ಸೋಮವಾರ, ಆಗಸ್ಟ್ 8, 2022
24 °C

ಪ್ರಶ್ನೋತ್ತರ: ‘ದೂರ ಶಿಕ್ಷಣ’ದ ಪದವೀಧರರು ಐಎಎಸ್‌ ಪರೀಕ್ಷೆ ಬರೆಯಬಹುದಾ?

ವಿ.ಪ್ರದೀಪ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

1. ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 86 ತೆಗೆದುಕೊಂಡಿದ್ದೇನೆ. ಪಿಯುಸಿಯಲ್ಲಿ ಯಾವ ವಿಭಾಗವನ್ನು ತೆಗೆದುಕೊಳ್ಳಬೇಕು ಎನ್ನುವ ಗೊಂದಲವಿದೆ. ಕಲಾ ವಿಭಾಗ ತೆಗೆದುಕೊಂಡು ಎಲ್‌ಎಲ್‌ಬಿ ಮಾಡಿ ಐಎಎಸ್ ಮಾಡಬೇಕು ಅಂತ ಅಂದುಕೊಂಡೆ. ಆದರೆ, ತುಂಬಾ ಜನ ಕಾಮರ್ಸ್ ತೆಗೆದುಕೊಂಡು, ಪಿಯುಸಿ ಆದ ಮೇಲೆ ಕೂಡ ಎಲ್‌ಎಲ್‌ಬಿ ಮಾಡಬಹುದು ಅಂತ ಹೇಳುತ್ತಿದ್ದಾರೆ. ಹಾಗಾಗಿ ನನಗೆ ಕಾಮರ್ಸ್ ಮತ್ತು ಕಲಾ ವಿಭಾಗಗಳಲ್ಲಿ ಯಾವುದನ್ನು ತೆಗೆದುಕೊಳ್ಳಬಹುದೆಂದು ದಯವಿಟ್ಟು ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ನಾಗರಿಕ ಸೇವಾ ಪರೀಕ್ಷೆಯನ್ನು ಯಾವುದೇ ಪದವಿಯ ನಂತರ ಮಾಡಬಹುದು. ಮುಖ್ಯವಾಗಿ, ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ವೃತ್ತಿ ಯೋಜನೆಯನ್ನು ಮಾಡಬೇಕು. ವೃತ್ತಿ ಯೋಜನೆ  ಮಾಡುವ ಪ್ರಕ್ರಿಯೆ ಕುರಿತ ಲೇಖನ, ಇದೇ ತಿಂಗಳ 23ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಪದವಿ ಪರೀಕ್ಷೆಯ ವಿಷಯಗಳನ್ನು ಆಧರಿಸಿ, ನಾಗರಿಕ ಸೇವಾ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವನ್ನು ಆರಿಸಿಕೊಳ್ಳುವುದರ ಬಗ್ಗೆಯೂ ಇದೇ ತಿಂಗಳ 26ರ ಸಂಚಿಕೆಯಲ್ಲಿ ಲೇಖನ ಪ್ರಕಟವಾಗಿದೆ. ಈ ಎರಡೂ ಲೇಖನಗಳನ್ನು ಓದಿಕೊಂಡರೆ, ನಿಮ್ಮ ಗೊಂದಲ ಪರಿಹಾರವಾಗುತ್ತದೆ. ಹೆಚ್ಚಿನ ಮಾರ್ಗದರ್ಶನ ಅಗತ್ಯವೆನಿಸಿದರೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

2. ದೂರ ಶಿಕ್ಷಣದ ಮೂಲಕ ಪದವಿ ಪಡೆದವರಿಗೆ ಐಎಎಸ್, ಐಪಿಎಸ್ ಮಾಡಲು ಅವಕಾಶವಿದೆಯೇ? ದೂರಶಿಕ್ಷಣದಲ್ಲಿ ಯಾವ ವಿಶ್ವವಿದ್ಯಾಲಯ ಉತ್ತಮ? ದಯಮಾಡಿ ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ದೂರ ಶಿಕ್ಷಣ ಬ್ಯೂರೊ, ಯುಜಿಸಿ ಸಂಸ್ಥೆಯ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಪದವೀಧರರು, ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯಬಹುದು. ಉತ್ತಮ ವಿಶ್ವವಿದ್ಯಾಲಯದ ಮಾಹಿತಿಗಾಗಿ ಗಮನಿಸಿ: https://collegevidya.com/blog/top-distance-learning-colleges-in-india/

3. ನಾನು ಎಂಕಾಂ ಮಾಡಿ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಈ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವನ್ನಾಗಿ, ಕಾಮರ್ಸ್ ಮತ್ತು ಅಕೌಂಟೆನ್ಸಿ ತೆಗೆದುಕೊಳ್ಳಬೇಕು ಎಂದು ಇಷ್ಟ. ಆದರೆ, ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಪ್ರಸ್ತುತ ಬೆಂಗಳೂರಿನಲ್ಲಿ ತರಬೇತಿ ಸೌಲಭ್ಯವಿಲ್ಲ. ಹಾಗಾಗಿ, ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ಈ ಎರಡರ ಮಧ್ಯೆ ಗೊಂದಲಕ್ಕೆ ಸಿಕ್ಕಿದ್ದೇನೆ. ದಯಮಾಡಿ, ನಿಮ್ಮ ಸಲಹೆ ನೀಡಿ.

ಚಂದನ್ ಎಸ್, ತಿಮ್ಮಾಲಪುರ, ಪಂಚನಹಳ್ಳಿ

ನಮಗಿರುವ ಮಾಹಿತಿಯಂತೆ, ನಾಗರಿಕ ಸೇವಾ ಪರೀಕ್ಷೆಯ ಕಾಮರ್ಸ್ ವಿಷಯದ ತರಬೇತಿ ಬೆಂಗಳೂರಿನಲ್ಲಿ ಲಭ್ಯ. ಹಾಗಾಗಿ ಅಂತಿಮ ನಿರ್ಧಾರ ನಿಮ್ಮದು.

4. ನಾನು ಬಿಎ ಮುಗಿಸಿ ಎಂಎ ಮಾಡುತ್ತಾ, ಪಿಎಸ್‌ಐ ಸ್ಪರ್ಧಾತ್ಮಕ ಪರಿಕ್ಷೆಗೆ ಓದುತ್ತಿದ್ದೇನೆ. ಈ ಭ್ರಷ್ಟಾಚಾರದ ಸಮಯದಲ್ಲಿ ನಾನು ಪಿಎಸ್‌ಐ ಹುದ್ದೆ ಪಡೆಯಲು ಸಾಧ್ಯವೇ ?

ಹೆಸರು, ಊರು ತಿಳಿಸಿಲ್ಲ.

ಆತಂಕದ ಇಂದಿನ ಪರಿಸ್ಥಿತಿ ತಾತ್ಕಾಲಿಕ; ಹಾಗಾಗಿ ಎದೆಗುಂದದೆ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ನಿಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸಿ.  ಇನ್ನೂ ಹೆಚ್ಚಿನ ಏಕಾಗ್ರತೆ, ದೃಢತೆ ಮತ್ತು ಸಮಯದ ನಿರ್ವಹಣೆಯಿಂದ ತಯಾರಾಗಿ, ಸ್ಪರ್ಧಾತ್ಮಕ ಪರಿಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಪ್ರಯತ್ನಿಸಿ. ಶುಭಹಾರೈಕೆಗಳು.

5.ನಾನು ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ 90 ಅಂಕ ಗಳಿಸಿದ್ದು ಮುಂದೆ ಆರ್ಕಿಯಾಲಜಿಸ್ಟ್ ಆಗಲು ಬಯಸಿದ್ದೇನೆ. ಅದು ಹೇಗೆ ಎಂದು ತಿಳಿಸಿಕೊಡಿ.

ಹೆಸರು, ಊರು ತಿಳಿಸಿಲ್ಲ.

ಪುರಾತತ್ವ ಶಾಸ್ತ್ರದಲ್ಲಿ (ಆರ್ಕಿಯಾಲಜಿ) ತಜ್ಞತೆ ಪಡೆಯುವ ಮುಂಚೆ ಇತಿಹಾಸ, ಮಾನವ ಶಾಸ್ತ್ರ ಮತ್ತು ಸಮಾಜ ಶಾಸ್ತ್ರ ದಂತಹ ವಿಷಯಗಳ ಓದುವಿಕೆ ನಿಮ್ಮ ಮುಂದಿನ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಭದ್ರ ಬುನಾದಿಯನ್ನು ಒದಗಿಸುತ್ತವೆ. ಹಾಗಾಗಿ, ಈ ವಿಷಯಗಳಲ್ಲಿ ಬಿಎ ಪದವಿ ಕೋರ್ಸ್ ಮಾಡಿ, ಸ್ನಾತಕೋತ್ತರ ಪದವಿ ಕೋರ್ಸನ್ನು ಪುರಾತತ್ವ ಶಾಸ್ತ್ರದಲ್ಲಿ ಮಾಡಿ, ಪುರಾತತ್ವ ಶಾಸ್ತ್ರಜ್ಞರಾಗಿ ಕೆಲಸ ಮಾಡಬಹುದು. ಈ ವಿಷಯದಲ್ಲಿ ಪಿಎಚ್‌ಡಿ ಮಾಡಿದರೆ, ಇನ್ನೂ ಹೆಚ್ಚಿನ ಅವಕಾಶಗಳು ಲಭಿಸುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು