ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್: ಏನೆಲ್ಲ ಕಲಿಯಬಹುದು? ಅವಕಾಶಗಳೇನು?

ಸಿಬಂತಿ ಪದ್ಮನಾಭ ಕೆ. ವಿ ಅವರ ಲೇಖನ
Published 23 ಏಪ್ರಿಲ್ 2023, 23:45 IST
Last Updated 23 ಏಪ್ರಿಲ್ 2023, 23:45 IST
ಅಕ್ಷರ ಗಾತ್ರ

-ಸಿಬಂತಿ ಪದ್ಮನಾಭ ಕೆ. ವಿ

ಇದು ಡಿಜಿಟಲ್ ಕಾಲ. ಮೊಬೈಲ್ ನೆಪದಿಂದ ಪ್ರಪಂಚ ಅಂಗೈಯಲ್ಲೇ ಬಂದು ಕುಳಿತಿದೆ. ದಿನನಿತ್ಯದ ಬಹುತೇಕ ವ್ಯವಹಾರಗಳು ಮೊಬೈಲ್ ಮೂಲಕವೇ ನಡೆಯುತ್ತವೆ. ಹೀಗಾಗಿ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಅದೇ ಡಿಜಿಟಲ್ ಹಾದಿಯನ್ನು ಹಿಡಿಯದೆ ಬೇರೆ ದಾರಿ ಇಲ್ಲ. ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಅವರಿಗೆ ತಲುಪಿಸಲು ಕಂಪನಿಗಳಿಗೆ ಪತ್ರಿಕೆ, ಟಿವಿ, ರೇಡಿಯೊದಂತಹ ಮಾಧ್ಯಮಗಳು ಸಾಕಾಗುವುದಿಲ್ಲ. ಡಿಜಿಟಲ್ ಮಾರ್ಕೆಟಿಂಗ್ ಹೆಚ್ಚು ಪರಿಣಾಮಕಾರಿ ಎಂದು ಎಲ್ಲರಿಗೂ ಅರ್ಥವಾಗಿದೆ. ಆನ್‌ಲೈನ್‌ ಮಾರ್ಕೆಟಿಂಗ್ ಇಂದು ಹೆಚ್ಚು ವ್ಯಾಪಕವಾಗಿರುವುದರಿಂದ ಅದಕ್ಕೆ ಸಂಬಂಧಿಸಿದ ಕೋರ್ಸುಗಳನ್ನು ಮಾಡಿಕೊಳ್ಳುವುದು ಈ ಕಾಲದ ಯುವಕರಿಗೆ ಪ್ರಯೋಜನಕರ.

ಏನಿದು ಕೋರ್ಸ್?

ಇಂಟರ್ನೆಟ್ ಮಾರ್ಕೆಟಿಂಗ್, ಆನ್‌ಲೈನ್‌ ಮಾರ್ಕೆಟಿಂಗ್, ಡಿಜಿಟಲ್ ಮಾರ್ಕೆಟಿಂಗ್ ಎಲ್ಲವೂ ಒಂದೇ ಅರ್ಥದ ಪದಗಳು. ಮೊಬೈಲ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಇತ್ಯಾದಿ ಮಾಧ್ಯಮಗಳ ಮೂಲಕ ಉತ್ಪನ್ನ ಹಾಗೂ ಸೇವೆಗಳ ಜಾಹೀರಾತು ಮಾಡುವುದೇ ಡಿಜಿಟಲ್ ಮಾರ್ಕೆಟಿಂಗ್. ಇದರ ಕೌಶಲಗಳನ್ನು ಕಲಿಸಲು ಇಂದು ಹಲವಾರು ಕೋರ್ಸ್‌ಗಳು ಲಭ್ಯವಿವೆ. ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‌ಗಳನ್ನು  ಕಲಿತವರು ಅದೇ ಕ್ಷೇತ್ರದಲ್ಲಿ ಆಕರ್ಷಕ ವೇತನದ ಉದ್ಯೋಗಗಳನ್ನು ಪಡೆಯಬಹುದು.

ಯಾರು ಮಾಡಬಹುದು?

ಈ ಬಗೆಯ ಕೋರ್ಸ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಇಂತಹದೇ ವಿದ್ಯಾರ್ಹತೆಯುಳ್ಳವರು ಮಾಡಬೇಕೆಂಬ ನಿಯಮವಿಲ್ಲ. ಪಿಯುಸಿ, ಪದವಿ ವ್ಯಾಸಂಗ ಮಾಡುತ್ತಲೇ ಇದನ್ನು ಮಾಡಬಹುದು. ಕೆಲವು ಸಂಸ್ಥೆಗಳು ಶುಲ್ಕ ಅಪೇಕ್ಷಿಸುತ್ತವಾದರೂ, ಉಚಿತವಾಗಿ ದೊರೆಯುವ ಕೋರ್ಸ್‌ಗಳು ಬೇಕಾದಷ್ಟು ಇವೆ. ಇವುಗಳಿಂದ ದೊರೆಯುವ ಕೌಶಲ ಹಾಗೂ ಪ್ರಮಾಣಪತ್ರಗಳು ಸುಲಭವಾಗಿ ಉತ್ತಮ ಉದ್ಯೋಗಗಳನ್ನು ಪಡೆಯಲು ನೆರವಾಗುತ್ತವೆ.

ಏನೆಲ್ಲ ಕಲಿಯಬಹುದು?

ಬೇರೆಬೇರೆ ಹಂತದ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‌ಗಳು ಲಭ್ಯವಿವೆ. ಪ್ರಾಥಮಿಕ, ಮಾಧ್ಯಮಿಕ, ಉನ್ನತ ಹಂತದ ಕೋರ್ಸ್‌ಗಳನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು. ಸರ್ಚ್ ಎಂಜಿನ್ ಆಪ್ಟಿಮೈಸೇಶನ್, ಸರ್ಚ್ ಎಂಜಿನ್ ಮಾರ್ಕೆಟಿಂಗ್, ಕಂಟೆಂಟ್ ಮಾರ್ಕೆಟಿಂಗ್, ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್, ಇ-ಮೇಲ್ ಮಾರ್ಕೆಟಿಂಗ್, ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಹೀಗೆ ವಿವಿಧ ಕೌಶಲಗಳನ್ನು ಕಲಿಸಿಕೊಡಲಾಗುತ್ತದೆ.

ಇಂಟರ್ನೆಟ್‌ನಲ್ಲಿ ಬೇರೆಬೇರೆ ಕಾರಣಗಳಿಗಾಗಿ ಜನರು ಏನನ್ನಾದರೂ ಹುಡುಕುತ್ತಿರುತ್ತಾರೆ. ಒಂದು ಕಂಪನಿಯ ಉತ್ಪನ್ನ, ಸೇವೆ ಅಥವಾ ವೆಬ್‌ಸೈಟ್ ಇಂತಹ ಹುಡುಕಾಟಗಳ ಸಂದರ್ಭದಲ್ಲಿ ಹೆಚ್ಚುಹೆಚ್ಚು ದೊರೆಯುವಂತೆ ಮಾಡುವುದನ್ನು ಸರ್ಚ್ ಎಂಜಿನ್ ಆಪ್ಟಿಮೈಸೇಶನ್ (ಎಸ್‌ಇಒ) ಎನ್ನುತ್ತಾರೆ. ಸರ್ಚ್ ಎಂಜಿನ್ ಮಾರ್ಕೆಟಿಂಗ್ ಇದಕ್ಕೆ ಹತ್ತಿರವಾದ ಇನ್ನೊಂದು ಕೌಶಲ. ಕಂಪನಿ ಅಥವಾ ಅದರ ಉತ್ಪನ್ನಗಳ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ಉಚಿತ ಮಾಹಿತಿ/ಓದಿನ ಸಾಮಗ್ರಿ ಲಭ್ಯವಾಗಿಸುವುದು, ಅವುಗಳನ್ನು ಸಿದ್ಧಪಡಿಸುವುದನ್ನು ಕಂಟೆಂಟ್ ಮಾರ್ಕೆಟಿಂಗ್ ಎನ್ನುತ್ತಾರೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಇತ್ಯಾದಿ ಸೋಷಿಯಲ್ ಮೀಡಿಯಗಳಲ್ಲಿ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು, ಫಾಲೋವರ್‌ಗಳನ್ನು ಹೊಂದಿರುವವರ ಮೂಲಕ ವಿವಿಧ ಉತ್ಪನ್ನಗಳನ್ನು ಜಾಹೀರು ಮಾಡಿಸುವುದನ್ನು ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್ ಎನ್ನುತ್ತಾರೆ. ಈ ಕೌಶಲಗಳನ್ನೆಲ್ಲ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸುಗಳು ಕಲಿಸಿಕೊಡುತ್ತವೆ.

ಸಿದ್ಧತೆ ಹೇಗಿರಬೇಕು?

ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‌ನಲ್ಲಿ ತೊಡಗಿಸಿಕೊಳ್ಳುವವರಿಗೆ ತಕ್ಕಮಟ್ಟಿನ ಕಂಪ್ಯೂಟರ್ ಜ್ಞಾನ ಅಗತ್ಯ. ಕಂಪ್ಯೂಟರ್ ಹಾಗೂ ಇಂಟರ್ನೆಟ್ ಬಳಕೆಯ ಪ್ರಾಥಮಿಕ ತಿಳಿವಳಿಕೆ ಇದ್ದರೆ ಮುಂದೆ ತರಬೇತಿಯ ಸಂದರ್ಭದಲ್ಲಿ ಹೆಚ್ಚಿನ ಕೌಶಲ ಬೆಳೆಸಿಕೊಳ್ಳಬಹುದು. ಮೊಬೈಲ್ ಮೂಲಕವೂ ಕೋರ್ಸ್‌ನ್ನು ಪಡೆಯಬಹುದು. ಇದು ಸಾಮಾನ್ಯವಾಗಿ ಇಂಗ್ಲಿಷ್‌ನಲ್ಲಿ ಇರುವುದರಿಂದ ಇಂಗ್ಲಿಷ್ ಓದಿ ಹಾಗೂ ಕೇಳಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಅಪೇಕ್ಷಣೀಯ. ಕಂಟೆಂಟ್ ರೈಟಿಂಗ್ ಈ ಕ್ಷೇತ್ರದ ಒಂದು ಭಾಗವಾಗಿರುವುದರಿಂದ ಬರವಣಿಗೆ ಕೌಶಲಗಳನ್ನು ಉತ್ತಮಪಡಿಸಿಕೊಳ್ಳುವುದು ಮುಖ್ಯ. ಒಳ್ಳೆಯ ಭಾಷಾ ಕೌಶಲ ಬೆಳೆಸಿಕೊಂಡವರಿಗೆ ಇದರಲ್ಲಿ ಉಜ್ವಲ ಭವಿಷ್ಯವಿದೆ.

⇒(ಲೇಖಕರು: ಸಹಾಯಕ ಪ್ರಾಧ್ಯಾಪಕ, ಸಮೂಹ ಸಂವಹನ ಮತ್ತು ⇒ಪತ್ರಿಕೋದ್ಯಮ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ)

––––

ಎಲ್ಲಿ ಕೋರ್ಸ್‌ಗಳು ಲಭ್ಯ?

l‘ಫಂಡಮೆಂಟಲ್ಸ್ ಆಪ್ ಡಿಜಿಟಲ್ ಮಾರ್ಕೆಟಿಂಗ್’ ಎಂಬ ಕೋರ್ಸ್‌ನ್ನು ಸ್ವತಃ ಗೂಗಲ್ ಕಂಪನಿ ಉಚಿತವಾಗಿ ನೀಡುತ್ತಿದೆ. 26 ಪಾಠಗಳನ್ನು ಹೊಂದಿರುವ 40 ಗಂಟೆಗಳ ಈ ಕೋರ್ಸ್‌ ಆರಂಭಿಕ ಹಂತದಲ್ಲಿರುವವರಿಗೆ ಸೂಕ್ತವಾಗಿದೆ. ಕೋರ್ಸ್‌ ಕುರಿತ ಮಾಹಿತಿಗೆ ಈ ಲಿಂಕ್‌ ಕ್ಲಿಕ್ ಮಾಡಿ: https://learndigital.withgoogle.com/  

l‘ಮಾಸ್ಟರ್ ಡಿಜಿಟಲ್ ಮಾರ್ಕೆಟಿಂಗ್’ ಶೀರ್ಷಿಕೆಯಡಿಯಲ್ಲಿ ಹತ್ತು ಸರಳ ಕೋರ್ಸ್‌ಗಳನ್ನು ಲಿಂಕ್ಡ್ಇನ್ ಒದಗಿಸುತ್ತಿದೆ. ಇವುಗಳಲ್ಲಿ ಕೆಲವು ಉಚಿತವಾಗಿಯೂ ಲಭ್ಯವಿವೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://www.linkedin.com/learning/paths/

l ಡಿಜಿಟಲ್ ಮಾರ್ಕೆಟಿಂಗ್ ಕೌಶಲಗಳನ್ನು ಕಲಿಸುವ ಹತ್ತಾರು ಕೋರ್ಸ್‌ಗಳನ್ನು ಇನ್ಫೊಸಿಸ್  ಸ್ಬ್ರಿಂಗ್‌ಬೋರ್ಡ್‌ ಉಚಿತವಾಗಿ ಒದಗಿಸುತ್ತದೆ. ವಿಡಿಯೊ ಉಪನ್ಯಾಸಗಳು, ಸಿದ್ಧಪಾಠಗಳ ಮೂಲಕ ಇಲ್ಲಿ ತರಬೇತಿ ನಡೆಯುತ್ತದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ; https://infyspringboard.onwingspan.com/web/en/  

l ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಆನ್‌ಲೈನ್ ಶಿಕ್ಷಣವನ್ನು ಪ್ರೋತ್ಸಾಹಿಸುವುದಕ್ಕಾಗಿ ‘ಸ್ವಯಂ’ ಎಂಬ ಜಾಲತಾಣವನ್ನು ಅಭಿವೃದ್ಧಿಪಡಿಸಿದೆ. ನೂರಾರು ಉಚಿತ ಕೋರ್ಸ್‌ಗಳ ಆಗರವೇ ಇಲ್ಲಿದೆ. ವಿವಿಧ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‌ಗಳೂ ಇದರಲ್ಲಿ ಸೇರಿವೆ. ವಿವರಗಳಿಗಾಗಿ ‌ಇಲ್ಲಿ
ನೋಡಿ: https://swayam.gov.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT