ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಸರ ವಿಜ್ಞಾನ’ದಲ್ಲಿ ವೈವಿಧ್ಯಮಯ ಕೋರ್ಸ್‌: ಉದ್ಯೋಗಗಳಿಗೂ ವಿಪುಲ ಅವಕಾಶ

ಸಂಶೋಧನೆ, ಫೆಲೊಷಿಪ್‌, ಉದ್ಯೋಗಗಳಿಗೂ ವಿಪುಲ ಅವಕಾಶ
Last Updated 20 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಪರಿಸರ ವಿಜ್ಞಾನ – ಎರಡು ದಶಕಗಳಿಂದೀಚೆಗೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರವಾಗಿದೆ. ಇದು ಶಿಕ್ಷಣ, ಸಂಶೋಧನೆ, ಸಂರಕ್ಷಣೆ, ಉದ್ಯೋಗ ಹೀಗೆ ಹಲವು ರೂಪಗಳಲ್ಲಿ ಹೊಮ್ಮುತ್ತಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಪರಿಸರ ವಿಜ್ಞಾನ ವಿಷಯದಲ್ಲಿ ಸರ್ಟಿಫಿಕೇಟ್‌ ಕೋರ್ಸ್‌ನಿಂದ ಹಿಡಿದು ಸ್ನಾತಕೋತ್ತರ ಪದವಿ, ಪಿ.ಎಚ್‌ಡಿವರೆಗೆ ವಿವಿಧ ಕೋರ್ಸ್‌ಗಳನ್ನು ಕಲಿಸಲಾರಂಭಿಸಿವೆ. ಈ ಕೋರ್ಸ್‌ ಗಳನ್ನು ಪೂರ್ಣಗೊಳಿಸಿದವರಿಗೆ ಸರ್ಕಾರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ, ಖಾಸಗಿ ಕ್ಷೇತ್ರದ ಉದ್ಯಮಗಳಲ್ಲಿ ಉನ್ನತ ಮಟ್ಟದ ಹುದ್ದೆಗಳೂ ದೊರೆಯುತ್ತವೆ.

ಸರ್ಟಿಫಿಕೇಟ್‌ ಕೋರ್ಸ್‌

ಪರಿಸರ ವಿಜ್ಞಾನದಲ್ಲಿ 6 ತಿಂಗಳ ಸರ್ಟಿಫಿಕೇಟ್‌ ಕೋರ್ಸ್‌ ಹಾಗೂ 2 ವರ್ಷಗಳ ಡಿಪ್ಲೊಮಾ ಕೋರ್ಸ್‌ಗಳಿವೆ. ಎಸ್ಸೆಸ್ಸೆಲ್ಸಿ/ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಈ ಕೋರ್ಸ್ ಕಲಿಯಬಹುದು. ಇದರಲ್ಲಿ ಪರಿಸರ ಅಧ್ಯಯನ, ಪರಿಸರ ವಿಜ್ಞಾನ,ಘನತ್ಯಾಜ್ಯ ವಸ್ತು ನಿರ್ವಹಣೆ, ಪರಿಸರ ನಿರ್ವಹಣೆ, ಸುಸ್ಥಿರ ಅಭಿವೃದ್ಧಿ, ತ್ಯಾಜ್ಯ ನೀರಿನ ಸಂಸ್ಕರಣೆ,ಭೌಗೋಳಿಕ ಮಾಹಿತಿ ವ್ಯವಸ್ಥೆ ಹಾಗೂ ದೂರ ಸಂವೇದಿ ಇತ್ಯಾದಿ ವಿಷಯಗಳಿವೆ.

ಪದವಿ ಶಿಕ್ಷಣ

ಪಿಯುಸಿ ನಂತರ ಪದವಿಯಲ್ಲಿ(ಬಿ.ಎಸ್ಸಿ) ಪರಿಸರ ವಿಜ್ಞಾನ ಕೋರ್ಸ್ ಕಲಿಯಬಹುದು. ಪಿಯುಸಿ (ಜೀವ ವಿಜ್ಞಾನ ವಿಷಯ ಒಳಗೊಂಡಂತೆ) ಅಥವಾ ತತ್ಸಮಾನದ ಡಿಪ್ಲೊಮಾ ಕೋರ್ಸ್ ಪೂರ್ಣ ಗೊಳಿಸಿರುವವರು ಈ ಪದವಿ ಪ್ರವೇಶಕ್ಕೆ ಅರ್ಹರು. ಈ ಪದವಿಯಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಮೂರು ವಿಷಯಗಳಲ್ಲಿ, ಒಂದು ಪರಿಸರ ವಿಜ್ಞಾನ ವಿಷಯವಾಗಿದ್ದರೆ, ಉಳಿದ ಎರಡು ಜೀವವಿಜ್ಞಾನ ವಿಷಯಗಳಾಗಿರಬಹುದು. ಮೂರು ವರ್ಷದ ಈ ಪದವಿಯಲ್ಲಿ ಪರಿಸರ ವಿಜ್ಞಾನ ಮತ್ತು ವನ್ಯಜೀವಿ ನಿರ್ವಹಣೆ, ಪರಿಸರ ಮತ್ತು ನೀರಿನ ನಿರ್ವಹಣೆ ಸೇರಿದಂತೆ ವಿವಿಧ ಕೋರ್ಸ್‌ಗಳಿವೆ.

ಸ್ನಾತಕೋತ್ತರ ಪದವಿ

ಎಂ.ಎಸ್ಸಿ (ಸ್ನಾತಕೋತ್ತರ) ಪದವಿಯಲ್ಲಿ ಪರಿಸರ ವಿಜ್ಞಾನ, ವನ್ಯಜೀವಿ ನಿರ್ವಹಣೆ, ಸುಸ್ಥಿರ ಅಭಿವೃದ್ಧಿ ಮತ್ತು ನಿರ್ವಹಣೆ, ಭೂ ವಿಜ್ಞಾನ, ಹವಾಮಾನ ಬದಲಾವಣೆ ನಿರ್ವಹಣೆ, ಪರಿಸರ ಜೀವಿಶಾಸ್ತ್ರ, ಮಾಲಿನ್ಯ ನಿಯಂತ್ರಣ.. ಇತ್ಯಾದಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಪರಿಸರ ವಿಜ್ಞಾನ ಅಥವಾ ಇನ್ನಿತರ ಜೀವವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ ಪದವಿ ಪೂರ್ಣಗೊಳಿಸಿ, ಆಯಾ ಶೈಕ್ಷಣಿಕ ಸಂಸ್ಥೆಗಳು/ ವಿವಿಗಳು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವವರು ಈ ಪದವಿಗೆ ಪ್ರವೇಶ ಪಡೆಯಬಹುದು.

ಎಂಜಿನಿಯರಿಂಗ್ ಪದವಿ

ಬಿ.ಇ/ಬಿಟೆಕ್‌/ಎಂ.ಟೆಕ್‌ನಲ್ಲಿ ಪರಿಸರ ಎಂಜಿನಿಯರಿಂಗ್‌ ಪದವಿ ಪಡೆಯಲು ಅವಕಾಶವಿದೆ. ಈ ಕೋರ್ಸ್‌ಗೆ ಸೇರುವವರು ಸರ್ಕಾರ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವ NEET/KET ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಈ ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಪಿ.ಎಚ್‌ಡಿ ಪದವಿ

ಪರಿಸರ ವಿಜ್ಞಾನ ವಿಷಯದಲ್ಲಿ ಶೇ 55ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದ, ವಿವಿಗಳ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಲಭ್ಯವಿರುವ ಸ್ಥಾನಗಳ ಆಧಾರದ ಮೇಲೆ ಪಿ.ಎಚ್‌ಡಿ ಪದವಿಗೆ ಅವಕಾಶ ಸಿಗುತ್ತದೆ.ಪ್ರತಿ ವರ್ಷ ಜನವರಿ ಅಥವಾ ಜೂನ್ ತಿಂಗಳಿನಲ್ಲಿ ಪಿ.ಎಚ್‌ಡಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಯುಜಿಸಿ ಮತ್ತಿತರ ಸಂಸ್ಥೆಗಳಿಂದ ಸಂಶೋಧನಾ ಫೆಲೊಷಿಪ್‌ಗಳನ್ನು ನೀಡಲಾಗುತ್ತದೆ.

ಎಲ್ಲೆಲ್ಲಿ ಈ ಕೋರ್ಸ್‌ಗಳಿವೆ?

ಬೆಂಗಳೂರು, ಮೈಸೂರು ಸೇರಿದಂತೆ ದೇಶ ಹಾಗೂ ರಾಜ್ಯದ ವಿವಿಧೆಡೆಗಳಲ್ಲಿರುವ ವಿಶ್ವವಿದ್ಯಾಲಯಗಳು, ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪರಿಸರ ವಿಜ್ಞಾನದ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಕೋರ್ಸ್‌ಗಳಿವೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ), ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ), ಸೇಂಟ್ ಜೋಸೆಫ್ಸ್ ಕಾಲೇಜು, ಬೆಳಗಾವಿಯ ಕೆ.ಎಲ್.ಇ ಕಾಲೇಜು, ಮೈಸೂರಿನ ಜೆ.ಎಸ್.ಎಸ್. ಉನ್ನತ ಶಿಕ್ಷಣ ಅಕಾಡೆಮಿಗಳೂ ಪರಿಸರ ವಿಜ್ಞಾನದ ವಿವಿಧ ಕೋರ್ಸ್‌ಗಳಿಗೆ ಪೂರ್ಣಾವಧಿ ಶಿಕ್ಷಣ ನೀಡುತ್ತವೆ. ಮುಂಬೈ, ದೆಹಲಿ, ಖರಗ್‌ಪುರಐಐಟಿಗಳು, ಸುರತ್ಕಲ್‌ನ ಎನ್‌ಐಟಿಕೆ, ಮಣಿಪಾಲ್‌ನ ಎಂ.ಐ.ಟಿ ಗಳು ಪರಿಸರ ಶಿಕ್ಷಣದಲ್ಲಿ ನಾಲ್ಕು ವರ್ಷದ ಎಂಜಿನಿಯರಿಂಗ್ ಪದವಿ ನೀಡುತ್ತವೆ.

ಈ ಕೋರ್ಸ್‌ ಹಾಗೂ ಉದ್ಯೋಗಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, 9449178802 ಮೊಬೈಲ್ ಸಂಖ್ಯೆಗೆ ಅಥವಾ raoamer@gmail.com ಮೂಲಕ ಸಂಪರ್ಕಿಸಬಹುದು.

ಉದ್ಯೋಗಾವಕಾಶಗಳು:

ಸರ್ಕಾರಿ ಕಾಲೇಜು / ವಿವಿಗಳು / ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳಿವೆ. ಪರಿಸರ ವಿಜ್ಞಾನ ವಿಷಯದಲ್ಲಿ ಪಿ.ಜಿ, ಪಿ.ಎಚ್‌ಡಿ ಪಡೆದವರು, ಕಾಲೇಜು / ವಿಶ್ವವಿದ್ಯಾಲಯ/ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾ ಗಬಹುದು.ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಪರಿಸರ ಅಧಿಕಾರಿ/ಸಹಾಯಕ ಪರಿಸರ ಅಧಿಕಾರಿಯಾಗಬಹದು. ಜವಳಿ, ಉಕ್ಕು, ಡಿಸ್ಟಿಲರಿ, ಸಕ್ಕರೆ, ಬಣ್ಣ, ಔಷಧ ಹಾಗೂ ಟೈರ್‌ ತಯಾರಿಕಾ ಕಾರ್ಖಾನೆಗಳಲ್ಲಿ ಆರೋಗ್ಯ ತಜ್ಞ, ಕೆಮಿಸ್ಟ್, ನೀರು ಗುಣಮಟ್ಟ ವಿಶ್ಲೇಷಣಾಧಿಕಾರಿ, ವನ್ಯಜೀವಿ ಸಂರಕ್ಷಣ ಅಧಿಕಾರಿ, ಜಲ/ನೆಲ ಸಂಪನ್ಮೂಲ ಅಧಿಕಾರಿ, ಪರಿಸರ ಶಿಕ್ಷಣತಜ್ಞ, ಇತ್ಯಾದಿ ಹುದ್ದೆಗಳನ್ನು ಪಡೆಯಬಹುದು.

(ಲೇಖಕರು: ಸಹಾಯಕ ಪ್ರಾಧ್ಯಾಪಕರು, ಪರಿಸರ ವಿಜ್ಞಾನ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT