ಭಾನುವಾರ, ಮೇ 29, 2022
30 °C

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಬಿ.ಇ. ಮುಂದುವರಿಸಬಹುದೇ?

ಪ್ರದೀಪ್ Updated:

ಅಕ್ಷರ ಗಾತ್ರ : | |

1. ಬಿಎಸ್‌ಸಿ (ಕೃಷಿ ವ್ಯಾಪಾರ ನಿರ್ವಹಣೆ) ಕೋರ್ಸ್ ಬಗ್ಗೆ ಮಾಹಿತಿ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.

ದೀಪಾ, ಊರು ತಿಳಿಸಿಲ್ಲ.

ಬಿಎಸ್‌ಸಿ (ಕೃಷಿ ವ್ಯಾಪಾರ ನಿರ್ವಹಣೆ) ಕೃಷಿ ಉತ್ಪನ್ನಗಳ ವ್ಯವಸಾಯ, ಮಾರಾಟ ಮತ್ತು ನಿರ್ವಹಣೆಗೆ ಬೇಕಾಗುವ ಜ್ಞಾನ ಮತ್ತು ಕೌಶಲಗಳನ್ನು ಕಲಿಸುವ ನಾಲ್ಕು ವರ್ಷದ ಕೋರ್ಸ್.

ನಮ್ಮ ದೇಶದಲ್ಲಿ ಪ್ರವಾಹ, ಕೀಟ–ರೋಗ ಬಾಧೆ ಇತ್ಯಾದಿ ಕಾರಣಗಳಿಂದ ಪ್ರತಿ ವರ್ಷ ಸುಮಾರು ಶೇ 20 ಕ್ಕೂ ಹೆಚ್ಚು ಬೆಳೆ ನಾಶವಾಗುತ್ತದೆ. ಹಾಗಾಗಿ, ಕೃಷಿ ಸಂಬಂಧಿತ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಧಿಕ ಇಳುವರಿ, ಸಮಯದ ಉಳಿತಾಯ, ಉತ್ಪಾದನಾ ವೆಚ್ಚದ ಕಡಿತ, ಉತ್ಪನ್ನಗಳ ಸಂರಕ್ಷಣೆ, ಸಂಸ್ಕರಣೆ, ಸಾಗಣೆ ಮತ್ತು ಮಾರಾಟ ನಿರ್ವಹಣೆ ಕುರಿತ ಅತ್ಯಂತ ಉಪಯುಕ್ತ ಮಾಹಿತಿಯನ್ನು ಈ ಕೋರ್ಸ್‌ನಲ್ಲಿ ನೀಡಲಾಗುತ್ತದೆ. ಹಾಗಾಗಿ, ಈ ಕೋರ್ಸ್ ಮಾಡಿರುವ ಪದವೀಧರರಿಗೆ ಹೆಚ್ಚಿನ ಬೇಡಿಕೆಯಿದೆ.

ಈ ಕೋರ್ಸ್ ನಂತರ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಕೃಷಿ ಉದ್ದಿಮೆಗಳು, ಆಹಾರ ಸಂಬಂಧಿತ ಉದ್ದಿಮೆಗಳು, ಸಾವಯವ ಕೃಷಿ ಉತ್ಪನ್ನಗಳ ಉದ್ದಿಮೆಗಳು, ರಸಗೊಬ್ಬರ ಮತ್ತು ಕೀಟನಾಶಕ ಸಂಸ್ಥೆಗಳು, ಕೃಷಿ ಯಂತ್ರೋಪಕರಣಗಳು, ಬ್ಯಾಂಕಿಂಗ್, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ.

ನಿಮಗೆ ಅಭಿರುಚಿಯಿದ್ದಲ್ಲಿ, ಜ್ಞಾನ ಮತ್ತು ಕೌಶಲಗಳ ಸದುಪಯೋಗದಿಂದ ಸ್ವಂತ ಕೃಷಿ ಆರಂಭಿಸಿ, ಪ್ರಯೋಗಶೀಲ ರೈತರಾಗಿ, ನಾಡಿನ ಇನ್ನಿತರ ರೈತರಿಗೂ ಮಾದರಿಯಾಗಬಹುದು.

2. ನಾನು ಎಂಜಿನಿಯರಿಂಗ್ 5 ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದು, ಸಿವಿಲ್ ಎಂಜಿನಿಯರಿಂಗ್ ಲೈಸೆನ್ಸ್ ಪಡೆದುಕೊಳ್ಳಬೇಕಿದೆ. ಅದನ್ನು ಪಡೆದುಕೊಳ್ಳುವ ದಾರಿ ಯಾವುದು?

ಶಶಿಕುಮಾರ್, ಕೊಪ್ಪಳ.

ಸಿವಿಲ್ ಲೈಸೆನ್ಸ್ ವಿವರಗಳಿಗಾಗಿ ಗಮನಿಸಿ:
https://www.governmentofficework.com/how-to-get-civil-contractor-license...

3. ನಾನು ಎಂಎಸ್‌ಸಿ (ಕೃಷಿ) ಪದವಿಯನ್ನು ಪೂರ್ಣಗೊಳಿಸಿರುತ್ತೇನೆ. ನನಗೆ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸಿದೆ. ಆದರೆ ಪಿಎಚ್.ಡಿ (ಕೃಷಿ) ಮಾಡಿದರೆ ಪ್ರೊಫೆಸರ್ ಆಗಿ ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ. ಈ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎಂದು ಗೊತ್ತಾಗುತ್ತಿಲ್ಲ.

ಪ್ರವೀಣ್ ಕುಮಾರ್ ಎಂ.ಬಿ., ಊರು ತಿಳಿಸಿಲ್ಲ.

ನೀವು ತಿಳಿಸಿರುವ ಎರಡೂ ವೃತ್ತಿಯ ಆಯ್ಕೆಗಳಿಗೆ ಉಜ್ವಲ ಭವಿಷ್ಯವಿದೆ. ಹಾಗಾಗಿ, ನಿಮ್ಮ ಸ್ವಾಭಾವಿಕ ಆಸಕ್ತಿ, ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಿ.

4. ಸರ್, ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮೊದಲ ವರ್ಷದ ವಿದ್ಯಾರ್ಥಿ. ಎಸ್‌ಡಿಎ ಪರೀಕ್ಷೆ ಬರೆದಿದ್ದು ಎಸ್‌ಡಿಎ ಗೆ ಆಯ್ಕೆಯಾದರೆ, ಎಂಜಿನಿಯರಿಂಗ್ ಕೋರ್ಸ್ ಮುಂದುವರಿಸಲು ಸಾಧ್ಯವೇ?

ಹೆಸರು, ಊರು ತಿಳಿಸಿಲ್ಲ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ನಾಲ್ಕು ವರ್ಷದ ಪೂರ್ಣಾವಧಿ ಕೋರ್ಸ್. ಹಾಗಾಗಿ, ನಮಗಿರುವ ಮಾಹಿತಿಯಂತೆ, ಎಸ್‌ಡಿಎ ವೃತ್ತಿಯಲ್ಲಿದ್ದುಕೊಂಡು ಎಂಜಿನಿಯರಿಂಗ್ ಕೋರ್ಸ್ ಮುಂದುವರಿಸಲು ಸಾಧ್ಯವಿಲ್ಲ.  ಹಾಗೆಯೇ ಎಸ್‌ಡಿಎ ವೃತ್ತಿ ಮತ್ತು ಎಂಜಿನಿಯರಿಂಗ್ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಜ್ಞಾನ, ಕೌಶಲ ಮತ್ತು ಅಭಿರುಚಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಆದ್ದರಿಂದ, ನಿಮ್ಮ ಸ್ವಾಭಾವಿಕ ಪ್ರತಿಭೆ, ಅಭಿರುಚಿ ಮತ್ತು ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೃತ್ತಿಯೋಜನೆಯನ್ನು ತಯಾರಿಸಿ, ಅದರಂತೆ ನಿರ್ಧರಿಸುವುದು ಸೂಕ್ತ.

5. ಬಿಟೆಕ್ (ಆಹಾರ ತಂತ್ರಜ್ಞಾನ ) ಆದ ಮೇಲೆ ಎಂ.ಟೆಕ್ ಮಾಡುವುದು ಕಡ್ಡಾಯವೇ? ಬಿಟೆಕ್ ಆದ ಮೇಲೆ ಉದ್ಯೋಗ ಸಿಗುವುದಿಲ್ಲವೇ?

ವಿನಯ ಪ್ರಸಾದ್, ಊರು ತಿಳಿಸಿಲ್ಲ.

ಬಿಟೆಕ್ ಮಾಡಿದ ನಂತರ ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಪುಲವಾದ ಉದ್ಯೋಗಾವಕಾಶಗಳಿವೆ. ಹಾಗಾಗಿ, ಹೆಚ್ಚಿನ ತಜ್ಞತೆ ಬೇಕಿದ್ದರೆ ಮಾತ್ರ ಎಂ.ಟೆಕ್ ಮಾಡಬಹುದು.

6. ನಾನು ಪ್ರಸ್ತುತ ಎಂಎಸ್‌ಸಿ (ತೋಟಗಾರಿಕೆ) ಪದವಿಯನ್ನು ಮಾಡುತ್ತಿದ್ದೇನೆ. ಮುಂದೆ ಪಿಎಚ್.ಡಿ ಮಾಡಿ ಸಹಾಯಕ ಪ್ರಾಧ್ಯಾಪಕನಾಗಬೇಕು ಎನ್ನುವುದು ನನ್ನ ಕನಸು. ಆದರೆ, ಸಾಕಷ್ಟು ಪದವೀಧರರು ನಿರುದ್ಯೋಗಿಗಳಾಗಿರುವುದರಿಂದ ಪಿಎಚ್‌.ಡಿ ಮಾಡುವುದು ವ್ಯರ್ಥ ಎನಿಸುತ್ತಿದೆ. ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಸಲಹೆ ನೀಡಿ.

ಶರತ್ ಎಂ.ಎನ್., ಊರು ತಿಳಿಸಿಲ್ಲ.

ಉತ್ತಮ ಪ್ರಾಧ್ಯಾಪಕರಾಗಲು ವಿಷಯದ ಕುರಿತು ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. ಇವೆಲ್ಲವೂ ನಿಮ್ಮಲ್ಲಿದ್ದು, ಈ ವೃತ್ತಿಯನ್ನು ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸವಿದ್ದರೆ, ನಿಮ್ಮ ಬಾಲ್ಯದ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸಿ. ಆದರೆ, ಈ ವೃತ್ತಿ ಸಂಬಂಧವಾಗಿ ಇನ್ನೂ ಸಂಶಯ, ಆತಂಕಗಳಿದ್ದಲ್ಲಿ, ಎಂಎಸ್‌ಸಿ ನಂತರ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿರುವ ವೈವಿಧ್ಯಮಯ ಅವಕಾಶಗಳನ್ನು ಬಳಸಿಕೊಂಡು, ನಿಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು