ಗುರುವಾರ , ಆಗಸ್ಟ್ 18, 2022
24 °C

ಭವಿಷ್ಯದ ವೃತ್ತಿಗೆ ಮುಂದುವರಿದ ಶಿಕ್ಷಣ

ಎಸ್‌.ಜಿ. ಕೃಷ್ಣ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನಲ್ಲಿ ವೃತ್ತಿ ಮತ್ತು ತಂತ್ರಜ್ಞಾನದಲ್ಲಿ ಕ್ಷಿಪ್ರವಾಗಿ ಬದಲಾವಣೆಗಳು ಆಗುತ್ತಿವೆ. ಮಕ್ಕಳು ಕೂಡ ಜ್ಞಾನ, ಸಾಮರ್ಥ್ಯದ ಜೊತೆಗೆ ವಿವಿಧ ಕೌಶಲಗಳನ್ನು ಬೆಳೆಸಿಕೊಂಡರೆ ಅವರ ಭವಿಷ್ಯಕ್ಕೆ ಅನುಕೂಲ.

ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿದೆ. ಇಂದಿರುವ ತಂತ್ರಜ್ಞಾನ ಕೆಲವೇ ದಿನಗಳಲ್ಲಿ ಹಳೆಯದಾಗಿ ಆ ಜಾಗದಲ್ಲಿ ಹೊಸದು ಬಂದು ಕೂರುವ ಕಾಲವಿದು. ಇದು ಶಿಕ್ಷಣದ ಮೇಲೆಯೂ ಪರಿಣಾಮ ಬೀರಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ತಂತ್ರಜ್ಞಾನದ ಪರಿಚಯವಾಗಿರುತ್ತದೆ. ಅವರು ಒಂದೊಂದೇ ವಿಷಯವನ್ನು ಕಲಿಯುತ್ತ ಹೋದಂತೆ ಹೊಸ ವಿಷಯಗಳು, ಆವಿಷ್ಕಾರಗಳು ಸೇರ್ಪಡೆಗೊಂಡಿರುತ್ತವೆ. ಆ ಮಗು ದೊಡ್ಡದಾಗಿ ಉದ್ಯೋಗವನ್ನು ಸೇರುವ ಹೊತ್ತಿಗೆ ಕಲಿತ ವಿಷಯಗಳು ಅಷ್ಟೊಂದು ಉಪಯೋಗಕ್ಕೆ ಬರದೆ, ಹೊಸ ಕೌಶಲವನ್ನು ಕಲಿಯಬೇಕಾದ ಸಂದರ್ಭ ಎದುರಾಗಬಹುದು. ಶೇ 50ಕ್ಕಿಂತ ಅಧಿಕ ಮಕ್ಕಳು ದೊಡ್ಡವರಾಗಿ ಉದ್ಯೋಗ ಕ್ಷೇತ್ರಕ್ಕೆ ಕಾಲಿಡುವ ಹೊತ್ತಿಗೆ ಅವರು ಚಿಕ್ಕವರಿದ್ದಾಗ ಇದ್ದ ಉದ್ಯೋಗಗಳು ಕಣ್ಮರೆಯಾಗಿರಲೂಬಹುದು. ಕೃತಕ ಬುದ್ಧಿಮತ್ತೆ (ಎಐ), ರೊಬೊಟಿಕ್ಸ್‌, ಆಟೊಮೇಶನ್‌ ಮೊದಲಾದ ಕ್ಷೇತ್ರಗಳಲ್ಲಿ ಇಂತಹ ಬದಲಾವಣೆ ಕೊಂಚ ಹೆಚ್ಚಾಗಿಯೇ ಇರಬಹುದು. ಹೀಗಾಗಿ ಮಕ್ಕಳನ್ನು ಭವಿಷ್ಯದಲ್ಲಿ ಇಂತಹ ಸವಾಲುಗಳನ್ನು ಎದುರಿಸುವಂತೆ ಸಿದ್ಧಪಡಿಸುವುದು ಶಿಕ್ಷಕರಿಗೆ, ಪೋಷಕರಿಗೆ ಕಷ್ಟದಾಯಕ ಕೆಲಸ ಎಂದೇ ಹೇಳಬಹುದು.

ಸದ್ಯಕ್ಕೆ ಅತ್ಯಂತ ಹೆಚ್ಚಿನ ಮಟ್ಟದ ಕೌಶಲಗಳು ಎಂದು ಕೆಲವನ್ನು ಪಟ್ಟಿ ಮಾಡಲಾಗಿದ್ದರೂ, ಮಕ್ಕಳು ಇದನ್ನು ಕಲಿಯುವುದು ಕಡ್ಡಾಯ ಎಂದು ತಜ್ಞರು ಹೇಳಿದರೂ ಈಗಿನ ಮಕ್ಕಳು ಕಾಲೇಜು ಮೆಟ್ಟಲೇರುವ ಹೊತ್ತಿಗೆ ಅವು ಹಳೆಯದಾಗಬಹುದು. ಇದರಿಂದ ಮಕ್ಕಳಿಗೆ ತಾವು ಮುಂದೆ ಏನನ್ನು ಮಾಡಬಹುದು, ಯಾವ ಕೌಶಲಗಳನ್ನು ಅಳವಡಿಸಿಕೊಂಡರೆ ಎಂತಹದೇ ಪರಿಸ್ಥಿತಿ ಬಂದರೂ ಹೊಂದಿಕೊಳ್ಳಬಹುದು ಎಂಬ ಬಗ್ಗೆ ಅರಿವು ಮೂಡಿಸಬೇಕಾಗುತ್ತದೆ. ಓದು, ಬರವಣಿಗೆ, ಗಣಿತ, ವಿಜ್ಞಾನ, ಭಾಷೆಗಳಲ್ಲಿ ಒಳ್ಳೆಯ ಜ್ಞಾನದ ಜೊತೆಗೆ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಮೌಲ್ಯಮಾಪನ ಮಾಡುವ ಕೌಶಲ, ಮುಂದುವರಿದ ಶಿಕ್ಷಣದ ಬಗ್ಗೆ ತಿಳಿವಳಿಕೆ ಇರಬೇಕಾಗುತ್ತದೆ.

ಸಂಕೀರ್ಣ ಸಮಸ್ಯೆ ಪರಿಹರಿಸುವ ಕೌಶಲ
ಮಕ್ಕಳು ಈ ಕೌಶಲದಲ್ಲಿ ಪರಿಣಿತರಾಗುವುದು ಬಹಳ ಅಗತ್ಯ. ಯಾವುದೇ ಒಂದು ಸಮಸ್ಯೆ ಬಂದಾಗ ಅದು ಹೇಗೆ ಬಂತು, ಅದರ ವಿವಿಧ ಆಯಾಮಗಳೇನು, ಅದಕ್ಕೆ ಪರಿಹಾರ ಹೇಗೆ ಕಂಡು ಹಿಡಿಯುವುದು ಎಂಬ ಚಿಂತನಾ ಮನೋಭಾವ ಮಕ್ಕಳಲ್ಲಿ ಇದ್ದರೆ ಸೂಕ್ತ. ಒಂದು ಉದ್ಯಮದಲ್ಲಿ ಬರುವ ಸಮಸ್ಯೆಗಳನ್ನು ಎಲ್ಲಾ ಕೋನದಿಂದಲೂ ನೋಡಬೇಕಾಗುತ್ತದೆ. ಆ ಸಮಸ್ಯೆ ವಿವಿಧ ಸ್ತರದ ಜನರಿಗೆ ಸಂಬಂಧಿಸಿದ್ದಾದರೆ ಎಲ್ಲರಿಗೂ ಒಪ್ಪುವಂತಹ ಪರಿಹಾರ ಕಂಡು ಹಿಡಿಯಬೇಕಾಗುತ್ತದೆ. ಇದರ ಜೊತೆ ಕ್ರಿಯಾಶೀಲತೆ, ತಿಳಿವಳಿಕೆ ಕೂಡ ಇರಬೇಕಾಗುತ್ತದೆ.

ಹೀಗಾಗಿ ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಸಮಸ್ಯೆ ಪರಿಹರಿಸುವಂತಹ ಕೌಶಲಗಳನ್ನು ಕಲಿಸಬೇಕಾಗುತ್ತದೆ. ಸಮಾಜದಲ್ಲಿ, ಉದ್ಯಮದಲ್ಲಿ ಎದುರಾಗುವಂತಹ ಸಮಸ್ಯೆಗಳ ನಿವಾರಣೆ ಮಾಡಲು ಅಂತಹ ಅವಕಾಶಗಳನ್ನು ಕಲ್ಪಿಸಿಕೊಡಬೇಕಾಗುತ್ತದೆ.

ನಿರ್ಧಾರ ಕೈಗೊಳ್ಳುವ ಕೌಶಲ
ಭವಿಷ್ಯದಲ್ಲಿ ಮಷೀನ್‌ಗಳೇ ಡೇಟಾ ವಿಶ್ಲೇಷಣೆ, ತಾರ್ಕಿಕ ಅಂಶಗಳ ಮೇಲೆ ಮಾಡುಬಹುದಾದಂತಹ ಕಾರ್ಯಗಳನ್ನು ಮಾಡಬಹುದು. ಅಚ್ಚುಕಟ್ಟಾಗಿಯೂ ನಿರ್ವಹಿಸಬಹುದು. ಆದರೆ ನಂತರ ಇದರ ಸಾಧಕ– ಬಾಧಕಗಳನ್ನು ನಿರ್ಧಾರ ಮಾಡುವ ಹೊಣೆ ಮಾನವರದ್ದೇ ಆಗಿರುತ್ತದೆ. ಹೀಗಾಗಿ ಚಿಂತನೆಯಲ್ಲೂ ಕ್ರಿಯಾಶೀಲತೆ ಇರಬೇಕು, ನಿರ್ಧಾರ ಕೈಗೊಳ್ಳುವಾಗ ಸ್ವತಂತ್ರವಾಗಿ ಆಲೋಚಿಸಬೇಕು, ಒಂದು ತೀರ್ಮಾನಕ್ಕೆ ಬಂದರೆ ಅದು ಗುಣಮಟ್ಟದಿಂದ ಕೂಡಿರಬೇಕು.

ಇಂತಹ ನಿರ್ಧಾರಗಳನ್ನು ಕೈಗೊಳ್ಳುವುದನ್ನು ರೂಢಿಸಿಕೊಳ್ಳಬೇಕಾದರೆ ಮಕ್ಕಳಿಗೆ ಅಂತಹ ವಾತಾವರಣ ಕಲ್ಪಿಸಬೇಕಾಗುತ್ತದೆ. ಮಾಹಿತಿಯನ್ನು ಕ್ರೋಢೀಕರಿಸಿ ವಿಶ್ಲೇಷಣೆ ಮಾಡುವಂತಹ, ವಿವರಣೆ ಕೊಡುವಂತಹ ಸಾಮರ್ಥ್ಯ ಬೆಳೆಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕುತೂಹಲದಿಂದ ಉತ್ತಮ ಪ್ರಶ್ನೆಗಳನ್ನು ಕೇಳುವಂತಹ ರೂಢಿ ಬೆಳೆಸಿಕೊಂಡು, ತಾರ್ಕಿಕವಾಗಿ ಚಿಂತನೆ ಮಾಡುವಂತಹ ಮತ್ತು ಪರಿಣಾಮಕಾರಿಯಾಗಿ ಸಂವಹನ ಮಾಡುವಂತಹ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು.

ಮುಂದುವರಿದ ಶಿಕ್ಷಣ
ಸಾಕಷ್ಟು ವರ್ಷಗಳ ಹಿಂದೆಯೇ ಈ ಪದ್ಧತಿಗೆ ಹೆಚ್ಚು ಮಹತ್ವ ನೀಡಲಾಗಿತ್ತು. ಇತ್ತೀಚೆಗಂತೂ ಭವಿಷ್ಯದ ದೃಷ್ಟಿಯಿಂದ ಇದಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಂದರೆ ಕೌಶಲಗಳನ್ನು ಆಗಾಗ ಅಪ್‌ಡೇಟ್‌ ಮಾಡಿಕೊಳ್ಳುತ್ತಲೇ ಇರಬೇಕು. ಬದಲಾಗುತ್ತಿರುವ ತಂತ್ರಜ್ಞಾನ ಇದಕ್ಕೆ ಕಾರಣ. ಕೆಲವು ಕ್ಷೇತ್ರಗಳಲ್ಲಿ ನಿವೃತ್ತಿ ಎಂಬುದಿಲ್ಲ. ಉದ್ಯೋಗಿಗಳು ಬಹು ಕಾಲದವರೆಗೆ ಕ್ರಿಯಾಶೀಲವಾಗಿ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಯಾಗಿದೆ. ಇದು ಯಶಸ್ಸಿಗೆ ಬೇಕಾದ ಸಾಂಪ್ರದಾಯಿಕ ಮಾರ್ಗಗಳಲ್ಲಿ ಕೆಲವು ಬದಲಾವಣೆ ತಂದಿದೆ ಎನ್ನಬಹುದು. ಒಂದು ವಿಷಯದಲ್ಲಿ ಪದವಿ ಪಡೆದರೆ ಸಾಕಾಗುವುದಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಅನುಭವ ಬೇಕಾಗುತ್ತದೆ. ಅಂದರೆ ಕೌಶಲ ಅಭಿವೃದ್ಧಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವುದು, ಇಂಟರ್ನ್‌ಶಿಪ್‌, ಸರ್ಟಿಫಿಕೇಟ್‌ ಕೋರ್ಸ್‌, ಆನ್‌ಲೈನ್‌ ಕೋರ್ಸ್‌ಗಳನ್ನು ಮಾಡಿಕೊಂಡರೆ ಅನುಕೂಲ.

ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಕೌಶಲಗಳಿರುವ ಪಠ್ಯವನ್ನು ರೂಪಿಸಲಾಗಿದ್ದು, ಪೋಷಕರು ಕೂಡ ಉತ್ತೇಜನ ನೀಡುತ್ತಿದ್ದಾರೆ. ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸಲು ಪೋಷಕರೂ ಕೂಡ ಕೈ ಜೋಡಿಸುತ್ತಿದ್ದಾರೆ. ದೈನಂದಿನ ಕೆಲಸಗಳಲ್ಲಿ ಮಕ್ಕಳನ್ನೂ ಸೇರಿಸಿಕೊಂಡು ಸಮಸ್ಯೆ ಪರಿಹರಿಸುವ ಕೌಶಲ ಬೆಳೆಸಲು ನೆರವಾಗುತ್ತಿದ್ದಾರೆ.

ಸಮನ್ವಯ ಸಾಧನೆ
ಸದ್ಯಕ್ಕಂತೂ ಸ್ವತಂತ್ರವಾಗಿ ಕೆಲಸ ಮಾಡುವಂತಹ, ಕಚೇರಿಯಿಂದಾಚೆಯೂ ಕಾರ್ಯ ನಿರ್ವಹಿಸುವಂತಹ ಉದ್ಯೋಗಗಳು ಜಾಸ್ತಿಯಾಗುತ್ತಿವೆ. ಹೀಗಾಗಿ ಪ್ರಪಂಚದಲ್ಲಿ ವಿಭಿನ್ನ ರೀತಿಯ ತಂಡಗಳ ಜೊತೆಗೆ, ಬೇರೆ ಬೇರೆ ಸ್ಥಳಗಳಲ್ಲಿ ಕೆಲಸ ಮಾಡುವಂತಹ ಕೌಶಲದ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ. ಸಹೋದ್ಯೋಗಿಗಳೊಂದಿಗೆ ಸಹಾನುಭೂತಿಯಿಂದ ವರ್ತಿಸುವ, ಬೇರೆಯವರ ಅವಶ್ಯಕತೆಗಳನ್ನು ಗುರುತಿಸಿ ಸಮನ್ವಯ ಸಾಧಿಸುವ ಸಾಮರ್ಥ್ಯ ಇರಬೇಕಾಗುತ್ತದೆ. ಇದರ ಜೊತೆಗೆ ಭಾವನಾತ್ಮಕವಾಗಿಯೂ ಹೊಂದಾಣಿಕೆ ಮಾಡಿಕೊಳ್ಳುವಂತಹ ಮನೋಭಾವ ಬೇಕು. ಇದು ವೃತ್ತಿಪರ ಸಂಬಂಧಕ್ಕೆ ತುಂಬಾ ಅಗತ್ಯ ಎಂದೇ ಹೇಳಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು