ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಹಸಿವು ಸೂಚ್ಯಂಕ 2023 : ಭಾರತ 111 ನೇ ಸ್ಥಾನ

Published 25 ಅಕ್ಟೋಬರ್ 2023, 23:30 IST
Last Updated 25 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಹಸಿವು ಮನುಕುಲವನ್ನು ಸದಾ ಬಾಧಿಸುವ ಬಲು ಮುಖ್ಯ ಅಂಶವಾಗಿದೆ. ಈ ನಿಟ್ಟಿನಲ್ಲಿ 125 ದೇಶಗಳಿಗೆ ಸಂಬಂಧಿಸಿದ ಪ‍್ರಸಕ್ತ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು ಭಾರತವು 111ನೇ ಸ್ಥಾನದಲ್ಲಿದೆ.

ವಿವರಗಳು

* ಜಾಗತಿಕ ಹಸಿವು ಸೂಚ್ಯಂಕ–2023ಕ್ಕೆ ಸಂಬಂಧಿಸಿ, ಭಾರತದ ಅಂಕ ಶೇ 28.7ರಷ್ಟಿದೆ. ಇದು ಹಸಿವಿನ ಮಟ್ಟ ಗಂಭೀರವಾಗಿರುವುದನ್ನು ತೋರಿಸುತ್ತದೆ ಎಂದು ಸೂಚ್ಯಂಕವನ್ನು ಆಧರಿಸಿ ಬಿಡುಗಡೆ ಮಾಡಿರುವ ವರದಿಯಲ್ಲಿ ವಿವರಿಸಲಾಗಿದೆ.

*‘ ಜಾಗತಿಕ ಹಸಿವು ಸೂಚ್ಯಂಕ’ (ಜಿಎಚ್‌ಐ) ಎಂಬುದು  ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಹಸಿವಿನ ಪ್ರಮಾಣವನ್ನು ಅಳೆಯುವ ಸಾಧನವಾಗಿದೆ.

* ಈ ವರದಿಯನ್ನು ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ವೆಲ್ಟ್‌ ಹಂಗರ್‌ ಹಿಲ್ಫ್ ಸಂಸ್ಥೆಗಳು ಜಂಟಿಯಾಗಿ ಪ್ರಕಟಿಸುತ್ತವೆ.

* ಇದು ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಸಿವನ್ನು ಅಳೆಯಲು ಮತ್ತು ಮೇಲ್ವಿಚಾರಣೆ ಮಾಡಲು ಸಮಗ್ರ ಸಾಧನವಾಗಿ ಕಾರ್ಯನಿರ್ವಹಿಸುತ್ತದೆಯಲ್ಲದೇ, ಹಸಿವಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಪರಿಗಣಿಸುತ್ತದೆ.

* ಇದರ ಉದ್ದೇಶ ಹಸಿವಿನ ವಿರುದ್ಧದ ಹೋರಾಟದ ಬಗ್ಗೆ ಅರಿವು ಮೂಡಿಸುವುದು, ರಾಷ್ಟ್ರಗಳು ಮತ್ತು ಪ್ರದೇಶಗಳ ನಡುವಿನ ಹಸಿವಿನ ಮಟ್ಟವನ್ನು ತುಲನಾತ್ಮಕವಾಗಿ ಪರಿಶೀಲಿಸುವುದು ಮತ್ತು ಹೆಚ್ಚಿನ ಹಸಿವಿನ ಮಟ್ಟವನ್ನು ಹೊಂದಿರುವ ಪ್ರದೇಶಗಳ ಬಗ್ಗೆ ವಿವರಗಳನ್ನು ನೀಡಿ ಹಸಿವನ್ನು ನಿರ್ಮೂಲನೆ ಮಾಡಬೇಕಿರುವ ಪ್ರಯತ್ನಗಳ ಅಗತ್ಯವನ್ನು ಒತ್ತಿಹೇಳುವುದು. ಮೊದಲ GHI ವರದಿಯನ್ನು 2006 ರಲ್ಲಿ ಪ್ರಕಟಿಸಲಾಯಿತು. ಇದರ ಗುರಿ ಜಾಗತಿಕ, ಪ್ರಾದೇಶಿಕ ಮತ್ತು ದೇಶೀಯ ಮಟ್ಟದಲ್ಲಿ ಹಸಿವನ್ನು ಸಮಗ್ರವಾಗಿ ಅಳೆಯುವುದು ಮತ್ತು ನಿಗಾ ವಹಿಸುವುದು.

GHI ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ?

* ಪ್ರತಿ ದೇಶದ GHI ಸ್ಕೋರ್ ಅನ್ನು ಈ ಕೆಳಗಿನ ನಾಲ್ಕು ಸೂಚ್ಯಂಕಗಳನ್ನು ಬಳಸಿ ಅದರ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಈ ಸೂತ್ರವು ಹಸಿವಿನ ಬಹುಆಯಾಮದ ಸ್ವರೂಪವನ್ನು ಸೆರೆಹಿಡಿಯುತ್ತದೆ.

(1) ಅಪೌಷ್ಟಿಕತೆ : ಸಾಕಷ್ಟು ಕ್ಯಾಲೊರಿ ಸೇವನೆಯನ್ನು ಮಾಡಲಾಗದ ಜನಸಂಖ್ಯೆ. ಗ್ಲೋಬಲ್ ಹಂಗರ್ ಇಂಡೆಕ್ಸ್‌ ಸೂಚ್ಯಂಕವನ್ನು ನಿರ್ಧರಿಸುವಲ್ಲಿ ಈ ಸೂಚಕಕ್ಕೆ 1/3 ರಷ್ಟು ತೂಕವಿರುತ್ತದೆ.

(2) ಮಕ್ಕಳ ಕುಂಠಿತ ಬೆಳವಣಿಗೆ : ತಮ್ಮ ವಯಸ್ಸಿಗೆ ಅನುಗುಣವಾಗಿ ಇರಬೇಕಾದ ಎತ್ತರವನ್ನು ಹೊಂದಿರದ ದೀರ್ಘಕಾಲದ ಅಪೌಷ್ಟಿಕತೆಯನ್ನು ಪ್ರತಿಬಿಂಬಿಸುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ. ಗ್ಲೋಬಲ್ ಹಂಗರ್ ಇಂಡೆಕ್ಸ್‌ ಸೂಚ್ಯಂಕವನ್ನು ನಿರ್ಧರಿಸುವಲ್ಲಿ ಈ ಸೂಚಕಕ್ಕೆ 1/6 ರಷ್ಟು ತೂಕವಿರುತ್ತದೆ.

(3) ಮಕ್ಕಳ ಕ್ಷೀಣ ಬೆಳವಣಿಗೆ : ತಮ್ಮ ಎತ್ತರಕ್ಕೆ ಹೋಲಿಸಿದಲ್ಲಿ ಕಡಿಮೆ ತೂಕವನ್ನು ಹೊಂದಿರುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ. ಗ್ಲೋಬಲ್ ಹಂಗರ್ ಇಂಡೆಕ್ಸ್‌ ಸೂಚ್ಯಂಕವನ್ನು ನಿರ್ಧರಿಸುವಲ್ಲಿ ಈ ಸೂಚಕಕ್ಕೆ 1/6 ರಷ್ಟು ತೂಕವಿರುತ್ತದೆ.

(4) ಮಕ್ಕಳ ಮರಣಪ್ರಮಾಣ : ತಮ್ಮ ಐದನೇ ಹುಟ್ಟುಹಬ್ಬದ ಮೊದಲು ಸಾಯುವ ಮಕ್ಕಳ ಸಂಖ್ಯೆ.ಇದು ಅಸಮರ್ಪಕವಾದ ಪೋಷಣೆ ಮತ್ತು ಅನಾರೋಗ್ಯಕರ ಪರಿಸರವನ್ನು ಸೂಚಿಸುತ್ತದೆ. ಗ್ಲೋಬಲ್ ಹಂಗರ್ ಇಂಡೆಕ್ಸ್‌ ಸೂಚ್ಯಂಕವನ್ನು ನಿರ್ಧರಿಸುವಲ್ಲಿ ಈ ಸೂಚ್ಯಂಕಕ್ಕೆ 1/3 ರಷ್ಟು ತೂಕವಿರುತ್ತದೆ.

* ಈ ನಾಲ್ಕು ಸೂಚಕಗಳ ಮೌಲ್ಯಗಳ ಆಧಾರದ ಮೇಲೆ, ಹಸಿವಿನ ತೀವ್ರತೆಯನ್ನು ಪ್ರತಿಬಿಂಬಿಸುವ 100-ಪಾಯಿಂಟ್ ಸ್ಕೇಲ್‌ನಲ್ಲಿ GHI ಅಂಕ ಎಷ್ಟು ಎಂದು ಲೆಕ್ಕಹಾಕಲಾಗುತ್ತದೆ. ಅಲ್ಲಿ 0 ಎಂದರೆ ಅತ್ಯುತ್ತಮ ಸ್ಕೋರ್ ಆಗಿರುತ್ತದೆ. ಅಂದರೆ ಆ ಪ್ರದೇಶದಲ್ಲಿ ಹಸಿವು ಇಲ್ಲ ಎಂದು ಅರ್ಥ ಮತ್ತು 100 ಎಂದರೆ ಹಸಿವಿನ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಅರ್ಥ.

* ಪ್ರತಿ ದೇಶದ GHI ಸ್ಕೋರ್ ಅನ್ನು ಅದರ ತೀವ್ರತೆಯನುಸಾರ ವರ್ಗೀಕರಿಸಲಾಗುತ್ತದೆ, ಕಡಿಮೆ ಆತಂಕದಿಂದ ಕಠಿಣ ಪರಿಸ್ಥಿತಿಯವರೆಗೆ ಆರೋಹಣ ಕ್ರಮದಲ್ಲಿ ಇದನ್ನು ದಾಖಲಿಸಲಾಗುತ್ತದೆ.

ಭಾರತದ ಪರಿಸ್ಥಿತಿ

* ಭಾರತದ ನೆರೆಯ ರಾಷ್ಟ್ರಗಳು ಈ ವಿಷಯದಲ್ಲಿ ಉತ್ತಮ ಸ್ಥಿತಿಯಲ್ಲಿವೆ.
ಪಾಕಿಸ್ತಾನ 102ನೇ ಸ್ಥಾನಲ್ಲಿದ್ದರೆ, ಬಾಂಗ್ಲಾದೇಶ 81, ನೇಪಾಳ 69 ಹಾಗೂ ಶ್ರೀಲಂಕಾ 60ನೇ ಸ್ಥಾನದಲ್ಲಿದೆ. 

* ಪ್ರಾದೇಶಿಕವಾಗಿ ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದ ದಕ್ಷಿಣ ಭಾಗಕ್ಕೆ ಸಂಬಂಧಿಸಿ ಈ ಸೂಚ್ಯಂಕವು 27ರಷ್ಟಿದೆ. ಈ ಪ್ರದೇಶಗಳಲ್ಲಿ ಹಸಿವಿನ ಸಮಸ್ಯೆ ಗರಿಷ್ಠ‌ವಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

* ಮಕ್ಕಳು ತಮ್ಮ ಎತ್ತರಕ್ಕೆ ತಕ್ಕಷ್ಟು ತೂಕ ಹೊಂದಿಲ್ಲದಿರುವುದು ಕೂಡ ಅಪೌಷ್ಟಿಕತೆಯ ವ್ಯಾಪ್ತಿಗೆ ಬರುತ್ತದೆ. ಈ ಪ್ರಮಾಣವು ಭಾರತದಲ್ಲಿ  ಶೇ 18.7ರಷ್ಟಿದೆ. ಇದು ಜಗತ್ತಿನಲ್ಲಿಯೇ ಗರಿಷ್ಠ ಮಟ್ಟದ್ದಾಗಿದೆ ಎಂದು ಸೂಚ್ಯಂಕ ಕುರಿತ ವರದಿಯಲ್ಲಿ ಹೇಳಲಾಗಿದೆ.

* ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತದ ಮಕ್ಕಳ ಕ್ಷೀಣಬೆಳವಣಿಗೆಯ ಪ್ರಮಾಣವು 18.7 ರಷ್ಟಿದ್ದು ಈ ಸೂಚ್ಯಂಕದ ವರದಿಯಲ್ಲಿ ತಿಳಿಸಿದಂತೆ ಇದು ಜಗತ್ತಿನಲ್ಲಿಯೇ ಗರಿಷ್ಠ ಮಟ್ಟದ್ದಾಗಿದೆ . ಭಾರತದಲ್ಲಿ ಮಕ್ಕಳ ಕುಂಠಿತ ಬೆಳವಣಿಗೆಯ ಪ್ರಮಾಣವು ಶೇ35.5 ರಷ್ಟಿದ್ದರೆ, ಅಪೌಷ್ಟಿಕತೆಯು ಶೇ16.6 ರಷ್ಟು ದಾಖಲಾಗಿದೆ. ಭಾರತದಲ್ಲಿ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು ಶೇ 3.1 ಆಗಿದೆ.

ಹಸಿವು ಎಂದರೇನು ?

ವರದಿಯ ಪ್ರಕಾರ ಹಸಿವು ಎಂದರೆ ಸುಧೀರ್ಘ ಕಾಲದಲ್ಲಿ ಸಾಕಷ್ಟು ಕ್ಯಾಲೋರಿ ಸೇವನೆ ಮಾಡಲಾಗದೇ ಅನುಭವಿಸುವ ತೊಂದರೆಗಳನ್ನು ಸೂಚಿಸುತ್ತದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO)ಯು ಆಹಾರದ ಅಭಾವ ಅಥವಾ ಅಪೌಷ್ಟಿಕತೆಯನ್ನು ಅಸಮರ್ಪಕ ಸಂಖ್ಯೆಯ ಕ್ಯಾಲೊರಿಗಳ ಸೇವಿಸುವಿಕೆ ಎಂದು ವ್ಯಾಖ್ಯಾನಿಸುತ್ತದೆ. ಒಬ್ಬ ವ್ಯಕ್ತಿಯು ಆರೋಗ್ಯಕರ ಮತ್ತು ಉತ್ಪಾದಕ ಜೀವನವನ್ನು ನಡೆಸಲು ಅಗತ್ಯವಾದ ಕನಿಷ್ಟ ಆಹಾರ ಶಕ್ತಿಯ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚಿನ ಕಾಲ ವಿಫಲವಾದಲ್ಲಿ ಅದನ್ನು ಹಸಿವು ಎಂದು ವ್ಯಾಖ್ಯಾನಿಸುತ್ತದೆ.(ಅಂದರೆ ಉದಾಹರಣೆಗೆ ಎರಡು ಅಥವಾ ನಾಲ್ಕು ದಿನಗಳ ಕಾಲ ಒಬ್ಬ ವ್ಯಕ್ತಿ ಇತರ ಯಾವುದೋ ಕಾರಣಾಂತರಗಳಿಂದ ಆಹಾರವನ್ನು ಸೇವಿಸಲಾಗದಿದ್ದರೆ ಅದನ್ನು ಸೂಚ್ಯಂಕದಲ್ಲಿ ಪರಿಗಣಿಸಲಾಗುವುದಿಲ್ಲ.)

ಅಪೌಷ್ಟಿಕತೆ ಎಂದರೇನು ?

ಅಪೌಷ್ಟಿಕತೆ ಎಂದರೆ ಅದು ಕೇವಲ ಕ್ಯಾಲೋರಿ ಕೊರತೆಯನ್ನು ಮಾತ್ರ ಸೂಚಿಸುವುದಿಲ್ಲ ಬದಲಾಗಿ ಪ್ರೋಟೀನ್ ಅಥವಾ ನಿರ್ಣಾಯಕ ಜೀವಸತ್ವಗಳು ಮತ್ತು ಖನಿಜಗಳ ಕೊರತೆಯನ್ನು ಸೂಚಿಸುತ್ತದೆ.
ಅಲ್ಪಪ್ರಮಾಣದ ಆಹಾರ ಅಥವಾ ಸತ್ವಹೀನ ಆಹಾರದ ಸೇವನೆ, ಸೋಂಕುಗಳು ಅಥವಾ ಅನಾರೋಗ್ಯದ ಕಾರಣದಿಂದಾಗಿ ದೇಹದೊಳಗೆ ಪೋಷಕಾಂಶಗಳ ಸರಿಯಾದ ಬಳಕೆ ಆಗದಿರುವುದು ಇದರ ಪ್ರಧಾನ ಕಾರಣಗಳಾಗಿವೆ.

ಮನೆಯಲ್ಲಿ ಆಹಾರದ ಅಭದ್ರತೆಯ ವಾತಾವರಣ, ತಾಯಿಯ ಆರೋಗ್ಯ ಅಥವಾ ಶಿಶುಪಾಲನಾ ಅಭ್ಯಾಸಗಳ ಬಗ್ಗೆ ಕಾಳಜಿ ಇಲ್ಲದಿರುವುದು, ಆರೋಗ್ಯ ಸೇವೆಗಳಿಗೆ ಸೀಮಿತ ಪ್ರವೇಶ, ಸುರಕ್ಷಿತ ನೀರು ಮತ್ತು ನೈರ್ಮಲ್ಯದ ಕೊರತೆ ಮುಂತಾದ ಹಲವು ಅಂಶಗಳು ಅಪೌಷ್ಟಿಕತೆಗೆ ಕಾರಣವಾಗುತ್ತವೆ.

ಅಸಮತೋಲಿತ ಪೌಷ್ಟಿಕತೆ ಎಂದರೇನು ?

ಅಸಮತೋಲಿತ ಪೌಷ್ಟಿಕತೆಯು, ಅಪೌಷ್ಟಿಕತೆ (ಕೊರತೆಗಳಿಂದ ಉಂಟಾಗುವ ಸಮಸ್ಯೆಗಳು) ಮತ್ತು ಅತಿಪೌಷ್ಟಿಕತೆಯನ್ನು ಸೂಚಿಸುತ್ತದೆ. ಅತಿಯಾದ ಕ್ಯಾಲೋರಿ ಸೇವನೆಯಿಂದ ಉಂಟಾಗುವ ತೊಂದರೆಗಳು, ಅಸಮತೋಲಿತ ಆಹಾರದಿಂದ ಉಂಟಾಗುವ ಸವಾಲುಗಳು, ಮೈಕ್ರೋನ್ಯೂಟ್ರಿಯಂಟ್-ಭರಿತ ಆಹಾರಗಳ ಅಸಮರ್ಪಕ ಸೇವನೆಯೊಂದಿಗೆ ಉಂಟಾಗುವ ಸವಾಲುಗಳು ಮುಂತಾದ ವಿಶಾಲ ವ್ಯಾಖ್ಯಾನವನ್ನು ಹೊಂದಿದೆ.

*ಅತಿಪೌಷ್ಟಿಕತೆಯು ಅಧಿಕ ತೂಕ, ಸ್ಥೂಲಕಾಯತೆ ಮತ್ತು ಅನೇಕ ರೀತಿಯ ಹೃದಯದೊತ್ತಡ, ಸಕ್ಕರೆ ಖಾಯಿಲೆ ಮುಂತಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳಂತಹ ಪರಿಸ್ಥಿತಿಗಳಿಗೆ ಕಾರಣವಾಗುತ್ತಿದ್ದು ಇದು ಜಾಗತಿಕವಾಗಿ ಪ್ರಚಲಿತದಲ್ಲಿರುವ ಬಹಳ ದೊಡ್ಡ ಸಮಸ್ಯೆಯಾಗಿದೆ.ಇದು ಒಟ್ಟು ಮಾನವನ ಆರೋಗ್ಯ, ಸರ್ಕಾರದ ಬಜೆಟ್‌ಗಳು ಮತ್ತು ಆಹಾರ ವ್ಯವಸ್ಥೆಗಳ ಒಟ್ಟು ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ.


*ಅತಿ ಪೌಷ್ಟಿಕತೆಯು ಕೂಡಾ ಪ್ರಸಕ್ತ ಜಗತ್ತಿನಲ್ಲಿ, ಉಳ್ಳವರ ಲೋಕದ ಬಲು ದೊಡ್ಡಸಮಸ್ಯೆಯಾಗಿದ್ದರೂ ಜಾಗತಿಕ ಹಸಿವು ಸೂಚ್ಯಂಕವು ನಿರ್ದಿಷ್ಟವಾಗಿ ಅಪೌಷ್ಟಿಕತೆಗೆ ಸಂಬಂಧಿಸಿದ ವಿಷಯಗಳತ್ತ ತನ್ನ ಗಮನವನ್ನು ಹರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT