ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ–ಉದ್ಯೋಗ: ಮೀನುಗಾರಿಕೆ, ಹೈನುಗಾರಿಕೆಯ ವೃತ್ತಿ ಅವಕಾಶಗಳು ಹೇಗಿವೆ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ವಿ ಪ್ರದೀಪ್ ಕುಮಾರ್ ಅವರ ಅಂಕಣ
Published 13 ಆಗಸ್ಟ್ 2023, 11:46 IST
Last Updated 13 ಆಗಸ್ಟ್ 2023, 11:46 IST
ಅಕ್ಷರ ಗಾತ್ರ

1. ನಾನು ಬಿ.ಎಸ್ಸಿ ಮುಗಿಸಿದ್ದು, ಎಂಬಿಎ ಕೋರ್ಸ್‌ಗೆ ಸೇರುವ ಯೋಚನೆಯಿದೆ. ಈ ಕೋರ್ಸ್ ಪ್ರವೇಶ ಪ್ರಕ್ರಿಯೆ ಬಗ್ಗೆ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಬಿ.ಎಸ್ಸಿ ನಂತರ ಎಂಬಿಎ ಕೋರ್ಸ್ ಮಾಡಲು ಸಾಮಾನ್ಯವಾಗಿ ಈ ಪ್ರಕ್ರಿಯೆಗಳಿರುತ್ತವೆ.

• ಪ್ರವೇಶ ಪರೀಕ್ಷೆ • ಸಮೂಹ ಚರ್ಚೆ ಮತ್ತು • ವೈಯಕ್ತಿಕ ಸಂದರ್ಶನ.

ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಎಂಬಿಎ ಮಾಡಲು ’ಕ್ಯಾಟ್’(Common Admission Test) ಪರೀಕ್ಷೆಯನ್ನು ಬರೆಯಬೇಕು. ಇನ್ನಿತರ ವಿಶ್ವವಿದ್ಯಾಲಯ/ಕಾಲೇಜುಗಳಿಗೆ ಜಿಮ್ಯಾಟ್, ಪಿಜಿ-ಸಿಇಟಿ, ಮ್ಯಾಟ್(Management Aptitude Test) ಇತ್ಯಾದಿ ಪ್ರವೇಶ ಪರೀಕ್ಷೆಗಳಲ್ಲಿ ಭಾಗವಹಿಸಬೇಕು. ನೀವು ಯಾವ ವಿಶ್ವವಿದ್ಯಾಲಯ/ಕಾಲೇಜಿನಲ್ಲಿ ಎಂಬಿಎ ಮಾಡಲು ಬಯಸುತ್ತೀರೋ, ಅದಕ್ಕೆ ಅನ್ವಯವಾಗುವ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಕಾಲೇಜು ಆಯ್ಕೆ ಪ್ರಕ್ರಿಯೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI 

2. ನಾನು ಬಿ.ಎಸ್ಸಿ (ರಸಾಯನ ವಿಜ್ಞಾನ, ಸಸ್ಯ ವಿಜ್ಞಾನ, ಪ್ರಾಣಿಶಾಸ್ತ್ರ) ಮುಗಿಸಿದ್ದು, ಎಂ.ಎಸ್ಸಿ ಕೋರ್ಸನ್ನು ಯಾವ ವಿಷಯದಲ್ಲಿ ಮಾಡಿದರೆ ಉತ್ತಮವಾದ ವೃತ್ತಿಯ ಅವಕಾಶಗಳಿವೆ? ಹಾಗೂ, ನಮಗೆ ಮೀನುಗಾರಿಕೆ ಮತ್ತು ಹೈನುಗಾರಿಕೆ ವಿಷಯದಲ್ಲಿ ಉನ್ನತ ಶಿಕ್ಷಣ ಮಾಡುವ ಅವಕಾಶಗಳಿವೆಯೇ?

ಪ್ರೇರಣ ಎಂ.ಎಸ್, ಹಡಗಲಿ.

ನಮ್ಮ ಅಭಿಪ್ರಾಯದಂತೆ ರಸಾಯನ ವಿಜ್ಞಾನದಲ್ಲಿ, ಎಂ.ಎಸ್ಸಿ ಮಾಡಿದರೆ ಹೆಚ್ಚಿನ ಉದ್ಯೋಗಾವಕಾಶಗಳಿವೆ.

ಹಾಗೂ ಬಿ.ಎಸ್ಸಿ ನಂತರ ಎಂ.ಎಸ್ಸಿ (ಮೀನುಗಾರಿಕೆ/ಹೈನುಗಾರಿಕೆ) ಕೋರ್ಸನ್ನು ಮಾಡುವ ಅವಕಾಶಗಳಿವೆ. ಸರ್ಕಾರಿ ವಲಯದ ಇಂಡಿಯನ್ ಕೌನ್ಸಿಲ್‌ ಆಫ್‌ ಅಗ್ರಿಕಲ್ಚರಲ್ ರಿಸರ್ಚ್ (ICAR) ಸಂಸ್ಥೆ ಮತ್ತು 74 ಸರ್ಕಾರಿ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳಲ್ಲಿ ಕೃಷಿ ವಿಜ್ಞಾನ, ಮೀನುಗಾರಿಕೆ, ಹೈನುಗಾರಿಕೆ, ಪಶುವಿಜ್ಞಾನ, ತೋಟಗಾರಿಕೆ ಮುಂತಾದ ವಿಷಯಗಳಲ್ಲಿ ಎಂ.ಎಸ್ಸಿ, ಪಿಎಚ್.ಡಿ ಕೋರ್ಸ್‌ಗಳ ಮೂಲಕ ಉನ್ನತ ಶಿಕ್ಷಣವನ್ನು ಮಾಡಬಹುದು. ಆಸಕ್ತ ಅಭ್ಯರ್ಥಿಗಳು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಆಯೋಜಿಸುವ ಎಐಇಇಎ (AIEEA) ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಅರ್ಹತೆಯ ನಿಯಮಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣಗಳನ್ನು ಗಮನಿಸಿ:

https://icar.nta.nic.in/

http://ndri.res.in/education/admission-2021-22/

https://kvafsu.edu.in

3. ನಾನು ಎಂ.ಎಸ್ಸಿ (ಭೌತವಿಜ್ಞಾನ) ಮಾಡಿ ಸರ್ಕಾರಿ ಕೆಲಸದಲ್ಲಿದ್ದೇನೆ. ಈ ಕೆಲಸದಲ್ಲಿದ್ದುಕೊಂಡು ಬಿ.ಇಡಿ ಮಾಡಬಹುದೇ?

ಲತಾ, ಉತ್ತರ ಕನ್ನಡ.

ನಮ್ಮ ಅಭಿಪ್ರಾಯದಂತೆ, ನೀವು ಬಿ.ಇಡಿ ಕೋರ್ಸನ್ನು ದೂರಶಿಕ್ಷಣದ ಮೂಲಕ ಮಾಡಬಹುದು. ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನ್ಯತೆ ಪಡೆದ ದೂರ ಶಿಕ್ಷಣದ ಕೋರ್ಸ್ ಮಾಹಿತಿಗಾಗಿ ಗಮನಿಸಿ: https://deb.ugc.ac.in/ 

4. ನಾನು ಸರ್ಕಾರಿ ಹುದ್ದೆಗೆ ಆಯ್ಕೆಯಾಗಿ ತರಬೇತಿಯನ್ನು ಪಡೆಯುತ್ತಿದ್ದಾಗ ಪದವಿ ಕೋರ್ಸಿನ ಒಂದು ವಿಷಯದ ಪರೀಕ್ಷೆಯನ್ನು ಬರೆಯಲಾಗಲಿಲ್ಲ. ಈಗ ಪ್ರಾಂಶುಪಾಲರು ಪೂರಕ ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ನೀಡಿದ್ದಾರೆ. ಈಗ ಉಳಿದ ವಿಷಯದ ಪರೀಕ್ಷೆಯನ್ನು ಮುಗಿಸಿ, ಪದವಿ ಕೋರ್ಸನ್ನು ಪೂರ್ಣಗೊಳಿಸಿದರೆ ಏನಾದರೂ ಸಮಸ್ಯೆಯಾಗುವುದೇ?

ಶಿವು ಎಸ್, ಮೈಸೂರು.

ನಮ್ಮ ಅಭಿಪ್ರಾಯದಂತೆ, ಉಳಿದಿರುವ ಒಂದು ವಿಷಯದ ಪೂರಕ ಪರೀಕ್ಷೆಗೆ ಹಾಜರಾಗಿ ಪದವಿಯನ್ನು ಪೂರ್ಣಗೊಳಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.

5. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಮುಗಿಸಿದ್ದು, ಮುಂದೆ ಬಿ.ಎಸ್ಸಿ (ನರ್ಸಿಂಗ್) ಮಾಡಬಹುದೇ?

ಹೆಸರು, ಊರು ತಿಳಿಸಿಲ್ಲ.

ಪಿಯುಸಿ (ವಿಜ್ಞಾನ) ನಂತರ ಬಿ.ಎಸ್ಸಿ (ನರ್ಸಿಂಗ್) ಮಾಡಬಹುದು. ಕರ್ನಾಟಕದಲ್ಲಿ ಪ್ರವೇಶ ಪ್ರಕ್ರಿಯೆ ಸಿಇಟಿ ಮೂಲಕ ನಡೆಯುತ್ತದೆ.

6. ನಾನು 2017ರ ಪಿಯುಸಿ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದೇನೆ. ಈಗ ಪೂರಕ ಪರೀಕ್ಷೆಯಲ್ಲಿ ಆ ಒಂದು ವಿಷಯದ ಪರೀಕ್ಷೆ ಬರೆಯಬಹುದೇ ಅಥವಾ ಎಲ್ಲಾ ವಿಷಯಗಳಲ್ಲಿ ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಬೇಕೆ?

ದರ್ಶನ್ ಎಂ.ಜಿ, ಕಡೂರು.

ನಮಗಿರುವ ಮಾಹಿತಿಯಂತೆ, ಮೂಲ ಅನುತ್ತೀರ್ಣ ಅಂಕಪಟ್ಟಿ, ಅರ್ಜಿಯ ಆಧಾರದ ಮೇಲೆ ಪರೀಕ್ಷಾ ಶುಲ್ಕಗಳನ್ನು ಸಲ್ಲಿಸಿ, ಸಂಬಂಧಿಸಿದ ದಾಖಲೆಗಳನ್ನು ಪ್ರಾಂಶುಪಾಲರ ಮೂಲಕ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಸಲ್ಲಿಸಿ, ಪರೀಕ್ಷೆಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ, ಈ ಸುತ್ತೋಲೆಯನ್ನು ಗಮನಿಸಿ: https://kseab.karnataka.gov.in/storage/pdf-files/2022-23_IIPUC_SUPP_2_CIRCULAR.pdf

7. ನಾನು ಬಿ.ಎಸ್ಸಿ (ಮೈಕ್ರೊಬಯಾಲಜಿ ಮತ್ತು ಬಯೋಟೆಕ್ನಾಲಜಿ) ಮುಗಿಸಿದ್ದೇನೆ. ಈಗ, ಎಂಬಿಬಿಎಸ್ ಸೇರಬಹುದೇ?

ಹೆಸರು, ಊರು ತಿಳಿಸಿಲ್ಲ.

ಎಂಬಿಬಿಎಸ್ ಕೋರ್ಸ್ ಪ್ರವೇಶಕ್ಕೆ ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಅಂಡ್ ಎಂಟ್ರೆನ್ಸ್ ಟೆಸ್ಟ್) ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ. ಕಳೆದ ವರ್ಷದ ಅಧಿಸೂಚನೆಯಂತೆ, ಕನಿಷ್ಠ ವಯೋಮಿತಿ 17 ವರ್ಷಕ್ಕೆ ಸೀಮಿತವಾಗಿದ್ದು, ಗರಿಷ್ಠ ವಯೋಮಿತಿಯನ್ನು ತೆಗೆದುಹಾಕಲಾಗಿದೆ. ನೀವು ಬಿ.ಎಸ್ಸಿ ಕೋರ್ಸ್ ಮೂಲಕ ಈಗಾಗಲೇ ಗಳಿಸಿರುವ ಜ್ಞಾನ, ಎಂಬಿಬಿಎಸ್ ಕೋರ್ಸ್‌ಗೆ ಉಪಯುಕ್ತವಾಗುತ್ತದೆ. ಆದರೆ, ಐದೂವರೆ ವರ್ಷದ ಎಂಬಿಬಿಎಸ್ ಮಾಡಬಹುದೇ ಅಥವಾ ಎರಡು ವರ್ಷದ ಸ್ನಾತಕೋತ್ತರ ಪದವಿಯನ್ನು (ಉದಾಹರಣೆಗೆ ಎಂ.ಎಸ್ಸಿ, ಎಂಬಿಎ ಇತ್ಯಾದಿ) ಮಾಡುವುದು ಸೂಕ್ತವೇ ಎಂದು ಪರಿಶೀಲಿಸಿ. ವೃತ್ತಿಜೀವನದ ದೃಷ್ಟಿಯಿಂದ, ನಿಮ್ಮ ಅಭಿರುಚಿ, ಆಸಕ್ತಿ, ಸಾಮರ್ಥ್ಯಗಳನ್ನು ಗಮನದಲ್ಲಿಟ್ಟು ಕೊಂಡು ವೃತ್ತಿಯೋಜನೆಯನ್ನು ಮಾಡುವುದರಿಂದ, ಮುಂದಿನ ಹಾದಿ ಸುಗಮವಾಗುತ್ತದೆ. ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU 

8. ನಾನು ಪಿಯುಸಿ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಡುಗೆಯವರಾಗಿ ಕೆಲಸಕ್ಕೆ ಸೇರಿರುತ್ತೇನೆ. ಈಗ ಪದವಿಯನ್ನು ಮಾಡಲು ಇಚ್ಛಿಸಿದ್ದು, ಬಡ್ತಿಗೆ ಈ ಶೈಕ್ಷಣಿಕೆ ಅರ್ಹತೆಯನ್ನು ಪರಿಗಣಿಸುತ್ತಾರೆಯೇ?

ಹೆಸರು, ಊರು ತಿಳಿಸಿಲ್ಲ.

ನಿಮ್ಮ ನೇಮಕಾತಿಯ ನಿಯಮ ಮತ್ತು ನಿಬಂಧನೆಗಳು, ಸೇವಾ ವಿವರಗಳ ಮಾಹಿತಿಯಿಲ್ಲದೆ ನಿಖರವಾಗಿ ಉತ್ತರಿಸುವುದು ಸಾಧ್ಯವಿಲ್ಲ. ಹಾಗಾಗಿ, ನಿಮ್ಮ ಇಲಾಖೆಯ ಮೇಲಧಿಕಾರಿಗಳನ್ನು ಸಂಪರ್ಕಿಸಿ.

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ
ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT