ಮಂಗಳವಾರ, ನವೆಂಬರ್ 29, 2022
29 °C

ಓದಿನ ತಂತ್ರ: ವಿವರಣಾತ್ಮಕ ಓದಿಗೆ ಸ್ಕ್ಯಾನಿಂಗ್‌

ಆರ್.ಬಿ.ಗುರುಬಸವರಾಜ Updated:

ಅಕ್ಷರ ಗಾತ್ರ : | |

Prajavani

ಕೆಲವೊಂದು ಪಠ್ಯವನ್ನು ಕೇವಲ ಮೇಲ್ನೋಟಕ್ಕೆ ಓದುವುದಿಲ್ಲ. ಅದನ್ನು ವಿವರವಾಗಿ ಓದುವ ಅಗತ್ಯವಿರುತ್ತದೆ. ವಿವರವಾದ ಓದಿನ ತಂತ್ರವೇ ಸ್ಕ್ಯಾನಿಂಗ್‌. ವೈದ್ಯಕೀಯ ಕ್ಷೇತ್ರದಲ್ಲಿ ದೇಹದ ನಿರ್ದಿಷ್ಟ ಭಾಗದ ಸಂಪೂರ್ಣ ಮಾಹಿತಿ ತಿಳಿಯಲು ಸ್ಕ್ಯಾನಿಂಗ್‌ ಮಾಡಲಾಗುತ್ತದೆ. ಅಂತೆಯೇ ಪಠ್ಯದಲ್ಲಿನ ನಿರ್ದಿಷ್ಟ ಮಾಹಿತಿಯನ್ನು ಹುಡುಕಲು ಅದನ್ನು ವಿವರವಾಗಿ ಓದುವುದೇ ಸ್ಕ್ಯಾನಿಂಗ್‌. ಸ್ಕಿಮ್ಮಿಂಗ್ ಓದಿನ ತಂತ್ರದಲ್ಲಿ ಸಾಮಾನ್ಯ ಮಾಹಿತಿ ಮತ್ತು ಪ್ರಮುಖ ಅಂಶಗಳನ್ನು ಹುಡುಕಿದರೆ, ಸ್ಕ್ಯಾನಿಂಗ್‌ ತಂತ್ರದಲ್ಲಿ ನಿರ್ದಿಷ್ಟ ಮಾಹಿತಿಯನ್ನು ಹುಡುಕುವುದಾಗಿದೆ.

ಸ್ಕ್ಯಾನಿಂಗ್‌, ಪೂರ್ವ ಓದುವಿಕೆಯ ಒಂದು ರೂಪವಾಗಿದೆ. ಜನಪ್ರಿಯ SQ3R(survey, question, read, recite, and review) ವಿಧಾನದಲ್ಲಿ, ಅಂದರೆ ಸಮೀಕ್ಷೆ, ಪ್ರಶ್ನೆ, ಓದುವಿಕೆ, ಪಠಣ ಮತ್ತು ವಿಮರ್ಶೆ ವಿಧಾನಗಳ ಸಂಗಮವಾಗಿದೆ. ಪಠ್ಯವನ್ನು ಸ್ಕ್ಯಾನ್‌ ಮಾಡುವುದರಿಂದ ಸಾಮಾನ್ಯ ಕಲ್ಪನೆಯು ನಿರ್ದಿಷ್ಟ ಪರಿಕಲ್ಪನೆಯಾಗಿ ಪರಿವರ್ತನೆಯಾಗುತ್ತದೆ. ಪ್ರತಿ ಪದ/ಪದಪುಂಜದ ನಿರ್ದಿಷ್ಟತೆ ಅರ್ಥವಾಗುತ್ತದೆ.

ಸ್ಕ್ಯಾನಿಂಗ್‌ ತಂತ್ರದ ಪ್ರಯೋಜನಗಳು

* ಪಠ್ಯದ ಸಮಗ್ರ ಮಾಹಿತಿ ತಿಳಿಯಲು ಸಹಾಯಕ.

* ನಿರ್ದಿಷ್ಟ ಮಾಹಿತಿ ತಿಳಿಯಲು ಸಹಕಾರಿ.

* ವಿಷಯದ ವಿಸ್ತೃತತೆ ತಿಳಿಸುತ್ತದೆ.

* ವಿಮರ್ಶಾತ್ಮಕ ಓದಿಗೆ ಪೂರಕ.

* ಅಪರಿಚಿತ ಪರಿಕಲ್ಪನೆಯನ್ನು ಪರಿಚಯಿಸುತ್ತದೆ.

* ಪಠ್ಯದಲ್ಲಿನ ಹೊಸ ಪದ, ದತ್ತಾಂಶ ತಿಳಿಯಲು ಸಹಾಯಕ.

ಅನುಸರಿಸಬೇಕಾದ ಕ್ರಮಗಳು

* ನಿರ್ದಿಷ್ಟ ಮಾಹಿತಿಗಾಗಿ ಪಠ್ಯವನ್ನು ಸ್ಕ್ಯಾನ್‌ ಮಾಡಲು ಪ್ರಾರಂಭಿಸುವ ಮೊದಲು, ಆ ಪಠ್ಯದ ಕುರಿತು ಕೆಲವು ಮೂಲ ವಿಷಯಗಳನ್ನು ನೀವು ತಿಳಿದಿರಬೇಕು. ಆ ಬಗ್ಗೆ ಮೂಲ ಕಲ್ಪನೆ ಇಲ್ಲದಿದ್ದರೆ ಪಠ್ಯವನ್ನು ಪರಿಣಾಮಕಾರಿಯಾಗಿ ಸ್ಕ್ಯಾನ್‌ ಮಾಡಲು ಸಾಧ್ಯವಾಗುವುದಿಲ್ಲ.

* ಪಠ್ಯವು ನಿಮಗೆ ಸಂಪೂರ್ಣವಾಗಿ ತಿಳಿದಿಲ್ಲದಿದ್ದರೆ, ಈ ಕುರಿತು ಕೆಲವು ವಿಚಾರಗಳನ್ನು ಪಡೆಯಲು ನೀವು ಅದನ್ನು ಮೊದಲು ‘ಸ್ಕಿಮ್’ ಮಾಡಬೇಕು(ಸ್ಕಿಮ್ಮಿಂಗ್ ಎನ್ನುವುದು ಓದುವ ಪಠ್ಯದಲ್ಲಿನ ಮೂಲ ಕಲ್ಪನೆಯನ್ನು ಸಂಗ್ರಹಿಸಲು ಬಳಸುವ ಕ್ರಿಯೆಯಾಗಿದೆ). ನಿಮಗೆ ಅಗತ್ಯವಿರುವ ಮಾಹಿತಿಯನ್ನು ನೀವು ಕಂಡುಕೊಳ್ಳಬಹುದಾದ ಪಠ್ಯದ ಭಾಗವನ್ನು ಊಹಿಸಲು ಇದು ಸಹಾಯ ಮಾಡುತ್ತದೆ.

* ನಂತರ ಮಾಹಿತಿಯನ್ನು ಹೇಗೆ ಜೋಡಿಸಲಾಗಿದೆ ಎಂಬುದನ್ನು ಗಮನಿಸಿ. ಇದನ್ನು ವರ್ಣಮಾಲೆಯಂತೆ ಅಥವಾ ಸಂಖ್ಯಾತ್ಮಕವಾಗಿ ಜೋಡಿಸಿರಬಹುದು. ಆದಾಗ್ಯೂ, ಕೆಲವು ಪಠ್ಯಗಳನ್ನು ಜೋಡಿಸಲಾಗಿಲ್ಲ. ಆ ಸಂದರ್ಭದಲ್ಲಿ, ನಿಮ್ಮ ಮಾಹಿತಿಯನ್ನು ಪಡೆಯಲು ನೀವು ವಿಭಾಗವನ್ನು ಊಹಿಸಬೇಕು ಮತ್ತು ಅದನ್ನು ಸ್ಕ್ಯಾನ್ ಮಾಡಬೇಕು.

* ಪುಟದಲ್ಲಿ ನಿರ್ದಿಷ್ಟ ಮಾಹಿತಿ ಹುಡುಕಲು ನಿಮ್ಮ ತೋರು ಬೆರಳನ್ನು ಬಳಸಬಹುದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು, ಪರೀಕ್ಷೆಗಾಗಿ ಅಗತ್ಯ ವಿವರಗಳನ್ನು ಪಡೆಯಲು ಪಠ್ಯವನ್ನು ಸ್ಕ್ಯಾನಿಂಗ್‌ ಮಾಡುವುದು ಅವಶ್ಯಕ. ಹೀಗೆ ಸ್ಕ್ಯಾನ್‌  ಮಾಡಿದ ಮಾಹಿತಿಯನ್ನು ಹೈಲೈಟ್ ಮಾಡಬಹುದು ಅಥವಾ ಟಿಪ್ಪಣಿ ರೂಪದಲ್ಲಿ ಬರೆದಿಟ್ಟುಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು