ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸಿಎ ನಂತರ ಕೆಪಿಎಸ್ಸಿ ಬರೆಯಬಹುದೇ?

Last Updated 26 ಜೂನ್ 2022, 19:30 IST
ಅಕ್ಷರ ಗಾತ್ರ

1. ಸಿಎ (ಚಾರ್ಟೆಡ್ ಅಕೌಂಟೆಂಟ್‌) ಪರೀಕ್ಷೆ ಮುಗಿಸಿದವರು ಕೆಪಿಎಸ್‌ಸಿ ಪರೀಕ್ಷೆ ಬರೆಯಬಹುದೇ?

ಹೆಸರು ಊರು ತಿಳಿಸಿಲ್ಲ

ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಈ ವೃತ್ತಿಪರ ಪದವಿಯ ಆಧಾರದ ಮೇಲೆ ನಾಗರಿಕ ಸೇವಾ ಪರೀಕ್ಷೆಗೆ ಪ್ರವೇಶ ಪಡೆಯಲು ಅರ್ಹತೆ ಸಿಗುತ್ತದೆ.

2. ನಾನು ಎಂಎ, ಬಿ.ಇಡಿ ಮುಗಿಸಿದ್ದೇನೆ. ಬಿ.ಇಡಿಯಲ್ಲಿ ಕನ್ನಡ ಮತ್ತು ಸಮಾಜ ವಿಜ್ಞಾನ ನನ್ನ ಐಚ್ಛಿಕ ವಿಷಯಗಳು. ಆದರೆ ಪದವಿ ಹಂತದಲ್ಲಿ ಎಚ್‌ಇಪಿ ನನ್ನ ವಿಷಯವಾಗಿತ್ತು. ಈಗ ನನಗೆ ಶಾಲಾ ಹಂತದಲ್ಲಿ ಕನ್ನಡ ಬೋಧನೆಗೆ ಅವಕಾಶವಿಲ್ಲವಾಗಿದೆ. ಕನ್ನಡ ವಿಷಯ ಬೋಧನೆಗೆ ಸಾಹಿತ್ಯ ಪರಿಷತ್ತಿನ ಕಾವ, ಜಾಣ, ರತ್ನ ಪರೀಕ್ಷೆಯು ಸಮಾನವಾದುದ್ದೇ? ದಯವಿಟ್ಟು ಗೊಂದಲವನ್ನು ಪರಿಹರಿಸಿ.

ಪ್ರವೀಣ್ ಕುಮಾರ್ ಎನ್.ಎಂ., ಮಳವಳ್ಳಿ, ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಕಾವ ಅಥವಾ ಜಾಣ ಅಥವಾ ರತ್ನ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಕರ್ನಾಟಕ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ ಇಲಾಖೆಯಿಂದ ಗೊತ್ತು ಮಾಡಿರುವ ಇಲಾಖಾ ಭಾಷಾ ಪರೀಕ್ಷೆಯಿಂದ ವಿನಾಯಿತಿ ದೊರೆಯುತ್ತದೆ. ನಮಗಿರುವ ಮಾಹಿತಿಯಂತೆ, ಶಾಲಾ ಹಂತದಲ್ಲಿ ಕನ್ನಡ ಬೋಧಿಸುವ ಶಿಕ್ಷಕರ ನೇಮಕಾತಿಗೆ ಪದವಿ ಹಂತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಓದಿರಬೇಕು. ಹೆಚ್ಚಿನ ಮಾಹಿತಿಗಾಗಿ, ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ ಅಥವಾ ಶಿಕ್ಷಣ ಇಲಾಖೆಯ ದಿನಾಂಕ 23/02/2022 ರ ಸುತ್ತೋಲೆಯನ್ನು ಗಮನಿಸಿ: https://www.schooleducation.kar.nic.in/html/circularsgen.html

3. ನಾನು ಅಂತಿಮ ವರ್ಷದ ಎಂಎಸ್ಸಿ (ಗಣಿತ) ಓದುತ್ತಿದ್ದೇನೆ. ನನಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಆಸೆ. ಕೆಲವರು, ನಿನಗೆ ಶಿಕ್ಷಕಿ ಹೊರತು ಬೇರೆ ಯಾವ ಕೆಲಸ ಸಿಗುವುದಿಲ್ಲ ಎಂದು ಹೇಳುತ್ತಾರೆ. ಈ ಪದವಿ ನಂತರ ಸಿಗಬಹುದಾದ ಹುದ್ದೆಗಳ ಬಗ್ಗೆ ತಿಳಿಸಿ. ನಾನು ಬೇರೆ ಕೋರ್ಸ್ ಮಾಡಬೇಕೇ?

ಕವನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಂಗಳೂರು

ಎಂಎಸ್ಸಿ (ಗಣಿತ) ಕೋರ್ಸ್ ಮಾಡುವಾಗ ನಿಮ್ಮಲ್ಲಿ ಐಟಿ ಕ್ಷೇತ್ರದ ವೃತ್ತಿಪರ ಕೌಶಲಗಳಾದ ವಿಶ್ಲೇಷಣಾತ್ಮಕ ಕೌಶಲ, ಸಂಖ್ಯಾಶಾಸ್ತ್ರ, ಕ್ರಮಾವಳಿ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ ಇತ್ಯಾದಿಗಳು ಅಭಿವೃದ್ಧಿಯಾಗುತ್ತವೆ. ಹಾಗಾಗಿ, ಎಂ.ಎಸ್ಸಿ ಪದವಿ ಮುಗಿಸಿದ ಮೇಲೆ ಐಟಿ ಕ್ಷೇತ್ರದಲ್ಲಿ ಸಾಫ್ಟ್‌ವೇರ್‌ ಡೆವಲಪರ್, ಡೇಟಾ ಸೈಂಟಿಸ್ಟ್, ಡೇಟಾ ಅನಲಿಸ್ಟ್, ಆಪರೇಷನ್ಸ್ ರಿಸರ್ಚ್ ಅನಲಿಸ್ಟ್ ಮುಂತಾದ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಅಗತ್ಯವಿದ್ದರೆ, ಈ ವಿಷಯಗಳಲ್ಲಿ ಅಲ್ಪಾವಧಿ ಡಿಪ್ಲೊಮಾ/ ಸರ್ಟಿಫಿಕೆಟ್ ಕೋರ್ಸ್ ಮಾಡಬಹುದು.

4. ನಾನು ಪಿಯುಸಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದೇನೆ. ಮುಂದೆ ಯಾವ ಪದವಿ ಮಾಡಬೇಕೆಂದು ತಿಳಿಯುತ್ತಿಲ್ಲ. ಎಲ್‌ಎಲ್‌ಬಿ ಮತ್ತು ಇನ್ನಿತರ ಪದವಿಗಳ ಬಗ್ಗೆ ಮಾಹಿತಿ ತಿಳಿಸಿ.

ಆನಂದ, ಊರು ತಿಳಿಸಿಲ್ಲ

ಪಿಯುಸಿ (ವಾಣಿಜ್ಯ ನಂತರ ಮಾಡಬಹುದಾದ ಕೋರ್ಸ್‌ಗಳೆಂದರೆ ಸಿಎ (ಫೌಂಡೇಷನ್ ಕೋರ್ಸ್ ಮುಖಾಂತರ), ಬಿಕಾಂ (ಜನರಲ್, ಆನರ್ಸ್, ಬ್ಯಾಂಕಿಂಗ್, ಫೈನಾನ್ಸ್, ಟೂರಿಸಮ್, ಪ್ರೊಫೆಷನಲ್, ಇಂಟರ್‌ನ್ಯಾಷನಲ್ ಫೈನಾನ್ಸ್ ಇತ್ಯಾದಿ), ಬಿಬಿಎ, ಬಿಸಿಎ, ಬಿಎಸ್‌ಡಬ್ಲ್ಯು, ಎಸಿಎಸ್, ಸಿಎಂಎ, 5 ವರ್ಷದ ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಇತ್ಯಾದಿ. ಹಾಗಾಗಿ, ನಿಮ್ಮ ಆಸಕ್ತಿ, ಸ್ವಾಭಾವಿಕ ಪ್ರತಿಭೆ ಮತ್ತು ವೃತ್ತಿ ಯೋಜನೆಯ ಅನುಸಾರ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/watch?v=RW77sMi-ijY

5. ನನಗೆ ದ್ವಿತೀಯ ಪಿಯುಸಿ (ವಿಜ್ಞಾನ) ಯಲ್ಲಿ ಶೇ 77.16 ರಷ್ಟು ಅಂಕ ಬಂದಿದೆ. ಮುಂದೆ ಪದವಿಯಲ್ಲಿ ಪತ್ರಿಕೋದ್ಯಮ ಓದುವ ಆಸಕ್ತಿ ಇದೆ. ಆದರೆ, ಕೆಲವರು ಈ ಕ್ಷೇತ್ರದಲ್ಲಿ ಭವಿಷ್ಯವಿಲ್ಲ; ಈ ಪದವಿ ಕೇವಲ ಕಲಾ ವಿಭಾಗದಲ್ಲಿ ಸಾಮಾನ್ಯವಾಗಿ ತೇರ್ಗಡೆ ಹೊಂದಿದವರಿಗೆ ಮಾತ್ರ ಎನ್ನುತ್ತಿದ್ದಾರೆ. ಹಾಗಾಗಿ ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ನನ್ನ ಅನುಮಾನಗಳನ್ನು ದಯವಿಟ್ಟು ಬಗೆಹರಿಸಿ ಮತ್ತು ಈ ವಿಭಾಗದಲ್ಲಿ ಮುಂದೆ ಸಿಗಬಹುದಾದ ಆಯ್ಕೆಗಳ ಬಗ್ಗೆ ತಿಳಿಸಿ.

ಎ.ಬಿ. ಪ್ರತಿಭಾ ಕುಮಾರಿ, ಮುದ್ದೇಬಿಹಾಳ, ವಿಜಯಪುರ

ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಪಿಯುಸಿ ನಂತರ ಜರ್ನಲಿಸಮ್ ಮತ್ತು ಮಾಸ್ ಕಮ್ಯೂನಿಕೇಷನ್ ಪದವಿಯನ್ನು ಮಾಡುವುದರ ಜೊತೆಗೆ ವೃತ್ತಿ ಸಂಬಂಧಿತ ಕೌಶಲಗಳಾದ ಸಂವಹನ (ಓದುವಿಕೆ, ಬರವಣಿಗೆ, ಮಾತುಗಾರಿಕೆ, ನಿರೂಪಣೆ ಇತ್ಯಾದಿ), ಭಾಷಾ ಪರಿಣತಿ, ವಿಶ್ಲೇಷಣಾತ್ಮಕ ಕೌಶಲ, ದಿಟ್ಟತನ, ಸಮಯದ ನಿರ್ವಹಣೆ ಇತ್ಯಾದಿಗಳನ್ನೂ ಬೆಳೆಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಒಪ್ಪಿಕೊಳ್ಳುವ ಮುನ್ನ ತನಿಖೆ ಅಥವಾ ಪರಿಶೋಧನೆ ಮಾಡುವ ಮನಸ್ಥಿತಿ ಇರಬೇಕು. ಇದಲ್ಲದೆ, ಬೇರೆ ವೃತ್ತಿಗಳಿಗೆ ಹೋಲಿಸಿದರೆ ಪತ್ರಕರ್ತರಿಗೆ ಹೆಚ್ಚಿನ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿರುವುದು ಸಹಜ; ಹಾಗಾಗಿ, ಪ್ರಾಮಾಣಿಕತೆ, ನಿಷ್ಠೆ, ಬದ್ದತೆಯನ್ನು ನಿಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು.

ಅತ್ಯಂತ ವಿಸ್ತಾರವಾದ ಈ ಕ್ಷೇತ್ರದಲ್ಲಿ ಮುದ್ರಣ ಮಾಧ್ಯಮ (ದಿನ ಪತ್ರಿಕೆಗಳು, ನಿಯತಕಾಲಿಕೆಗಳು ಇತ್ಯಾದಿ), ಟೆಲಿವಿಷನ್, ರೇಡಿಯೊ, ಸಾಮಾಜಿಕ ಮಾಧ್ಯಮ, ವೆಬ್‌ಸೈಟ್ಸ್, ಬ್ಲಾಗ್ಸ್, ವಿಡಿಯೊ, ಪಾಡ್‌ಕಾಸ್ಟ್ ಇತ್ಯಾದಿ ವಲಯಗಳಲ್ಲಿದ್ದು, ನಿಮ್ಮ ಆಸಕ್ತಿ, ಅಭಿರುಚಿಯಂತೆ ಆಯ್ಕೆಯನ್ನು ಮಾಡಿಕೊಳ್ಳಬಹುದು. ಹೆಚ್ಚಿನ ತಜ್ಞತೆಗಾಗಿ, ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ/ಸ್ನಾತಕೋತ್ತರ ಕೋರ್ಸ್ ಮಾಡಬಹುದು.

ಕಳೆದೆರಡು ವರ್ಷಗಳಲ್ಲಿ, ಕೋವಿಡ್ ಪಿಡುಗಿನ ಕಾರಣದಿಂದ, ಸ್ವಲ್ಪ ಮಟ್ಟಿಗಿನ ಹಿನ್ನಡೆಯನ್ನು ಕಂಡಿದ್ದ ಮಾಧ್ಯಮ ಕ್ಷೇತ್ರ, ಈಗ ಮತ್ತೆ ಪ್ರಗತಿಯ ಹಾದಿಯಲ್ಲಿದೆ. ಹಾಗಾಗಿ, ನಿಮಗೆ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆ ಇದ್ದಲ್ಲಿ, ಈ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

6. ನಾನು ಬಿಎಸ್ಸಿ ಮುಗಿಸಿದ್ದೀನಿ. ಮುಂದೆ ಎಂಬಿಎ ಮಾಡಬೇಕು ಅಂದುಕೊಂಡಿದ್ದೇನೆ. ಎಂಬಿಎ ಮಾಡಲು ಯಾವ ಕಾಲೇಜು ಸೂಕ್ತ? ಜೊತೆಗೆ ಇದಕ್ಕಾಗಿ ಯಾವ ಪ್ರವೇಶ ಪರೀಕ್ಷೆ ಬರೆಯಬೇಕು? ಎಂಬಿಎ ಬಗ್ಗೆ ಮಾಹಿತಿ ನೀಡಿ.

ಹೆಸರು ಊರು ತಿಳಿಸಿಲ್ಲ.

ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್‌ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸ್‌ನಲ್ಲಿ ನೀಡಲಾಗುತ್ತದೆ. ಇದಲ್ಲದೆ, ಉದ್ಯಮ ಗಳಲ್ಲಿ ಪ್ರಾಯೋಗಿಕವಾದ ತರಬೇತಿಯನ್ನು ಪ್ರಾಜೆಕ್ಟ್‌ಗಳ ಮುಖಾಂತರ ನೀಡುವುದರಿಂದ ಕಲಿಕೆ ಪರಿಪೂರ್ಣವಾಗುತ್ತದೆ.ನಿಮ್ಮ ನೈಪುಣ್ಯ ಮತ್ತು ಚತುರತೆ ವರ್ಧಿಸಿ, ಯಾವುದೇ ಕೆಲಸವನ್ನು ನಿಭಾಯಿಸುವ ಆತ್ಮವಿಶ್ವಾಸ ಬೆಳೆಯುತ್ತದೆ. ಒಟ್ಟಾರೆ, ಎಂಬಿಎ ಕಲಿಕೆಯ ವೈವಿಧ್ಯತೆಗಳಿಂದ ನಿಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಆದ್ದರಿಂದಲೇ, ಎಂಬಿಎ ಕೋರ್ಸ್ ಜನಪ್ರಿಯ. ನಿಮ್ಮ ಆಸಕ್ತಿ, ಅಭಿರುಚಿಗೆ ಅನುಗುಣವಾಗಿ ಎಂಬಿಎ ಕೋರ್ಸ್ ಅನ್ನು ಮಾರುಕಟ್ಟೆಯ ನಿರ್ವಹಣೆ, ಹಣಕಾಸು, ಮಾನವ ಸಂಪನ್ಮೂಲದ ನಿರ್ವಹಣೆ, ಉತ್ಪಾದನೆ, ಲಾಜಿಸ್ಟಿಕ್ಸ್ ಇತ್ಯಾದಿ ವರ್ಗೀಕರಣಗಳಲ್ಲಿ ಮಾಡಬಹುದು.

ನಮ್ಮ ದೇಶದಲ್ಲಿ ಸುಮಾರು 5000ಕ್ಕೂ ಹೆಚ್ಚಿನ ಎಂಬಿಎ ಕಾಲೇಜುಗಳಿದ್ದು, ಸಿಎಟಿ, ಪಿಜಿಸಿಯಿಟಿ, ಮ್ಯಾಟ್ ಇತ್ಯಾದಿ ಪರೀಕ್ಷೆಗಳ ಮೂಲಕ ಪ್ರವೇಶದ ಆಯ್ಕೆಯಾಗುತ್ತದೆ. ಕ್ಯಾಂಪಸ್ ನೇಮಕಾತಿ ಮತ್ತು ಸಂಪನ್ಮೂಲಗಳನ್ನು ಪರಿಗಣಿಸಿ ಉತ್ತಮ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದು. ಉತ್ತಮ ಕಾಲೇಜುಗಳ ಆಯ್ಕೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

– ವಿ. ಪ್ರದೀಪ್ ಕುಮಾರ್

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT