ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಕಲಿಕೆ ಹೇಗೆ?: ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ–ವಿ ಪ್ರದೀಪ್ ಕುಮಾರ್

Last Updated 26 ಡಿಸೆಂಬರ್ 2021, 22:30 IST
ಅಕ್ಷರ ಗಾತ್ರ

1. ನಾನು ಯುಪಿಎಸ್‌ಸಿ ತರಬೇತಿ ಪಡೆಯುತ್ತಿದ್ದೇನೆ. ಆದರೆ, ನನಗೆ ಇಂಗ್ಲಿಷ್ ಭಾಷೆ ಅರ್ಥವಾಗುತ್ತಿಲ್ಲ. ನಾನು ಕನ್ನಡದಲ್ಲೇ ಅಭ್ಯಾಸ ನಡೆಸಿದರೆ ಪೂರ್ವಭಾವಿ ಪರೀಕ್ಷೆಗೆ ತೊಂದರೆಯಾಗುತ್ತದೆ. ದಯವಿಟ್ಟು ಇಂಗ್ಲಿಷ್‌ ಕಲಿಯಲು ಸುಲಭದ ಉಪಾಯಗಳನ್ನು ತಿಳಿಸಿ.

ಕಿರಣ್, ಊರು ತಿಳಿಸಿಲ್ಲ.

ಇಂಗ್ಲಿಷ್‌ ಭಾಷೆ ಕಬ್ಬಿಣದ ಕಡಲೆಯಲ್ಲ; ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಕಾರ್ಯತಂತ್ರ ಮತ್ತು ಪರಿಶ್ರಮವಿದ್ದಲ್ಲಿ, ಇಂಗ್ಲಿಷ್‌ ಕಲಿಯಬಹುದು. ಮೊದಲಿಗೆ, ಈ ಸಲಹೆಗಳನ್ನು ಅನುಸರಿಸಿ:

ಆತ್ಮವಿಶ್ವಾಸ: ಇಂಗ್ಲಿಷ್‌ ಭಾಷೆಯನ್ನು ಕಲಿಯುವಾಗ ಹಿಂಜರಿಕೆಯಿಲ್ಲದೆ, ಆತ್ಮವಿಶ್ವಾಸದಿಂದ ಕಲಿಕೆಯನ್ನು ಪ್ರಾರಂಭಿಸಿ.

ಓದುವುದು: ದಿನನಿತ್ಯ ಇಂಗ್ಲಿಷ್‌ ದಿನಪತ್ರಿಕೆಗಳನ್ನು, ಪುಸ್ತಕಗಳನ್ನು, ಲೇಖನಗಳನ್ನು ಓದಿ. ಪದಬಳಕೆ, ವಾಕ್ಯ ರಚನೆ, ವ್ಯಾಕರಣವನ್ನು ಗಮನಿಸಿ. ಸಾಧ್ಯವಾದರೆ, ಉಚ್ಛಾರಣೆಗೆ ಸಹಾಯವಾಗುವಂತೆ ಜೋರಾಗಿ ಓದಿ. ಅರ್ಥವಾಗದ ಪದಗಳನ್ನು ನಿಘಂಟಿನ ಮೂಲಕ ಅರ್ಥೈಸಿಕೊಳ್ಳಿ.

ಮಾತನಾಡುವುದು: ಆತ್ಮೀಯರೊಂದಿಗೆ ಸರಳವಾದ ವಿಷಯಗಳನ್ನು ಇಂಗ್ಲಿಷ್‌ನಲ್ಲೇ ಮಾತನಾಡಲು ಪ್ರಯತ್ನಿಸಿ. ತಪ್ಪು-ಒಪ್ಪುಗಳಾದಲ್ಲಿ, ಸಂಕೋಚ ಪಡದೆ ಪ್ರಯತ್ನವನ್ನು ಮುಂದುವರೆಸಿ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು, ಕನ್ನಡಿಯ ಮುಂದೆ ಆಂಗಿಕ ಭಾಷೆಯನ್ನು ಬಳಸಿ ಮಾತನಾಡಿ.

ವಿಡಿಯೊ, ಚಲನಚಿತ್ರಗಳ ವೀಕ್ಷಣೆ: ಕನ್ನಡದ ಉಪಶೀರ್ಷಿಕೆಗಳಿರುವ ಇಂಗ್ಲಿಷ್ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಿ. ಅದೇ ರೀತಿ, ಯೂಟ್ಯೂಬ್‌ನಲ್ಲಿ ಇಂಗ್ಲಿಷ್ ಕಲಿಕೆಗೆ ನೆರವಾಗುವ ವಿಡಿಯೊಗಳನ್ನು ವೀಕ್ಷಿಸಿ. ಹಾಗೆಯೇ, ಸಾಧಕರ ಭಾಷಣಗಳನ್ನು ಕೇಳುವುದರಿಂದ ಪ್ರೇರೇಪಿತರಾಗುವುದರ ಜೊತೆಗೆ ಇಂಗ್ಲಿಷ್ ಕಲಿಯುವಿಕೆಗೆ ಸಹಾಯವಾಗುತ್ತದೆ.

ಮೊಬೈಲ್ ಅಪ್ಲಿಕೇಶನ್ಸ್ ಬಳಕೆ: ಇಂಗ್ಲಿಷ್ ಕಲಿಕೆಗೆ ಅನುಕೂಲವಾಗುವ ಹಲವಾರು ಮೊಬೈಲ್ ಅಪ್ಲಿಕೇಶನ್‌ಗಳಿವೆ. ಅವುಗಳನ್ನು ಬಳಸಿ.

ಈ ಸಲಹೆಗಳನ್ನು ಕೆಲವು ತಿಂಗಳ ಕಾಲ ನಿರಂತರವಾಗಿ ಅನುಸರಿಸಿದ ನಂತರ ನಿಮ್ಮ ಇಂಗ್ಲಿಷ್‌ ಕಲಿಕೆ ಒಂದು ಹಂತಕ್ಕೆ ತಲುಪುತ್ತದೆ. ಆಗ, ನೀವು ಯುಪಿಎಸ್‌ಸಿ ತರಬೇತಿ ಪಡೆಯುತ್ತಿರುವ ಸಂಸ್ಥೆ ಅಥವಾ ಆನ್‌ಲೈನ್ ಕೋರ್ಸ್‌ಗಳ ಮೂಲಕ ಹೆಚ್ಚಿನ ಪರಿಣತಿಯನ್ನು ಗಳಿಸಿ. ಶುಭಹಾರೈಕೆಗಳು.

2. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಓದುತ್ತಿದ್ದೇನೆ. ನನಗೆ ಓದಲು ಇತ್ತೀಚೆಗೆ ತುಂಬಾ ಕಷ್ಟವಾಗಿ, ಆಸಕ್ತಿಯೂ ಕುಂದುತ್ತಿದೆ. ಇದರಿಂದ ಮನೆಯಲ್ಲಿ ನನ್ನ ಬಗ್ಗೆ ಕೋಪಗೊಂಡಿದ್ದಾರೆ. ಆದ ಕಾರಣ, ನಾನು ಪಿಯುಸಿ ಮುಗಿಸಿ ಮುಂದಿನ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆಯಾಗದ ಯಾವ ಕೋರ್ಸ್ ಮಾಡಿದರೆ ಒಳ್ಳೆಯದು? ಮತ್ತು ಬೇಗ ಕೆಲಸ ಪಡೆದುಕೊಳ್ಳುವ ಕೋರ್ಸ್ ಇದ್ದರೆ ದಯವಿಟ್ಟು ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ನಿಮ್ಮ ಭವಿಷ್ಯದ ಬಗ್ಗೆ ಆತಂಕಗೊಂಡಿರುವ ಮನೆಯವರ ಪ್ರತಿಕ್ರಿಯೆ ಸಹಜ. ಈಗಿನ ಪರಿಸ್ಥಿತಿಯಿಂದ ಎದೆಗುಂದದೆ ನಿಮ್ಮ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಸಾಧಕರ ಕಥೆಗಳನ್ನು ಓದಿ, ವಿಡಿಯೊಗಳನ್ನು ವೀಕ್ಷಿಸಿ; ಸ್ವಯಂ ಪ್ರೇರಣೆಯನ್ನು ಬೆಳೆಸಿಕೊಂಡು ನೀವೂ ಒಬ್ಬ ಸಾಧಕರಾಗಲು ಪ್ರಯತ್ನಿಸಿ. ಈ ಕುರಿತು ನಿಮ್ಮ ಮನೆಯವರಿಗೆ ಮನವರಿಕೆಯಾಗುವಂತೆ ವಿವರಿಸಿ, ಅವರ ಬೆಂಬಲವನ್ನು ಪಡೆಯಿರಿ.

ಎಂಜಿನಿಯರಿಂಗ್, ಬಿಎಸ್‌ಸಿ ಅಥವಾ ನಿಮಗಿಷ್ಟವಿರುವ ಕೋರ್ಸ್ ಮಾಡಲು ಸರ್ಕಾರಿ ಕಾಲೇಜುಗಳನ್ನು ಸೇರಬಹುದು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್‌ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ, ಆ ಅನುಕೂಲಗಳನ್ನು ಪಡೆದುಕೊಳ್ಳಿ.

ಅಗತ್ಯವಿದ್ದರೆ, ವಿದ್ಯಾಭ್ಯಾಸದ ಜೊತೆಗೆ ಅರೆಕಾಲಿಕ ಕೆಲಸಗಳನ್ನು ಮಾಡಿ ಆರ್ಥಿಕ ಸಮಸ್ಯೆಯ ಭಾರವನ್ನು ತಗ್ಗಿಸಿ ಮನೆಯವರ ವಿಶ್ವಾಸವನ್ನು ಗಳಿಸಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/self-motivation

3. ನಾನು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ. ನನಗೆ ಸಿಎಂಎ (ಯುಎಸ್‌ಎ) ಕೋರ್ಸ್ ಬಗ್ಗೆ ಮಾಹಿತಿ ತಿಳಿಸಿ. ಎಂಬಿಎ ಮತ್ತು ಸಿಎಂಎ ಇವೆರಡರಲ್ಲಿ, ಯಾವುದಕ್ಕೆ ಹೆಚ್ಚು ಅವಕಾಶಗಳಿವೆ?

ಸುದರ್ಶನ್, ಮಂಗಳೂರು.

ಸಿಎಂಎ, ಹಣಕಾಸಿನ ವ್ಯವಹಾರಗಳ ನಿರ್ವಹಣೆಗೆ ಸಂಬಂಧಪಟ್ಟ ಕ್ಷೇತ್ರ; ಎಂಬಿಎ ಉದ್ಯಮಗಳ ನಿರ್ವಹಣೆಗೆ ಸಂಬಂಧಪಟ್ಟ ಕ್ಷೇತ್ರ.

ಸಿಎಂಎ (ಯುಎಸ್‌ಎ) ಕೋರ್ಸ್‌ ಅನ್ನು ಪದವಿಯ ನಂತರ, ಎರಡು ವರ್ಷಗಳ ಹಣಕಾಸು ಸಂಬಂಧಿತ ಕೆಲಸದ ಅನುಭವದ ನಂತರ ಮಾಡಬಹುದು. ನಿಮ್ಮ ಪರಿಶ್ರಮ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಈ ಕೋರ್ಸ್‌ ಅನ್ನು 6 ತಿಂಗಳಿಂದ 3 ವರ್ಷದ ಒಳಗೆ ಮುಗಿಸಬಹುದು. ಕೋರ್ಸ್ ಮುಗಿದ ನಂತರ, ವಿಶೇಷವಾಗಿ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಹೆಚ್ಚು ಉದ್ಯೋಗಾವಕಾಶಗಳಿವೆ. ಎಂಬಿಎ ಕೋರ್ಸ್‌ ಅನ್ನು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಮಾಡಿದರೆ ಕ್ಯಾಂಪಸ್ ಮುಖಾಂತರ ಆಕರ್ಷಕ ಉದ್ಯೋಗಾವಕಾಶಗಳಿರುತ್ತವೆ.

ಹಾಗಾಗಿ, ನೀವು ಕೇಳಿರುವ ಎರಡೂ ಕೋರ್ಸ್‌ಗಳಿಗೆ ವಿಪುಲವಾದ ಉದ್ಯೋಗಾವಕಾಶಗಳಿದ್ದು, ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಂತೆ ನಿರ್ಧರಿಸಿ.

4. ನಾನು ಬಿಕಾಂ ಮುಗಿಸಿದ್ದೇನೆ. ನನಗೆ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಕೆಲಸ ಸಿಕ್ಕಿದೆ. ಅದೇ ಉದ್ಯೋಗದಲ್ಲಿ ಮುಂದುವರಿಯಲೇ? ಇವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ನನಗೆ ಭವಿಷ್ಯವಿದೆಯೇ?

ಕಾರ್ತಿಕ್, ಊರು ತಿಳಿಸಿಲ್ಲ.

ಕೋವಿಡ್–19 ಆಘಾತದಿಂದ ಹೆಚ್ಚು ಬಳಲಿದ್ದ ಇವೆಂಟ್ ಮ್ಯಾನೇಜ್‌ಮೆಂಟ್ ಕ್ಷೇತ್ರ ಈಗಷ್ಟೇ ಚೇತರಿಸಿಕೊಳ್ಳುವ ಹಾದಿಯ ಲ್ಲಿದೆ. ದೀರ್ಘಾವಧಿಯಲ್ಲಿ ಸಾಕಷ್ಟು ಬೇಡಿಕೆಯಿರುತ್ತದೆಯಾದರೂ, ಇದೊಂದು ಅತಿ ಹೆಚ್ಚು ಪೈಪೋಟಿಯಿರುವ ಸ್ಪರ್ಧಾತ್ಮಕ ಕ್ಷೇತ್ರ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಂವಹನ ಕೌಶಲ, ಶಿಸ್ತು, ಪರಿಶ್ರಮ ಮತ್ತು ನಾಯಕತ್ವದ ಕೌಶಲವಿದ್ದು, ಕಾರ್ಯಕ್ಷಮತೆ ನಿರೀಕ್ಷೆಯಂತಿರಬೇಕು.

5. ನಾನು ಡಿಪ್ಲೊಮಾ ಮಾಡಿ ಬಿಎ ಮುಗಿಸಿದ್ದೇನೆ. ನಾನು ಪಿಎಸ್‌ಐ, ಪಿಡಿಒ, ಕೆಎಎಸ್ ಪರೀಕ್ಷೆ ಬರೆಯಬಹುದೇ?

ಮಂಜುನಾಥ ಎಸ್. ಎನ್., ಊರು ತಿಳಿಸಿಲ್ಲ.

ನೀವು ಪದವಿಯನ್ನು ಮುಗಿಸಿರುವುದರಿಂದ, ಪಿಎಸ್‌ಐ, ಪಿಡಿಒ ಮತ್ತು ಕೆಎಎಸ್ ಪರೀಕ್ಷೆಯನ್ನು ಬರೆಯಬಹುದು.

6. ನಾನು ಬಿಇ (ಎಲೆಕ್ಟ್ರಿಕಲ್‌ ಅಂಡ್ ಎಲೆಕ್ಟ್ರಾನಿಕ್ಸ್‌) ಮುಗಿಸಿದ್ದೇನೆ. ಮುಂದೆ, ಇದೇ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದುಕೊಂಡಿದ್ದೇನೆ. ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿ.

ವಿದ್ಯಾಶ್ರೀ, ಊರು ತಿಳಿಸಿಲ್ಲ.

ಐಟಿ, ಟೆಲಿಕಾಮ್, ಆಟೊಮೊಬೈಲ್, ಏರೋಸ್ಪೇಸ್, ಸ್ಟೀಲ್, ವಿದ್ಯುತ್ ಉತ್ಪಾದನೆ, ಪ್ರಸರಣೆ ಮತ್ತು ವಿತರಣೆ ಸಂಸ್ಥೆಗಳು, ರೈಲ್ವೆ ಇಲಾಖೆ, ಪ್ರಾಪರ್ಟಿ, ಎಂಜಿನಿಯರಿಂಗ್ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ.

7. ನಾನು ಬಿಎಸ್‌ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಮುಂದೆ, ಎಂಎಸ್‌ಸಿ ಮುಗಿಸಿ ಎನ್‌ಇಟಿ ಪರೀಕ್ಷೆಯನ್ನು ಗಣಿತದಲ್ಲಿ ಮಾಡಬೇಕೆಂದುಕೊಂಡಿದ್ದೀನಿ. ಮಾರ್ಗದರ್ಶನ ನೀಡಿ.

ಅಮರೇಶ್, ಊರು ತಿಳಿಸಿಲ್ಲ.

ಎನ್‌ಇಟಿ ಪರೀಕ್ಷೆಯ ಎಲ್ಲಾ ವಿವರಗಳಿಗಾಗಿ ಗಮನಿಸಿ: https://prepp.in/csir-ugc-net-exam/exam-pattern

8. ನಾನು ಬಿಎ ಮುಗಿಸಿದ್ದೀನಿ ಮತ್ತು ಪಿಎಸ್‌ಐ ಆಗಬೇಕು. ಆದರೆ, ಮುಂದೇನು ಮಾಡಬೇಕು ತಿಳಿಯುತ್ತಿಲ್ಲ. ದಯವಿಟ್ಟು ಮಾರ್ಗದರ್ಶನ ನೀಡಿ.

ವಿನೋದ್, ಮುದ್ಲಾಪುರ್.

9. ಸರ್, ನಾನು ಪದವಿ (ಬಿಎ) ಮುಗಿಸಿದ್ದು, ಪಿಎಸ್‌ಐ ಆಗಲು ಇಚ್ಚಿಸಿದ್ದು, ಇದಕ್ಕೆ ಹೇಗೆ ತಯಾರಿ ನಡೆಸಬೇಕು?

ಸುರೇಶ್ ಬಾಗಿಲ್ ಮನಿ, ಊರು ತಿಳಿಸಿಲ್ಲ.

10. ನಾನು ಪೊಲೀಸ್ ಇಲಾಖೆಯ ಪಿಸಿ ಮತ್ತು ಪಿಎಸ್‌ಐ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ ಮತ್ತು ಹಲವಾರು ಪರೀಕ್ಷೆಗಳನ್ನು ಬರೆದು ಸೋತಿದ್ದೇನೆ. ನಾನು ಎಲ್ಲಿ ಎಡವುತ್ತಿದ್ದೇನೆ ತಿಳಿಯುತ್ತಿಲ್ಲ. ಮಾರ್ಗದರ್ಶನ ನೀಡಿ. ಪ್ರಸ್ತುತ ಯೂಟ್ಯೂಬ್‌ನ ಆನ್‌ಲೈನ್ ತರಗತಿಗಳನ್ನು ನಾವು ಹೇಗೆ ಸದ್ಭಳಕೆ ಮಾಡಿಕೊಳ್ಳಬಹುದು?

ಪ್ರಸನ್ನಕುಮಾರ್ ಎನ್. ಎಸ್., ಮೈಸೂರು.

ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ ಮತ್ತು ವಿಷಯಸೂಚಿಗೆ ಗಮನಿಸಿ: https://prepp.in/karnataka-police-exam

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತ ಮಾರ್ಗದರ್ಶನಕ್ಕಾಗಿ ಗಮನಿಸಿ:http://www.vpradeepkumar.com/how-to-succeed-in-entrance-exams/

11. ನಾನು ಕನ್ನಡ ಶಿಕ್ಷಕನಾಗಬೇಕೆಂಬ ಆಸೆ ಇತ್ತು. ಆದರೆ, ನಾನು ಎಂಜಿನಿಯರಿಂಗ್ ಮಾಡಿದ್ದೇನೆ. ಮುಂದೇನು ಮಾಡಿದರೆ, ನನ್ನ ಗುರಿ ತಲುಪಬಹುದು?

ಸಿದ್ದಯ್ಯ ಮಠ, ವಿಜಯಪುರ.

ಎಂಜಿನಿಯರಿಂಗ್ ಪದವೀಧರರು ಬಿ.ಇಡಿ ಮಾಡದೇ, ಕರ್ನಾಟಕ ಸರ್ಕಾರದ ಟಿಇಟಿ ಪರೀಕ್ಷೆಯನ್ನು ಪಾಸಾಗಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಕಲಿಸುವ ವ್ಯವಸ್ಥೆ ಈಗ ಜಾರಿಯಾಗುತ್ತಿದೆ. ಈ ಪರೀಕ್ಷೆಯಲ್ಲಿ ಶಿಕ್ಷಕರಾಗಿ, ವೃತ್ತಿ ಸಂಬಂಧಿತ ಕೌಶಲಗಳಾದ ತಾಳ್ಮೆ, ಸಹನೆ, ಸಂವಹನ, ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಕೌಶಲ ಮತ್ತು ನಾಯಕತ್ವದ ಕೌಶಲಗಳು ನಿಮ್ಮಲ್ಲಿವೆಯೇ ಎಂದು ಮತ್ತು ಈ ವೃತ್ತಿಯಲ್ಲಿ ನಿಮಗೆ ಸಂತೃಪ್ತಿ ಸಿಗುವುದೇ ಎಂದು ಸ್ವತಃ ಪರೀಕ್ಷಿಸಬಹುದು. ಇದಾದ ನಂತರ, ನಿಮ್ಮ ಆದ್ಯತೆಯಂತೆ, ಕನ್ನಡ ಭಾಷೆ ಅಥವಾ ಇನ್ನಿತರ ವಿಷಯಗಳಲ್ಲಿ ಪರಿಣತಿ ಗಳಿಸಿ ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT