ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಿಎ, ಪಿಜಿಡಿಎಂ ಯಾವುದು ಉಪಯುಕ್ತ?

Last Updated 21 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳು ಎಂಬಿಎ ಮತ್ತು ಪಿಜಿಡಿಎಂ ಬಗ್ಗೆ ಗೊಂದಲಕ್ಕೆ ಒಳಗಾಗುವುದು ಸಹಜ. ಈ ಎರಡೂ ಕೋರ್ಸ್‌ಗಳ ಬಗ್ಗೆ ವಿವರ ಇಲ್ಲಿದೆ.

ಕೊನೆಯ ವರ್ಷದ ಪದವಿ ವಿದ್ಯಾರ್ಥಿಗಳು ಅದರಲ್ಲೂ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪಡೆಯಲು ಇಚ್ಛಿಸುವವರು ಎಂಬಿಎ ಮಾಡಿದರೆ ಹೆಚ್ಚು ಉಪಯುಕ್ತವೇ ಅಥವಾ ಪಿಜಿಡಿಎಂ (ಪೋಸ್ಟ್ ಗ್ರ್ಯಾಜುಯೇಶನ್ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್) ಪಡೆದಿದ್ದೇ ಆದಲ್ಲಿ ಹೆಚ್ಚಿನ ವೇತನವನ್ನು ನಿರೀಕ್ಷಿಸಬಹುದೇ? ಇವೆರಡರ ನಡುವೆ ಇರುವ ವ್ಯತ್ಯಾಸವೇನು ಎಂಬುದರ ಬಗ್ಗೆ ಗೊಂದಲಕ್ಕೆ ಒಳಗಾಗುವುದು ಸಹಜ. ಯಾವುದೇ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಮೊದಲು ಅಭ್ಯರ್ಥಿಗಳು ಎಂಬಿಎ ಮತ್ತು ಪಿಜಿಡಿಎಂ ನಡುವಿನ ಸಾಮ್ಯತೆ ಹಾಗೂ ವ್ಯತ್ಯಾಸಗಳ ಬಗ್ಗೆ ಸಂಪೂರ್ಣವಾಗಿ ತಿಳಿಯುವುದು ಒಳಿತು.

ಎಲ್ಲಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳು, ‘ಐಐಎಂ ಆ್ಯಕ್ಟ್ 2017’ಕ್ಕಿಂತ ಮುಂಚೆ ಕೂಡ ಪಿಜಿಡಿಎಂ ಅನ್ನು ನೀಡುತ್ತಿದ್ದವು. ಆದರೆ ಡಿಪ್ಲೊಮಾ ಎಂಬ ಪದವು ಸಾಕಷ್ಟು ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿತ್ತು.

ಪ್ರಮುಖ ವ್ಯತ್ಯಾಸ
ಎಂಬಿಎ ಅಥವಾ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಎನ್ನುವುದು ಪದವಿ ಕೋರ್ಸ್ ಆಗಿದ್ದು ವಿಶ್ವವಿದ್ಯಾಲಯಗಳು ಅಥವಾ ವಿಶ್ವವಿದ್ಯಾಲಯಗಳ ಸಂಯೋಜನೆ ಅಡಿಯಲ್ಲಿರುವ ಮಹಾವಿದ್ಯಾಲಯಗಳು ಈ ಪದವಿಯನ್ನು ನೀಡಬಹುದು. ಆದರೆ ಪಿಜಿಡಿಎಂ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ ಸ್ವಾಯತ್ತ ಸಂಸ್ಥೆಗಳು ನೀಡುವುದು ಡಿಪ್ಲೊಮಾ ಕೋರ್ಸ್ ಆಗಿದೆ.

ಆದರೆ ದೇಶದ ಎಲ್ಲಾ ಐಐಎಂಗಳುಎಂಬಿಎ ಪದವಿ ನೀಡುತ್ತಿಲ್ಲ. ಮಾರುಕಟ್ಟೆಯಲ್ಲಿ ಪಿಜಿಡಿಎಂ ಕೋರ್ಸ್‌ನ ಹೆಸರಿನ ಮೌಲ್ಯ (ಬ್ರಾಂಡ್ ಇಕ್ವಿಟಿ) ಹೆಚ್ಚಾಗಿರುವುದರಿಂದ ಕೆಲವು ಐಐಎಂಗಳುಎಂಬಿಎ ಪದವಿ ಕೊಡಲು ಹಿಂದೇಟು ಹಾಕುತ್ತಿವೆ. ಐಐಎಂ ಬೆಂಗಳೂರು 2018ರಲ್ಲಿ ಎಂಬಿಎ ನೀಡಿದ ಮೊದಲ ಐಐಎಂ ಆಗಿದೆ.

ಅರ್ಹತೆ

ಪದವಿ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳುಎಂಬಿಎ ಹಾಗೂ ಪಿಜಿಡಿಎಂ ಪ್ರವೇಶಕ್ಕೆ ಅರ್ಹರು. ಸಾಮಾನ್ಯವಾಗಿಎಂಬಿಎ ನೀಡುವ ವಿಶ್ವವಿದ್ಯಾಲಯಗಳು ಹಾಗೂ ಮಹಾವಿದ್ಯಾಲಯಗಳು ಆಯಾ ರಾಜ್ಯ ಸರ್ಕಾರ ನಡೆಸುವ ಪಿಜಿ ಸಿಇಟಿ ಅಭ್ಯರ್ಥಿಯು ಪಡೆದುಕೊಳ್ಳುವ ರ‍್ಯಾಂಕಿಂಗ್‌ ಮೇಲೆ ಪ್ರವೇಶ ನೀಡುತ್ತವೆ. ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಕಾಮೆಡ್-ಕೆ ಎಂಬ ಪ್ರವೇಶ ಪರೀಕ್ಷೆಯನ್ನು ತೆಗೆದು ಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಪಿಜಿಡಿಎಂ ನೀಡುವ ಸಂಸ್ಥೆಗಳು ಕ್ಯಾಟ್ (ಸಿಎಟಿ) ಮ್ಯಾಟ್ (ಎಂಎಟಿ) ಜಿಮ್ಯಾಟ್ ಐಐಎಫ್‌ಟಿ, ಎಸ್ಎನ್ಎಪಿ, ಐಆರ್ಎಂಎಎಸ್ಎಟಿ, ಎಕ್ಸ್ಎಟಿ, ಸಿ-ಮ್ಯಾಟ್, ಎನ್ ಮ್ಯಾಟ್‌ ಮುಂತಾದ ಪರೀಕ್ಷೆಗಳಲ್ಲಿ ಅಭ್ಯರ್ಥಿಯು ಗಳಿಸಿರುವ ಅಂಕಗಳು, ಗುಂಪು ಚರ್ಚೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡುತ್ತವೆ.

ಎಂಬಿಎಯಲ್ಲಿ ಬೋಧಿಸುವ ಪಠ್ಯಕ್ರಮವು, ಆಯಾ ವಿಶ್ವವಿದ್ಯಾಲಯಗಳು ನಿರ್ಧರಿಸಿದಂತೆ ಇರುತ್ತದೆ. ಪಠ್ಯ ಪುಸ್ತಕದಲ್ಲಿರುವ ಥಿಯರಿಗೆ ಹೆಚ್ಚು ಒತ್ತು ನೀಡುತ್ತಾರೆ. ವಿಶ್ವವಿದ್ಯಾಲಯದಿಂದ ಅಥವಾ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳು ನಡೆಸುವ ಅಂತಿಮ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾಗಬೇಕಾಗುತ್ತದೆ.

ಪಿಜಿಡಿಎಂ ನೀಡುವ ಸಂಸ್ಥೆಗಳು ಪ್ರತಿ ಎರಡು ವರ್ಷಗಳಿಗೊಮ್ಮೆ ಪಠ್ಯಕ್ರಮವನ್ನು ಪರಿಷ್ಕೃತಗೊಳಿಸುತ್ತವೆ. ಅದರಲ್ಲಿ ಉದ್ಯಮ ಆಧಾರಿತ ಕಾರ್ಯಕ್ರಮಗಳ ಮೇಲೆ ಹೆಚ್ಚು ಗಮನ ಹರಿಸಲಾಗುತ್ತದೆ. ಪ್ರತಿ ಸಂಸ್ಥೆಯು ತನ್ನದೇ ಆದ ಪಠ್ಯಕ್ರಮ ಹೊಂದಿರುತ್ತದೆ.

ಎಂಬಿಎಯಲ್ಲಿ ಸಾಮಾನ್ಯವಾಗಿ ಸೆಮಿಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡಿರುತ್ತಾರೆ. ಆದರೆ ಪಿಜಿಡಿಎಂ ನೀಡುವ ಸಂಸ್ಥೆಗಳು ಟ್ರೈಮಿಸ್ಟರ್ ಪದ್ಧತಿಯನ್ನು ಅನುಸರಿಸುತ್ತಾರೆ.

ಕೋರ್ಸ್‌ ಅವಧಿ
ಈ ಎರಡೂ ಕೋರ್ಸ್‌ಗಳ ಅವಧಿ ಎರಡು ವರ್ಷ.

ಕೋರ್ಸ್ ಶುಲ್ಕ
ಎಂಬಿಎ ಕೋರ್ಸ್‌ಗೆ ನಿಗದಿಪಡಿಸಿರುವ ಶುಲ್ಕಕ್ಕಿಂತ ಪಿ.ಜಿ.ಡಿ.ಎಂ. ಕೋರ್ಸ್‌ ಶುಲ್ಕ ಹೆಚ್ಚಾಗಿರುತ್ತದೆ. ಎಂಬಿಎಯನ್ನು ಸುಮಾರು ₹ 2–5 ಲಕ್ಷದಲ್ಲಿ ಮುಗಿಸಿಕೊಳ್ಳಬಹುದು. ಪಿ.ಜಿ.ಡಿ.ಎಂ. ಗೆ ಸುಮಾರು 2– 20 ಲಕ್ಷದವರೆಗೂ ಶುಲ್ಕವಿರುತ್ತದೆ.

ಪಿಜಿಡಿಎಂ ಕೋರ್ಸ್ ಇರುವ ದೇಶದ ಪ್ರಮುಖ ಸಂಸ್ಥೆಗಳು

*ದೇಶದ ಎಲ್ಲಾ ಐಐಎಂಗಳು ಹಾಗೂ ಐಐಟಿಗಳು

*ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಜಮ್‌ಶೆಡ್‌ಪುರ್

*ನರ್ಸಿ ಮೋಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ - ಮುಂಬೈ

*ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ -ಗುರುಗ್ರಾಮ ಹಾಗೂ ಮುರ್ಷಿದಾಬಾದ್

*ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್- ಹರಿಹರ ಹಾಗೂ ಪುಣೆ

*ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ - ಮೈಸೂರು

*ಟಿಎ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ – ಮಣಿಪಾಲ.

*ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಎಕ್ಸಲೆನ್ಸ್ - ಬೆಂಗಳೂರು.

*ಇಂಡಸ್ ಬ್ಯುಸಿನೆಸ್ ಅಕಾಡೆಮಿ - ಬೆಂಗಳೂರು.

*ಸಿಂಬಿಯಾಸಿಸ್ - ಪುಣೆ

ಉದ್ಯೋಗ
ಭಾರತದಲ್ಲಿ ಪಿ.ಜಿ.ಡಿ.ಎಂ. ಪದವಿ ನೀಡುವ ಸಂಸ್ಥೆ ಸುಮಾರು 500 ಇರಬಹುದು. ಆದರೆ ಎಂಬಿಎ ಪದವಿ ನೀಡುವ ವಿಶ್ವವಿದ್ಯಾಲಯಗಳು ಹಾಗೂ ವಿಶ್ವವಿದ್ಯಾಲಯ ಸಂಯೋಜನೆಗೊಳಪಟ್ಟ ಮಹಾವಿದ್ಯಾಲಯಗಳು ಸುಮಾರು 5500ಕ್ಕೂ ಹೆಚ್ಚಿವೆ. ಹೀಗಾಗಿ ಪಿ.ಜಿ.ಡಿ.ಎಂ.ಗೆ ಹೆಚ್ಚಿನ ಬೇಡಿಕೆಯಿದೆ.

(ಲೇಖಕರು: ಸಹಾಯಕ ಪ್ರಾಧ್ಯಾಪಕರು, ಎಂಬಿಎ ವಿಭಾಗ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT