ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣಾಮಕಾರಿ ಕಲಿಕೆಗೆ ಇರಲಿ ಪ್ರಶ್ನಿಸುವ ಕಲೆ

ಅಕ್ಷರ ಗಾತ್ರ

ಕೆಲವು ವರ್ಷಗಳ ಹಿಂದೆ, ನಮ್ಮ ವಿದ್ಯಾರ್ಥಿಗಳಿಗೂ ಅಮೆರಿಕದ ವಿದ್ಯಾರ್ಥಿಗಳಿಗೂ ಒಂದೇ ಶೈಕ್ಷಣಿಕ ವರ್ಷದಲ್ಲಿ ಬೋಧಿಸುತ್ತಿದ್ದ ಸಂದರ್ಭ. ಪದವಿ ಕೋರ್ಸ್‌ನಲ್ಲಿ ಓದುತ್ತಿದ್ದ ಅಮೆರಿಕದ ವಿದ್ಯಾರ್ಥಿಗಳು ನಿರಂತರವಾಗಿ ಪ್ರಶ್ನೆಗಳನ್ನು ಕೇಳಿ ತಮ್ಮ ಗೊಂದಲವನ್ನು ಪರಿಹರಿಸಿಕೊಳ್ಳುತ್ತಿದ್ದರೆ, ಸ್ನಾತಕೋತ್ತರ ಕೋರ್ಸ್‌ನಲ್ಲಿದ್ದ ನಮ್ಮ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದದ್ದೇ ಅಪರೂಪ. ಈ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳಲ್ಲಿನ ಹಿಂಜರಿಕೆ ಸಾಮಾನ್ಯ ಎಂಬುದು ಬಹುತೇಕ ಬೋಧಕರ ಅಭಿಪ್ರಾಯ.

ಹಾಗಾಗಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನದ ಕೊರತೆಯಿಂದ ಪ್ರಸ್ತುತ ಕಲಿಕೆಯ ವಿಧಾನಗಳು ಮೇಲ್ನೋಟಕ್ಕೆ ಅಷ್ಟು ಪರಿಣಾಮಕಾರಿ ಅಲ್ಲ ಎನಿಸುವುದು ಸಹಜ. ನಮ್ಮ ವಿದ್ಯಾರ್ಥಿಗಳಲ್ಲಿನ ಹಿಂಜರಿಕೆ, ಬಹುಶಃ ಯಥಾಸ್ಥಿತಿಯನ್ನು ಪ್ರಶ್ನಿಸದ ಅಥವಾ ಸವಾಲು ಮಾಡದ ನಮ್ಮ ಸಂಸ್ಕಾರದಿಂದಲೂ ಪ್ರಭಾವಿತವಾಗಿರಬಹುದು. ಕಾರಣಗಳೇನೇ ಇರಲಿ, ಪ್ರಶ್ನೆಗಳಿಲ್ಲದ, ಸಂವಹನವಿರದ ಶಾಲೆ, ಕಾಲೇಜುಗಳಲ್ಲಿನ ಕಲಿಕೆ ಅಪೂರ್ಣ.

ಜಗತ್ತಿನ ಮೂವರು ಶ್ರೇಷ್ಠ ವಿಜ್ಞಾನಿಗಳಾದ ಸರ್ ಐಸಾಕ್ ನ್ಯೂಟನ್, ಚಾರ್ಲ್ಸ್ ಡಾರ್ವಿನ್ ಮತ್ತು ಆಲ್ಬರ್ಟ್ ಐನ್‌ಸ್ಟೀನ್‌ ಅವರಲ್ಲಿ ಒಂದು ವಿಶೇಷ ಗುಣವಿತ್ತು. ಉದ್ದೇಶ, ಪ್ರಸ್ತುತತೆ ಮತ್ತು ವ್ಯಾಖ್ಯಾನದ ಪ್ರಶ್ನೆಗಳು, ಅವರ ವಿಮರ್ಶಾತ್ಮಕ ಚಿಂತನೆ ಮತ್ತು ಬುದ್ಧಿಶಕ್ತಿಗೆ ಅಪಾರವಾದ ಶಕ್ತಿಯನ್ನು ತುಂಬಿದ್ದವು. ಇವೆಲ್ಲವೂ ಕಲಿಕೆಗೆ ಅತ್ಯವಶ್ಯ.

ಪ್ರಶ್ನೆಗಾರಿಕೆ: ಕಲಿಕೆಯ ಪ್ರಮುಖ ತಂತ್ರ

ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯ ಪರಿಣಾಮಕಾರಿ ಕಲಿಕೆಯಲ್ಲಿ ನಿರ್ಣಾಯಕ ಅಂಶವಾಗಿದೆ. ಏಕೆಂದರೆ, ಪ್ರಶ್ನೆಗಳು ತರಗತಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕುತ್ತವೆ ಮತ್ತು ಸ್ವಗತದ ಸಮಸ್ಯೆಯನ್ನು ನಿವಾರಿಸುತ್ತವೆ. ಏಕತಾನತೆ ಮತ್ತು ಚುರುಕಿಲ್ಲದ ತರಗತಿಯ ಪರಿಸರ ಜ್ಞಾನವನ್ನು, ಕಲಿಕೆಯನ್ನು ಉತ್ತೇಜಿಸಲು ವಿಫಲವಾಗುತ್ತವೆ. ಹಾಗಾಗಿ, ಶಿಕ್ಷಕರು ಪ್ರಶ್ನೆಗಳನ್ನು ಇಷ್ಟಪಡುವುದಿಲ್ಲವೆನ್ನುವ ಅಭಿಪ್ರಾಯ ಸತ್ಯಕ್ಕೆ ದೂರ.

ಸಕ್ರಿಯವಾದ ಪ್ರಶ್ನೆಗಾರಿಕೆಯಿಂದ ವಿದ್ಯಾರ್ಥಿಗಳಿಗೆ ಅನೇಕ ಅನುಕೂಲಗಳಿವೆ:

ವಿಮರ್ಶಾತ್ಮಕ ಚಿಂತನಾ ಕೌಶಲಗಳ ಅಭಿವೃದ್ಧಿ

ವಿಷಯದ ಬಗ್ಗೆ ಒಳನೋಟಗಳು

ಆಲಿಸುವಿಕೆ ಮತ್ತು ಸಂವಹನ ಕೌಶಲಗಳ ಅಭಿವೃದ್ಧಿ

ಹೆಚ್ಚಿನ ಆತ್ಮವಿಶ್ವಾಸ

ಶಿಕ್ಷಕ- ಮಾರ್ಗದರ್ಶಕರೊಡನೆ ಉತ್ತಮ ಬಾಂಧವ್ಯ

ಪ್ರಶ್ನೆಗಳ ವೈವಿಧ್ಯತೆ

ಪರಿಕಲ್ಪನೆಗಳಿಂದಲೂ, ಆಲೋಚನೆಗಳಿಂದಲೂ, ಸವಾಲುಗಳಿಂದಲೂ ಆವರಿಸಿದ ವಿಭಿನ್ನವಾದ ವಿಷಯಗಳನ್ನು ಕಲಿಯುವ ನಿಟ್ಟಿನಲ್ಲಿ, ವೈವಿಧ್ಯಮಯ ಪ್ರಶ್ನೆಗಳನ್ನು ಕೇಳಬಹುದು.

ಉದಾಹರಣೆಗೆ, ಎಂಬಿಎ ಕೋರ್ಸ್‌ನ ಮಾರ್ಕೆಟಿಂಗ್ ವಿಭಾಗದಲ್ಲಿ ‘ನಾಲ್ಕು ಪಿ’ (ಉತ್ಪನ್ನ, ಬೆಲೆ, ಪ್ರಚಾರ ಮತ್ತು ಸ್ಥಳ) ಗಳ ಪ್ರಮುಖ ವಿಷಯವನ್ನು ತೆಗೆದುಕೊಳ್ಳೋಣ:

ಪರಿಕಲ್ಪನಾತ್ಮಕ ಪ್ರಶ್ನೆಗಳು: ‘ನಾಲ್ಕು ಪಿ’ ಪರಿಕಲ್ಪನೆಯ ಹಿಂದಿನ ತತ್ವಗಳೇನು?

ಅನ್ವೇಷಣಾತ್ಮಕ ಪ್ರಶ್ನೆಗಳು: ಈ ಪರಿಕಲ್ಪನೆಯು ಹೇಗೆ ಅಭಿವೃದ್ಧಿಗೊಂಡಿದೆ? ಪರಿಕಲ್ಪನೆಯು ಸಾರ್ವತ್ರಿಕವಾಗಿ ಅನ್ವಯವಾಗುತ್ತದೆಯೇ?

ಇಂತಹ ಪ್ರಶ್ನೆಗಳು ತರಗತಿಯ ಪರಿಸರವನ್ನು ಉತ್ತೇಜಿಸಿ, ಚರ್ಚೆಗಳನ್ನು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುತ್ತವೆ.

ಪರಿಶೋಧನಾತ್ಮಕ ಪ್ರಶ್ನೆಗಳು: ಸೇವಾ ಉದ್ಯಮದಲ್ಲಿ ಮಾನವ ಸಂಪನ್ಮೂಲದ ಅಂಶ ಏಕೆ ಮುಖ್ಯವಾಗಿದೆ?

ತುಲನಾತ್ಮಕ ಪ್ರಶ್ನೆಗಳು: ಮಾರ್ಕೆಟಿಂಗ್ ಪ್ರಕ್ರಿಯೆಯು ಭಾರತ ಮತ್ತು ಯೂರೋಪ್‌ನಲ್ಲಿ ಎಷ್ಟು ಭಿನ್ನವಾಗಿದೆ?

ಕಾಲ್ಪನಿಕ ಪ್ರಶ್ನೆಗಳು: ಒಂದು ಸಂಸ್ಥೆಯಲ್ಲಿ ಮಾನವ ಸಂಪನ್ಮೂಲಕ್ಕೆ ಸರಿಯಾದ ಪ್ರಾಮುಖ್ಯತೆ ನೀಡದಿದ್ದರೆ ಪರಿಣಾಮಗಳೇನು? ವಸ್ತುವಿನ ಬೆಲೆಯನ್ನು ಶೇ 10ರಷ್ಟು ಕಡಿಮೆ ಮಾಡಿದರೆ ಬೇಡಿಕೆಯ ಮೇಲೆ ಆಗುವ ಪರಿಣಾಮಗಳೇನು?

ಸಂಬಂಧಾತ್ಮಕ ಪ್ರಶ್ನೆಗಳು: ಉತ್ಪನ್ನದ ಜೀವನ ಚಕ್ರವನ್ನು ಮೊಟಕುಗೊಳಿಸಿದರೆ ಉಂಟಾಗುವ ಸವಾಲುಗಳೇನು?

ಈ ರೀತಿಯ ಪ್ರಶ್ನೆಗಳನ್ನು ಕೇಳುವುದರಿಂದ ತರಗತಿಗಳಲ್ಲಿ ಚೈತನ್ಯಭರಿತ ಮತ್ತು ವಿಮರ್ಶಾತ್ಮಕ ಚರ್ಚೆಗಳಾಗಿ, ವಿಷಯದ ಕಲಿಕೆ ಸಂಪೂರ್ಣವಾಗುತ್ತದೆ.

ಪ್ರಶ್ನಿಸುವ ಕಲೆಯನ್ನು ಕರಗತ ಮಾಡಿಕೊಳ್ಳಿ

ನಮ್ಮ ಸಾಮರ್ಥ್ಯದ ಒಂದು ಕನಿಷ್ಠ ಭಾಗವನ್ನಷ್ಟೇ ನಾವು ಸಕ್ರಿಯಗೊಳಿಸುತ್ತೇವೆ ಎಂದು ಅನೇಕ ಮನಶ್ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಪ್ರಸ್ತುತ ಕಲಿಕೆಯ ಶೈಲಿಯನ್ನು ಪರೀಕ್ಷಿಸಿ ಮತ್ತು ನಿಮ್ಮ ಅನನ್ಯ ಕಲಿಕೆಯ ಶೈಲಿಯನ್ನು ಬೆಳೆಸಿಕೊಳ್ಳಿ. ಆಗಲೇ, ಕಲಿಕೆ ಸಂಪೂರ್ಣವಾಗಿ ನಿಮ್ಮ ಉಜ್ವಲ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಬಹುದು. ಆದ್ದರಿಂದ, ಸಹಪಾಠಿಗಳ ಲೇವಡಿ ಅಥವಾ ಅಪಹಾಸ್ಯದ ಭಯದಿಂದ ಮುಕ್ತಗೊಂಡು ಸೂಕ್ತವಾದ ಪ್ರಶ್ನೆಗಾರಿಕೆಯಿಂದ ನಿಮ್ಮ ಕಲಿಕೆಯನ್ನು ಪರಿಣಾಮಕಾರಿಯಾಗಿಸಿ.

ಸಕ್ರಿಯವಾದ ಚರ್ಚೆಗಳನ್ನು ಹುಟ್ಟುಹಾಕುವ ಪ್ರಶ್ನೆಗಳಿಂದ, ವಿದ್ಯಾರ್ಥಿ- ಶಿಕ್ಷಕರ ಪರಸ್ಪರ ಭಾಗವಹಿಸುವಿಕೆ ಹೆಚ್ಚಾಗಿ, ಕಲಿಕೆ ಸಂಪೂರ್ಣವಾಗಿಯೂ, ಸಮಗ್ರವಾಗಿಯೂ ಆಗುತ್ತದೆ.

(ಲೇಖಕ: ಮ್ಯಾನೇಜ್‌ಮೆಂಟ್ ಮತ್ತು ಶಿಕ್ಷಣ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT