಶಲ‘– ಲೇಖನ ಸರಣಿ ಈ ಸಂಚಿಕೆಗೆ ಮುಕ್ತಾಯವಾಯಿತು. ಈ ಸರಣಿಯ ಲೇಖನಗಳಿಗೆ ಸಂಬಂಧಿಸಿದ ಪ್ರಶ್ನೆಗಳು, ಪ್ರತಿಕ್ರಿಯೆಗಳಿದ್ದರೆ shikshana@prajavani.co.in ಮೇಲ್‌ಗೆ ಕಳುಹಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT