ಭಾನುವಾರ, ಮೇ 29, 2022
31 °C

ರೊಬೋಟಿಕ್ಸ್: ಉದ್ಯೋಗ ನಷ್ಟವಾಗುತ್ತಿದೆಯೇ?

ವಿ. ಪ್ರದೀಪ್ ಕುಮಾರ್ Updated:

ಅಕ್ಷರ ಗಾತ್ರ : | |

ಓದುಗರಾದ ಕಿರಣ್‌ರಾಜ್‌ರವರು ಎರಡು ಪ್ರಶ್ನೆಗಳನ್ನು ಕಳುಹಿಸಿದ್ದಾರೆ. ಅದರಲ್ಲಿ ಒಂದು ಕೃತಕ ಬುದ್ದಿ ಮತ್ತೆ ಮತ್ತು ರೊಬೊಟಿಕ್ಸ್‌ಗೆ ಸಂಬಂಧಿಸಿದ್ದು. ಇನ್ನೊಂದು  ನಮ್ಮ ದೇಶಕ್ಕೆ ಅನುಗುಣವಾದ ಎಂಜಿನಿಯರಿಂಗ್‌ನ ಇತರ ಕೋರ್ಸ್‌ಗಳ ಕುರಿತು ಮಾಹಿತಿ ನೀಡಿ ಎಂದು ಕೇಳಿದ್ದಾರೆ.

ಪ್ರಶ್ನೆ 1: ಕೃತಕ ಬುದ್ದಿಮತ್ತೆ (ಎಐ) ಮತ್ತು ರೊಬೊಟಿಕ್ಸ್‌ನಿಂದ ಉದ್ಯೋಗ ನಷ್ಟವಾಗುತ್ತಿದೆಯೇ ಅಥವಾ ಸೃಷ್ಟಿಯಾಗುತ್ತಿದೆಯೇ? 

ಈ ಪ್ರಶ್ನೆಗಳಿಗೆ ಸ್ವಲ್ಪ ವಿವರವಾಗಿ ಉತ್ತರ ನೀಡಬೇಕಿದೆ. ಕೃತಕ ಬುದ್ದಿಮತ್ತೆ ಉಪಯೋಗಿಸಿ, ಯಂತ್ರಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿ, ಇನ್ನೂ ಹೆಚ್ಚು ಫಲದಾಯಕ ಕಾರ್ಯಗಳಿಗೆ ಮಾನವ ಸಂಪನ್ಮೂಲವನ್ನು ನಿಯೋಜಿಸಲಾಗುತ್ತದೆ.

ಉದಾಹರಣೆಗಳು: ವಿಮಾನಗಳಲ್ಲಿನ ಆಟೋಪೈಲಟ್, ಸ್ವಯಂಚಾಲಿತ ಕಾರುಗಳು, ಸಂಚಾರ ನಿರ್ವಹಣೆ, ಟ್ಯಾಕ್ಸಿ ಸೇವೆಗಳು, ಇಮೇಲ್‌ಗಳು, ಸಾಮಾಜಿಕ ಮಾಧ್ಯಮಗಳು, ಆನ್‌ಲೈನ್ ಶಾಪಿಂಗ್ ಇತ್ಯಾದಿ. 

ಹಾಗೆಯೇ, ಕೃತಕ ಬುದ್ದಿಮತ್ತೆ, ಮೆಷಿನ್ ಲರ್ನಿಂಗ್ ಇತ್ಯಾದಿ ಸಿದ್ಧಾಂತಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡು, ಸಾಮಾನ್ಯವಾಗಿ ಮನುಷ್ಯರು ಮಾಡುವ ಅನೇಕ ಕೆಲಸಗಳನ್ನು ಯಂತ್ರಗಳಿಂದ ಮಾಡಿಸುವುದೇ ರೊಬೊಟಿಕ್ಸ್. ಈ ರೋಬೊಗಳನ್ನು ಪ್ರತಿನಿತ್ಯದ ಸಾಮಾನ್ಯ ಕೆಲಸಗಳಿಗೂ ಮತ್ತು ಅತಿ ಹೆಚ್ಚಿನ ನಿಖರತೆಯ ಅಗತ್ಯವಿರುವ ಕೆಲಸಗಳಿಗೂ ಉಪಯೋಗಿಸಬಹುದು.

ಮನುಷ್ಯರಿಗೆ ಹೋಲಿಸಿದರೆ, ಈ ರೋಬೊಗಳ ಕಾರ್ಯಕ್ಷಮತೆ ಅತಿ ಹೆಚ್ಚಾಗಿರುವುದರಿಂದ, ಒಂದು ಅಂದಾಜಿನ ಪ್ರಕಾರ, ಇನ್ನು ಐದು ವರ್ಷಗಳಲ್ಲಿ ಶೇ 30 ಮಾನವನ ಉದ್ಯೋಗಗಳು ರೋಬೊಗಳ ಪಾಲಾಗಲಿದೆ!

ಕಾಲ್ ಸೆಂಟರ್‌ಗಳು, ಗ್ರಾಹಕ ಸಂಬಂಧ ನಿರ್ವಹಣೆ, ಆಟೊಮೊಬೈಲ್, ವೆಲ್ಡಿಂಗ್, ಪೇಂಟಿಂಗ್, ಜವಳಿ ಮತ್ತು ವಸ್ತ್ರೋದ್ಯಮ, ಪ್ಯಾಕಿಂಗ್, ಸರಕು ಸಾಗಣೆ ಮತ್ತು ನಿರ್ವಹಣೆ, ಸುರಕ್ಷತೆ ಮತ್ತು ಭದ್ರತೆ, ಶಿಕ್ಷಣ, ಅಡುಗೆ ಕೆಲಸಗಳು, ರೆಸ್ಟೋರೆಂಟ್ ಸೇವೆಗಳು ಇತ್ಯಾದಿ.

ಅನೇಕ ಕ್ಷೇತ್ರಗಳಲ್ಲಿ, ಹೆಚ್ಚುತ್ತಿರುವ ಯಾಂತ್ರೀಕರಣದ ಪರಿಣಾಮವಾಗಿ, ನಿನ್ನೆಯವರೆಗೂ ಇದ್ದ ಕೆಲಸಗಳು ಇಂದು ಮಾಯವಾಗುತ್ತಿವೆ; ಮುಂದಿನ ದಿನಗಳ ಕೆಲಸಗಳಿಗೆ ಅಗತ್ಯವಿರುವ ಕೌಶಲಭರಿತ ಮಾನವಸಂಪನ್ಮೂಲ ಇಂದು ತಯಾರಾಗುತ್ತಿಲ್ಲ. ಹಾಗಾಗಿ, ಕೆಲಸಕ್ಕಾಗಿ ಹೆಣಗಾಡುತ್ತಿರುವ ಉದ್ಯೋ ಗಾಂಕ್ಷಿಗಳು ಒಂದೆಡೆಯಾದರೆ, ಕೌಶಲಭರಿತ ಅಭ್ಯರ್ಥಿಗಳೇ ಸಿಗುತ್ತಿಲ್ಲವೆಂಬ ಆತಂಕ ಉದ್ಯೋಗದಾ ತರದ್ದು. ಪರಿಣಾಮವಾಗಿ ನಿರುದ್ಯೋಗದ ಸಮಸ್ಯೆ ಉಲ್ಬಣಗೊಂಡು ಗ್ರಾಹಕರ ಕೊಳ್ಳುವ ಸಾಮರ್ಥ್ಯ ಕ್ರಮೇಣ ಕಡಿಮೆಯಾಗುತ್ತಿದೆ.

ವಿಶ್ವ ಆರ್ಥಿಕ ವೇದಿಕೆಯ ಕಳೆದ ವರ್ಷದ ವರದಿಯಂತೆ 2025ರ ವೇಳೆಗೆ ಜಗತ್ತಿನ ಮನುಷ್ಯರು ಮಾಡುವ 85 ದಶಲಕ್ಷದಷ್ಟು ಕೆಲಸಗಳು ಯಂತ್ರಗಳ ಪಾಲಾಗಲಿವೆ; ಆದರೆ, ಇದೇ ಸಮಯದಲ್ಲಿ ಆರ್ಥಿಕ ಅಭಿವೃದ್ಧಿಯಿಂದ 97 ದಶಲಕ್ಷ ನೂತನ ಕೆಲಸಗಳೂ ಸೃಷ್ಟಿಯಾಗಲಿವೆ.

ಎರಡು ದಶಕಗಳ ಹಿಂದೆ, ಕಂಪ್ಯೂಟರ್ ಬಳಕೆ ಸಾರ್ವತ್ರಿಕವಾದಾಗ ಉದ್ಯೋಗ ನಷ್ಟಗಳಾದರೂ ಮಾನವನ ಕಾರ್ಯಕ್ಷಮತೆ ಹೆಚ್ಚಾಗಲು ಕಾರಣವೂ ಆಯಿತು. ಇಂದು, ಕಂಪ್ಯೂಟರ್, ಸ್ಮಾರ್ಟ್ ಫೋನ್‌ಗಳಿಲ್ಲದೆ ವೃತ್ತಿಜೀವನ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಈ ಸಾಧನಗಳು ನಮ್ಮ ಜೀವನವನ್ನು ಆವರಿಸಿಕೊಂಡಿವೆ. ಹಾಗಾಗಿ, ಹೊಸ ಆವಿಷ್ಕಾರಗಳು, ಯಂತ್ರೋಪಕರಣಗಳು, ಸಾಧನಗಳು ಅಭಿವೃದ್ಧಿಯ ಪಥದಲ್ಲಾಗುವ ಬೆಳವಣಿಗೆಗಳು. ಪರಿಣಾಮವಾಗಿ, ಉದ್ಯಮಗಳಲ್ಲಿ ನೂತನ ತಂತ್ರಜ್ಞಾನದ ಅಳವಡಿಕೆ ಆಗುತ್ತಿದ್ದಂತೆ, ಭವಿಷ್ಯದ ಉದ್ಯೋಗಗಳ ಸ್ವರೂಪ, ಗುಣಲಕ್ಷಣಗಳು ಬದಲಾಗುವುದೂ ಒಂದು ಸಹಜ ಪ್ರಕ್ರಿಯೆ.

ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾತ್ಮಕ ಕೌಶಲ, ಸಕ್ರಿಯ ಕಲಿಕೆ, ಸ್ವಯಂ-ನಿರ್ವಹಣೆ ಇತ್ಯಾದಿ ಪ್ರಾಥಮಿಕ ಕೌಶಲಗಳು ಭವಿಷ್ಯದ ಉದ್ಯೋಗಗಳಿಗೆ ಅಗತ್ಯವಾದ ಅರ್ಹತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇದರರ್ಥ, ಸಾಂಪ್ರದಾಯಿಕ ಕ್ಷೇತ್ರಗಳ ಅವಕಾಶಗಳು ಇರುವುದಿಲ್ಲ ಎಂದಲ್ಲ; ಆದರೆ, ನೂತನ ಅವಕಾಶಗಳತ್ತ ಗಮನವನ್ನು ಹರಿಸಿ, ನಿಮ್ಮ ಸಾಮರ್ಥ್ಯ, ಅಭಿರುಚಿಗೆ ತಕ್ಕಂತೆ ವೃತ್ತಿ ಮತ್ತು ಅದರಂತೆ ನಿಮ್ಮ ಶಿಕ್ಷಣದ ಆಯ್ಕೆ ಮತ್ತು ಕೌಶಲಾಭಿವೃದ್ಧಿಯಿರಲಿ ಎಂದು.

ಎರಡನೇ ಪ್ರಶ್ನೆ; ಕಂಪ್ಯೂಟರ್ ವಿಜ್ಞಾನ ಹಾಗೂ ಅಥವಾ ಮಾಹಿತಿ ವಿಜ್ಞಾನದ ಕೋರ್ಸ್‌ಗಳು ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟಿದ್ದೇ ಅಥವಾ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟಿದ್ದೇ? ನಮ್ಮ ದೇಶಕ್ಕೆ ಅನುಗುಣವಾದ ಎಂಜಿನಿಯರಿಂಗ್‌ನ ಇತರ ಕೋರ್ಸ್‌ಗಳ ಕುರಿತು ಮಾಹಿತಿ ನೀಡಿ.

ಎಲ್ಲಾ ಎಂಜಿನಿಯರಿಂಗ್ ಕೋರ್ಸ್‌ಗಳು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟಿವೆ ಅಥವಾ ಔದ್ಯೋಗಿಕ ವಿಜ್ಞಾನದ ಕೋರ್ಸ್‌ಗಳೆಂದು ಹೇಳಬಹುದು.

ಈಗ ಸುಮಾರು 50ಕ್ಕೂ ಹೆಚ್ಚು ಎಂಜಿನಿಯರಿಂಗ್ ಕೋರ್ಸ್‌ಗಳಿವೆ. ಈ ಎಲ್ಲಾ ಕೋರ್ಸ್‌ಗಳಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್, ಕೆಮಿಕಲ್, ಆರ್ಕಿಟೆಕ್ಚರ್, ಬಯೋಟೆಕ್, ಆಟೊಮೊಬೈಲ್, ಇನ್‌ಸ್ಟ್ರುಮೆಂಟೇಷನ್, ಮೈನಿಂಗ್ ಇತ್ಯಾದಿ ಕೋರ್ಸ್‌ಗಳ ಉಪಯುಕ್ತತೆ ಹೆಚ್ಚಾಗಿ ನಮ್ಮ ದೇಶದ ಉದ್ಯಮಗಳಿಗೆ ಸಂಬಂಧಪಟ್ಟದ್ದಾಗಿದೆ.

ಕಂಪ್ಯೂಟರ್ ವಿಜ್ಞಾನ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕಿರುವ ಬೇಡಿಕೆ ಕೇವಲ ನಮ್ಮ ದೇಶಕ್ಕೆ ಸೀಮಿತವಾಗದೆ ಹೆಚ್ಚಿನ ವ್ಯವಹಾರ, ಆದಾಯ ಬೇರೆ ರಾಷ್ಟ್ರಗಳ ಉದ್ಯಮಗಳಿಂದಲೇ ಎನ್ನುವುದನ್ನು ನಾವು ಗಮನಿಸಬೇಕು.

ಆದ್ದರಿಂದಲೇ, ಬೇರೆ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಹೋಲಿಸಿದರೆ, ಈ ಕ್ಷೇತ್ರ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಹಾಗಾಗಿ, ಆಯಾ ಉದ್ಯಮಗಳ ಅಭಿವೃದ್ಧಿಯಂತೆ ಮಾನವ ಸಂಪಲ್ಮೂಲನದ ಬೇಡಿಕೆ ಮತ್ತು ಬೇಡಿಕೆಯಂತೆ ಪೂರೈಕೆಯಿರುವುದು ಸಹಜ.

ವಿ. ಪ್ರದೀಪ್ ಕುಮಾರ್

(ಲೇಖಕರು ಶಿಕ್ಷಣ ತಜ್ಞರು ಮತ್ತು ವೃತ್ತಿ ಸಲಹೆಗಾರರು)

******

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ; ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ
ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು