ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೃತ್ತಿ ಯೋಜನೆ’ಗಿರಲಿ ಶಿಕ್ಷಕರ ಮಾರ್ಗದರ್ಶನ

Last Updated 10 ಜನವರಿ 2022, 1:48 IST
ಅಕ್ಷರ ಗಾತ್ರ

ದುಬೈನಲ್ಲಿದ್ದ ನನ್ನ ಸ್ನೇಹಿತರ ಮಗ ರಾಹುಲ್‌ಗೆ ಶಿಕ್ಷಣ ಮಾರ್ಗದರ್ಶನ ನೀಡುತ್ತಿದ್ದೆ. ಒಮ್ಮೆ ಅವನನ್ನು ‘ಮುಂದೆ ನೀನು ಏನಾಗಬೇಕು ಎಂದುಕೊಂಡಿದ್ದೀಯಾ’ ಎಂದು ಕೇಳಿದೆ. ‘ನಾನು ಏರೋ ನಾಟಿಕಲ್ ಎಂಜಿನಿಯರ್ ಆಗಿ, ಅಮೆರಿಕದ ನಾಸಾ ಸಂಸ್ಥೆಗೆ ಸೇರುವ ಕನಸಿದೆ’ ಎಂದಿದ್ದ. ಆಗ ಅವನ ವಯಸ್ಸು 8 ವರ್ಷ. ಹೀಗೆ ಚಿಕ್ಕ ವಯಸ್ಸಿನಿಂದಲೇ ನಿಖರ ಗುರಿ ಇಟ್ಟುಕೊಂಡು, ಸೂಕ್ತ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲದೊಂದಿಗೆ ಹೆಜ್ಜೆ ಹಾಕಿದ ರಾಹುಲ್ ಈಗ ನಾಸಾ ಉದ್ಯೋಗಿ !

ಇನ್ನೊಂದು ಘಟನೆ; ಜಾನ್‌, ಅಮೆರಿಕದಲ್ಲಿ ಎಂಎಸ್ (ಮೆಕಾಟ್ರಾನಿಕ್ಸ್) ಪದವಿ ಮುಗಿಸಿ, ಉದ್ಯೋಗದ ಕನಸಿನೊಂದಿಗೆ ಭಾರತಕ್ಕೆ ಬಂದ. ದುರದೃಷ್ಟವಶಾತ್ ಆ ಪದವಿಗೆ ಎಲ್ಲೂ ಉದ್ಯೋಗ ಸಿಗಲಿಲ್ಲ. ಎಲ್ಲೇ ಹೋದರೂ ‘ನಮಗೆ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಾನಿಕ್ಸ್‌ ಪದವೀಧರರ ಬೇಕು. ಮೆಕಾಟ್ರಾನಿಕ್ಸ್ ಪದವೀಧರರು ಬೇಡ‘ ಎನ್ನುತ್ತಿದ್ದರು. ಓದುವಾಗ ಇದ್ದ ಬೇಡಿಕೆ, ಕೋರ್ಸ್‌ ಮುಗಿಸುವ ಹೊತ್ತಿಗೆ ಕುಸಿದಿತ್ತು. ಇದರಿಂದ ಜಾನ್‌ ಬೇಸರಗೊಂಡ. ‘ಯಾಕಾದರೂ ಈ ಕೋರ್ಸ್ ಮಾಡಿ ದೆನೋ‘ ಪರಿತಪಿಸಿದ. ಕ್ಲಿಷ್ಟ ಸಮಸ್ಯೆಗಳಿಂದ ಖಿನ್ನನಾಗಿದ್ದ ಜಾನ್‌, ನನ್ನ ಬಳಿ ಮಾರ್ಗದರ್ಶನಕ್ಕಾಗಿ ಬರುವ ವೇಳೆಗೆ ಸಂಪೂರ್ಣ ಕುಸಿದು ಹೋಗಿದ್ದ. ಆತನ ಸಮಸ್ಯೆ ಗಂಭೀರವಾಗಿತ್ತು; ಪರಿಹಾರಕ್ಕೆ ಹೆಚ್ಚು ಶ್ರಮ ಹಾಕಬೇಕಾಯಿತು. ಮೆಕಟ್ರಾನಿಕ್ಸ್ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವಾಗ ತಜ್ಞರ ಮಾರ್ಗದರ್ಶನ ಪಡೆಯದೇ, ವೃತ್ತಿಯೋಜನೆ ರೂಪಿಸಿ ಕೊಳ್ಳದ ಕಾರಣ ಜಾನ್‌ಗೆ ಈ ಸಮಸ್ಯೆ ಎದುರಾಗಿತ್ತು.

ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲೇ ‘ವೃತ್ತಿ ಯೋಜನೆ‘ ರೂಪಿಸಿಕೊಳ್ಳುವ ಬಗ್ಗೆ ಏಕೆ ಚಿಂತಿಸ ಬೇಕು? ಎಂಬುದಕ್ಕೆಈ ಮೇಲಿನ ಎರಡು ವಿಭಿನ್ನ ಘಟನೆಗಳು ಸೂಕ್ತ ಉದಾಹರಣೆಯಾಗುತ್ತವೆ.

ಏನಿದು ವೃತ್ತಿ ಯೋಜನೆ?
ಪ್ರಸ್ತುತ ವಿದ್ಯಾರ್ಥಿಗಳು ‘ಮೊದಲು ಕೋರ್ಸ್‌, ನಂತರ ವೃತ್ತಿ‘ ಎಂಬ ಪದ್ಧತಿ ಅನುಸರಿಸುತ್ತಿದ್ದಾರೆ. ಆದರೆ, ಇನ್ನು ಮುಂದೆ ‘ಮೊದಲು ವೃತ್ತಿಯ ಆಯ್ಕೆ, ನಂತರ ಕೋರ್ಸ್‌ ಆಯ್ಕೆ‘ ಎಂದು ಬದಲಾಯಿಸಿಕೊಳ್ಳಬೇಕಿದೆ. ಕೋರ್ಸ್‌ ಆಯ್ಕೆಗೆ ಮುನ್ನವೇ ಇಂಥ ವೃತ್ತಿಗೆ ಸೇರಬೇಕೆಂದು ಯೋಜನೆ ರೂಪಿಸುವುದೇ, ‘ವೃತ್ತಿ ಯೋಜನೆ‘.

ವೃತ್ತಿ ಯೋಜನೆ ಆಯ್ಕೆ ಮಾಡಿಕೊಳ್ಳಲು ಶಿಕ್ಷಕರ/ ಶಿಕ್ಷಣ ತಜ್ಞರ ಮಾರ್ಗದರ್ಶನ ಅತ್ಯಗತ್ಯ. ಶಾಲೆಯಲ್ಲಿ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವ ಹಂತದಲ್ಲೇ ವಿದ್ಯಾರ್ಥಿಗಳು ವೃತ್ತಿಯೋಜನೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ, ಶಿಕ್ಷಕರು ವೃತ್ತಿ ಯೋಜನೆಯ ಮಹತ್ವ ಮತ್ತು ಅನಿವಾರ್ಯತೆಯ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು.

ವೃತ್ತಿ ಯೋಜನೆ ಏಕೆ ಬೇಕು?
ವಿದ್ಯಾಭ್ಯಾಸದ ನಂತರ ಬಹುತೇಕ ವಿದ್ಯಾರ್ಥಿಗಳು ಹೆಚ್ಚು ವೇತನ ನೀಡುವ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ಕೋರ್ಸ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ, ಇಂತಹ ವೃತ್ತಿಗಳಲ್ಲಿನ ಕಾರ್ಯ ಕ್ಷಮತೆಯ ನಿರೀಕ್ಷೆ ಅಪಾರವಾಗಿ ರುತ್ತದೆ. ಅದನ್ನು ಸಾಧಿಸಲಾಗದೆ ಕೆಲವರ ವೈಯಕ್ತಿಕ ಬದುಕಿನ ಮೇಲೆ ದುಷ್ಪರಿಣಾಮಗಳಾಗಿರುವ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ವೇತನ, ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಸಿಗುವಂತಹ ಜೊತೆಗೆ, ಸಂತೃಪ್ತಿ ನೀಡುವಂತಹ ವೃತ್ತಿಯ ಆಯ್ಕೆ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ.

ಕೌಶಲ ಅಗತ್ಯ: ಬದುಕಿನ ಸಾರ್ಥಕತೆಗೆ ಶಿಕ್ಷಣವಿದ್ದರಷ್ಟೇ ಸಾಲದು. ಜೀವನ ರೂಪಿಸಿಕೊಳ್ಳಲು ಅಗತ್ಯ ಕೌಶಲಗಳೂ ಬೇಕು. ಸ್ವಯಂ-ಪ್ರೇರಣೆ, ಸ್ವಯಂ-ಗೌರವ, ಆತ್ಮವಿಶ್ವಾಸ, ಪ್ರಾಮಾಣಿಕತೆ, ಆಶಾವಾದಿತ್ವ, ಜೀವನೋತ್ಸಾಹ ಮುಂತಾದ ನಿಲುವುಗಳು ಮತ್ತು ಕೌಶಲಗಳು, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಯಶಸ್ಸಿಗೆ ಕಾರಣವಾಗುತ್ತದೆ. ಶಿಕ್ಷಕರು, ಯಶಸ್ವಿ ಬದುಕಿಗೆ ಅವಶ್ಯವಾದ ಇಂತಹ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿ, ಕಲಿಕೆಯ ಪ್ರಕ್ರಿಯೆಯಲ್ಲಿ ಮಾರ್ಗದರ್ಶನ ನೀಡಲು ಸಾಧ್ಯವಿದೆ. ಹಾಗಾಗಿ, ಶಿಕ್ಷಕರ ಜವಾಬ್ದಾರಿ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಮತ್ತು ಬದುಕಿಗೆ ದಾರಿದೀಪವಾಗಬೇಕು.

ವೃತ್ತಿಯೋಜನೆ ಮಾಡುವುದು ಹೇಗೆ?
ವಿದ್ಯಾರ್ಥಿಗಳು ಅನುಸರಿಸಬೇಕಾದ ವೃತ್ತಿಯೋಜನೆಯ ಕುರಿತು ಶಿಕ್ಷಕರು ಈ ರೀತಿಯ ಮಾರ್ಗದರ್ಶನವನ್ನು ನೀಡಬಹುದು.

ವಿದ್ಯಾರ್ಥಿಯ ವೈಯಕ್ತಿಕ ಸಾಮರ್ಥ್ಯ ಮತ್ತು ಅಭಿರುಚಿಯನ್ನು ಅರಿತು, ಯಾವ ವೃತ್ತಿ ಸರಿಹೊಂದ ಬಹುದೆಂದು ಅಂದಾಜಿಸಿ.

ಅಂತಹ ವೃತ್ತಿಜೀವನದ ಬಗ್ಗೆ ಸಂಶೋಧನೆ ನಡೆಸಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತಮಾಡಿಕೊಳ್ಳಿ. ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ಅವಶ್ಯಕತೆಗಳನ್ನು ತೀರ್ಮಾನಿಸಿ.

ಅದರಂತೆ, ಆಯ್ಕೆ ಮಾಡಿದ ಕೋರ್ಸ್‌ಗೆ ಬೇಕಾದ ಪ್ರವೇಶ ಪರೀಕ್ಷೆಗೆ ತಯಾರಾಗಿ.

ಮುಖ್ಯವಾಗಿ, ವಿದ್ಯಾರ್ಥಿಗಳಲ್ಲಿ ಈಗ ಅನುಸರಿಸುತ್ತಿರುವ ‘ಮೊದಲು ಕೋರ್ಸ್ ಆನಂತರ ವೃತ್ತಿ‘ ಎನ್ನುವ ಪದ್ಧತಿ ಬದಲಾಯಿಸಿ, ‘ಮೊದಲು ವೃತ್ತಿಯ ಆಯ್ಕೆ, ನಂತರವೇ ಕೋರ್ಸ್ ಆಯ್ಕೆ‘ ಎನ್ನುವ ತರ್ಕವನ್ನು ಮೂಡಿಸಬೇಕು. ಈ ನಿಟ್ಟಿನಲ್ಲಿ, ಎಲ್ಲ ಕಡೆಗಳಲ್ಲೂ ಶಿಕ್ಷಕರಿಗೆ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರಗಳನ್ನು ನಡೆಸಬೇಕು. ವಿಶೇಷವಾಗಿ, ಸರ್ಕಾರಿ ಪ್ರೌಢಶಾಲೆಗಳಲ್ಲಿ ಇಂಥ ತರಬೇತಿ–ಕಾರ್ಯಾಗಾರಗಳನ್ನು ಆಯೋಜಿಸಬೇಕು.

ವಿದ್ಯಾರ್ಥಿಗಳೊಡನೆ ಹೆಚ್ಚು ಸಮಯವನ್ನು ಕಳೆಯುವ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸೂಕ್ತ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿ ಅವರ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಬಲ್ಲರು.

ವೃತ್ತಿಯೋಜನೆ ಮಾಡುವ ಮಾರ್ಗದರ್ಶನಕ್ಕಾಗಿ ಈ ವೀಡಿಯೊ ವೀಕ್ಷಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT