ಮಂಗಳವಾರ, ಜುಲೈ 5, 2022
25 °C

ಗರಿಷ್ಠ ಅಂಕಕ್ಕೆ ಬೇಕು ಸೂಕ್ತ ‘ಐಚ್ಛಿಕ’

ಗುರುರಾಜ್ ಎಸ್ ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಮುಖ್ಯ ಪರೀಕ್ಷೆಗೆ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಪದವಿ - ಸ್ನಾತಕೋತ್ತರ ಪದವಿಯಲ್ಲಿ ಓದಿದ ವಿಷಯಗಳು ಅನಾಯಾಸವಾಗಿ ನೆನಪಾಗುತ್ತವೆ. ಜೊತೆಗೆ ಸುಲಭದ, ಇಷ್ಟದ, ವಿಷಯಗಳೂ ಕಣ್ಣ ಮುಂದೆ ಬರುತ್ತವೆ. ಈಗಾಗಲೇ ಪರೀಕ್ಷೆ ಬರೆದು ಯಶಸ್ವಿಯಾದ ಅಭ್ಯರ್ಥಿಗಳು ಯಾವ ವಿಷಯಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದ್ದರು ಎನ್ನುವುದೂ ಮುಖ್ಯವಾಗುತ್ತದೆ. ಅಧ್ಯಾಪಕರು, ಕೋಚಿಂಗ್ ಸೆಂಟರ್‌ನವರು ಸೂಚಿಸುವ ವಿಷಯಗಳನ್ನು ತೆಗೆದುಕೊಳ್ಳುವವರೂ ಇದ್ದಾರೆ. ಆದರೆ ಖಚಿತ ಯಶಸ್ಸಿಗೆ ಯಾವ ಐಚ್ಛಿಕ ವಿಷಯ ಸೂಕ್ತ ಎಂಬ ಪ್ರಶ್ನೆ ಎಲ್ಲ ಅಭ್ಯರ್ಥಿಗಳಲ್ಲೂ ಇರುತ್ತದೆ.

ಜನಪ್ರಿಯ ಟಾಪ್ ಟೆನ್ ವಿಷಯಗಳು

ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ಆಯ್ಕೆಗೆ 27 (ಕಡ್ಡಾಯ ಭಾಷೆ ಮತ್ತು ಇಂಗ್ಲಿಷ್ ಸೇರಿದಂತೆ) ಐಚ್ಛಿಕ ವಿಷಯಗಳಿವೆ. 2013 ರವರೆಗೆ ಅಭ್ಯರ್ಥಿಗಳು ಎರಡು ಬೇರೆ ಬೇರೆ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಈಗ ಒಂದೇ ವಿಷಯವನ್ನು ಆಯ್ಕೆ ಮಾಡಿಕೊಂಡು 250 ಅಂಕಗಳ ಎರಡು ಪತ್ರಿಕೆಗಳಿಗೆ ಉತ್ತರಿಸಬೇಕು. ಇದುವರೆಗೆ ನಡೆದ ಮುಖ್ಯ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಹೆಚ್ಚಾಗಿ ಇಷ್ಟಪಡುವ, ಆಯ್ಕೆ ಮಾಡಿಕೊಂಡಿರುವ ವಿಷಯಗಳು ಇಂತಿವೆ.

ಪದವಿ - ಸ್ನಾತಕೋತ್ತರ ವಿದ್ಯಾಭ್ಯಾಸದಲ್ಲಿ ಮೇಲಿನ ಯಾವುದಾದರೂ ವಿಷಯವನ್ನು ಓದಿದ್ದರೆ ಅದನ್ನೇ ಐಚ್ಛಿಕ ವಿಷಯವನ್ನಾಗಿ ಆಯ್ದುಕೊಳ್ಳಬಹುದು ಮತ್ತು ಸುಲಭವಾಗಿ ಹೆಚ್ಚಿನ ಅಂಕಗಳಿಸಬಹುದು. ಆದರೆ ಹಾಗೆಯೇ ಮಾಡಬೇಕೆಂಬ ವಾಡಿಕೆಯಾಗಲಿ ಅಲಿಖಿತ ನಿಯಮವಾಗಲಿ ಇಲ್ಲ. ಮೇಲಿನ ವಿಷಯಗಳನ್ನು ಹೊರತುಪಡಿಸಿ ನೀವು ಪದವಿಯಲ್ಲಿ ಅಧ್ಯಯನ ಮಾಡಿದ ಗಣಿತ, ಭೌತವಿಜ್ಞಾನ, ಎಕನಾಮಿಕ್ಸ್, ಸಸ್ಯ - ಪ್ರಾಣಿ ವಿಜ್ಞಾನ, ತರ್ಕ, ರಸಾಯನ ವಿಜ್ಞಾನ ಇತ್ಯಾದಿಗಳಲ್ಲಿ ಯಾವುದಾದರೊಂದನ್ನು ಆರಿಸಿಕೊಂಡು ಓದಬಹುದು. ಎಷ್ಟೋ ವಿಜ್ಞಾನ ಪದವೀಧರ ಅಭ್ಯರ್ಥಿಗಳು ಕಲಾ ವಿಭಾಗದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಹೆಚ್ಚು ಅಂಕಗಳಿಸಿದ ಉದಾಹರಣೆಗಳಿವೆ.

ಓದಿನ ಹಿನ್ನೆಲೆಯಂತೆ ಆಯ್ಕೆ

ಒಂದೆಡೆ ಟಾಪ್ ಟೆನ್ ವಿಷಯಗಳಿದ್ದರೆ ಇನ್ನೊಂದೆಡೆ ನೀವು ಪದವಿಯಲ್ಲಿ ಓದಿದ ವಿಷಯಗಳಿರುತ್ತವೆ. ಮೂರು - ನಾಲ್ಕು ವರ್ಷಗಳ ನಿರಂತರ ಅಧ್ಯಯನದಿಂದ ಸಾಕಷ್ಟು ಜ್ಞಾನ – ಕೌಶಲ ಸಂಪಾದಿಸಿರುತ್ತೀರಿ. ಓದಿದ ವಿಷಯಗಳಲ್ಲಿ ಯಾವುದು ಸುಲಭ, ಕ್ಲಿಷ್ಟ ಎಂಬುದು ಮೊದಲೇ ತಿಳಿದಿರುವುದರಿಂದ ಐಚ್ಛಿಕ ವಿಷಯದ ಆಯ್ಕೆ ಸುಲಭವಾಗುತ್ತದೆ. ಮತ್ತೊಂದೆಡೆ ಕಡಿಮೆ ಪಠ್ಯಕ್ರಮದ ಆಸಕ್ತಿದಾಯಕ ವಿಷಯಗಳೂ ಇರುತ್ತವೆ. ನೀವು ಸ್ಮಾರ್ಟ್ ಅಭ್ಯರ್ಥಿಯಾಗಿದ್ದರೆ ನಿಮಗೆ ಇಷ್ಟವಾದ ಮತ್ತು ನೀವು ಓದಿದ ವಿಷಯವನ್ನೇ ಆಯ್ಕೆ ಮಾಡಿಕೊಳ್ಳುತ್ತೀರಿ. ಹಾಗೆ ಮಾಡಿದಲ್ಲಿ ನೀವು ನಿಮ್ಮ ಯುಪಿಎಸ್‌ಸಿ ಪರೀಕ್ಷೆಯ ಸವಾಲನ್ನು ಅರ್ಧ ಗೆದ್ದಂತೆಯೆ! ಅದನ್ನು ಬಿಟ್ಟು ಪಠ್ಯಕ್ರಮ ಕಡಿಮೆ ಎಂಬ ಕಾರಣಕ್ಕಾಗಿ ನಿಮಗೆ ಪರಿಚಯವೇ ಇರದ, ಓದದ ವಿಷಯವನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಒಂದು ಅವಕಾಶವನ್ನೇ ಕೃಷ್ಣಾರ್ಪಣ ಮಾಡಿದಂತೆ!

ಪುನರಾವರ್ತನೆ ವಿಷಯವೇ ಸುರಕ್ಷಿತ

ನೆನಪಿರಲಿ. ಮುಖ್ಯ ಪರೀಕ್ಷೆಯಲ್ಲಿ ನೀವು ‘ಸಾಮಾನ್ಯ ಅಧ್ಯಯನ’ದ (General Studies) ನಾಲ್ಕು ಪತ್ರಿಕೆಗಳಿಗೆ ಉತ್ತರ ಬರೆಯಬೇಕಿರುತ್ತದೆ. ಇವುಗಳಿಗೆ ಹೊಂದುವಂತಹ ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ‘ಸಾರ್ವಜನಿಕ ಆಡಳಿತ’ (Public administration) ಆಯ್ಕೆ ಮಾಡಿಕೊಂಡರೆ ಅದು ಸಾಮಾನ್ಯ ಅಧ್ಯಯನದ ಎರಡನೆಯ ಪತ್ರಿಕೆ. ಭಾರತದ ರಾಜಕೀಯ ಮತ್ತು ಆಡಳಿತಕ್ಕೆ (Polity and Governance) ತೀರಾ ಹತ್ತಿರವಿದ್ದು ಬಹುತೇಕ ವಿಷಯಗಳು ಪುನರಾವರ್ತನೆಯಾಗುತ್ತವೆ. ಆಗ ತಯಾರಿ ಸುಲಭವಾಗುತ್ತದೆ. ಇನ್ನು ಸಮಾಜಶಾಸ್ತ್ರ (Sociology) ಆಯ್ದುಕೊಂಡರೆ ಅದು ಪ್ರಬಂಧ ಮತ್ತು ಸಾಮಾನ್ಯ ಅಧ್ಯಯನದ ಪ್ರಥಮ ಪತ್ರಿಕೆ ಎದುರಿಸಲೂ ನೆರವಾಗುತ್ತದೆ. ಚರಿತ್ರೆ ಅಥವಾ ಭೂಗೋಳ ಆಯ್ದುಕೊಂಡರೆ ಅದರ ಓದು ಜನರಲ್ ಸ್ಟಡೀಸ್‌ನ ಪ್ರಥಮ ಪತ್ರಿಕೆಗೆ ತುಂಬಾ ಅನುಕೂಲ ಕಲ್ಪಿಸುತ್ತದೆ.

ಕಡಿಮೆ ಪಠ್ಯಕ್ರಮ ಹೆಚ್ಚಿನ ಸಂಪನ್ಮೂಲ

ಯುಪಿಎಸ್‌ಸಿ ಪಟ್ಟಿ ಮಾಡಿರುವ ಐಚ್ಛಿಕ ವಿಷಯಗಳ ಪೈಕಿ ಕೆಲವು ವಿಷಯಗಳ ಪಠ್ಯಕ್ರಮ(ಸಿಲಬಸ್) ಬೇರೆ ವಿಷಯಗಳಿಗೆ ಹೋಲಿಸಿದರೆ ಕಡಿಮೆ ಇರುತ್ತದೆ. ಉದಾಹರಣೆಗೆ ಸಾರ್ವಜನಿಕ ಆಡಳಿತ ವಿಷಯಕ್ಕೆ ನಿಶ್ಚಿತ ಪಠ್ಯಕ್ರಮ ಮತ್ತು ಮಿತಿ ಎರಡೂ ಇವೆ. ಓದುವುದಕ್ಕೆ ಬೇಕಾದ ಪುಸ್ತಕ, ನೋಟ್ಸ್, ಗೈಡ್, ಸಲಹೆಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಇವೆ. ಆದ್ದರಿಂದ ಅಧ್ಯಯನ ಸಾಮಗ್ರಿ ಆಯ್ಕೆ ಮಾಡಿಕೊಂಡವರು ಕೇವಲ ನಾಲ್ಕು ತಿಂಗಳಲ್ಲಿ ಸಂಪೂರ್ಣವಾಗಿ ತಯಾರಾಗಬಹುದು. ಅದರಂತೆ ಭೂಗೋಳ ವಿಷಯ ವಿಜ್ಞಾನಕ್ಕೂ ಸಂಬಂಧಿಸಿದ್ದರಿಂದ ವಿಜ್ಞಾನ, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಓದಿದವರಿಗೂ ಅನುಕೂಲವಾಗುತ್ತದೆ. ಜೊತೆಗೆ ಯಾವ ವಿಷಯದ ಕುರಿತು ಸರಿಯಾದ ಕೋಚಿಂಗ್‌ ಸಿಗುತ್ತದೆ ಮತ್ತು ಹೆಚ್ಚಿನ ಅಂಕಗಳಿಸಬಹುದು ಎಂಬುದನ್ನು ಅರಿತು ಐಚ್ಛಿಕ ವಿಷಯ ಆಯ್ಕೆ ಮಾಡಿಕೊಳ್ಳಬೇಕು. ಇರುವ ಐಚ್ಛಿಕ ವಿಷಯಗಳ ಪೈಕಿ ಅತ್ಯಂತ ಕಡಿಮೆ ಪಠ್ಯಕ್ರಮ ಇರುವುದು ತತ್ವಶಾಸ್ತ್ರಕ್ಕೆ (ಫಿಲಾಸಫಿ). ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಹೆಚ್ಚು ಅಂಕ ಗಳಿಕೆಗೆ ಸೂಕ್ತ ಆಯ್ಕೆ

ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವುದನ್ನು ತೆಗೆದುಕೊಂಡರೆ ಓದಲು ಮತ್ತು ಪ್ರಶ್ನೆಗೆ ಉತ್ತರಿಸಲು ಸುಲಭ ಎನ್ನುವುದಷ್ಟೇ ಮುಖ್ಯವಾಗಬಾರದು. ನೀವು ಬರೆಯುವ ಉತ್ತರಗಳಿಗೆ ನಿಗದಿ ಮಾಡಿದ ಅಂಕಗಳು ಪೂರ್ತಿಯಾಗಿ ಸಿಗುತ್ತವೆಯೇ ಎಂಬುದನ್ನು ಅರಿತು ವಿಷಯ ಆಯ್ಕೆ ಮಾಡಿಕೊಳ್ಳಿ. ಉದಾಹರಣೆಗೆ ವಿಜ್ಞಾನದ ವಿಷಯಗಳ ಪ್ರಶ್ನೆಗಳಿಗೆ ನಿಗದಿಗೊಳಿಸಿದ ಅಂಕಗಳಿಗನುಗುಣವಾಗಿ ನಿರ್ದಿಷ್ಟ ಉತ್ತರಗಳಿರುತ್ತವೆ. ಸರಿಯಾದ ಸೂತ್ರ ಬಳಸಿ, ಚಿತ್ರ ಬರೆದು, ಭಾಗಗಳನ್ನು ಗುರುತಿಸಿ ಹಂತ ಹಂತವಾಗಿ ಉತ್ತರ ಬರೆದರೆ ಪೂರ್ಣಾಂಕಗಳು ಸಿಗುತ್ತವೆ. ಆಗ ಅಂಕಗಳಿಕೆ ಹೆಚ್ಚಾಗುತ್ತದೆ. ಗಣಿತ, ಸ್ಟಾಟಿಸ್ಟಿಕ್ಸ್ ತೆಗೆದುಕೊಂಡವರು ಅಂಕಗಳಿಕೆಯಲ್ಲಿ ಇತರರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಭೂಗೋಳ ವಿಜ್ಞಾನ ವಿಷಯದ ಪ್ರಶ್ನೆಗಳೂ ನಿಖರ ಉತ್ತರಗಳನ್ನು ಬೇಡುವುದರಿಂದ ಅದರಲ್ಲೂ ಹೆಚ್ಚಿನ ಅಂಕಗಳಿಕೆ ಸುಲಭ.

ಆಯ್ಕೆಗೂ, ಗಳಿಕೆಗೂ ಅಂತರ

ಇಂತಿಂಥ ವಿಷಯಗಳಲ್ಲಿ ಅಂಕಗಳಿಸುವುದು ಸುಲಭ ಎನ್ನುವುದು ಎಲ್ಲ ಕಾಲಕ್ಕೂ ನಿಜವಲ್ಲ. ಹಿಂದಿನ ಸಲದ ಪ್ರಯತ್ನದಲ್ಲಿ ಹೆಚ್ಚು ಅಂಕ ಬಂದಿದ್ದರೆ, ಈ ಬಾರಿಯೂ ಹಾಗೆಯೇ ಆಗುತ್ತದೆ ಎನ್ನಲು ಯಾವ ಆಧಾರವೂ ಇಲ್ಲ. ಸುಲಭದ, ಇಷ್ಟದ, ಹೆಚ್ಚು ಸಂಪನ್ಮೂಲ ಮತ್ತು ಹೆಚ್ಚು ಅಂಕಗಳಿಸಲು ನೆರವಾಗುವ ವಿಷಯಗಳನ್ನು ಆಯ್ಕೆ ಮಾಡಿಕೊಂಡರೆ ಸಾಲದು, ಪ್ರಶ್ನೆಗಳಿಗೆ ತಕ್ಕ ಉತ್ತರಗಳನ್ನು ಬರೆಯಲೇಬೇಕು. ಎಷ್ಟೋ ಅಭ್ಯರ್ಥಿಗಳು ಹೆಚ್ಚಿನವರು ಆಯ್ಕೆ ಮಾಡಿಕೊಳ್ಳದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅತಿ ಹೆಚ್ಚು ಅಂಕ ಗಳಿಸಿದ ಉದಾಹರಣೆಗಳೂ ಇವೆ. ಒಂದು ಅಧ್ಯಯನದ ಪ್ರಕಾರ ಇತಿಹಾಸ, ಭೂಗೋಳ, ಸಾರ್ವಜನಿಕ ಆಡಳಿತ ಮತ್ತು ಸಮಾಜಶಾಸ್ತ್ರದ ವಿಷಯಗಳು ಬಹುಜನರ ಫೇವರೀಟ್ ಎನಿಸಿವೆ.

(ಮುಂದಿನ ವಾರ ಪಾಠ– 11 : ಸಂದರ್ಶನವೆಂಬ ವಿಶ್ವದರ್ಶನ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು