ವಿಜ್ಞಾನ ವಿಷಯವನ್ನು ಆಯ್ಕೆಮಾಡಿಕೊಂಡ ಪ್ರತೀ ವಿದ್ಯಾರ್ಥಿಯೂ ನೀಟ್ ಪರೀಕ್ಷೆಯನ್ನು ತೆಗೆದುಕೊಳ್ಳಲೇಬೇಕೇ ? ಇದು ಪ್ರತಿಯೊಬ್ಬ ವಿದ್ಯಾರ್ಥಿಯ ಆಧ್ಯತೆಯಾಗಲೇಬೇಕೆ? ನೀಟ್ ಪ್ರಕರಣದ ನಂತರ ಇಂತಹ ಹಲವು ಪ್ರಶ್ನೆಗಳು ನಮ್ಮೊಳಗೆ ಉದ್ಭವಿಸಿದೆ.
ವಿದ್ಯಾವಂತರಾದ ನಾವು ಇಂತಹ ಹಲವಾರು ಸಮಸ್ಯೆಗಳನ್ನು ಪರಾಮರ್ಶಿಸಲೇಬೇಕಿದೆ. ಹತ್ತನೇ ತರಗತಿ ಮುಗಿದ ನಂತರ ಅಧ್ಯಯನ ವಿಷಯದ ಆಯ್ಕೆಯು ಪ್ರಮುಖವಾಗಿರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗುತ್ತದೆ. ಆದರೆ ಪಾಲಕರು ಈ ದೆಸೆಯಲ್ಲಿ ಸಮರ್ಥರಾಗಿರದೇ ತಮ್ಮ ನಿರ್ಧಾರವನ್ನು ಕೆಲವೇ ಕೆಲವು ವಿಷಯಾಧಾರಿತ ಚೌಕಟ್ಟಿನಲ್ಲಿ ಮಕ್ಕಳ ಮೇಲೆ ತಮ್ಮ ಯೋಚನೆಗಳ ನಿರ್ಬಂಧವನ್ನು ರೂಪಿಸಿಬಿಡುತ್ತಾರೆ.ಇದಕ್ಕೆ ಪ್ರಮುಖ ಕಾರಣ ಯಶಸ್ವಿ ಕೋರ್ಸ್‌ಗಳ ಪಟ್ಟಿಯಲ್ಲಿ ಕೆಲವೇ ಕೆಲವು ಕೋರ್ಸ್‌ಗಳು ಸೇರಿಕೊಂಡಿರುವುದರಿಂದ, ಉಳಿದ ಕೋರ್ಸ್‌ಗಳ ಕಡೆಗೆ ಎಲ್ಲರ ಗಮನ ಕಡಿಮೆಯಾಗಿದೆ.
ಒಟ್ಟೂ 800ಕ್ಕೂ ಹೆಚ್ಚಿನ ವೃತ್ತಿ ಆಯ್ಕೆಗಳಿದ್ದರೂ ಕೇವಲ 15ರಷ್ಟು ಮಾತ್ರ ನಮಗೆ ತಿಳಿದಿರುವುದು. ಅವುಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ವಾಣಿಜ್ಯ ವಿಭಾಗವು ಪ್ರಮುಖವಾಗಿ ಆಯ್ಕೆಯಾಗುವ ಕೋರ್ಸ್‌ಗಳಾಗಿವೆ. ಯಾವ ಕೋರ್ಸ್ ಅನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸಂಶಯದಿಂದ ದೂರವಿಡಲು ವೃತ್ತಿ ಸಮಾಲೋಚನೆಯ ಮಾರ್ಗ ಬಹಳ ಉಪಯುಕ್ತವಾಗುತ್ತದೆ.
ವಿದ್ಯಾರ್ಥಿಯು 9ನೇ ಹಾಗೂ 10ನೇ ತರಗತಿಯಲ್ಲಿರುವಾಗಲೇ ದೂರದೃಷ್ಟಿಯಿಂದ ವೃತ್ತಿ ಸಂಬಂಧಿಸಿದಂತೆ ಕೌನ್ಸೆಲಿಂಗ್ ತೆಗೆದುಕೊಳ್ಳುವುದು ಉತ್ತಮವಾಗಿದೆ. ವಿದ್ಯಾರ್ಥಿಯ ಆಸಕ್ತಿಯನ್ನು ತಿಳಿಯಲು ಇದು ಸಹಾಯಮಾಡುತ್ತದೆ. ಭವಿಷ್ಯದ 30–40 ವರ್ಷಗಳನ್ನು ಅದೇ ವೃತ್ತಿಯಲ್ಲಿ ತಮ್ಮ ಜೀವನವನ್ನು ಸವೆಸಬೇಕಿರುವುದರಿಂದ ಇಂದಿನ ನಿರ್ಧಾರದಲ್ಲಿ ಸ್ಪಷ್ಟ ಚಿತ್ರಣವನ್ನು ಕಂಡುಕೊಳ್ಳಬೇಕಿದೆ. ಇದಕ್ಕೆ ಕೌನ್ಸೆಲಿಂಗ್ ಸಹಾಯಮಾಡುತ್ತದೆ.
ಪ್ರತಿಯೊಬ್ಬರೂ ಆಯ್ಕೆ ಮಾಡಿಕೊಳ್ಳುವ ವೃತ್ತಿಯ ಹಿಂದೆಯೇ ಎಲ್ಲರೂ ಓಡದೇ, ಹೊಸ ಮಾರ್ಗ ಹಾಗೂ ಭಿನ್ನ ಯೋಚನೆಗಳನ್ನು ನಮ್ಮದಾಗಿಸಿಕೊಳ್ಳಬೇಕು. ಮೊಟ್ಟ ಮೊದಲನೇಯದಾಗಿ ಮುಕ್ತ ಮನಸ್ಸಿನಿಂದ ಮಕ್ಕಳ ಜೊತೆ ಪಾಲಕರು ಮಾತನಾಡಿ ಹಾಗೂ ಮಕ್ಕಳಿಗೆ ಪೂರ್ಣಪ್ರಮಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ನೀಡಬೇಕು. ಅವರ ಮುಂದಿರುವ ಅವಕಾಶಗಳ ಪೂರ್ಣ ಮಾಹಿತಿಯನ್ನು ಮಕ್ಕಳಿಗೆ ನೀಡುವುದರಿಂದ ಅವರ ಆಸಕ್ತಿ ಕ್ಷೇತ್ರವನ್ನು ಆಯ್ದುಕೊಳ್ಳಲು ಸಹಾಯವಾಗುತ್ತದೆ. ಯಶಸ್ಸು ಎಂಬುದು ಸಂಬಳದ ಹಿಂದೆ ಓಡುವುದರಿಂದಲ್ಲ, ಯಾವುದೇ ಕ್ಷೇತ್ರದಲ್ಲಿ ಇರಬಹುದಾದಂತಹ ಅತ್ಯುತ್ತಮ ಜ್ಞಾನವೇ ಜೀವನದ ಯಶಸ್ಸು ಎಂದು ವ್ಯಾಖ್ಯಾನಿಸಬಹುದಾಗಿದೆ. ಮಕ್ಕಳ ಅಭಿಪ್ರಾಯವನ್ನು ಗೌರವಿಸಿ. ಅವರೊಟ್ಟಿಗೆ ಸಮಾಲೋಚಿಸಿ. ತಜ್ಞರ ಸಹಾಯ ಪಡೆದುಕೊಳ್ಳಿ. ಅವರ ನಿರ್ಧಾರಕ್ಕೆ ಪ್ರೋತ್ಸಾಹ ನೀಡಿ. ಬದುಕು ಹಸನಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.