ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಮಂತ ಅವಕಾಶಗಳ ತಾಣ ವಿಎಫ್‌ಎಕ್ಸ್

Published 20 ಆಗಸ್ಟ್ 2023, 23:30 IST
Last Updated 20 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಮನರಂಜನಾ ಕ್ಷೇತ್ರ ಆನ್‌ಲೈನ್ ವೇದಿಕೆ ಏರಿದ ಮೇಲೆ ವಿಶ್ಯುವೆಲ್ ಎಫೆಕ್ಟ್ಸ್(ವಿಎಫ್‌ಎಕ್ಸ್) ಹಾಗೂ ಅನಿಮೇಶನ್ ರಂಗ ದೊಡ್ಡಮಟ್ಟದಲ್ಲಿ ಬೆಳೆಯಿತು. ಒಟಿಟಿ ಕ್ಷೇತ್ರಕ್ಕೆ(over the top) ಬೇಡಿಕೆ ಹೆಚ್ಚಿದ ಮೇಲೆ ವಿಎಫ್‌ಎಕ್ಸ್ ಉದ್ಯಮ ಹಲವು ಪಟ್ಟುಗಳಲ್ಲಿ ವಿಸ್ತರಿಸಿದೆ. ಹೀಗಾಗಿ ವಿಎಫ್‌ಎಕ್ಸ್ ತಂತ್ರಜ್ಞರಿಗೆ ಇನ್ನಿಲ್ಲದ ಅವಕಾಶಗಳು ಹುಟ್ಟಿಕೊಂಡಿವೆ. ಇದಕ್ಕೆ ಸರಿಸಮನಾಗಿ ವಿಎಫ್‌ಎಕ್ಸ್ ಶಿಕ್ಷಣ ಮತ್ತು ತರಬೇತಿ, ಸಂಬಂಧಿಸಿದ ಕೋರ್ಸುಗಳು ಲಭ್ಯವಿವೆ.

ಸ್ಪೈಡರ್‌ಮ್ಯಾನ್, ಐರನ್‌ಮ್ಯಾನ್, ಅವತಾರ್, ಸ್ಟಾರ್‌ವರ‍್ಸ್, ಜುರಾಸಿಕ್ ಪಾರ್ಕ್ ಸಿನಿಮಾಗಳ ಹೆಸರು ಕೇಳದವರಿಲ್ಲ. ಬಾಹುಬಲಿ, ಕೆಜಿಎಫ್, ವಿಕ್ರಾಂತ್ ರೋಣ, 777 ಚಾರ್ಲಿ ಚಲನಚಿತ್ರಗಳ ದೃಶ್ಯಪರಿಣಾಮಗಳಿಗೆ ಮಾರುಹೋಗದವರಿಲ್ಲ. ಅಬ್ಬಾ! ಏನು ಅದ್ದೂರಿ ನಿರ್ಮಾಣ! ಏನು ಅದ್ಭುತ ಪ್ರೊಡಕ್ಷನ್! ಎಂದೆಲ್ಲ ವಿಸ್ಮಯಪಟ್ಟುಕೊಳ್ಳದವರಿಲ್ಲ.

ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳದೇವ ‘ಕೋಣನ ಜೊತೆ‘ ಗುದ್ದಾಡುವುದು, ಬಾಹುಬಲಿ ಜಲಪಾತ ದಾಟುತ್ತಾ, ಬೆಟ್ಟದಿಂದ ಬೆಟ್ಟಕ್ಕೆ ಜಿಗಿಯುವುದು, ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ಶತಮಾನಗಳ ಹಿಂದೆ ನಡೆದಿರುವ ಘಟನೆಗಳನ್ನು ಮರುಸೃಷ್ಟಿ.. ಇಂಥ ಅದ್ಭುತ ದೃಶ್ಯಗಳ ನಿರ್ಮಾಣದ ಹಿಂದೆ ಅಡಗಿರುವುದು ‘ವಿಎಫ್‌ಎಕ್ಸ್‌‘ ಎಂಬ ತಾಂತ್ರಿಕ ಚಮತ್ಕಾರ.

ವಿಎಫ್‌ಎಕ್ಸ್‌ನ ಚಮತ್ಕಾರವೇ ಅದು. ಸಣ್ಣಮಕ್ಕಳಿಂದ ತೊಡಗಿ ವಯೋವೃದ್ಧರವರೆಗೆ ಎಲ್ಲರನ್ನೂ ಸೆಳೆಯಬಲ್ಲ ದೊಡ್ಡ ಆಕರ್ಷಣೆ ಅದು. ವಿಎಫ್‌ಎಕ್ಸ್ ಇಂದು ಜಾಗತಿಕ ಚಲನಚಿತ್ರರಂಗದ ಅವಿಭಾಜ್ಯ ಅಂಗವೆನಿಸಿದೆ. ಕೆಲವು ವರ್ಷಗಳ ಹಿಂದೆ ಈ ಬಗೆಯ ಸಿನಿಮಾಗಳನ್ನು ನೋಡಬೇಕೆಂದರೆ ಹಾಲಿವುಡ್ ಕಡೆಗೆ ತಿರುಗಬೇಕಿತ್ತು. ಈಗ ಬಾಲಿವುಡ್, ಸ್ಯಾಂಡಲ್‌ವುಡ್ ಎಲ್ಲೆಡೆಯೂ ಇದು ಹಬ್ಬಿಕೊಂಡಿದೆ. ದೊಡ್ಡ ಬಜೆಟ್‌ನ ಬೆಂಬಲ ಇರುವವರು ಎಂತಹ ಅದ್ದೂರಿ ಚಿತ್ರಗಳನ್ನಾದರೂ ನಿರ್ಮಿಸುವುದಕ್ಕೆ ಇಂದು ತಂತ್ರಜ್ಞಾನ ಸಿದ್ಧವಾಗಿ ಕುಳಿತಿದೆ. ತಂತ್ರಜ್ಞಾನದ ಜಾಗತೀಕರಣದ ಹೊಸ ಸಾಧ್ಯತೆಯಿದು.

ಶ್ರೀಮಂತ ಅವಕಾಶಗಳ ತಾಣ ವಿಎಫ್‌ಎಕ್ಸ್

2022ರಲ್ಲಿ ಜಾಗತಿಕ ವಿಎಫ್‌ಎಕ್ಸ್ ಉದ್ಯಮದ ಒಟ್ಟಾರೆ ಗ್ರಾತ್ರ 9.95 ಬಿಲಿಯನ್ ಡಾಲರ್‌ಗಳಷ್ಟು ಇತ್ತು. ಇದು ಶೇ 10ರ ಪ್ರಮಾಣದಲ್ಲಿ ಬೆಳೆಯುತ್ತಾ 2028ರ ವೇಳೆಗೆ 18.02 ಬಿಲಿಯನ್ ಡಾಲರ್‌ಗೆ ಹಿಗ್ಗಬಹುದು ಎಂದು ಅಂದಾಜಿಸಲಾಗಿದೆ. ಕೇವಲ ಭಾರತವಷ್ಟನ್ನೇ ಗಮನದಲ್ಲಿ ಇಟ್ಟುಕೊಂಡರೂ ಕಳೆದ ವರ್ಷ ವಿಎಫ್‌ಎಕ್ಸ್ ರಂಗದ ಗಾತ್ರ ₹ 107 ಬಿಲಿಯನ್ (₹10,700 ಕೋಟಿ)ಇತ್ತು. ಗುಣಮಟ್ಟದ ಮಾನವ ಸಂಪನ್ಮೂಲ, ದುಬಾರಿಯಲ್ಲದ ವೇತನ ನಿರೀಕ್ಷೆಗಳಿಂದಾಗಿ ಭಾರತವು ವಿಎಫ್‌ಎಕ್ಸ್ ಉದ್ಯಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದೆನಿಸಿದೆ.

ಉದ್ಯೋಗ ಸಾಧ್ಯತೆ

ಯಾವುದೇ ರಂಗ ಇಷ್ಟು ವಿಸ್ತಾರವಾಗಿ ಬೆಳೆದಿದೆ ಎಂದರೆ ಅದು ಅಷ್ಟೇ ದೊಡ್ಡ ಉದ್ಯೋಗ ಸಾಧ್ಯತೆಗಳನ್ನೂ ಒಳಗೊಂಡಿದೆ ಎಂದು ಅರ್ಥ. ಇದು ವಿಎಫ್‌ಎಕ್ಸ್‌ ಕೋರ್ಸ್ ಮತ್ತು ಕೌಶಲಕ್ಕೂ ಅನ್ವಯಿಸುತ್ತದೆ. ಈ ವಿಎಫ್‌ಎಕ್ಸ್‌ ತಂತ್ರಜ್ಞಾನ ಇಂದು ಕೇವಲ ಸಿನಿಮಾ ಉದ್ಯಮವಷ್ಟೇ ಅಲ್ಲ, ಟಿವಿ ಸರಣಿಗಳು, ಜಾಹೀರಾತುಗಳು, ಆನ್‌ಲೈನ್ ವೀಡಿಯೊಗಳು, ಗೇಮಿಂಗ್ ಉದ್ಯಮ- ಎಲ್ಲವಕ್ಕೂ ವಿಸ್ತರಿಸಿಕೊಂಡಿದೆ. ಕೋವಿಡ್ ಸಂದರ್ಭದಲ್ಲಿ ಒಮ್ಮೆ ಉದ್ಯಮಕ್ಕೆ ಹೊಡೆತ ಬಿತ್ತಾದರೂ ಅದು ಮುಂದಿನ ಹಂತದಲ್ಲಿ ವರವಾಗಿ ಪರಿಣಮಿಸಿತು ಎಂದು ಈ ಕ್ಷೇತ್ರದ ಪರಿಣಿತರು ಅಭಿಪ್ರಾಯಪಡುತ್ತಾರೆ.

ಕೋವಿಡ್ ಸಂದರ್ಭದಲ್ಲಿ ಹಿಗ್ಗಿದ ಆನ್‌ಲೈನ್‌ ಸಾಧ್ಯತೆಗಳಿಂದಾಗಿ ವಿಎಫ್‌ಎಕ್ಸ್ ಹಾಗೂ ಅನಿಮೇಶನ್ ರಂಗ ದೊಡ್ಡಮಟ್ಟದಲ್ಲಿ ಬೆಳೆಯಿತು. ಅದರಲ್ಲೂ ಒಟಿಟಿ ಕ್ಷೇತ್ರಕ್ಕೆ(over the top)ಉಂಟಾದ ಅಪಾರ ಬೇಡಿಕೆಯಿಂದಾಗಿ ವಿಎಫ್‌ಎಕ್ಸ್ ಉದ್ಯಮ ಹಲವು ಪಟ್ಟುಗಳಲ್ಲಿ ಬೆಳೆದಿದೆ. ಹೀಗಾಗಿ ವಿಎಫ್‌ಎಕ್ಸ್ ತಂತ್ರಜ್ಞರಿಗೆ ಇನ್ನಿಲ್ಲದ ಅವಕಾಶಗಳು ಹುಟ್ಟಿಕೊಂಡಿವೆ. ಇದಕ್ಕೆ ಸರಿಸಮನಾಗಿ ವಿಎಫ್‌ಎಕ್ಸ್ ಶಿಕ್ಷಣ ಮತ್ತು ತರಬೇತಿ, ಸಂಬಂಧಿಸಿದ ಕೋರ್ಸುಗಳು ಲಭ್ಯವಿವೆ.

ಏನಿದು ಕೋರ್ಸ್: ವಿಎಫ್‌ಎಕ್ಸ್ ಕೋರ್ಸುಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವೆನಿಸಿವೆ. ವಿಎಫ್‌ಎಕ್ಸ್ ಸಂಬಂಧಿಸಿದ ಸರ್ಟಿಫಿಕೇಟ್, ಡಿಪ್ಲೊಮಾ, ಸ್ನಾತಕ ಹಾಗೂ ಸ್ನಾತಕೋತ್ತರ ಹಂತದ ಕೋರ್ಸುಗಳನ್ನು ಈಗ ವಿವಿಧ ಸಂಸ್ಥೆಗಳು ಒದಗಿಸುತ್ತಿವೆ.

ವಿಎಫ್‌ಎಕ್ಸ್ ಅನೇಕ ಆಯಾಮಗಳ ಒಂದು ಕೋರ್ಸ್‌. ಅನಿಮೇಶನ್, ವಿಶುವಲ್ ಎಫೆಕ್ಟ್ಸ್‌, ಗ್ರಾಫಿಕ್ಸ್ ಡಿಸೈನಿಂಗ್, ಕಾರ್ಟೂನ್, ಗೇಮ್ಸ್- ಹೀಗೆ ಹಲವು ಕೌಶಲಗಳ ಗುಚ್ಛವನ್ನೇ ವಿಎಫ್‌ಎಕ್ಸ್ ಒದಗಿಸುತ್ತದೆ. ಈ ವಿಷಯಗಳನ್ನು ಪ್ರತ್ಯೇಕವಾಗಿಯೂ ಕಲಿಯಬಹುದು, ಒಟ್ಟಾಗಿಯೂ ಕಲಿಯಬಹುದು ಎಂಬುದೇ ಇದರ ವಿಶೇಷತೆ. ನಾವು ಯಾವ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ಅದರಲ್ಲಿ ನೈಪುಣ್ಯತೆ ಸಾಧಿಸುತ್ತೇವೋ ಆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಬಹುದು.

ವಿಎಫ್‌ಎಕ್ಸ್ ಕೋರ್ಸ್‌ಗಳನ್ನು ಪೂರೈಸಿದವರು ವೆಬ್‌ಡಿಸೈನರ್, ಗ್ರಾಫಿಕ್ ಡಿಸೈನರ್, ಮಲ್ಟಿಮೀಡಿಯಾ ಪ್ರೋಗ್ರಾಮರ್, 3ಡಿ ಮಾಡೆಲರ್, ವಿಡಿಯೊ ಎಡಿಟರ್, 2ಡಿ/3ಡಿ ಅನಿಮೇಟರ್, ಗೇಮ್ ಡೆವಲಪರ್ ಆಗಿ ಉದ್ಯೋಗಗಳನ್ನು ಪಡೆಯಬಹುದು. ವೇತನ ಹಾಗೂ ಹುದ್ದೆಯಲ್ಲಿ ಬಹುಬೇಗನೆ ಭಡ್ತಿ ಪಡೆಯುತ್ತಾ ಹೋಗುವುದು ಈ ರಂಗದ ಇನ್ನೊಂದು ವೈಶಿಷ್ಟ್ಯ. ಮೈಕ್ರೋಸಾಫ್ಟ್, ನಿಕೆಲೋಡಿಯನ್ ಅನಿಮೇಶನ್ ಸ್ಟುಡಿಯೋಸ್, ಹಾಟ್‌ಸ್ಟಾರ್, ಕೆಪಿಎಂಜಿ, ಬ್ಲೂ ಸ್ಕೈ ಸ್ಟುಡಿಯೋಸ್, ವೀಟಾ ಡಿಜಿಟಲ್, ಅಡೋಬ್, ಸನ್‌ರೈಸ್ ಮುಂತಾದವು ವಿಎಫ್‌ಎಕ್ಸ್ ಪದವೀಧರರಿಗೆ ಉದ್ಯೋಗಾವಕಾಶ ನೀಡುವ ಬೃಹತ್ ಕಂಪನಿಗಳಾಗಿವೆ.

ಯಾರು ಕಲಿಯಬಹುದು?

ಚಿತ್ರಕಲೆ, ಕಾರ್ಟೂನಿಂಗ್ ಮೊದಲಾದ ಸೃಜನಶೀಲ ವಿಚಾರಗಳಲ್ಲಿ ಆಸಕ್ತಿಯಿರುವವರಿಗೆ ವಿಎಫ್‌ಎಕ್ಸ್ ಕ್ಷೇತ್ರ ಹೇಳಿಮಾಡಿಸಿದ್ದು. ಕಲೆ, ವಾಣಿಜ್ಯ ಅಥವಾ ವಿಜ್ಞಾನ - ಇಂತಹದೇ ಹಿನ್ನೆಲೆಯಿಂದ ಬಂದಿರಬೇಕು ಎಂಬ ನಿಬಂಧನೆಯೇನೂ ಇಲ್ಲ. ಇಲ್ಲಿ ಹೊಸತನ್ನು ಕಲಿಯುವ ಮತ್ತು ಹೊಸ ಸವಾಲುಗಳನ್ನು ಎದುರಿಸುವ ಮನೋಭಾವ ಉಳ್ಳವರಿಗೆ ಹೆಚ್ಚಿನ ಮನ್ನಣೆ. ಹತ್ತನೇ ತರಗತಿ ತೇರ್ಗಡೆಯಾದವರು ಸರ್ಟಿಫಿಕೇಟ್ ಕೋರ್ಸುಗಳನ್ನು, ಪಿಯುಸಿ ತೇರ್ಗಡೆಯಾದವರು ಡಿಪ್ಲೊಮಾ ಇಲ್ಲವೇ ಪದವಿ ಕೋರ್ಸುಗಳನ್ನು ಮಾಡಬಹುದು. ಔಪಚಾರಿಕ ಡಿಗ್ರಿಗಳ ಹೊರತಾಗಿಯೂ ಆಯಾ ಕ್ಷೇತ್ರ ಬಯಸುವ ತಾಂತ್ರಿಕ ಕೌಶಲ್ಯಗಳನ್ನು ಗಳಿಸಿಕೊಂಡರೆ, ಅಂದರೆ ಅಗತ್ಯ ಸಾಫ್ಟ್ವೇರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಪಡೆದರೆ ಅಂಥವರನ್ನು ಉದ್ಯಮ ತಾನಾಗಿಯೇ ಸ್ವಾಗತಿಸುತ್ತದೆ.

ಸಾಂಪ್ರದಾಯಿಕ ಕೋರ್ಸುಗಳಿಗೆ ಹೋಲಿಸಿದರೆ ವಿಎಫ್‌ಎಕ್ಸ್ ಕೋರ್ಸುಗಳು ತುಸು ಹೆಚ್ಚಿನ ಶುಲ್ಕ ಅಪೇಕ್ಷಿಸುತ್ತವೆ. ₹50 ಸಾವಿರದಿಂದ ₹5 ಲಕ್ಷದವರೆಗೂ ಬೇರೆಬೇರೆ ಹಂತದ ಕೋರ್ಸುಗಳು ಇವೆ. ಬೆಂಗಳೂರು, ಮುಂಬೈ, ಚೆನ್ನೈ, ಪೂನಾ, ನೋಯ್ಡಾ, ಅಹಮದಾಬಾದ್, ದೆಹಲಿ ಮುಂತಾದ ಕಡೆಗಳಲ್ಲಿ ಸಾಕಷ್ಟು ಖಾಸಗಿ ಸಂಸ್ಥೆಗಳು ಉತ್ತಮ ಗುಣಮಟ್ಟದ ವಿಎಫ್‌ಎಕ್ಸ್ ಕೋರ್ಸುಗಳನ್ನು ಒದಗಿಸುತ್ತಿವೆ. ಕೊಂಚ ತುಟ್ಟಿ ಎನಿಸಿದರೂ ಗುಣಮಟ್ಟದ ಸಂಸ್ಥೆಗಳಲ್ಲಿ ಇಂತಹ ತರಬೇತಿಗಳನ್ನು ಪಡೆಯುವುದೇ ಉತ್ತಮ.

ಆನ್‌ಲೈನ್‌ ಕಲಿಕಾ ತಾಣಗಳು: ಇಂದು ಸಾಕಷ್ಟು ಆನ್‌ಲೈನ್‌ ತಾಣಗಳ ಮೂಲಕ  ವಿಎಫ್‌ಎಕ್ಸ್ ಕೌಶಲಗಳನ್ನು ಅಭ್ಯಾಸ ಮಾಡುವುದಕ್ಕೆ ಅವಕಾಶವಿದೆ. ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

ಯುಡೆಮಿ ಸಂಸ್ಥೆ ಹಲವು ಬಗೆಯ ವಿಎಫ್‌ಎಕ್ಸ್ ಆನ್‌ಲೈನ್ ಕೋರ್ಸುಗಳನ್ನು ಒದಗಿಸುತ್ತದೆ. ಆಫ್ಟರ್ ಎಫೆಕ್ಟ್ಸ್‌ , ಮೋಶನ್ ಗ್ರಾಫಿಕ್ಸ್, ಅನಿಮೇಶನ್, ವಿಡಿಯೊ ಪ್ರೊಡಕ್ಷನ್, ಗೇಮ್ ಡಿಸೈನ್, ಡಿಜಿಟಲ್ ಕಂಪೋಸಿಟಿಂಗ್, ಅನ್‌ರಿಯಲ್ ಎಂಜಿನ್- ಹೀಗೆ ಹಲವು ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯುವ ಕೋರ್ಸುಗಳೂ ಇಲ್ಲಿವೆ. ನೋಡಿ: https://www.udemy.com/

ವಿಡಿಯೊ ಕಾಪಿಲೋಟ್ ವಿಎಫ್‌ಎಕ್ಸ್ ಕುರಿತ ವಿವಿಧ ಉಚಿತ ಹಾಗೂ ಪಾವತಿ ಕೋರ್ಸುಗಳನ್ನು ಒದಗಿಸುತ್ತದೆ. ವಿವರಗಳಿಗಾಗಿ ಇಲ್ಲಿ ನೋಡಿ: https://www.videocopilot.net/

ನಿರ್ದಿಷ್ಟವಾಗಿ ಸಿನಿಮಾ ಕ್ಷೇತ್ರದ ವಿಶುವಲ್ ಎಫೆಕ್ಟ್ಸ್‌ ಕುರಿತಾದ ಕೌಶಲಗಳನ್ನು ಅಭ್ಯಾಸ ಮಾಡಲು ಫಿಲಂ ರಯಟ್ ಒಂದು ಉತ್ತಮ ವೇದಿಕೆ. ಇಲ್ಲಿ ವಿವರಗಳನ್ನು ಗಮನಿಸಬಹುದು: https://www.filmriot.com/

ಇನ್ಫೋಸಿಸ್ ಸ್ಪ್ರಿಂಗ್‌ ಬೋರ್ಡ್ ವಿಎಫ್‌ಎಕ್ಸ್ ಕುರಿತ ಅನೇಕ ಉಚಿತ ಕೋರ್ಸುಗಳನ್ನು ಒಂದೇ ತಾಣದಲ್ಲಿ ಕಲೆಹಾಕಿದೆ. ಅವುಗಳನ್ನು ಇಲ್ಲಿ ತಿಳಿಯಿರಿ: https://infyspringboard.onwingspan.com/web/en/page/home

(ಲೇಖಕರು ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT