ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನದ ವಿಸ್ಮಯಲೋಕಕ್ಕೆ ಮೋಜಿನ ಬಾಗಿಲು

Last Updated 29 ಜುಲೈ 2018, 19:30 IST
ಅಕ್ಷರ ಗಾತ್ರ

ಬದುಕು ಕಾಮನಬಿಲ್ಲಿನಂತೆ!

ಕಾಮನಬಿಲ್ಲು ಏಳು ಬಣ್ಣಗಳ ಸಮನ್ವಯವಾದರೆ, ಬದುಕು ಹಲವು ಭಾವಗಳ ಮಿಳಿತ, ಹಲವು ಬಂಧಗಳ ತುಡಿತದ ಒಟ್ಟು ಮೊತ್ತ; ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳಿವೆ ಎಂದು ಗೊತ್ತಿದೆಯಾದರೂ, ಒಂದು ಬಣ್ಣ ಸಂಪೂರ್ಣವಾಗಿ ಮುಗಿದು ಮತ್ತೊಂದು ಪ್ರಾರಂಭವಾಗಿದ್ದು ಎಲ್ಲಿ ಎಂದು ಬಿಚ್ಚಿಡಲು ಸಾಧ್ಯವೇ? ನಮ್ಮ ಜೀವನವೂ ಹಾಗೇನೇ!

ನಮ್ಮ ಪ್ರತಿದಿನದ ಆಗುಹೋಗು, ಯೋಚನೆ– ಯೋಜನೆಗಳಲ್ಲಿ ನಾವು ಶಾಲೆಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಲಿತದ್ದೆಲ್ಲವೂ ಮತ್ತು ಅದಕ್ಕಿಂತಲೂ ಹೆಚ್ಚು ನಿಜಜೀವನದಲ್ಲಿ ಕಲಿತ ಪಾಠಗಳಲ್ಲಿ ಹಲವು, ಹಾಸುಹೊಕ್ಕಾಗಿರುತ್ತವೆ; ದಿನನಿತ್ಯದ ಘಟನೆಗಳಲ್ಲಿ ಭಾಷೆ, ಗಣಿತ, ವಿಜ್ಞಾನ, ಇತಿಹಾಸ, ಭೂಗೋಳದಂತಹ ವಿಷಯಗಳ ಮೂಲಭೂತ ತತ್ವಗಳನ್ನು ನಮಗರಿವಿಲ್ಲದಂತೆಯೇ ಕಂಡಿರುತ್ತೇವೆ, ಬಳಸಿರುತ್ತೇವೆ, ಅನುಭವಿಸಿರುತ್ತೇವೆ. ಇದೇ ಕಾರಣದಿಂದ ಶಾಲೆ/ಕಾಲೇಜುಗಳಲ್ಲಿ ಯಾವುದೇ ವಿಷಯವನ್ನು ಮನಮುಟ್ಟುವಂತೆ ತಿಳಿಹೇಳಲು ನಿಜಜೀವನದ ನಿದರ್ಶನಗಳ ಮೊರೆ ಹೋಗುವುದು, ಅತ್ಯಂತ ಸುಲಭ ಮಾರ್ಗ.

ಆದರೆ, ಕೇವಲ ನಿಜಜೀವನದ ಉದಾಹರಣೆಗಳು ಎಲ್ಲ ರೀತಿಯ ಮಕ್ಕಳನ್ನೂ ಸೆಳೆಯಲಾರವು. ಬೇರೆ ಬೇರೆ ಸಾಮಾಜಿಕ, ಆರ್ಥಿಕ, ಮಾನಸಿಕ ಹಿನ್ನೆಲೆಗಳಿಂದ ಬಂದಿರುವ ಮಕ್ಕಳನ್ನು ಒಂದೇ ವಿಧದ ಉಪನ್ಯಾಸದಿಂದ ಸೆಳೆಯಲಾಗದು. ಇದನ್ನೇ, ಶೈಕ್ಷಣಿಕ ಕಲಿಕೆಯ ಉದ್ದೇಶಗಳನ್ನು ವರ್ಗೀಕರಿಸಿದ ಬೆಂಜಮಿನ್ ಬ್ಲೂಮ್ ಆಗಲಿ ಅಥವಾ ಬಹುವಿಧ ಬುದ್ಧಿವಂತಿಕೆಗಳ ಸಿದ್ಧಾಂತವನ್ನು ಪ್ರತಿಪಾದಿಸಿದ ಹೊವರ್ಡ್ ಗಾರ್ಡ್‌ನರ್‌ ಆಗಲಿ ಹೇಳಿದ್ದು. ಮೊದಲಿಗೆ, ಶಾಲೆಯ ವಾತಾವರಣವು ಮಕ್ಕಳಿಗೆ ಹಿತಕರವೆನಿಸಬೇಕು, ಅವರನ್ನು ಸೆಳೆಯಬೇಕು; ಅವರ ಗಮನವನ್ನು ಸೆಳೆಯಲು ಹಾಗೂ ಹಿಡಿದಿಡಲು ಸಾಧ್ಯವಾದರೆ, ಅರ್ಧ ಯುದ್ಧ ಗೆದ್ದಂತೆಯೇ.

ಹೀಗೆ ಮಕ್ಕಳ ಗಮನ ಸೆಳೆಯಲೇ ಆಗಲಿ, ಅದರ ನಂತರದ ಕಲಿಕೆಯೇ ಆಗಲಿ - ಆಸಕ್ತಿದಾಯಕವೆನಿಸುವ ವಿಧಾನಗಳ ಮೂಲಕ ಮಾತ್ರ ಸಾಧ್ಯ ಅಲ್ಲವೇ? ಬೋರ್ ಹೊಡೆಸುವ ಟೀಚರ್ ಯಾರ ಫೇವರಿಟ್ ಆದರೂ ಯಾಕಾದಾರು? ಮಕ್ಕಳನ್ನು ಸೆಳೆದಿಟ್ಟುಕೊಂಡು, ಅವರು ಕಲಿಕೆಯನ್ನು ಆನಂದಿಸುವಂತೆ ಮಾಡುವವರು ಮಾತ್ರ ಯಶಸ್ವಿ, ಪ್ರೀತಿ–ಪಾತ್ರ ಶಿಕ್ಷಕರಾಗಬಹುದೇ ಹೊರತು ಉರು ಹೊಡೆಸಿ, ಪರೀಕ್ಷೆ ಎಂಬ ಭೂತವನ್ನು ಉಚ್ಛಾಟಿಸುತ್ತೇವೆ ಎಂದು ಹೊರಡುವವರು ಖಂಡಿತ ಅಲ್ಲ.

ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ವಿವಿಧ ವಿಷಯಗಳನ್ನು, ಅದರಲ್ಲೂ ಮುಖ್ಯವಾಗಿ, ವೈಜ್ಞಾನಿಕ ಅಂಶಗಳನ್ನು ಗಮನಿಸುವುದು ಅತ್ಯಂತ ಆಸಕ್ತಿಕರವಾಗಿರುತ್ತದೆ. ಇದನ್ನು ಸಣ್ಣ ವಯಸ್ಸಿನಿಂದಲೂ ಮಕ್ಕಳಿಗೆ ಅಭ್ಯಾಸ ಮಾಡಿಸಿದರೆ, ಅವರಲ್ಲಿ ವೈಜ್ಞಾನಿಕ ಮನೋಭಾವ ಮೂಡಲು ಸಹಕಾರಿಯಾಗುತ್ತದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ, ಆಹಾರದಿಂದ ವ್ಯಾಯಾಮದವರೆಗೆ, ಆರೋಗ್ಯದಿಂದ ಜ್ಞಾನಾರ್ಜನೆಯವರೆಗೆ, ಪುಸ್ತಕಗಳಿಂದ ಗ್ಯಾಜೆಟ್‌ಗಳವರೆಗೆ, ಕೈತೋಟದಿಂದ ಮನೆಯ ಗ್ರಾನೈಟ್, ಸಿಮೆಂಟ್, ಪೈಂಟಿನವರೆಗೆ ಎಲ್ಲೆಲ್ಲೂ ವಿಜ್ಞಾನವೇ ಅಡಗಿ ಕುಳಿತಿದೆ. ಅದರೆಡೆ ಕಿಂಚಿತ್ತು ಗಮನ ಹರಿಸಿದರೂ ಸಾಕು, ವಿಸ್ಮಯಲೋಕವೊಂದು ತೆರೆದುಕೊಂಡಂತೆಯೇ!

ನಮ್ಮ ಸುತ್ತಲೂ ಹಾಗೂ ನಮ್ಮ ಒಳಗೂ ನಡೆಯುವ ಜೀವ ರಾಸಾಯನಿಕ ಹಾಗೂ ಭೌತಿಕ ವಿಷಯಗಳ ಬಗ್ಗೆ ಗಮನ ಹರಿಸುವುದನ್ನು ಮಕ್ಕಳಿಗೆ ಪೋಷಕರು, ಶಿಕ್ಷಕರು, ಹಿರಿಯ ಗೆಳೆಯರು, ಬಂಧುಗಳು ಕಲಿಸಬೇಕು. ಕಲಿಸಬೇಕು ಎಂದರೆ ಅರ್ಥ, ಯಾವುದೋ ಒಂದು ಸಸ್ಯದ ವೈಜ್ಞಾನಿಕ ನಾಮಧೇಯವನ್ನು ಉರುಹೊಡೆಸುವುದೋ, ವಿವಿಧ ಧಾತುಗಳ ಹೆಸರನ್ನು ಬಾಯಿಪಾಠ ಮಾಡಿ ಒಪ್ಪಿಸು ಎಂದು ತಾಕೀತು ಮಾಡುವುದೋ ಅಲ್ಲ. ಹಾಗೆ ಮಾಡಿದಿರಾದರೆ, ವಿಜ್ಞಾನದ ವೈಶಿಷ್ಟ್ಯವನ್ನು ಕಂಡು ಕಣ್ಣರಳಿಸಬೇಕಾದ ಮಗು, ವಿಚಿತ್ರ ಒತ್ತಡಕ್ಕೆ ವಿಚಲಿತವಾಗುವುದು ಖಚಿತ.

ಅಮ್ಮ ಡಬ್ಬಿಗೆ ಹಾಕಿಕೊಟ್ಟ ಸೇಬು, ಯಾಕೆ ಕಂದು ಬಣ್ಣಕ್ಕೆ ತಿರುಗಿತ್ತು? ರಾತ್ರಿ ಹೆಪ್ಪು ಹಾಕಿದ ಹಾಲು, ಮರುದಿನ ಹೇಗೆ ಮೊಸರಾಯಿತು ಎಂಬಂತಹ ಸಣ್ಣ ಸಣ್ಣ ಪ್ರಶ್ನೆಗಳ ಮೂಲಕ ಕುತೂಹಲ ಕೆರಳಿಸಬೇಕು. ಮಗುವಿಗೆ ಯಾವ ವಿಷಯದಲ್ಲಿ ಆಸಕ್ತಿಯಿದೆಯೋ, ಆ ವಿಷಯದ ಮೂಲಕವೇ ವಿಜ್ಞಾನವನ್ನು ಪರಿಚಯಿಸಬೇಕು; ಸಂಗೀತಪ್ರಿಯ ಮಗುವಿಗೆ ಸಂಗೀತದ ಮೂಲಕ, ಆಟದ ಹುಚ್ಚಿರುವ ಮಗುವಿಗೆ ಆಟದ ಮೂಲಕ... ಹೀಗೆ, ಮಕ್ಕಳಲ್ಲಿ ನಾವು ಹುಟ್ಟುಹಾಕುವ ಪುಟ್ಟಪುಟ್ಟ ಪ್ರಶ್ನೆಗಳಿಗೆ ಅಥವಾ ಅವರಿಗೆ ತಾವಾಗಿಯೇ ಹೊಳೆವ ಸಮಸ್ಯೆಗಳಿಗೆ, ನಾವೇ ಉತ್ತರ ಕೊಡುವ ಬದಲು, ಮಕ್ಕಳಿಗೆ ತಮ್ಮದೇ ಆದ ಉತ್ತರಗಳನ್ನು ಕಂಡುಕೊಳ್ಳಲು ಪ್ರೋತ್ಸಾಹಿಸಬೇಕು. ಅವರೇ ಕೇಳುವಂತಹ ಪ್ರಶ್ನೆಗಳಿಗೂ ಸಂಯಮದಿಂದ ಸಮರ್ಪಕ ವೈಜ್ಞಾನಿಕ ಉತ್ತರವನ್ನು, ಸರಳವಾಗಿ, ಅವರಿಗೆ ಅರ್ಥವಾಗುವಂತೆ ತಿಳಿಸಿ ಹೇಳಬೇಕು.

ಇಲ್ಲಿಂದ ಪ್ರಾರಂಭಗೊಳ್ಳುವ ಅವರ ಅಚ್ಚರಿಯ ಯಾನವು, ಶಾಲೆಯ ಟೆಕ್ಸ್ಟ್ ಬುಕ್ಕಿನ ಆಚೆಗೂ ಬೆಳೆಯುವಂತೆ, ಅವರಿಗೆ ವೈಜ್ಞಾನಿಕ ಕಥೆಗಳು, ಲೇಖನಗಳು, ಕಾದಂಬರಿಗಳನ್ನು ಪರಿಚಯಿಸಬೇಕು. ನಾವೇನು ಸೈನ್ಸ್ ಗ್ರಾಜ್ಯುಯೆಟ್ಸ್‌ಗಳಾ? ನಮಗೆ ಇವೆಲ್ಲಾ ಹೇಗೆ ತಿಳೀಬೇಕು ಅಂತೀರಾ? ಅಲ್ಲ, ಎಲ್ಲಾ ನಮಗೆ ಗೊತ್ತಿರೋಕೆ ಸಾಧ್ಯವೇ? ನಮ್ಮ ಸಹಾಯಕ್ಕೆ, ಅಂಗೈ ಅಗಲದ ಅತಿ ಚಾಲಾಕು ಸ್ಮಾರ್ಟ್‌ಫೋನ್‌ ಇದ್ದೇ ಇದೆ. ‘ಗೂಗಲ್’ ಅಜ್ಜಿ ನಿಮ್ಮ ಬೆನ್ನಿಗಿರುವಾಗ ನಿಮಗೇಕೆ ಭಯ? ಈ ಯುಗದ ತಂತ್ರಜ್ಞಾನದ ಸಹಾಯ ಪಡೆಯಿರಿ. ಅಂತರ್ಜಾಲದಲ್ಲಿ, ಮಕ್ಕಳಿಗೆ ವಿಜ್ಞಾನದ ವಿಷಯಗಳನ್ನು ಸರಳವಾಗಿ, ಆಸಕ್ತಿದಾಯಕವಾಗಿ ತಿಳಿಸಿಕೊಡುವ ಲಕ್ಷಾಂತರ ಜಾಲತಾಣಗಳು, ವಿಡಿಯೊಗಳು ಲಭ್ಯ. ಅವುಗಳನ್ನು ಮೊದಲು ನೀವೇ ಓದಿ, ನೋಡಿ ತಿಳಿದುಕೊಳ್ಳಿ. ಆಗ ಮಕ್ಕಳಿಗೆ ಅರ್ಥೈಸಿಕೊಳ್ಳಲು ಸಹಾಯ ಮಾಡಬಹುದು. ಅವುಗಳ ಬಗ್ಗೆ ಬೆರಗು ಹುಟ್ಟಿಸಿ ಬಿಟ್ಟರೆ ಮುಗೀತು, ಮಕ್ಕಳೇ ಆ ಅಚ್ಚರಿಯ ಲೋಕದಲ್ಲಿ ಮುಳುಗಿ ಹೋಗುತ್ತಾರೆ.

ಹಾಗೆಂದು ಕೇವಲ ಓದಿ ಅಥವಾ ನೋಡಿ ತಿಳಿದುಕೊಂಡರೆ, ಅದು ನಿಜಾರ್ಥದಲ್ಲಿ ವಿಜ್ಞಾನ ಹೇಗಾದೀತು? ವಿಜ್ಞಾನವೆಂದರೆ ಪ್ರಯೋಗಗಳೂ ಇರಲೇಬೇಕಲ್ಲ? ಹಾಗೆಂದು, ಸರಳ ಪ್ರಯೋಗಗಳನ್ನು ನಡೆಸಲು ಪ್ರಯೋಗಾಲಯವೇ ಬೇಕೆಂದೇನಿಲ್ಲ. ಹಲವಾರು ವೈಜ್ಞಾನಿಕ ತತ್ವಗಳನ್ನು, ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳಲು, ಅವುಗಳೊಳಗೆ ಅಡಗಿದ ಸೊಬಗನ್ನು ಆನಂದಿಸಲು ಮನೆಯಲ್ಲೇ ಲಭ್ಯವಿರುವ ವಸ್ತುಗಳಿಂದ ಪ್ರಯೋಗಗಳನ್ನು ರಚಿಸಬಹುದು, ನಡೆಸಬಹುದು. ಇವುಗಳ ಬಗ್ಗೆ ಹೆಚ್ಚಿನ ಮಾರ್ಗದರ್ಶನಕ್ಕೆ ಪುಸ್ತಕಗಳು, ಶಿಕ್ಷಕರು, ಪೋಷಕರು ಹಾಗೂ ಅಂತರ್ಜಾಲ ಸಹಾಯ ಇದ್ದೇ ಇದೆಯಲ್ಲ! ನಿಂಬೆರಸದಿಂದ ಅಗೋಚರ ಶಾಯಿ ತಯಾರಿಸಬಹುದು, ಸೋಡಾ ಪೇಯಗಳ ಒಳಗೆ ಒಣದ್ರಾಕ್ಷಿಗಳನ್ನು ಹಾಕಿ, ಅವು ಮನಬಂದಂತೆ ಕುಣಿಯುವುದನ್ನು ಕಾಣಬಹುದು, ಮನೆಯಲ್ಲಿ ಇರುವ ಸಾಮಗ್ರಿಗಳಿಂದ ಹಲವು ಬಣ್ಣಗಳನ್ನು ವಿವಿಧ ಪ್ರಮಾಣಗಳಲ್ಲಿ ಕಲೆಸಿ, ಹೊಸ ಬಗೆಯ ಬಣ್ಣದ ಛಾಯೆಗಳನ್ನು ಸೃಷ್ಟಿಸಬಹುದು, ಭೂತಗನ್ನಡಿಯನ್ನು ಬಳಸಿ ಸೂರ್ಯನ ಬೆಳಕನ್ನು ಕೇಂದ್ರೀಕರಿಸಿ ಕಾಗದವನ್ನು ಸುಡುತ್ತಾ, ಯಾವ ಅಂತರದಲ್ಲಿ ಎಷ್ಟು ತೀವ್ರ ಬೆಳಕು ಬಿದ್ದರೆ, ಬೆಂಕಿ ಮೂಡುತ್ತದೆ ಎಂಬುದನ್ನು ಮನಗಾಣಬಹುದು.

ಇವೆಲ್ಲಾ ಸಾಧ್ಯವಾಗಲು ಮಕ್ಕಳಿಗೆ ಹಿರಿಯರ ಬೆಂಬಲ ಅಗತ್ಯ. ಮಕ್ಕಳು ಕೇಳಿದ ತಕ್ಷಣ ಆಟದ ಸಾಮಾನು ಕೊಡಿಸುವ ಬದಲು, ಮನೆಯಲ್ಲಿರುವ ವಸ್ತುಗಳನ್ನೇ (ಕಾಗದ, ಕೋಲು, ನೀರು, ಹಳೆಯ ಬಾಟಲಿ, ಡಬ್ಬಿ, ಪೆನ್ನು, ಎಲೆಗಳು, ಧಾನ್ಯಗಳು, ಮರಳು ಇತ್ಯಾದಿ ) ಬಳಸಿ ತಮ್ಮ ಕ್ರಿಯಾಶೀಲತೆಯನ್ನು ಮೆರೆಯುವ ಅವಕಾಶ ಮಾಡಿಕೊಡಬೇಕು. ಮಕ್ಕಳ ಅಪರಿಮಿತ ಕ್ರಿಯಾಶೀಲತೆಯು ನಮ್ಮನ್ನೇ ಆಶ್ಚರ್ಯಚಕಿತರನ್ನಾಗಿಸುವುದು ಖಚಿತ. ಅವೇ ವಸ್ತುಗಳನ್ನು ಸರಳ ವೈಜ್ಞಾನಿಕ ಪ್ರಯೋಗಗಳಿಗೆ ಬಳಸುವುದು ಹೇಗೆಂದು ಮಾರ್ಗದರ್ಶನ ನೀಡಿದರೆ, ವಿಜ್ಞಾನದಲ್ಲಿ ಆಸಕ್ತಿ ಮೊಳೆತು, ಮುಂದೆ ವೈಜ್ಞಾನಿಕ ಪುಸ್ತಕಗಳು, ಉಪನ್ಯಾಸಗಳು ಅವರ ಮನಸೆಳೆಯುತ್ತವೆ.

ತಾರಾಲಯ, ಮ್ಯೂಸಿಯಂಗಳಲ್ಲದೇ ಅನೇಕ ವಿಜ್ಞಾನ ಸಂಸ್ಥೆಗಳಲ್ಲಿ, ಶಾಲೆಗಳಲ್ಲಿ ನಡೆಸಲಾಗುವ ವೈಜ್ಞಾನಿಕ ಪ್ರದರ್ಶನಗಳಿಗೆ, ಮಕ್ಕಳ ವಿಜ್ಞಾನ ಹಬ್ಬಗಳಿಗೆ, ಉಪನ್ಯಾಸಗಳಿಗೆ ಮಕ್ಕಳನ್ನು ಕರೆದೊಯ್ಯುವ ಮುಖಾಂತರ, ಅವರಲ್ಲಿ ವಿಜ್ಞಾನದ ಆಳ ಅಗಲಗಳ ಬಗ್ಗೆ, ಅವರಿಗೆ ತಿಳಿದಿರದ ವೈಜ್ಞಾನಿಕ ಕ್ಷೇತ್ರಗಳ ವಿವಿಧ ಆಯಾಮಗಳ ಬಗ್ಗೆ, ವಿಸ್ಮಯ ಹಾಗೂ ಅರಿವು ಮೂಡಿಸಬಹುದು. ವಿಜ್ಞಾನದ ಬಗೆಗಿರುವ ಪ್ರಾಸ ಪದಗಳ ಪುಂಜವಾದ ಪದ್ಯಗಳನ್ನು ಹಾಡಿಸುವುದರ ಮೂಲಕ, ವಿಜ್ಞಾನದ ವಿಷಯಾಧಾರಿತವಾಗಿ ರಚಿತವಾದ ಮೋಜಿನ ನಾಟಕಗಳನ್ನು, ನೃತ್ಯಗಳನ್ನು ಮಾಡಿಸುವುದರ ಮೂಲಕ, ಅವರಿಗೇ ಅರಿವಿಲ್ಲದಂತೆ ವಿಜ್ಞಾನವನ್ನು ಕಲಿಸಬಹುದಾಗಿದೆ. ಬೇಸಿಗೆ ರಜೆಯಲ್ಲಿ ಕಪ್ಪೆಗಳ ಬಗೆಗಿನ ಶಿಬಿರಕ್ಕೋ, ಮರಗಳ ಕುರಿತಾಗಿ ನಡೆಸುವ ಹಬ್ಬಕ್ಕೋ ಮಕ್ಕಳನ್ನು ಕರೆದೊಯ್ಯುವ ಮೂಲಕ, ಅವರಿಗೆ ಅರಿವಿಲ್ಲದ ವಿಚಾರಗಳಿಗೆ ವೈಜ್ಞಾನಿಕವಾಗಿ ತಮ್ಮನ್ನು ತಾವು ತೆರೆದುಕೊಳ್ಳುವ ಅವಕಾಶ ನೀಡಬಹುದು.

ಹೀಗೆಲ್ಲಾ ವಿಜ್ಞಾನ ಕಲಿತರೆ ಅವರಿಗೆ ಮೋಜೆನಿಸುವುದು ನಿಜ. ಆದರೆ ಇದರಿಂದ ಅವರಿಗೆ ಏನುಪಯೋಗ ಎನ್ನುತ್ತೀರಾ? ಯಾವುದೇ ವಿಷಯವನ್ನೂ ಪ್ರಫುಲ್ಲ ಮನಸ್ಸಿನಿಂದ ಖುಷಿಯಾಗಿ ಕಲಿತರೆ, ಅದು ಅವರ ಮೆದುಳಿನ ಪದರುಗಳಲ್ಲಿ ಹಾಸುಹೊಕ್ಕಾಗುವುದು ಖಚಿತ. ಆಗ, ಅಚ್ಚಳಿಯದಂತೆ ಅವರ ಮನದಲ್ಲಿ ಉಳಿದ ವೈಜ್ಞಾನಿಕ ವಿವರಗಳು, ಉನ್ನತ ವ್ಯಾಸಂಗಕ್ಕೂ ಸಹಾಯಕವಾಗಿ, ಶೈಕ್ಷಣಿಕವಾಗಿ ಅವರನ್ನು ಮುನ್ನಡೆಸುತ್ತದೆ. ಅಥವಾ, ಮಕ್ಕಳು ವಿಜ್ಞಾನ ಕ್ಷೇತ್ರದ ಹೊರತಾಗಿ ಮತ್ಯಾವುದೇ ಕ್ಷೇತ್ರದ ವ್ಯಾಸಂಗ ಆಯ್ಕೆ ಮಾಡಿಕೊಂಡರೂ, ಅವರಲ್ಲಿ ಬೆಳೆದ ವೈಜ್ಞಾನಿಕ ಮನೋಭಾವವು ಅವರನ್ನು ಮೌಢ್ಯತೆಯಿಂದ ಪಾರುಮಾಡುವ ವಿವೇಕದೀಪವಾಗಿ, ಅವರ ಸಹಗಾಮಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT