ಮಂಗಳವಾರ, ಅಕ್ಟೋಬರ್ 26, 2021
27 °C

ಸ್ವಂತ ಉದ್ಯಮಕ್ಕೂ ಬೇಕು ಆಹಾರ ತಂತ್ರಜ್ಞಾನ ಪದವಿ

ಅನಿಲ್‌ ಈ. ಕೆಂಬಾಳೆ Updated:

ಅಕ್ಷರ ಗಾತ್ರ : | |

Prajavani

ಆಹಾರ ತಂತ್ರಜ್ಞಾನವೆಂಬುದು ಸದ್ಯ ಮುಂಚೂಣಿಯಲ್ಲಿರುವ ಕ್ಷೇತ್ರ. ಉದ್ಯೋಗ ಮಾತ್ರವಲ್ಲ, ಸ್ವಂತ ಉದ್ಯಮ ಆರಂಭಿಸಲು ಕೂಡ ಇದರ ಹಿನ್ನೆಲೆಯಿದ್ದರೆ ನಿರೀಕ್ಷಿತ ಸಾಧನೆಯನ್ನು ಮಾಡಬಹುದು. ಲಾಕ್‌ಡೌನ್‌ ಸಂದರ್ಭದಲ್ಲಂತೂ ಆಹಾರ ತಯಾರಿಕೆಗೆ ಸಂಬಂಧಿಸಿದ ಗೃಹೋದ್ಯಮಗಳು ಸಾಕಷ್ಟು ಬೆಳವಣಿಗೆ ಕಂಡಿವೆ ಎಂದು ಅಧ್ಯಯನವೊಂದು ಹೇಳಿದೆ.

ಹೆಸರೇ ಹೇಳುವಂತೆ ಕಚ್ಚಾ ರೂಪದಲ್ಲಿರುವ ಆಹಾರ ಧಾನ್ಯ ಅಥವಾ ಇತರ ಆಹಾರದ ಸಾಮಗ್ರಿಗಳನ್ನು ತಿನ್ನಲು ಯೋಗ್ಯವಾದ ರೂಪಕ್ಕೆ ಪರಿವರ್ತಿಸುವ ತಂತ್ರಜ್ಞಾನವಿದು. ಇದು ದೈಹಿಕ ಶ್ರಮ ಬೇಡಬಹುದು, ಯಂತ್ರೋಪಕರಣಗಳ ಅಗತ್ಯವಿರಬಹುದು ಅಥವಾ ರಾಸಾಯನಿಕ, ಜೈವಿಕ ತಂತ್ರಜ್ಞಾನದ ಬಳಕೆಯ ಮೂಲಕವೂ ಆಗಿರಬಹುದು. ಒಟ್ಟಿನಲ್ಲಿ ಗ್ರಾಹಕರಲ್ಲಿ ಬೇಡಿಕೆಯಿರುವ ಉತ್ಪನ್ನಗಳನ್ನು ಶುಚಿಯಾಗಿ, ಪೌಷ್ಟಿಕಾಂಶಯುಕ್ತವಾಗಿ ಸಿದ್ಧಪಡಿಸುವುದು ಇದರ ಮೂಲ ಸೂತ್ರ. ಮಾರುಕಟ್ಟೆಯಲ್ಲಿ ಹೆಚ್ಚು ದಿನ ಕೆಡದಂತೆ ಉಳಿಯುವಂತಹ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಬೇಕಾಗುತ್ತದೆ.

ಸದ್ಯ ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ವಿವಿಧ ಉದ್ಯಮಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಹಾರ ತಂತ್ರಜ್ಞಾನದಲ್ಲಿ ಪದವಿ ಪಡೆದವರಿಗೆ ಸಾಕಷ್ಟು ಅವಕಾಶಗಳಿವೆ. ಕೃಷಿ ಆಧಾರಿತ ಆರ್ಥಿಕತೆಯು ಸದ್ಯಕ್ಕೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಆಹಾರ ತಂತ್ರಜ್ಞಾನದಲ್ಲಿ ನುರಿತವರಿಗೆ ಬೇಡಿಕೆ ಸಾಕಷ್ಟಿದೆ.

ಪಿಯುಸಿ ಅಥವಾ 12ನೇ ತರಗತಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತವನ್ನು ಓದಿರಬೇಕು. ಇದು ಮುಂದಿನ ಶಿಕ್ಷಣಕ್ಕೆ ಅನುಕೂಲ. ಇದಲ್ಲದೇ ಜೀವವಿಜ್ಞಾನ, ಜೈವಿಕ ಎಂಜಿನಿಯರಿಂಗ್‌, ಕೆಮಿಕಲ್‌ ಎಂಜಿನಿಯರಿಂಗ್‌, ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೂ ಕೂಡ ಈ ಕ್ಷೇತ್ರದಲ್ಲಿ ಅವಕಾಶಗಳಿವೆ. ಆಹಾರ ವಿಜ್ಞಾನವಲ್ಲದೇ ನಂತರ ಸಂಸ್ಕರಣೆ, ಪ್ಯಾಕಿಂಗ್‌, ದೀರ್ಘಕಾಲ ಬಾಳಿಕೆ ಬರುವಂತಹ ತಂತ್ರಜ್ಞಾನವೂ ಇಲ್ಲಿ ಬಳಕೆಯಾಗುವುದರಿಂದ ವಿವಿಧ ಕ್ಷೇತ್ರಗಳಲ್ಲಿ ಪರಿಣತರಾದವರಿಗೂ ಅವಕಾಶಗಳಿವೆ. ಹಾಗೆಯೇ ಪ್ರಾಧ್ಯಾಪಕರಾಗಿ, ಪೌಷ್ಟಿಕಾಂಶ ತಜ್ಞರಾಗಿ, ಗುಣಮಟ್ಟದ ನಿರ್ವಾಹಕರಾಗಿ, ಲ್ಯಾಬ್‌ ತಂತ್ರಜ್ಞರಾಗಿ, ಕನ್ಸಲ್ಟೆಂಟ್‌ ಆಗಿಯೂ ಕೆಲಸ ಮಾಡಬಹುದು.

ಬೇಡಿಕೆ ಹೆಚ್ಚಾಗಿರುವುದರಿಂದ ವಿಶ್ವವಿದ್ಯಾಲಯಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳು ಈ ಕೋರ್ಸ್‌ ಅನ್ನು ಆರಂಭಿಸಿವೆ. ರಾಜ್ಯದಲ್ಲಿ ಆಹಾರ ಸಂಸ್ಕರಣೆ ಕುರಿತ ಡಿಪ್ಲೊಮಾ ಕೋರ್ಸ್‌ ಅನ್ನೂ ಈ ವರ್ಷ ಆರಂಭಿಸಲಾಗಿದ್ದು, ಎಸ್ಸೆಸ್ಸೆಲ್ಸಿ ನಂತರ ಓದಬಹುದು.

ಮೈಸೂರಿನ ಸಿಎಫ್‌ಟಿಆರ್‌ಐ, ಪುಣೆಯ ಎಂಐಟಿ ಆಹಾರ ತಂತ್ರಜ್ಞಾನ ಕಾಲೇಜ್‌, ತಮಿಳುನಾಡಿನ ತಂಜಾವೂರಿನ ಭಾರತೀಯ ಆಹಾರ ಸಂಸ್ಕರಣ ತಂತ್ರಜ್ಞಾನ ಸಂಸ್ಥೆ, ಔರಂಗಾಬಾದ್‌ನ ಭಾರತೀಯ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಗುವಾಹಟಿಯ ಐಐಟಿ, ಹರ್ಯಾಣದ ಸೋನೆಪತ್‌ನ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮ ಮತ್ತು ನಿರ್ವಹಣೆ ಸಂಸ್ಥೆ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಲ್ಲದೇ, ಹಲವು ಖಾಸಗಿ ಕಾಲೇಜುಗಳಲ್ಲಿಯೂ ಈ ಕೋರ್ಸ್‌ಗಳನ್ನು ಓದಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು