ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಪರಿಜ್ಞಾನ ಹೆಚ್ಚಳಕ್ಕೆ ‘ಪರಿಕ್ರಮ’ ಶ್ರಮ

ವಿಜ್ಞಾನ ಪಾಠಗಳ ಪ್ರಾಯೋಗಿಕ ಕಲಿಕೆಗೆ ಒತ್ತು l ವಿಜ್ಞಾನಿ ಜಾಗೃತಿ ಸಮಾವೇಶ
Last Updated 15 ಜನವರಿ 2019, 19:45 IST
ಅಕ್ಷರ ಗಾತ್ರ

ಪ್ರಾಣಿ–ಪಕ್ಷಿಗಳೆಂದರೆ ಮಕ್ಕಳಿಗೆ ಹೆಚ್ಚು ಪ್ರೀತಿ. ಮೃಗಾಲಯಕ್ಕೆ ಭೇಟೆ ನೀಡಬೇಕೆಂದರೆ, ಎಲ್ಲಿಲ್ಲದ ಉತ್ಸಾಹ ತೋರುತ್ತಾರೆ. ಆದರೆ ಹಿಂತಿರುಗುವಾಗ ಬೇಸರ ಭಾವ ವ್ಯಕ್ತಪಡಿಸುತ್ತಾರೆ. ಪ್ರಾಣಿ, ಪಕ್ಷಿಗಳನ್ನು ನೋಡುವುದಕ್ಕಿಂತ ಹೆಚ್ಚಾಗಿ ಅವುಗಳ ವರ್ತನೆ, ಜೀವನ ಕ್ರಮದ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲವೇ ಅವರಲ್ಲಿ ಹೆಚ್ಚಾಗಿರುತ್ತದೆ.

ಅವುಗಳ ಬಗ್ಗೆ ಮಾಹಿತಿ ನೀಡುವವರು, ಇದ್ದರೆ, ಎಷ್ಟು ಚೆನ್ನಾಗಿರುತ್ತೆ ಎಂದು ಅಪೇಕ್ಷಿ ಸುತ್ತಾರೆ. ಹಲವು ಮೃಗಾಲಯಗಳಲ್ಲಿ, ವನ್ಯ ಜೀವಿಗಳ ಬಗ್ಗೆ ತಿಳಿಸುವ ತಜ್ಞರು ಇಲ್ಲ. ಕೆಲವು ದೇಶಗಳ ಸರ್ಕಾರಗಳು ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು ನೀಡುತ್ತವೆ. ಹೀಗಾಗಿ ಮೃಗಾಲಯಗಳಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆ ವಿವರಿಸುವ ತಜ್ಞರನ್ನು ನೇಮಿಸಿರುತ್ತಾರೆ.

ನಮ್ಮ ದೇಶದ ಮಕ್ಕಳು ಎದುರಿಸುತ್ತಿರುವ ಈ ಕೊರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವರ್ಷ, ಪ್ರಾಣಿ–ಪಕ್ಷಿಗಳ ಬಗ್ಗೆ ವಿವರವಾಗಿ ತಿಳಿಸಲು ಮುಂದಾಗಿದೆ ಪರಿಕ್ರಮ ಪ್ರತಿಷ್ಠಾನ. ಇದೇ ರೀತಿ ಮಕ್ಕಳ ಜ್ಞಾನ ಮತ್ತು ಬುದ್ಧಿ ಸಾಮರ್ಥ್ಯ ಹೆಚ್ಚಿಸುವ ಹಲವು ವಿಷಯಗಳನ್ನು ಪ್ರಾಯೋಗಿಕವಾಗಿ ತಿಳಿಸಲು ಕೆಲವು ವರ್ಷಗಳಿಂದ ಈ ಸಂಸ್ಥೆ ಶ್ರಮಿಸುತ್ತಿದೆ.

ಈ ವರ್ಷ ವನ್ಯಜೀವಿ ಸಂರಕ್ಷಣೆ ಮತ್ತು ಪ್ರಾಣಿ–ಪಕ್ಷಿಗಳ ಕಾಳಜಿ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಜತೆಗೆ, ಮಕ್ಕಳನ್ನು ಉತ್ತೇಜಿಸುವ ಸಲುವಾಗಿ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಿದೆ.

ಇದೇ 17, 18 ಮತ್ತು 19 ರಂದು ಈ ಕಾರ್ಯಕ್ರಮ ನಡೆಯಲಿದೆ. 17 ಮತ್ತು 18ರಂದು ಅಮೃತಹಳ್ಳಿಯ ಜಿಎನ್‌ಎಸ್‌ಸಿಆರ್‌ ದಿ ಜವಾಹರಲಾಲ್‌ ನೆಹರೂ ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, 19 ರಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ‘ಫೆಸ್ಟಿವಲ್ ಆಫ್ ಸೈನ್ಸ್ - 2019’ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳೂ ಭಾಗವಹಿಸಲಿದ್ದು, ಅವರ ವೆಚ್ಚವನ್ನೂ ಸಂಸ್ಥೆಯೇ ಭರಿಸುತ್ತಿದೆ.

ಸರ್ಕಾರಿ ಶಾಲಾ ಮಕ್ಕಳಿಗೆ ಪ್ರೋತ್ಸಾಹ: ಸೌಕರ್ಯಗಳ ಕೊರತೆಯಿಂದ ಹಲವು ಸರ್ಕಾರಿ ಶಾಲೆಯ ಮಕ್ಕಳಿಗೆ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಾಯೋಗಿಕ ಜ್ಞಾನ ಇರುವುದಿಲ್ಲ. ಇದಕ್ಕೆ ಪೂರಕವಾದ ತರಬೇತಿ ಕೂಡ ಅವರಿಗೆ ಸಿಗುವುದಿಲ್ಲ. ಇನ್ನು ವನ್ಯ ಜೀವಿಗಳ ಬಗ್ಗೆ ತಿಳಿಸಿಕೊಡುವುದು ಅಪರೂಪ. ಹೀಗಾಗಿ ಪ್ರರಿಕ್ರಮ ಪ್ರತಿಷ್ಠಾನ ಈ ಕೆಲಸ ಮಾಡುತ್ತಿದೆ. ಅಲ್ಲದೇ ಪ್ರತಿ ವರ್ಷ ಸರ್ಕಾರಿ ಶಾಲಾ ಮಕ್ಕಳನ್ನು ಈ ವಿಜ್ಞಾನ ಹಬ್ಬದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದೆ.

ವಿಜ್ಞಾನ ಪಾಠಗಳನ್ನು ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಡುವುದಕ್ಕಿಂತ, ಪ್ರಾಯೋಗಿಕವಾಗಿ ಆಯಾ ಸ್ಥಳಗಳಲ್ಲಿ ಹೇಳಿಕೊಟ್ಟರೆ ಬೇಗ ಅರ್ಥವಾಗುತ್ತದೆ. ಮಕ್ಕಳ ಮನವನ್ನು ರಂಜಿಸುತ್ತಾ, ಪ್ರಾಣಿ–ಪಕ್ಷಿಗಳನ್ನು ತೋರಿಸಿ ವಿವರಿಸಿದರೆ, ಹೆಚ್ಚು ಮನದಟ್ಟಾಗುತ್ತದೆ.

ಹೇಳಿಕೊಡುವುದಷ್ಟೇ ಅಲ್ಲದೇ,ಚರ್ಚೆ, ಅಭಿಪ್ರಾಯ ಹಂಚಿಕೊಳ್ಳುವಿಕೆ ಮತ್ತು ಮಕ್ಕಳ ಕುತೂಹಲ, ಅನುಮಾನಗಳಿಗೆ ಉತ್ತರ ನೀಡುವು ಪ್ರಯತ್ನವೂ ನಡೆಯುತ್ತದೆ. ಒಟ್ಟಿನಲ್ಲಿ ಭವಿಷ್ಯದ ವಿಜ್ಞಾನಿಗಳನ್ನು ರೂಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.

ಈ ಪ್ರತಿಷ್ಠಾನವು,ಪ್ರತಿ ವರ್ಷವೂ ಒಂದು ನಿರ್ದಿಷ್ಟ ವಿಷಯದ ಮೇಲೆ ಕಾರ್ಯಕ್ರಮ ರೂಪಿಸುತ್ತಿದೆ, ಈ ವರ್ಷ ವನ್ಯಜೀವಿಗಳ ಸಂರಕ್ಷಣೆ ಕುರಿತ ವಿಷಯವನ್ನು ಆಯ್ಕೆ ಮಾಡಿಕೊಂಡಿದೆ.50 ಶಾಲೆಗಳ 200 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 7 ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಇದ್ದಾರೆ. ನೊಬೆಲ್‌ ಪ್ರಶಸ್ತಿ ಪುರಸ್ಕೃತ ವೆಂಕಟರಾಮನ್ ರಾಮಕೃಷ್ಣನ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಖ್ಯಾತ ವಿಜ್ಞಾನಿ ಪ್ರೊ ಸಿ.ಎನ್.ಆರ್.ರಾವ್ ಅವರೂ ಭಾಗವಹಿಸಲಿದ್ದಾರೆ.

ಪರಿಕ್ರಮದ ಬಗ್ಗೆ ಒಂದಿಷ್ಟು

ಪರಿಕ್ರಮ ಭವಿಷ್ಯದ ವಿಜ್ಞಾನಿಗಳನ್ನಷ್ಟೇ ಅಲ್ಲ, ಬಡತನದ ಹಿನ್ನೆಲೆಯಿಂದ ಬಂದ ಮಕ್ಕಳಲ್ಲಿ ನಾಳೆಯ ಬಗ್ಗೆ ಸುಂದರವಾದ ಕನಸುಗಳನ್ನೂ ಬಿತ್ತುತ್ತಿದೆ. 2003ರಿಂದ ಈ ಸಂಸ್ಥೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ನೂರಾರು ಮಕ್ಕಳ ಬದುಕಿನಲ್ಲಿ ಹೊಸ ಬೆಳಕು ಮೂಡಲು ನೆರವಾಗಿದೆ.

ಈ ಸಂಸ್ಥೆ ಜಯನಗರ, ಕೋರಮಂಗಲ, ಸಹಕಾರನಗರ ಮತ್ತು ನಂದಿನಿ ಬಡಾವಣೆಯಲ್ಲಿ ಶಾಲೆಗಳನ್ನೂ ನಡೆಸುತ್ತಿದೆ. ಜತೆಗೆ ಜೂನಿಯರ್‌ ಕಾಲೇಜು, ಅನಾಥ ಆಶ್ರಮ ಕೂಡ ನಡೆಸುತ್ತಿದೆ. ವಿಶೇಷವೆಂದರೆ ಈ ತಂಡ ಬೆಂಗಳೂರಿನ 71 ಕೊಳೆಗೇರಿಗಳಲ್ಲಿ 2000 ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಕೆಲಸ ಕೊಡಿಸುವ ಪ್ರಯತ್ನವನ್ನೂ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT