ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ವಿದೇಶದಲ್ಲಿ ಓದಲು ವಿದ್ಯಾರ್ಥಿವೇತನ ಇದೆಯೇ?

Last Updated 15 ಮೇ 2022, 19:30 IST
ಅಕ್ಷರ ಗಾತ್ರ

1.ನಾನು, ಈಗ ಬಿಎಸ್‌ಸಿ ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಮನಃಶಾಸ್ತ್ರದಲ್ಲಿ ಎಂಎಸ್‌ಸಿ ಓದಬೇಕೆಂಬ ಹಂಬಲವಿದೆ. ವಿದೇಶದಲ್ಲಿ ಉಚಿತವಾಗಿ ಓದಲು ಸಾಧ್ಯವೇ? ಸರ್ಕಾರದಿಂದ ಯಾವುದಾದರೂ ವಿದ್ಯಾರ್ಥಿವೇತನ ಸಿಗುವುದೇ? ಆರ್ಥಿಕವಾಗಿ ಹಿಂದುಳಿದ ಕಾರಣ ನನಗೆ ದುಬಾರಿ ಹಣ ಖರ್ಚು ಮಾಡಿ ಓದಲು ಸಾಧ್ಯವಿಲ್ಲ. ನಿಮ್ಮ ಸಲಹೆ ತಿಳಿಸಿ.

ಹುನುಮಂತ, ಕೊಪ್ಪಳ

‌ನಮಗೆ ತಿಳಿದಂತೆ ವಿದೇಶದಲ್ಲಿ ಉಚಿತವಾಗಿ ಓದಲು ಸಾಧ್ಯವಿಲ್ಲ. ಆದರೆ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅರ್ಹತೆ ಮತ್ತು ಆದಾಯವನ್ನು ಪರಿಗಣಿಸಿ ಸ್ಕಾಲರ್‌ಶಿಪ್ ಸೌಲಭ್ಯಗಳು ಲಭ್ಯವಿರುತ್ತವೆ. ಜೊತೆಗೆ ಸಹಾಯಧನ, ಅರೆಕಾಲಿಕ ನೌಕರಿಗಳಂತಹ ಸೌಲಭ್ಯಗಳೂ ಇವೆ. ಅನೇಕ ಖಾಸಗಿ ಸಂಸ್ಥೆಗಳೂ ವಿದ್ಯಾರ್ಥಿಗಳಿಗೆ ನೆರವಾಗುವ ಕಾರ್ಯದಲ್ಲಿ ವಿಶ್ವವಿದ್ಯಾಲಯಗಳ ಜೊತೆ ಕೈಗೂಡಿಸಿವೆ. ಹೆಚ್ಚಿನ ವಿವರಗಳಿಗಾಗಿ ನೀವು ಸೇರ ಬಯಸುವ ವಿಶ್ವವಿದ್ಯಾಲಯದ ವೆಬ್‌ಸೈಟ್‌ ಅನ್ನು ಪರಿಶೀಲಿಸಿ.

ಇದಲ್ಲದೆ, ಕೇಂದ್ರ ಸರ್ಕಾರದ ನ್ಯಾಷನಲ್ ಓವರ್‌ಸೀಸ್ ಸ್ಕಾಲರ್‌ಶಿಪ್ ಸ್ಕೀಮ್ ಅಡಿಯಲ್ಲಿಯೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಲಭ್ಯವಿದೆ. ಈ ಸೌಲಭ್ಯದ ವಿವರ ಮತ್ತು ಅರ್ಹತೆಯ ನಿಯಮಗಳ ಕುರಿತು ಕೇಂದ್ರ ಸರ್ಕಾರದ ಸೋಷಿಯಲ್ ಜಸ್ಟೀಸ್ ಅಂಡ್ ಎಂಪವರ್‌ಮೆಂಟ್ ಇಲಾಖೆಯ ವೆಬ್‌ಸೈಟ್ ಅನ್ನು ಪರಿಶೀಲಿಸಿ.

***

2. ದ್ವಿತೀಯ ಪಿಯುಸಿ (ವಿಜ್ಞಾನ) ಮುಗಿಸಿದ ಮೇಲೆ ಯಾವ ಕೋರ್ಸ್ ಮಾಡಿದರೆ ಉತ್ತಮ?

ಹೆಸರು, ಊರು ತಿಳಿಸಿಲ್ಲ.

ನಿಮಗೆ ಆಸಕ್ತಿಯಿರುವ, ಇಷ್ಟವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಅನುಗುಣವಾಗಿ ಕೋರ್ಸ್ ಮಾಡಬೇಕು. ಹಾಗಾಗಿ, ವೃತ್ತಿ ಯೋಜನೆಯನ್ನು ಮಾಡದೆ ಕೋರ್ಸ್ ಆಯ್ಕೆ ಸಮಂಜಸವಲ್ಲ. ಪಿಯುಸಿ (ವಿಜ್ಞಾನ) ನಂತರ ನೀವು ಮಾಡಬಹುದಾದ ಕೆಲವು ಪ್ರಮುಖ ಕೋರ್ಸ್‌ಗಳೆಂದರೆ ಎಂಬಿಬಿಎಸ್, ಬಿಇ/ಬಿಟೆಕ್, ಬಿಎಸ್‌ಸಿ (ವಿಜ್ಞಾನ, ಕೃಷಿ ಸಂಬಂಧಿತ, ಬಯೋಟೆಕ್, ನರ್ಸಿಂಗ್, ಪ್ಯಾರಾ ಮೆಡಿಕಲ್, ಫ್ಯಾಷನ್ ಡಿಸೈನ್, ಹೋಟೆಲ್ ಮ್ಯಾನೇಜ್‌ಮೆಂಟ್, ಫೊರೆನ್ಸಿಕ್ ಇತ್ಯಾದಿ), ಬಿ.ಫಾರ್ಮ, ಬಿ.ಡಿಇಎಸ್, ಬಿವಿಎಸ್‌ಸಿ, ಬಿಬಿಎ, ಸಿಎ, ಎಸಿಎಸ್, ಐಸಿಡಬ್ಲ್ಯು ಸೇರಿದಂತೆ ವೈವಿಧ್ಯಮಯ ಕೋರ್ಸ್ ಆಯ್ಕೆಗಳಿವೆ. ವೃತ್ತಿ ಯೋಜನೆ ಪ್ರಕ್ರಿಯೆ ಮತ್ತು ಪಿಯುಸಿ ನಂತರದ ಕೋರ್ಸ್ ಆಯ್ಕೆಗಳ ಮಾರ್ಗದರ್ಶನಕ್ಕಾಗಿ

ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant

***

3. ನಾನು ಪಿಯುಸಿಗೆ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆದರೆ, ಕಾಲೇಜಿನ ಆಯ್ಕೆಯಲ್ಲಿ ಗೊಂದಲವಿದೆ. ದಯವಿಟ್ಟು, ಉತ್ತರಕನ್ನಡದಲ್ಲಿನ ಉತ್ತಮ ವಿಜ್ಞಾನ ಕಾಲೇಜಿನ ಕುರಿತು ಮಾಹಿತಿ ನೀಡಿ.

ಹೆಸರು, ಊರು ತಿಳಿಸಿಲ್ಲ.

4. ನಾನು ಈ ಬಾರಿ ದ್ವಿತೀಯ ಪಿಯುಸಿ(ಸೈನ್ಸ್) ಪರೀಕ್ಷೆ ಬರೆದಿದ್ದೇನೆ. ನನಗೆ ಏರೋನಾಟಿಕಲ್ ಎಂಜಿನಿಯರಿಂಗ್ ಮಾಡಬೇಕೆಂಬ ಬಯಕೆ ಇದೆ. ಆದರೆ ಇದಕ್ಕೆ ಸಂಬಂಧಿಸಿ ಮುಂದೇನು ಮಾಡಬೇಕು ಎಂಬುದು ನನಗೆ ತಿಳಿದಿಲ್ಲ. ನಾನು ಸಿಇಟಿ ಹಾಗೂ ಜೆಇಇ ಎರಡೂ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಏರೋನಾಟಿಕಲ್ ಎಂಜಿನಿಯರಿಂಗ್ ಓದಲು ಉತ್ತಮ ಕಾಲೇಜು ಯಾವುದು?

ಕೀತಿ ಡಿ.ಸಿ., ದಾವಣಗೆರೆ.

ಏರೋನಾಟಿಕಲ್ ಎಂಜಿನಿಯರಿಂಗ್ ಬೇಡಿಕೆಯಲ್ಲಿರುವ ಕ್ಷೇತ್ರ. ಹಾಗಾಗಿ, ಸಿಇಟಿ ಮತ್ತು ಜೆಇಇ ಪರೀಕ್ಷೆಗಳಲ್ಲಿ ಉನ್ನತ ರ‍್ಯಾಂಕ್ ಗಳಿಸಲು ಪ್ರಯತ್ನಿಸಿ.

ಉತ್ತಮ ಕಾಲೇಜುಗಳ ಆಯ್ಕೆಗೆ ಅಂತರ್ಜಾಲದಲ್ಲಿ ನ್ಯಾಷನಲ್ ಇನ್‌ಫರ್ಮೇಷನ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ ಮತ್ತು ಇನ್ನಿತರ ಸಂಸ್ಥೆಗಳ ರ‍್ಯಾಂಕಿಂಗ್ ಮಾಹಿತಿಯನ್ನು ಪರಾಮರ್ಶಿಸಿ. ಹಾಗೂ, ಕಾಲೇಜು ಆಯ್ಕೆ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/watch?v=DmaXk-MuoOI&list=PL4KWFQbbawTBIlGZxW0Bn-S1BpLs4uStm&index=3

***

6. ಸರ್, ನಾನು ಬಿಎಸ್‌ಸಿ ಮುಗಿಸಿರುತ್ತೇನೆ. ಈಗ ನಾನು ಕೆಪಿಎಸ್‌ಸಿ, ಕೆಎಸ್‌ಪಿ ಸೇರಿದಂತೆ, ಪದವಿ ಆಧಾರಿತ ಹುದ್ದೆಗಳಿಗೆ ಅರ್ಜಿ ಹಾಕಬಹುದಾ? ಬಿಎಲ್‌ಐಎಸ್‌ಸಿ ಬಗ್ಗೆ ತಿಳಿಸಿ.

ಪ್ರವೀಣ್, ಊರು ತಿಳಿಸಿಲ್ಲ.

ಬಿಎಸ್‌ಸಿ ಪದವಿಯ ನಂತರ ಯುಪಿಎಸ್‌ಸಿ, ಕೆಪಿಎಸ್‌ಸಿ, ಕೆಎಸ್‌ಪಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಹಾಗೂ ಕೆಲವೊಮ್ಮೆ ನೇರವಾಗಿಯೂ ಅರ್ಜಿ ಹಾಕುವ ಅವಕಾಶಗಳಿರುತ್ತವೆ. ಬಿಎಲ್‌ಐಎಸ್‌ಸಿ ಅಂದರೆ ಬ್ಯಾಚುಲರ್ ಅಫ್ ಲೈಬ್ರರಿ ಅಂಡ್ ಇನ್‌ಫರ್ಮೇಷನ್ ಸೈನ್ಸ್ ಕೋರ್ಸ್. ಈ ಕೋರ್ಸ್ ಅನ್ನು ಯಾವುದಾದರೂ ಪದವಿಯ ನಂತರ ಮಾಡಬಹುದು. ಈ ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ಗ್ರಂಥಾಲಯಗಳಲ್ಲಿ ಮತ್ತು ಮಾಹಿತಿ ಕೇಂದ್ರಗಳಲ್ಲಿ ಉದ್ಯೋಗಾವಕಾಶಗಳಿವೆ.

***

7. ನಾನು ಬಿಇ(ಇಇಇ) ಮುಗಿಸಿದ್ದೇನೆ. ಅದರೊಂದಿಗೆ ಜಾವಾ, ಪೈಥಾನ್ ಕೋರ್ಸ್ ಕೂಡ ಮುಗಿಸಿದ್ದೇನೆ. ಎಂಜಿನಿಯರಿಂಗ್ ನಂತರ ನಾನು ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದೆ; ಆದರೆ ಕೆಲಸ ಸಿಗಲಿಲ್ಲ. ಈಗ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದೇನೆ. ಆದರೆ, ಈಗ ಓದಿನ ಅಂತರದ ಕಾರಣಕ್ಕೆ ನನಗೆ ಅಲ್ಲೂ ಕೆಲಸ ಸಿಗುತ್ತಿಲ್ಲ. ನಾನು ಮುಂದೇನು ಮಾಡಲಿ?

ವೀಣಾ ಎ, ಊರು ತಿಳಿಸಿಲ್ಲ.

ಸರ್ಕಾರಿ ಉದ್ಯೋಗಗಳ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಡೆಯುತ್ತಿದ್ದು, ಈಗ ಪೈಪೋಟಿ ತೀಕ್ಷ್ಣವಾಗಿದೆ. ಆದ್ದರಿಂದ, ನೀವು ಭಾಗವಹಿಸಲು ಬಯಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಹಂತಗಳು, ಮಾದರಿ, ಪಠ್ಯಕ್ರಮ, ಪ್ರಶ್ನೆಪತ್ರಿಕೆಗಳ ಸ್ವರೂಪ, ಅಧ್ಯಯನದ ಪುಸ್ತಕಗಳ ಪಟ್ಟಿ, ಗುಂಪು ಚರ್ಚೆ, ವೈಯಕ್ತಿಕ ಸಂದರ್ಶನ ಇತ್ಯಾದಿಗಳನ್ನು ಅರಿತು ನಿಮ್ಮ ಸಾಮರ್ಥ್ಯ, ದೌರ್ಬಲ್ಯಗಳನ್ನು ಗುರುತಿಸಿ, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಬೇಕು. ಹಾಗೂ, ಕೆಲವು ಪ್ರತಿಷ್ಟಿತ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ಏಕಾಗ್ರತೆ, ಸಮಯದ ನಿರ್ವಹಣೆ ಮತ್ತು ನಿರಂತರ ಪರಿಶ್ರಮದ ಅಗತ್ಯವಿದ್ದು, ಕೋಚಿಂಗ್ ಅಗತ್ಯವಿದೆಯೇ ಎಂದು ಯೋಚಿಸಿ.

ಸಾಫ್ಟ್‌ವೇರ್‌ ವಲಯದಲ್ಲಿ ಆಸಕ್ತಿಯಿದ್ದರೆ ನಿಮ್ಮ ಜ್ಞಾನ ಮತ್ತು ಕೌಶಲವನ್ನು ಆಗಾಗ್ಗೆ ಪರಿಷ್ಕರಿಸುತ್ತಿರಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ವೃತ್ತಿ ಸಮಾಲೋಚಕರನ್ನು ಸಂಪರ್ಕಿಸಿ.

***

8. ಸರ್, ಬಿಕಾಂ ಮುಗಿಸಿ ದೂರ ಶಿಕ್ಷಣದಲ್ಲಿ ಎಂಎ ಮಾಡಿದ್ದೇನೆ. ದೂರ ಶಿಕ್ಷಣದ ಎಂಎ ಕಲಿಯುತ್ತಾ ಬಿ.ಇಡಿ ಕೋರ್ಸ್ ಮಾಡಬಹುದಾ? ಮತ್ತು ಬಿಕಾಂ ನಂತರ ಎಂಎ ಮಾಡಿದರೆ ಏನಾದರೂ ತೊಂದರೆ ಇದೆಯಾ?

ಹೆಸರು, ಊರು ತಿಳಿಸಿಲ್ಲ.

ದೂರ ಶಿಕ್ಷಣದ ಎಂಎ ಮಾಡುತ್ತಾ ಬಿ.ಇಡಿ ಕೋರ್ಸ್ ಮಾಡಬಹುದು ಹಾಗೂ ಬಿಕಾಂ ನಂತರ ಎಂಎ (ಕೆಲವು ವಿಷಯ ಗಳಲ್ಲಿ) ಕೂಡಾ ಮಾಡಬಹುದು. ನಿಮಗೆ ಆಸಕ್ತಿಯಿರುವ, ಇಷ್ಟವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಅನುಗುಣವಾಗಿ ಕೋರ್ಸ್ ಮಾಡುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT