ಬುಧವಾರ, ಜೂನ್ 29, 2022
27 °C

ಪ್ರಶ್ನೋತ್ತರ: ಸ್ವಪ್ರೇರಣೆಯೇ ಸಾಧನೆಗೆ ಸಂಜೀವಿನಿ

ಪ್ರದೀಪ್ Updated:

ಅಕ್ಷರ ಗಾತ್ರ : | |

1. ಬಿಇ ಮುಗಿಸಿ ಕೆಲಸಕ್ಕೆ ಹೋಗದೆ ಸಂಪೂರ್ಣ ಸಮಯವನ್ನು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ಮುಡುಪಿಟ್ಟಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ನೋಡುತ್ತಿದ್ದರೆ, ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವೇ?

-ಧನ್‌ರಾಜ್ ಎನ್.ಪಿ., ಬೆಂಗಳೂರು.

ಉತ್ತರ: ಸಾಧನೆಯ ಹಾದಿಯಲ್ಲಿ, ಆಂತರಿಕ ಮತ್ತು ಬಾಹ್ಯ ಪರಿಸರದ ಅಡಚಣೆಗಳು, ವೈಫಲ್ಯಗಳು, ವಿಳಂಬಗಳು ಸರ್ವೇಸಾಮಾನ್ಯ. ಇಂತಹ ಸವಾಲುಗಳನ್ನು ನಿರೀಕ್ಷಿಸಿ, ಮನಸ್ಸು ಸ್ಥಿತಪ್ರಜ್ಞೆಯಿಂದಿದ್ದರೆ ಸೃಜನಶೀಲ ಚಿಂತನೆ ಸಾಧ್ಯವಾಗಿ, ಸಾಧನೆಯ ಹಾದಿ ಸುಗಮವಾಗುತ್ತದೆ. ಆತಂಕದ ಇಂದಿನ ಪರಿಸ್ಥಿತಿ ತಾತ್ಕಾಲಿಕ; ಹಾಗಾಗಿ ಎದೆಗುಂದದಿರಿ ಮತ್ತು ನಿಮ್ಮ ದೀರ್ಘಾವಧಿ ಕನಸುಗಳಿಂದ ದೂರ ಸರಿಯದಿರಿ. ಹಾಗೂ  ಇನ್ನೂ ಹೆಚ್ಚಿನ ಏಕಾಗ್ರತೆ, ದೃಢತೆ ಮತ್ತು ಸಮಯದ ನಿರ್ವಹಣೆಯಿಂದ ತಯಾರಾಗಿ, ಉತ್ತಮ ರ‍್ಯಾಂಕ್ ಗಳಿಸಲು ಪ್ರಯತ್ನಿಸಿ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಬೇಕಾದರೆ, ಸ್ವಯಂಪ್ರೇರಣೆಯೇ ಸಾಧನೆಗೆ ಸಂಜೀವಿನಿಯಾಗಬೇಕು. ಶುಭಹಾರೈಕೆಗಳು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ:
http://www.vpradeepkumar.com/self-motivation/

**

2. ನಾನು ರಸಾಯನ ಶಾಸ್ತ್ರದಲ್ಲಿ ಎಂಎಸ್‌ಸಿ ಮಾಡಬೇಕು ಎಂದುಕೊಂಡಿದ್ದೇನೆ. ಮುಂದಿನ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.

-ಹೆಸರು, ಊರು ತಿಳಿಸಿಲ್ಲ.

ಉತ್ತರ: ಎಂಎಸ್‌ಸಿ ನಂತರ ಸರ್ಕಾರಿ ಮತ್ತು ಖಾಸಗಿ ವಲಯದ ರಾಸಾಯನಿಕ ಪದಾರ್ಥಗಳು, ಫಾರ್ಮಾ, ರಸಗೊಬ್ಬರ, ಡಿಸ್ಟಿಲರೀಸ್, ಜವಳಿ ಮತ್ತು ವರ್ಣದ್ರವ್ಯ, ಆಹಾರ ಮತ್ತು ಪಾನೀಯ ಸಂಸ್ಕರಣೆ, ಸಂಶೋಧನೆ, ಪ್ರಯೋಗಾಲಯಗಳು, ವಿದ್ಯಾಸಂಸ್ಥೆಗಳು ಸೇರಿದಂತೆ ಅನೇಕ ವಲಯಗಳಲ್ಲಿ ಉದ್ಯೋಗಾವಕಾಶಗಳಿವೆ. ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳನ್ನು ಪಡೆದುಕೊಳ್ಳಬಹುದು.

**

3. ನಾನು ಪತ್ರಿಕೋದ್ಯಮದಲ್ಲಿ ಎಂಎ ಮುಗಿಸಿ 2 ವರ್ಷವಾಗಿದೆ, ಕಳೆದ ವರ್ಷ ‘ನೆಟ್‘, ‘ಕೆಸೆಟ್‘ ಪರೀಕ್ಷೆಗಳನ್ನೂ ಪಾಸ್ ಮಾಡಿರುವೆ. ವಿದೇಶದಲ್ಲಿ ಪಿಎಚ್‌ಡಿ ಮಾಡುವ ಹಂಬಲವಿದೆ. ಜರ್ಮನಿ, ಫ್ರಾನ್ಸ್ ಮತ್ತಿತರ ವಿಶ್ವವಿದ್ಯಾಲಯಗಳ ವೆಬ್‌ಸೈಟ್ ಕೂಡ ವೀಕ್ಷಿಸಿ, ಕೊನೆಗೆ ಮಾರ್ಗದರ್ಶನವಿಲ್ಲದೆ ಕುಳಿತಿರುವೆ. ಮನೆಯಲ್ಲಿ ಬಡತನ; ಫೀಸ್ ಕಟ್ಟಲು ಹಣವಿಲ್ಲ. ಮುಂದೇನು ಮಾಡಬಹುದು, ಸಲಹೆ ನೀಡಿ.

-ಸುನೀಲ, ಬಾಗಲಕೋಟೆ.

ಉತ್ತರ: ನೀವು ನೀಡಿರುವ ಕಿರು ಮಾಹಿತಿಯಿಂದ, ನಿಮ್ಮ ವೃತ್ತಿ ಜೀವನದ ಗುರಿ ತಿಳಿಯುತ್ತಿಲ್ಲ. ಸ್ಪಷ್ಟವಾದ, ಸಾಧಿಸಬಹುದಾದ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳಿಂದ, ಸ್ವಯಂ ಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ನಿಮ್ಮ ಆಸಕ್ತಿ, ಅಭಿರುಚಿಯ ಆಧಾರದ ಮೇಲೆ ವೃತ್ತಿ ಯೋಜನೆಯನ್ನು ಮಾಡಿ, ಅದರಂತೆ ನಿಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸುವುದು ಉತ್ತಮ. ವೃತ್ತಿ ಯೋಜನೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:  https://www.youtube.com/c/EducationalExpertManagementCareerConsultant ಅಗತ್ಯವೆನಿಸಿದರೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

**
4. ನಾನು ದ್ವಿತೀಯ ಪಿಯುಸಿ (ವಾಣಿಜ್ಯ) ಪರೀಕ್ಷೆಯನ್ನು ಚೆನ್ನಾಗಿ ಮಾಡಿದ್ದೇನೆ. ಇಲ್ಲಿಯವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತಿದ್ದು, ಇಂಗ್ಲಿಷ್‌ನಲ್ಲಿ ಆಸಕ್ತಿ ಇರುವುದರಿಂದ, ಬಿಕಾಂ ಪದವಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಮುಂದುವರಿಸಬೇಕೆಂದುಕೊಂಡಿದ್ದೇನೆ. ಇದು ನನಗೆ ಕಷ್ಟಕರವಾಗಬಹುದೇ?

-ಹೆಸರು, ಊರು ತಿಳಿಸಿಲ್ಲ.

ಉತ್ತರ: ಇಂಗ್ಲಿಷ್ ಕಲಿಯುವುದು ಕಷ್ಟವೇನಲ್ಲ. ಇಂಗ್ಲಿಷ್ ಕಲಿಕೆ ಕುರಿತು, ಕಳೆದ ವರ್ಷದ ಇದೇ ಅಂಕಣದ ಡಿಸೆಂಬರ್ 27 ಸಂಚಿಕೆಯ ಪ್ರಶ್ನೋತ್ತರದಲ್ಲಿ ಸುದೀರ್ಘವಾದ ಮಾರ್ಗದರ್ಶನವಿದೆ. ದಯವಿಟ್ಟು ಓದಿಕೊಳ್ಳಿ.

**
5. ಕೆಲಸದ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ಸಮಯವನ್ನು ನಿರ್ವಹಣೆ ಮಾಡುವುದು ಹೇಗೆ?

-ಚೇತನ್ ಕಳ್ಳಿಮನಿ, ಮಹಾಲಿಂಗಪುರ.

ಉತ್ತರ: ವೃತ್ತಿಯಲ್ಲಿದ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವುದು ಅಸಾಧ್ಯವೇನಲ್ಲ. ಸಮಯದ ನಿರ್ವಹಣೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=AnAbzbLsFvM

**

6. ನಾನು ಸಿವಿಲ್ ಎಂಜಿನಿಯರಿಂಗ್ (ಅಂತಿಮ ಸೆಮಿಸ್ಟರ್) ಓದುತ್ತಿದ್ದೇನೆ. ಇನ್ನೆರಡು ತಿಂಗಳಲ್ಲಿ ವ್ಯಾಸಂಗ ಮುಗಿಯುತ್ತದೆ. ನಂತರ, ಯಾವ ಕ್ಷೇತ್ರದಲ್ಲಿ ಬೇಗ ಕೆಲಸ ದೊರಕುತ್ತದೆ? ನನಗೆ ಬ್ಯಾಂಕಿಗ್ ಕೋಚಿಂಗ್ ತೆಗೆದು ಕೊಂಡು, ಆ ಕ್ಷೇತ್ರದಲ್ಲಿ ಹೋಗಬೇಕೆಂದು ಯೋಚನೆಯಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳೇನೆಂಬುದನ್ನು ತಿಳಿಸಿ.

-ಹೆಸರು, ಊರು ತಿಳಿಸಿಲ್ಲ.

ಉತ್ತರ: ನಿಮ್ಮ ಆಸಕ್ತಿಗೆ ಅನುಗುಣವಾಗಿ ಹೆದ್ದಾರಿ ಯೋಜನೆಗಳು, ರಸ್ತೆ ಮತ್ತು ಸೇತುವೆ ನಿರ್ಮಾಣ, ರೈಲ್ವೆ, ಅಣೆಕಟ್ಟು ಮತ್ತು ನೀರಾವರಿ ಯೋಜನೆಗಳು, ನಗರಗಳಲ್ಲಿ ಮೂಲ ಸೌಕರ್ಯ ನಿರ್ಮಾಣ, ವಿದ್ಯುತ್‌ ಉತ್ಪಾದನಾ ಯೋಜನೆಗಳು, ವಸತಿ ಮುಂತಾದ ವಲಯಗಳಲ್ಲಿ ವೃತ್ತಿಯನ್ನು ಅರಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳನ್ನು ಪಡೆದುಕೊಳ್ಳಬಹುದು. ನಮ್ಮ ಅಭಿಪ್ರಾಯದಂತೆ, ನೀವು ಓದಿರುವ ಕೋರ್ಸಿಗೂ ವೃತ್ತಿಗೂ ಸಾಮ್ಯತೆಯಿದ್ದರೆ, ಸಾಧನೆಗೆ ನೆರವಾಗುತ್ತದೆ.

7. ನಾನು ಬಿಎ ಓದುತ್ತಿದ್ದೇನೆ. ನಮ್ಮ ರಾಜ್ಯದಲ್ಲಿ ಲಭ್ಯವಿರುವ ಸ್ಕಾಲರ್‌ಶಿಪ್ ಬಗ್ಗೆ ಮಾಹಿತಿ ನೀಡಿ.

-ಮಲ್ಲಿಕಾರ್ಜುನ ಪೂಜೇರಿ, ಹೊನಗನಹಳ್ಳಿ, ವಿಜಯಪುರ.

ಉತ್ತರ: ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್‌ಶಿಪ್ ಮಾಹಿತಿಗಾಗಿ ಗಮನಿಸಿ:
https://www.buddy4study.com/article/karnataka-scholarships

8. ನಾನು ಡಿಪ್ಲೊಮಾ ಮುಗಿಸಿ, ಪೊಲೀಸ್ ಪರೀಕ್ಷೆಗೆ ಮನೆಯಲ್ಲೇ ಸಂಪೂರ್ಣ ತಯಾರಿ ನಡೆಸುತ್ತಿದ್ದೇನೆ. ಕೋಚಿಂಗ್ ಇರಲೇಬೇಕೇ? ಮನೆಯಲ್ಲೇ ತಯಾರಿ ನಡೆಸಲೇ? ಪಿಎಸ್‌ಐ ನೋಟಿಫಿಕೇಷನ್ ಯಾವಾಗ? ದಯವಿಟ್ಟು ಮಾಹಿತಿ ನೀಡಿ.

-ಹೆಸರು, ಊರು ತಿಳಿಸಿಲ್ಲ.

ಉತ್ತರ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ, ನಿರಂತರ ಅಭ್ಯಾಸ ಮತ್ತು ಮಾರ್ಗದರ್ಶನವಿರಬೇಕು. ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿಯಿದ್ದರೆ ಸ್ವಯಂ ಅಧ್ಯಯನದಿಂದಲೂ ಯಶಸ್ಸನ್ನು ಗಳಿಸಬಹುದು. ಪರೀಕ್ಷೆಗೆ ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ತಯಾರಿ ಮಾಡಬಹುದು. ಯೂಟ್ಯೂಬಿನಲ್ಲಿ ತಯಾರಿ ಕುರಿತ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ.

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸ್ವಯಂ ಅಧ್ಯಯನದಿಂದ ತಯಾರಾಗುವುದೇ ಅಥವಾ ಕೋಚಿಂಗ್ ಸೆಂಟರ್ ಸೇರಬೇಕೇ ಎನ್ನುವುದು ಕ್ಲಿಷ್ಟವಾದ ಆಯ್ಕೆ. ಎರಡೂ ಬಗೆಯ ಪ್ರಯತ್ನಗಳಿಂದ ಇಂತಹ ಪರೀಕ್ಷೆಗಳಲ್ಲಿ ಯಶಸ್ವಿಯಾದವರು ಇರುವುದರಿಂದ ಈ ಗೊಂದಲ ಸಹಜ. ಹಾಗಾಗಿ, ಅಂತಿಮ ನಿರ್ಧಾರ ನಿಮ್ಮದು. ಪಿಎಸ್‌ಐ ನೋಟಿಫಿಕೇಷನ್ ಮತ್ತು ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ksp-recruitment.in/

9. ನಾನು ಬಿಎಸ್‌ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ (ಜೀವವಿಜ್ಞಾನ). ನಾನು ಎನ್‌ಡಿಎ ಪರೀಕ್ಷೆ ಬರೆಯಬಹುದೇ?
ಧನಲಕ್ಷ್ಮಿ, ಮೈಸೂರು.

ಉತ್ತರ: ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ (10+2) ಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಎನ್‌ಡಿಎ ಪರೀಕ್ಷೆಗೆ ಅರ್ಹರಾಗಿರುತ್ತಾರೆ ಮತ್ತು ಗರಿಷ್ಟ 19 ವರ್ಷಗಳ ಒಳಗಿದ್ದಲ್ಲಿ, ಎನ್‌ಡಿಎ ಪರೀಕ್ಷೆ ಬರೆಯಬಹುದು.

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ
ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು