ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿರಲಿ ಪೋಷಕರ ಸಭೆ...

Last Updated 2 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಪೋಷಕರು–ಶಿಕ್ಷರ ಸಭೆ, ದೂರುಗಳಿಗಷ್ಟೇ ಸೀಮಿತವಾಗದೇ ಮಗುವಿನ ಸಮಗ್ರ ಕಲಿಕಾ ಪ್ರಕ್ರಿಯೆ ವಿಶ್ಲೇಷಿಸುವ ಹಾಗೂ ಮಗುವಿನ ಮಾನಸಿಕ ಬೆಳವಣಿಗೆ ಕುರಿತು ಚರ್ಚಿಸುವ ವೇದಿಕೆಯಾಗಬೇಕು. ಸಮಸ್ಯೆಗಳಿಗೆ ಪರಿಹಾರ ನೀಡುವ, ತಪ್ಪುಗಳನ್ನು ಸರಿಪಡಿಸಿಕೊಳ್ಳುವ ತಾಣವಾಗಬೇಕು.

ಮಗುವಿನ ಕಲಿಕೆಯಲ್ಲಿ ಕಲಿಸುವವರ ಮತ್ತು ಮಗುವನ್ನು ಪೋಷಿಸುವವರ ಸಹಸಂಬಂಧಗಳು ತುಂಬಾ ಮುಖ್ಯವಾದದ್ದು. ಇವರಿಬ್ಬರೂ ಕೂಡಿಯೇ ಮಗುವಿನ ಶಿಕ್ಷಣದ ತೇರನ್ನು ಎಳೆಯಬೇಕು. ಮಗು ಶಾಲೆಯಲ್ಲಿ ಏನು ಮಾಡುತ್ತಿದೆ? ಏನು ಕಲಿಯುತ್ತಿದೆ? ಎಂಬುದರ ಮಾಹಿತಿ ಪೋಷಕರಿಗೆ ಹಾಗೂ ಮನೆಯಲ್ಲಿ ಮಗು ಎಷ್ಟು ಓದುತ್ತಿದೆ? ಏನು‌ ಓದುತ್ತಿದೆ? ಎದುರಿಸುತ್ತಿರುವ ಸಮಸ್ಯೆಗಳೇನು? ಎಂಬುದರ ಸತತ ಮಾಹಿತಿ ಶಿಕ್ಷಕರಿಗೆ ಬೇಕಾಗುತ್ತದೆ. ಕೇವಲ ಒಳ್ಳೆ ಶಿಕ್ಷಕರಿಂದ ಮಾತ್ರ ಮಗುವಿನ ಶಿಕ್ಷಣ ಅದ್ಬುತವಾಗಲು ಸಾಧ್ಯವಿಲ್ಲ. ಹಾಗೆಯೇ ಬರೀ ಪೋಷಕರಿಂದನೂ ಸಾಧ್ಯವಿಲ್ಲ. ಈ ಇಬ್ಬರ ಸಹಸಂಬಂಧ ಸೂಕ್ತವಾಗಿದ್ದಲ್ಲಿ ನಾವು ಮಕ್ಕಳಿಂದ ಒಂದೊಳ್ಳೆಯ ಕಲಿಕೆಯನ್ನು ನಿರೀಕ್ಷಿಸಬಹುದು. ಪೋಷಕರು ಮತ್ತು ಶಿಕ್ಷಕರು ಮಗುವಿನ ಕಲಿಕೆಯ ಬಂಡಿಯ ಎರಡು ಚಕ್ರಗಳು. ಎರಡೂ ಸಮನಾಗಿ ಚಲಿಸಿದರೆ ಮಾತ್ರ ಮಗುವಿನ ಶಿಕ್ಷಣ ಒಂದು ನೆಲೆ ಸೇರಲು ಸಾಧ್ಯ.

ಈ ಕಾರಣಕ್ಕಾಗಿಯೇ ಶಾಲೆಗಳಲ್ಲಿ ಪೋಷಕರ ಸಭೆ(ಪೇರೆಂಟ್ ಟೀಚರ್ಸ್‌ ಮೀಟಿಂಗ್‌) ಆಯೋಜಿಸಲಾಗುತ್ತದೆ‌‌ ಮತ್ತು ಆಯೋಜಿಸಲೇ ಬೇಕು ಕೂಡ. ಹಾಗಾದರೆ ಪೋಷಕರ ಸಭೆಗಳು ಹೇಗಿರಬೇಕು? ಅಲ್ಲೇನು ಚರ್ಚಿಸಬೇಕು? ಅದರ ರೂಪುರೇಷೆಗಳು ಹೇಗಿರಬೇಕು ಎಂಬುದು ಅತೀ ಮುಖ್ಯ. ಬಂದರು, ಸೇರಿದರು, ಮಾತಾಡಿದರು, ಟೀ ಕುಡಿದರು, ಎದ್ದು ಹೋದರು ಎಂಬಂತಾದರೆ ಪ್ರಯೋಜನವಿಲ್ಲ.

ಒಂದೊಳ್ಳೆ ಪೋಷಕರ ಸಭೆ ಖಂಡಿತ ಉತ್ತಮ ಪರಿಣಾಮ ಬೀರುತ್ತದೆ.‌ ಅದೊಂದು ಆರೋಗ್ಯಯುತ ಶಾಲೆಯ ಲಕ್ಷಣವೂ ಹೌದು.‌ ಈ ಕೆಳಗೆ ಪ್ರಸ್ತಾಪಿಸಲಾದ ವಿಚಾರಗಳನ್ನು ಆಧರಿಸಿ ಪೋಷಕರ ಸಭೆ ನಡೆಸಿದರೆ ಅದರಿಂದ ಒಳ್ಳೆಯ ಪರಿಣಾಮ ನಿರೀಕ್ಷಬಹುದು.

1. ಇದು ದೂರುಗಳ ಸಭೆಯಲ್ಲ..

ಒಂದು ವಿಚಾರವಂತೂ ಸ್ಪಷ್ಟವಿರಬೇಕು. ಪೋಷಕರ ಸಭೆಯನ್ನು ಕರೆಯುವುದು ಪರಸ್ಪರ ದೂರುಗಳನ್ನು ಆರೋಪಿಸುವುದಕ್ಕಲ್ಲ. ಶಿಕ್ಷಕರು ಪೋಷಕರನ್ನು ದೂರುವುದು, ಪೋಷಕರು ಶಿಕ್ಷಕರನ್ನು ದೂರುವುದಲ್ಲ. ಪರಸ್ಪರ ಸಮಸ್ಯೆಗಳ ಚರ್ಚೆಯಾಗಲಿ. ಅದಕ್ಕೂ ಮೊದಲು ಪೋಷಕರು ಮತ್ತು ಶಿಕ್ಷಕರ ಕಡೆಯಿಂದ ಆದ ಒಳ್ಳೆಯ ಕೆಲಸಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಕೂಡ ಆಗಬೇಕು.‌ ಪರಸ್ಪರ ಚರ್ಚಿಸಬೇಕಾದ ವಿಷಯಗಳನ್ನು ಮೊದಲೇ ನಿರ್ಧರಿಸಿ ಮುಂದುವರೆಯಬೇಕು. ಸುಮ್ನೆ ಮನಬಂದಂತೆ ಚರ್ಚಸಿ ಕಾಲಹರಣ ಮಾಡಬಾರದು.

2. ಸಭೆಯ ಸ್ವರೂಪ ಹೀಗಿರಲಿ..

ಇದು ಮಕ್ಕಳಿಗಾಗಿ ಸೇರಿದ ಸಭೆ. ಸಭೆಯಲ್ಲಿ ಪೋಷಕರ ಜೊತೆ ಮಕ್ಕಳು ಇರಬೇಕೊ, ಬೇಡವೊ ಅನ್ನುವುದು ಒಂದು ಜಿಜ್ಞಾಸೆ. ಪೋಷಕರ ಸಭೆಗೆ ಎರಡು ಅವಧಿಗಳಿರಲಿ. ಮಕ್ಕಳೊಂದಿಗೆ ಮತ್ತು ಮಕ್ಕಳನ್ನು ಹೊರತುಪಡಿಸಿ.‌ ಮಕ್ಕಳ ಮುಂದೆ ಪೋಷಕರನ್ನು ನಿಲ್ಲಿಸಿ ದೂರುವುದು, ಶಿಕ್ಷಕರನ್ನು ದೂರುವುದು ಮಾಡಬಾರದು. ಪೋಷಕರ ಮುಂದೆ ಮಕ್ಕಳ ಸಮಸ್ಯೆ ಆಲಿಸಿ. ಅವರ ಕಲಿಕೆಯನ್ನು ಗೌರವಿಸಿ, ಒಂದು ಪ್ರೋತ್ಸಾಹ ಕೊಡಿ. ಪೋಷಕರ ಮುಂದೆಯೇ ಮಗುವಿಗೆ ಹೇಳಬೇಕಾದ ಮಾತು ತಿಳಿಸಿ. ಪೋಷಕರು ಶಿಕ್ಷಕರಿಗೆ ಹೇಳಬೇಕಾದ ಮಾತುಗಳಿದ್ದರೆ ಹೇಳಿ. ಮಕ್ಕಳು ಇಲ್ಲದಿರುವ ಅವಧಿಯಲ್ಲಿ ಹಣಕಾಸಿನ ಚರ್ಚೆ(ಶಾಲಾ ಶುಲ್ಕ, ವ್ಯಾನ್ ಫೀಸು.. ಇತ್ಯಾದಿ), ಮಗು ಎದುರಿಸುತ್ತಿರುವ ಮಾನಸಿಕ ಸಮಸ್ಯೆ, ಮಗುವಿನ ಅಡ್ಡ ವರ್ತನೆಗಳು ಇಂತವುಗಳನ್ನು ಚರ್ಚಿಸಿ. ಇಡೀ ಸಭೆಯಲ್ಲಿ ಚರ್ಚಿಸಲು ಸಾಧ್ಯವಾಗದ ಸೂಕ್ಷವಿಚಾರಗಳನ್ನು ಆಯಾ ಪೋಷಕರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿ.

3. ಪೋಷಕರ ಸಭೆಯಲ್ಲಿ ಉಪನ್ಯಾಸ

ಬರೀ ಸಮಸ್ಯೆಗಳನ್ನು ಚರ್ಚಿಸಿ ಎದ್ದು ಹೋಗುವುದಲ್ಲ. ಪ್ರತಿ ಸಭೆಯಲ್ಲೂ ಮಗುವಿನ ಪಾಲನೆಗೆ ಸಂಬಂಧಿಸಿದಂತೆ ತಿಳಿವಳಿಕೆಗಾಗಿ ಪೋಷಕರಿಗೆ ಒಂದಾದರೂ ಉಪನ್ಯಾಸ ಏರ್ಪಡಿಸುವುದು ಸೂಕ್ತ. ಎಲ್ಲಾ ಪೋಷಕರಿಗೆ ಎಲ್ಲವೂ ಗೊತ್ತಿರುವುದಿಲ್ಲ. ಮಗುವಿನ ಆರೋಗ್ಯ, ಪಾಲಕರು ಮಗುವಿನ ಕಲಿಕೆ ಹೇಗೆ ಸಹಕರಿಸಬೇಕು, ಮಗುವಿನ ಮಾನಸಿಕ ತುಮುಲಗಳು, ಬೆಳೆಯುವ ಮಕ್ಕಳ ಬಗ್ಗೆ ಆಹಾರ ಇತ್ಯಾದಿ ಕುರಿತು ತೆಗೆದುಕೊಳ್ಳಬೇಕಾದ ಮಾಹಿತಿ ಇಂತಹ ಹತ್ತೆಂಟು ವಿಚಾರಗಳ ಬಗ್ಗೆ ಪೋಷಕರಿಗೆ ಅರಿವು ಮೂಡುವಂತೆ ಮಾಡಬಹುದು.

4. ನೆನಪಿರಲಿ, ಇದು ಹೆಚ್ಚುಗಾರಿಕೆಯ ಸಭೆಯಲ್ಲ

ಸಭೆಗೆ ಬರುವವರು ಕೆಲವೊಮ್ಮೆ ತಮ್ಮ ಹೆಚ್ಚುಗಾರಿಕೆ ಪ್ರದರ್ಶಿಸುವ ಹಂಬಲವುಳ್ಳವಾಗಿರುತ್ತಾರೆ. ಅದಕ್ಕೆ ಅವಕಾಶ ಇರಬಾರದು. ಎಲ್ಲಾ ಮಕ್ಕಳು ಶಾಲೆಯಲ್ಲಿ ಒಂದೇ ಆಗಿರುವಂತೆ ಪೋಷಕರು ಕೂಡ ಒಂದೆ. ಒಳ್ಳೆಯ ವೃತ್ತಿಯಲ್ಲಿರುವವರನ್ನು, ಸದೃಢ ಸ್ಥಿತಿವಂತರನ್ನು ಸಭೆಯಲ್ಲಿ ಹೆಚ್ಚು ಗೌರವಿಸುವ ಕ್ರಮ ಇದೆ ಕೆಲವು ಕಡೆ. ಇದು ಇತರೆ ಪೋಷಕರಲ್ಲಿ ಕೀಳರಿಮೆ ಮೂಡಿಸುತ್ತದೆ. ಎಲ್ಲಾ ಪೋಷಕರೂ ಸಮಾನರು. ಪೋಷಕರು ಹುದ್ದೆ ಮತ್ತು ಘನತೆಯನ್ನು ಮನೆಯಲ್ಲಿ ಬಿಟ್ಟು ಹೋಗಿ.

5. ಸಭೆಯ ಆಯೋಜನಾ ಕ್ರಮ..

ಸಭೆಯನ್ನು ಒಂದು ನಿಯಮಿತ ಅವಧಿಯಲ್ಲಿ ಆಯೋಜಿಸಿ. ಎಲ್ಲಾ ಪೋಷಕರು ಪಾಲ್ಗೊಳ್ಳಲು ಅನುಕೂಲವಾಗುವಂತಹ ಸಮಯ ನಿಗದಿ ಮಾಡಿ. ಐದಾರು ದಿನ ಮೊದಲೇ ಸೂಚನಾ ಪತ್ರ ತಲುಪಿಸಿ. ಸಾಧ್ಯವಾದರೆ ದೂರವಾಣಿ ಕರೆಯನ್ನು ಬಳಸಿ. ಪೋಷಕರು ಕೂಡ ಕಡ್ಡಾಯವಾಗಿ ಹಾಜರಾಗುವುದು. ಮಗುವಿಗಿಂತ ಮುಖ್ಯವಾದದ್ದು ಬೇರೆ ಇಲ್ಲ ಎಂದು ಹೇಳಿ ಶಿಕ್ಷಕರು ಸಭೆಯ ಅಗತ್ಯತೆ ತಿಳಿಸಿ. ಯಾವ ಸಭೆಯೂ ಕಾಟಾಚಾರದ್ದು ಆಗಬಾರದು. ಪ್ರತಿಸಭೆಯೂ ಮಗು-ಶಿಕ್ಷಕರು-ಪೋಷಕರನ್ನು ಮತ್ತೆ ಮತ್ತೆ ಬೆಸೆಯಬೇಕು.

6. ಶಾಲಾಭಿವೃದ್ದಿ ಸಮಿತಿ ಕೊಂಡಿಯಂತೆ ವರ್ತಿಸಲಿ

ಪೋಷಕರ ಸಭೆಯಲ್ಲಿ ಶಾಲಾಭಿವೃದ್ದಿ ಸಮಿಯ ಉಪಸ್ಥಿತಿ ಅಗತ್ಯವಾದದ್ದು. ಅವರು ಪೋಷಕರು ಮತ್ತು ಶಿಕ್ಷಕರ ನಡುವೆ ಕೊಂಡಿಯಂತಿರಲಿ. ಶಾಲೆಯ ಸವಲತ್ತುಗಳು, ಶಿಕ್ಷಕರ ಕರ್ತವ್ಯ ಬಗ್ಗೆ ಪೋಷಕರಿಗೆ ತಿಳಿಸುವ ಮತ್ತು ಪೋಷಕರ ಪರವಾಗಿ ಶಿಕ್ಷಕರ ಬಳಿ ಮಾತಾಡುವ ಎರಡೂ ಕಾರ್ಯಗಳನ್ನು ಅದು ಮಾಡಬೇಕಾಗುತ್ತದೆ. ಪೋಷಕರು ಮತ್ತು ಶಿಕ್ಷಕರೊಂದಿಗೆ ಹೆಚ್ಚು ಒಡನಾಟ ಇರುವ ಈ ಸಮಿತಿಯ ಹಾಜರಿ ಸಭೆಯಲ್ಲಿ ಮುಖ್ಯವಾಗುತ್ತದೆ.

ಪೋಷಕರ ಸಭೆ ಒಂದು ಕಾಟಾಚಾರದ ಪ್ರಕ್ರಿಯೆ ಆಗದೆ ಮಗುವಿನ ಸಮಗ್ರ ಶಿಕ್ಷಣಕ್ಕೆ ಅನುವಾಗುವ ಸಭೆಯಾಗಬೇಕು. ಆಯಾ ಅವಧಿಯಲ್ಲಿನ ಮಗುವಿನ ಸಮಗ್ರ ಕಲಿಕಾ ಪ್ರಕ್ರಿಯೆಯನ್ನು ಅವಲೋಕಿಸಿ ಅದನ್ನು ಪೋಷಕರಿಗೆ ತಲುಪಿಸುವ, ಮಗುವು ಎದುರಿಸುವ ಸಮಸ್ಯೆಗಳನ್ನು ಬಗೆಹರಿಸುವ, ಶಿಕ್ಷಕರು ಬೋಧನೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆ ಬಗ್ಗೆಯ ಮತ್ತು ಶಾಲೆಯ ಸಮಗ್ರ ಸವಲತ್ತುಗಳ ಬಗ್ಗೆಯೂ ಚರ್ಚೆಯಾಗಿ ಹರಿಹಾರ ಕಂಡುಕೊಂಡು ಮುಂದೆ ಹೋಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT