ಯಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿ ಇಲ್ಲಿದೆ.
1. ಅಟಲ್ ವಯೋ ಅಭ್ಯುದಯ ಯೋಜನೆ (Atal Vayo Abhyuday Yojana –AVYAY)
ಇದು ಭಾರತದಲ್ಲಿ ವಾಸವಾಗಿರುವ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವಾಲಯ ಆರಂಭಿಸಿರುವ ಯೋಜನೆ(AVYAY). ಈ ಯೋಜನೆಗೆ ರಾಷ್ಟ್ರೀಯ ಹಿರಿಯ ನಾಗರಿಕರ ಕಾರ್ಯನಿರ್ವಹಣಾ ಯೋಜನೆ ಎಂಬ ಹೆಸರಿತ್ತು. ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ಅಟಲ್ ವಯೋ ಅಭ್ಯುದಯ ಯೋಜನೆಯೆಂದು ಮರುನಾಮಕರಣ ಮಾಡಿದೆ.\
ಸಮಾಜಕ್ಕೆ ಹಿರಿಯ ನಾಗರಿಕರು ನೀಡಿರುವ ಅಮೂಲ್ಯ ಕೊಡುಗೆಯನ್ನು ಗುರುತಿಸುವ ಹಾಗೂ ಅವರ ಯೋಗಕ್ಷೇಮವನ್ನು ಕಾಪಾಡುವ ಉದ್ದೇಶ ಈ ಯೋಜನೆಯದ್ದು.
ಹಿರಿಯ ನಾಗರಿಕರಿಗೆ ಸಾಮಾಜಿಕವಾಗಿ ಘನತೆಯ ಜೀವನ ಕಲ್ಪಿಸುವುದು ಈ ಯೋಜನೆಯ ಉದ್ದೇಶಗಳಲ್ಲೊಂದು.
ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರ ವಸತಿಗೃಹಗಳನ್ನು ನಿರ್ವಹಿಸುವ ಸಂಘಟನೆ ಗಳಿಗೆ ಹಣಕಾಸಿನ ಸಹಕಾರವನ್ನು ಕಲ್ಪಿಸಲಾಗುತ್ತದೆ. ಇದಲ್ಲದೆ ಹಿರಿಯ ನಾಗರಿಕರ ವಸತಿಗೃಹಗಳ ನಿರ್ವಹಣೆ, ನಿರಂತರ ಆರೈಕೆ, ಅಗತ್ಯ ಮನರಂಜನಾ ಸವಲತ್ತುಗಳನ್ನು ಕಲ್ಪಿಸುವ ಉದ್ದೇಶವೂ ಇದೆ. ಹಿರಿಯ ನಾಗರಿಕರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತಿರುವ ಸಂಘಟನೆಗಳಿಗೆ ಹಣಕಾಸಿನ ಸಹಕಾರವನ್ನು ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ.
ಈ ಯೋಜನೆಯ ಅಡಿ, ವಯೋ ಸಂಬಂಧಿತ ಅಂಗವೈಕಲ್ಯ ಹಾಗೂ ದೌರ್ಬಲ್ಯಗಳಿಂದ ಬಳಲುತ್ತಿರುವ ಅರ್ಹ ಹಿರಿಯ ನಾಗರಿಕರಿಗೆ ಜೀವನ ನಡೆಸಲು ಬೇಕಾದ ಸಹಕಾರವನ್ನು ಕಲ್ಪಿಸಲಾಗುತ್ತದೆ.
ವಯೋಸಹಜ ಅಂಗವೈಕಲ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ವಿವಿಧ ಆರೋಗ್ಯ ಸವಲತ್ತುಗಳನ್ನು ಕಲ್ಪಿಸುವ ಮೂಲಕ ದೃಷ್ಟಿಹೀನತೆ, ಶ್ರವಣದೋಷ ಹಾಗೂ ಇನ್ನಿತರೆ ಸ್ವರೂಪದ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರವನ್ನೂ ಕಲ್ಪಿಸಲಾಗುತ್ತದೆ.
ಅರ್ಹ ಹಿರಿಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಲು, ಹಿರಿಯ ನಾಗರಿಕರಿಗೆ ಬೇಕಾದ ಮಾಹಿತಿಯನ್ನು ಮುಕ್ತವಾಗಿ ಕಲ್ಪಿಸಲು, ಅಗತ್ಯವಾದ ಭಾವನಾತ್ಮಕ ಸಹಕಾರವನ್ನು ಕಲ್ಪಿಸಲು, ದೌರ್ಜನ್ಯಗಳು ನಡೆದಾಗ ಅವರ ಬೆಂಬಲಕ್ಕೆ ನಿಲ್ಲುವ ಜೊತೆಗೆ, ಹಿರಿಯ ನಾಗರೀಕರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯವಾಣಿಯನ್ನೂ ಆರಂಭಿಸಲಾಗುತ್ತದೆ.
2. ಸಾಗರ ಸಂಪರ್ಕ
ಭಾರತದ ಸಮುದ್ರದ ವಲಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿರುವ ಡಿಫರೆನ್ಶಿಯಲ್ ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಡಿಜಿಎನ್‌ಎಸ್‌ಎಸ್) ಅನ್ನು ಇತ್ತೀಚೆಗೆ ಕೇಂದ್ರ ಕೇಂದ್ರದ ಬಂದರು, ಹಡಗು ನಿರ್ಮಾಣ ಮತ್ತು ಜಲಮಾರ್ಗ ಖಾತೆ ಸಚಿವರು ಉದ್ಘಾಟಿಸಿದರು. ಈ ಡಿಜಿಟಲ್ ವ್ಯವಸ್ಥೆಗ ‘ಸಾಗರ್ ಸಂಪರ್ಕ್’ ಎಂದು ಹೆಸರಿಸಲಾಗಿದೆ.
ಡೈರೆಕ್ಟರ್ ಜನರಲ್ ಆಫ್ ಲೈಟ್ ಹೌಸಸ್ ಆ್ಯಂಡ್ ಲೈಟ್ ಶಿಪ್ ಸಂಸ್ಥೆಯ ಅಡಿಯಲ್ಲಿ ದೇಶದ ಆರು ಸ್ಥಳಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ದೇಶದ ಉದ್ದಕ್ಕೂ ಇರುವ ಎಲ್ಲ ಸಮುದ್ರದ ವಲಯಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾವಿಕರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯು ಕಾರ್ಯನಿರ್ವಹಿಸಲಿದೆ. ಬಂದರು ಪ್ರದೇಶಗಳಲ್ಲಿ ಯಾವುದೇ ರೀತಿಯ ಘರ್ಷಣೆಗಳು ಹಾಗೂ ಅಪಘಾತಗಳು ಉಂಟಾಗದಂತೆ ತಡೆಗಟ್ಟಲು ಈ ವ್ಯವಸ್ಥೆಯು ಹೆಚ್ಚು ಉಪಯುಕ್ತವಾಗಲಿದೆ.
3. ಭಾರತ್ (BHARAT- Banks Heralding Accelerated Rural & Agriculture Transformation)
ಕೃಷಿವಲಯದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ‘ಭಾರತ್’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಅಭಿಯಾನವನ್ನು ಆಗಸ್ಟ್ 15, 2023 ರವರೆಗೆ ಆಯೋಜಿಸಲಾಗಿದ್ದು, ಒಟ್ಟಾರೆಯಾಗಿ ಈ ಅಭಿಯಾನಕ್ಕೆ ₹7,200 ಕೋಟಿ ಹಣವನ್ನು ಮೀಸಲಿಡಲಾಗಿದೆ.
ಈ ಅಭಿಯಾನದ ಅನ್ವಯ ಬ್ಯಾಂಕುಗಳು ಕೃಷಿ ವಲಯದ ಮೂಲಭೂತ ಸವಲತ್ತುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಒಂದು ಲಕ್ಷ ಕೋಟಿ ರೂಗಳನ್ನು ಸಂಗ್ರಹಿಸಲು ಕಾರ್ಯಪ್ರವೃತ್ತವಾಗುತ್ತವೆ. ಸಂಗ್ರಹಣೆಯಾದ ಈ ಮೊತ್ತವನ್ನು ಭಾರತೀಯ ಕೃಷಿ ವಲಯದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಳಸಲಾಗುತ್ತದೆ.
ಕೃಷಿ ಮೂಲಸೌಕರ್ಯ ನಿಧಿ
ಭಾರತ ಸರ್ಕಾರ ಮೇ 2020ರಲ್ಲಿ ಕೃಷಿ ಮೂಲ ಸೌಕರ್ಯ ನಿಧಿಯನ್ನು ಜಾರಿಗೆ ತಂದಿದೆ. ಈ ನಿಧಿಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿರ್ವಹಿಸುತ್ತಿದೆ.
ಕೃಷಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ₹1 ಲಕ್ಷ ಕೋಟಿ ಹಣವನ್ನು ಕೇಂದ್ರ ಸರ್ಕಾರ ಖರ್ಚು ಮಾಡಲಿದ್ದು, ರೈತ ಉತ್ಪಾದಕ ಸಂಸ್ಥೆಗಳು, ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಹಾಗೂ ಕೃಷಿ ವಲಯದಲ್ಲಿ ಸ್ಟಾರ್ಟ್ ಅಪ್‌ಗಳನ್ನು ಆರಂಭಿಸಲು ಹಣಕಾಸಿನ ನೆರವು ಕಲ್ಪಿಸಲಾಗುತ್ತದೆ.
ಈ ಯೋಜನೆಯನ್ವಯ ಮಧ್ಯಮ ಅವಧಿ ಹಾಗೂ ದೀರ್ಘಾವಧಿಯ ಸಾಲದ ಸೌಲಭ್ಯವನ್ನು ಕೇಂದ್ರ ಸರ್ಕಾರದ ವತಿಯಿಂದ ಕಲ್ಪಿಸಲಾಗುತ್ತದೆ. ದಾಸ್ತಾನು ಸಂಗ್ರಹಣಾ ಸವಲತ್ತುಗಳ ನಿರ್ಮಾಣ, ಕಟಾವಿನ ನಂತರ ಆಹಾರಧಾನ್ಯಗಳು ಮತ್ತು ಆಹಾರ ಉತ್ಪನ್ನಗಳನ್ನು ಸಂರಕ್ಷಿಸಲು ಬೇಕಾದ ಶೈತ್ಯಗಾರಗಳ ಸ್ಥಾಪನೆ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳಿಗೆ ಹಣಕಾಸಿನ ನೆರವು ಕಲ್ಪಿಸಲು ಕೇಂದ್ರ ಸರ್ಕಾರ ಸಾಲ ಸೌಲಭ್ಯ ನೀಡಲಿದೆ.
ಈ ಯೋಜನೆಯನ್ನು ಕೇಂದ್ರ ಸರ್ಕಾರ 2032-33 ರ ಹಣಕಾಸು ವರ್ಷದವರೆಗೂ ಮುಂದುವರಿಸಲಿದೆ. ಆರಂಭದಲ್ಲಿ, ಈ ಯೋಜನೆಯನ್ನು 2029-30 ರ ಒಳಗೆ ಪೂರ್ಣಗೊಳಿಸುವ ಉದ್ದೇಶ ಹೊಂದಿತ್ತು. ಆದರೆ ಇತ್ತೀಚಿಗೆ ಕೇಂದ್ರ ಸರ್ಕಾರ ಯೋಜನೆಯನ್ನು ಇನ್ನೂ ಮೂರು ವರ್ಷಗಳ ಅವಧಿಗೆ ವಿಸ್ತರಿಸಿದೆ.
4 ವಿಶ್ವ ಚುನಾವಣಾ ಆಯೋಗಗಳ ಸಂಘಟನೆ
ಭಾರತದ ಮುಖ್ಯ ಚುನಾವಣಾ ಆಯುಕ್ತರು ಇತ್ತೀಚೆಗೆ ವಿಶ್ವ ಚುನಾವಣಾ ಆಯೋಗಗಳ ಸಂಘಟನೆಯ ಕಾರ್ಯಕಾರಿ ಮಂಡಳಿಯ 11ನೇ ಸಮಾವೇಶದಲ್ಲಿ ಭಾಗವಹಿಸಿದ್ದರು.
ಈ ಸಂಘಟನೆಯ ಪ್ರಮುಖ ಉದ್ದೇಶವೇನೆಂದರೆ ವಿವಿಧ ರಾಷ್ಟ್ರಗಳಲ್ಲಿರುವ ಚುನಾವಣಾ ನಿರ್ವಹಣೆಗೆ ಸಂಬಂಧಿಸಿದ ಉತ್ತಮ ಅಂಶಗಳು ಮತ್ತು ಆಚರಣೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು. ಈ ಮೂಲಕ ಪ್ರಜಾತಾಂತ್ರಿಕ ಮೌಲ್ಯಗಳನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಸದಸ್ಯ ರಾಷ್ಟ್ರಗಳು ಕಾರ್ಯನಿರ್ವಹಿಸುತ್ತವೆ.
––
ಮಾಹಿತಿ– ಗುರುಶಂಕರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.